ನೀರಿನ ಸಂರಕ್ಷಣೆಗೆ ಪಣತೊಟ್ಟಿರುವ ನರೇಂದ್ರ ಮೋದಿ ಸರ್ಕಾರವು, ದೇಶದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲೂ ಕಾರ್ಯೋನ್ಮುಖಗೊಂಡಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 3,60,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಮೋದಿ ಸರ್ಕಾರ ಯೋಜಿಸಿದೆ. ‘ಹರ್ ಘರ್ ಜಲ್’ ಕಾರ್ಯಕ್ರಮದಡಿಯಲ್ಲಿ, 2024 ರ ವೇಳೆಗೆ ಪ್ರತಿ ವ್ಯಕ್ತಿಗೆ 55 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಪ್ರಸ್ತುತ ಕೇವಲ ಶೇ.18.24ರಷ್ಟು(178.54 ದಶಲಕ್ಷದಲ್ಲಿ 32.57 ದಶಲಕ್ಷ) ಮನೆಗಳಿಗೆ ಮಾತ್ರ ಪೈಪ್ ಮಾಡಿದ ನೀರು ಲಭ್ಯವಾಗುತ್ತಿದೆ. ಹೀಗಾಗಿ ‘ಹರ್ ಘರ್ ಜಲ’ ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದು ದೇಶದ ಲಕ್ಷಾಂತರ ಜನರ ಜೀವನವನ್ನು ಸುಧಾರಿಸುವ ಭರವಸೆ ಇದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ನೀರಿನ ಸಂರಕ್ಷಣೆ ಮತ್ತು ‘ಹರ್ ಘರ್ ಜಲ್’ ಅನ್ನು ಪ್ರಮುಖವಾಗಿ ಉಲ್ಲೇಖ ಆಗಿತ್ತು. ತನ್ನ ಬಜೆಟ್ ಭಾಷಣದಲ್ಲಿ, “ಭಾರತದ ನೀರಿನ ಸುರಕ್ಷತೆಯನ್ನು ಖಾತರಿಪಡಿಸುವುದು ಮತ್ತು ಎಲ್ಲಾ ಭಾರತೀಯರಿಗೆ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ ಜಲ ಶಕ್ತಿ ಸಚಿವಾಲಯವನ್ನು ರಚನೆ ಮಾಡಿದ್ದೇವೆ” ಎಂದಿದ್ದರು.
ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮೋದಿ ಸರ್ಕಾರವು ಜಲಶಕ್ತಿ ಸಚಿವಾಲಯ ಎಂಬ ಹೊಸ ಸಚಿವಾಲಯವನ್ನು ರಚಿಸಿದೆ. ಹೊಸದಾಗಿ ರಚಿಸಲಾದ ಈ ಸಚಿವಾಲಯವು ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಕೆಲಸವನ್ನು ನೋಡಿಕೊಳ್ಳುತ್ತದೆ. ನೀರಿನ ಕೊರತೆಯ ಸಮಸ್ಯೆಗಳು ಈ ಹಿಂದೆ 7-8 ಸಚಿವಾಲಯಗಳ ವ್ಯಾಪ್ತಿಗೆ ಬರುತ್ತಿದ್ದವು, ಇದರಿಂದ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯವು ಸಚಿವಾಲಯಗಳ ನಡುವಿನ ಗುದ್ದಾಟಗಳಲ್ಲಿ ಸಿಲುಕಿಕೊಳ್ಳುತ್ತಿದ್ದವು. ಮಹತ್ವಾಕಾಂಕ್ಷೆಯ ಹರ್ ಘರ್ ಜಲ ಯೋಜನೆಯ ಗುರಿಗಳನ್ನು ಸಾಧಿಸಲು ಪ್ರತ್ಯೇಕ ಸಚಿವಾಲಯದ ಅಗತ್ಯವಿತ್ತು. ಅದಕ್ಕಾಗಿಯೇ ಜಲ ಶಕ್ತಿ ಸಚಿವಾಲಯವನ್ನು ರಚನೆ ಮಾಡಲಾಗಿದೆ.
ಇಸ್ರೇಲ್, ದಕ್ಷಿಣ ಕೊರಿಯಾ ಮತ್ತು ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೆಚ್ಚಿನ ಮಳೆಯಾಗುತ್ತದೆ, ಆದರೆ ಭಾರತದಲ್ಲಿ ನೀರಿನ ಒಟ್ಟಾರೆ ನಿರ್ವಹಣೆ ತುಂಬಾ ಕಳಪೆಯಾಗಿದೆ. ಕಡಿಮೆ ಮಳೆಯಾಗುವ ಇಸ್ರೇಲ್ನಂತಹ ದೇಶಗಳು ನೀರಿನ ಕೊರತೆಯನ್ನು ಎಂದಿಗೂ ಎದುರಿಸುವುದಿಲ್ಲ, ಇದಕ್ಕೆ ಅವರ ಅತ್ಯದ್ಭುತ ನೀರು ನಿರ್ವಹಣಾ ತಂತ್ರಜ್ಞಾನಗಳೇ ಕಾರಣ. ಕೇವಲ ಶೇ.4ರಷ್ಟು ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸಿದರೆ, ಶೇ.80ರಷ್ಟು ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತದೆ. ದೇಶದಲ್ಲಿನ ನೀರಿನ ಬಳಕೆ ಹೆಚ್ಚಾಗಿ ಅನಿಯಂತ್ರಿತವಾಗಿದೆ, ಆದ್ದರಿಂದಲೇ ಹೆಚ್ಚು ಅಸಮರ್ಥವಾಗಿದೆ. ಮೋದಿ ಸರ್ಕಾರ ಈ ಸಮಸ್ಯೆಯನ್ನು ಅರಿತುಕೊಂಡು ಹೊಸ ಜಲಶಕ್ತಿ ಸಚಿವಾಲಯವನ್ನು ಸ್ಥಾಪಿಸಿದೆ. “ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವುದರಿಂದ ನೀರಿನ ಸಂರಕ್ಷಣಾ ಕ್ರಮಗಳಿಗೆ ಅರ್ಹವಾದ ಪ್ರಚೋದನೆ ಸಿಗುತ್ತದೆ” ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ.
ನಮ್ಮ ದೇಶವು ಅತ್ಯಂತ ಗಂಭೀರವಾದ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ದುರಾದೃಷ್ಟವೆಂದರೆ ಈ ಬಿಕ್ಕಟ್ಟಿನ ಬಗ್ಗೆ ಕಾಳಜಿ ಬಹಳ ಸೀಮಿತವಾಗಿದೆ. ನೀತಿ ಆಯೋಗದ ಪ್ರಕಾರ, ಭಾರತವು ತನ್ನ ಇತಿಹಾಸದಲ್ಲೇ ಅತ್ಯಂತ ಭೀಕರವಾದ ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿದೆ ಮತ್ತು ಲಕ್ಷಾಂತರ ಜೀವಗಳು ಮತ್ತು ಜೀವನೋಪಾಯಗಳು ಅಪಾಯದಲ್ಲಿದೆ. ಪ್ರಸ್ತುತ, 600 ಮಿಲಿಯನ್ ಭಾರತೀಯರು ವಿಪರೀತ ನೀರಿನ ಅಭಾವವನ್ನು ಎದುರಿಸುತ್ತಿದ್ದಾರೆ ಮತ್ತು ಸುರಕ್ಷಿತ ನೀರಿನ ಕೊರತೆಯಿಂದ ಪ್ರತಿವರ್ಷ ಸುಮಾರು ಎರಡು ಲಕ್ಷ ಜನರು ಸಾಯುತ್ತಿದ್ದಾರೆ. 2030 ರ ವೇಳೆಗೆ ಬಿಕ್ಕಟ್ಟು ಉಲ್ಬಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಭಾರತದ ನೀರಿನ ಬೇಡಿಕೆ ಎರಡು ಪಟ್ಟು ಹೆಚ್ಚಾಗುತ್ತದೆ ಪೂರೈಕೆ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ಬಿಕ್ಕಟ್ಟನ್ನು ತಪ್ಪಿಸುವ ಸಲುವಾಗಿ ಹರ್ ಘರ್ ಜಲ್ ಕಾರ್ಯಕ್ರಮ ಅತ್ಯಂತ ಅನಿವಾರ್ಯವಾಗಿದೆ.
ನೀತಿ ಆಯೋಗದ ಅಂದಾಜಿನ ಪ್ರಕಾರ, ಬಿಕ್ಕಟ್ಟನ್ನು ಆದ್ಯತೆಯ ಆಧಾರದ ಮೇಲೆ ನಿಭಾಯಿಸದಿದ್ದಲ್ಲಿ, ನೀರು ಸಂಬಂಧಿತ ಸಮಸ್ಯೆಗಳಿಂದಾಗಿ 2020 ರ ವೇಳೆಗೆ ದೇಶವು ಜಿಡಿಪಿಯಲ್ಲಿ ಶೇಕಡಾ 6 ರಷ್ಟು ನಷ್ಟವನ್ನು ಭರಿಸಬೆಕಾಗುತ್ತದೆ. ವರದಿಯ ಪ್ರಕಾರ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಸೇರಿದಂತೆ 21 ಭಾರತೀಯ ನಗರಗಳು 2020 ರ ವೇಳೆಗೆ ಅಂತರ್ಜಲ ಕೊರತೆಯನ್ನು ಎದುರಿಸಲಿದ್ದು, ಇದು ಸುಮಾರು 10 ಕೋಟಿ ಜನರ ಜೀವನದ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮವನ್ನು ಬೀರಲಿದೆ.
“ಬಿಜೆಪಿ ಅಧಿಕಾರಕ್ಕೆ ಬಂದರೆ 2024 ರ ವೇಳೆಗೆ ಪ್ರತಿ ಮನೆಗೂ ಶುದ್ಧವಾದ ಪೈಪ್ ನೀರನ್ನು ಪೂರೈಕೆ ಮಾಡುವ ಸಲುವಾಗಿ ಮೋದಿ ಸರ್ಕಾರ ‘ಜಲ ಜೀವನ್ ಮಿಷನ್’ ಅನ್ನು ಪ್ರಾರಂಭಿಸುತ್ತದೆ” ಎಂದು 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಪಕ್ಷವನ್ನು ಭರವಸೆಯನ್ನು ನೀಡಿತ್ತು. “ನೀರು ಒಂದು ನಿರ್ಣಾಯಕ ಸಂಪನ್ಮೂಲವಾಗಿದೆ ಆದರೆ ಅದರ ನಿರ್ವಹಣೆ ವಿವಿಧ ಇಲಾಖೆಗಳಲ್ಲಿ ಹರಡಿದೆ, ಕೇಂದ್ರ ಮಟ್ಟದಲ್ಲಿಯೂ ಕೂಡ ವಿವಿಧ ಸಚಿವಾಲಯಗಳಡಿಗೆ ನೀರಿನ ನಿರ್ವಹಣೆ ಬರುತ್ತದೆ. ನೀರಿನ ನಿರ್ವಹಣೆಯ ಸಮಸ್ಯೆಯನ್ನು ಸಮಗ್ರವಾಗಿ ಎದುರಿಸಲು ಮತ್ತು ಪರಿಹರಿಸಲು ಪ್ರಯತ್ನಗಳನ್ನು ಉತ್ತಮ ರೀತಿಯಲ್ಲಿ ಸಮನ್ವಯಗೊಳಿಸುವ ಅಗತ್ಯವಿದೆ. ಹೀಗಾಗಿ ನೀರಿನ ನಿರ್ವಹಣಾ ಕಾರ್ಯಗಳನ್ನು ಏಕೀಕರಿಸುವ ಹೊಸ ನೀರಿನ ಸಚಿವಾಲಯವನ್ನು ರಚಿಸುತ್ತೇವೆ ”ಎಂದು ಬಿಜೆಪಿಯ ಪ್ರಣಾಳಿಕೆಯಲ್ಲಿ ತಿಳಿಸಿತ್ತು.
ಭಾರತದಲ್ಲಿ ನೀರಿನ ಲಭ್ಯತೆ ಮತ್ತು ಸಂರಕ್ಷಣೆಗೆ ಭಾರಿ ಉತ್ತೇಜನವನ್ನು ನೀಡುವ ಪ್ರತ್ಯೇಕ ಸಚಿವಾಲಯ ಮತ್ತು 2024 ರ ವೇಳೆಗೆ 3 ಲಕ್ಷ ಕೋಟಿ ರೂಪಾಯಿಗಳನ್ನು ನೀರಿಗಾಗಿ ಖರ್ಚು ಮಾಡುವ ಯೋಜನೆ ಸರ್ಕಾರವು ನೀರಿನ ವಿಷಯದಲ್ಲಿ ತುಂಬಾ ಗಂಭೀರವಾಗಿದೆ ಎಂಬುದನ್ನು ತೀರಿಸುತ್ತದೆ. ಯೋಜನೆಯಲ್ಲಿ ಪ್ರಧಾನಿ ಮೋದಿಯವರ ವೈಯಕ್ತಿಕ ಒಳಗೊಳ್ಳುವಿಕೆಯು ಯೋಜನೆಯು ಮಿಷನ್ ಮೋಡ್ನಲ್ಲಿ ಪೂರ್ಣಗೊಳ್ಳುತ್ತದೆ ಎಂಬುದನ್ನು ಖಾತ್ರಿಪಡಿಸಿದೆ ಮತ್ತು ಹರ್ ಘರ್ ಜಲ್ 2024 ರ ಹೊತ್ತಿಗೆ ವಾಸ್ತವವಾಗಿ ಪರಿವರ್ತನೆಯಾಗುತ್ತದೆ ಎಂಬ ನಂಬಿಕೆಯೂ ಸಮಸ್ತ ಭಾರತೀಯರಲ್ಲಿದೆ.
ಜೀವ ಜಲವನ್ನು ಸಂರಕ್ಷಣೆ ಮಾಡುವ, 2024ರ ವೇಳೆಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರವು ಕಾರ್ಯೋನ್ಮುಖಗೊಂಡಿದ್ದು, ಇದಕ್ಕಾಗಿ “ಹರ್ ಘರ್ ಜಲ್’ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದಿದೆ. ಪ್ರತಿ ಮನೆಗೂ ಶುದ್ಧ ನೀರು ಕನಸು ಈ ಯೋಜನೆಯ ಮೂಲಕ ನನಸಾಗಲಿದೆ ಎಂಬ ಭರವಸೆ ಸಮಸ್ತ ಭಾರತೀಯರದ್ದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.