ನವದೆಹಲಿ: ಪಾಕಿಸ್ಥಾನದಲ್ಲಿ ಬಂಧನದಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಭಾರತಕ್ಕೆ ಆದಷ್ಟು ಬೇಗ ವಾಪಾಸ್ ತರುವ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನು ನಡೆಸಲಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್ ಅವರ ಮರಣ ದಂಡನೆ ಶಿಕ್ಷೆಯನ್ನು ರದ್ದುಪಡಿಸಿದ ಮರುದಿನ ಜೈಶಂಕರ್ ಅವರು ಪ್ರಕರಣದ ಬಗ್ಗೆ ರಾಜ್ಯಸಭೆಗೆ ವಿಸ್ತೃತ ವಿವರಣೆಯನ್ನು ನೀಡಿದ್ದಾರೆ. ಈ ವೇಳೆ ಅವರು, ಜಾಧವ್ ಅವರ ಸುರಕ್ಷತೆಗಾಗಿ ನಾವು ಸರ್ವ ಪ್ರಯತ್ನಗಳನ್ನು ನಡೆಸಲಿದ್ದೇವೆ, ಆದಷ್ಟು ಬೇಗ ಅವರನ್ನು ಭಾರತಕ್ಕೆ ಕರೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಳ್ಳಲಿದ್ದೇವೆ ಎಂದಿದ್ದಾರೆ.
“ಜಾಧವ್ ಅವರಿಗೆ ಅವರ ಹಕ್ಕುಗಳನ್ನು ಮತ್ತಷ್ಟು ವಿಳಂಬ ಮಾಡದೆ ತಿಳಿಸಬೇಕು ಮತ್ತು ವಿಯೆನ್ನಾ ಕನ್ವೆನ್ಷನ್ಗೆ ಅನುಗುಣವಾಗಿ ಭಾರತೀಯ ಕಾನ್ಸುಲರ್ ಅಧಿಕಾರಿಗೆ ಅವರನ್ನು ಭೇಟಿಯಾಗುವ ಅವಕಾಶವನ್ನು ಒದಗಿಸುವ ಜವಾಬ್ದಾರಿ ಪಾಕಿಸ್ಥಾನದ ಮೇಲಿದೆ ಎಂದು ಐಸಿಜೆ ನಿರ್ದೇಶಿಸಿದೆ. ಜಾಧವ್ ಪ್ರಕರಣದಲ್ಲಿ ಕೇವಲ ಒಬ್ಬ ನ್ಯಾಯಾಧೀಶರು ಮಾತ್ರ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ಪಾಕಿಸ್ಥಾನ ಮೂಲದವರು. ಪ್ರಕರಣದಲ್ಲಿ ಉಳಿದವರೆಲ್ಲಾ ನ್ಯಾಯಾಧೀಶರುಗಳು ಭಾರತದ ಪರ ನಿಂತಿದ್ದಾರೆ” ಎಂದು ಜೈಶಂಕರ್ ಹೇಳಿದ್ದಾರೆ.
“ಇದು ಭಾರತ, ಜಾಧವ್ ಮತ್ತು ಕಾನೂನಿನ ನಿಯಮ ಹಾಗೂ ಅಂತಾರಾಷ್ಟ್ರೀಯ ಸಂಪ್ರದಾಯಗಳ ಪಾವಿತ್ರ್ಯವನ್ನು ನಂಬುವ ಎಲ್ಲರಿಗೂ ಸಮರ್ಥನೀಯ ತೀರ್ಪಾಗಿದೆ. ಈ ತೀರ್ಪಿನ ಬಗೆಗಿನ ನನ್ನ ಅಭಿಪ್ರಾಯದ ಜೊತೆ ಸದನ ನಿಲ್ಲುತ್ತದೆ ಎಂಬ ಭರವಸೆ ನನಗಿದೆ. ಈ ವಿಷಯದಲ್ಲಿ ನಾನು ವ್ಯಕ್ತಪಡಿಸುವ ಭಾವನೆಗಳು ಇಡೀ ಸದನದ ಮತ್ತು ಇಡೀ ರಾಷ್ಟ್ರದ ಭಾವನೆಗಳಾಗಿವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.