ಕರ್ನಾಟಕ, ಗೋವಾ ರಾಜ್ಯಗಳಲ್ಲಿ ರಾಜಕೀಯ ವಿಪ್ಲವ, ಹೈಡ್ರಾಮಾ, ರೆಸಾರ್ಟ್ಗೆ ಶಾಸಕರ ಪಯಣ ವಿದ್ಯಮಾನಗಳ ನಡುವೆ, ಕಳೆದ ಜು. ೧೦ರಂದು ಮಾಧ್ಯಮಗಳಲ್ಲಿ ಪ್ರಕಟವಾದ ಧನಾತ್ಮಕ ಸುದ್ದಿಯೊಂದು ಅಷ್ಟಾಗಿ ಪ್ರಚಾರ ಪಡೆಯಲೇ ಇಲ್ಲ. ಧನಾತ್ಮಕ ಸುದ್ದಿಗಳ ಜಾಯಮಾನವೇ ಹಾಗೆ! ಅದು ಯಾರಿಗೂ ಅಷ್ಟೊಂದು ಆಕರ್ಷಕವೆನಿಸುವುದಿಲ್ಲ. ಯಾರಲ್ಲೂ ಸಂಚಲನ ಮೂಡಿಸುವುದಿಲ್ಲ. ಋಣಾತ್ಮಕ ಸುದ್ದಿಗಳಾದರೆ, ಅದಕ್ಕೆ ಮತ್ತಷ್ಟು ಉಪ್ಪ, ಖಾರ, ಮಸಾಲೆ ಬೆರೆಸಿ ರುಚಿಯಾಗಿಸಿ ಸವಿಯುವವರ ಸಂಖ್ಯೆ ದೊಡ್ಡದೇ ಇರುತ್ತದೆ.
ಇರಲಿ. ಲೋಕ ಇರುವುದೇ ಹಾಗೆ. ಲೋಕದ ಡೊಂಕ ನೀವು ತಿದ್ದುವಿರೇನಯ್ಯಾ? ಎಂದು ವಚನಕಾರರು ಬಹಳ ಹಿಂದೆಯೇ ಪ್ರಶ್ನಿಸಿ ಬಿಟ್ಟಿದ್ದಾರಲ್ಲ. ಆ ಸುದ್ದಿಯೇನೆಂದರೆ ಗಾಂಧೀಜಿ ಎಂಬ ಮಹಾತ್ಮ ಜನಿಸಿ 150 ವರ್ಷಗಳಾದ ಶುಭ ನೆನಪಿಗಾಗಿ ಗಾಂಧಿ ಜಯಂತಿ ವೇಳೆ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 150 ಕಿ.ಮೀ. ಪಾದಯಾತ್ರೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಸೂಚನೆ ನೀಡಿರುವುದು. ಗಾಂಧಿ ಜಯಂತಿಯ ದಿನವಾದ ಅಕ್ಟೋಬರ್ 2 ರಿಂದ ಸರ್ದಾರ್ ಪಟೇಲರ ಜನ್ಮದಿನವಾದ ಅಕ್ಟೋಬರ್ 31 ರ ನಡುವಣ ಅವಧಿಯಲ್ಲಿ ಲೋಕಸಭಾ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ 150 ಕಿ.ಮೀ. ಪಾದಯಾತ್ರೆ ಕೈಗೊಳ್ಳಬೇಕು. ಪ್ರತಿನಿತ್ಯ 15 ಕಿ.ಮೀ.ನಂತೆ ಈ ಪಾದಯಾತ್ರೆ ನಡೆಸಬಹುದು. ಪಾದಯಾತ್ರೆ ಸಂದರ್ಭದಲ್ಲಿ ಸಸಿ ನೆಡುವುದು, ಸ್ವಚ್ಛತಾ ಕಾರ್ಯ ನಿರ್ವಹಣೆ, ಗ್ರಾಮಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಸ್ತಾಪ, ಚರ್ಚೆ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಸರ್ಕಾರದ ಕಾರ್ಯ ನಿರ್ವಹಣೆ ಹಾಗೂ ಸರ್ಕಾರದಿಂದ ಜನರು ಹೊಂದಿರುವ ನಿರೀಕ್ಷೆ ಕುರಿತು ಅಭಿಪ್ರಾಯ ಸಂಗ್ರಹ ಇತ್ಯಾದಿ ಈ ಯಾತ್ರೆಯ ಉದ್ದೇಶ.
ಮೋದಿ ಮೊದಲ ಬಾರಿಗೆ ದೇಶದ ಪ್ರಧಾನಿಯಾಗುತ್ತಿದ್ದಂತೆ ಸ್ವಚ್ಛತಾ ಅಭಿಯಾನಕ್ಕೊಂದು ಹೊಸ ಕಾಯಕಲ್ಪ ನೀಡಿದ್ದರು. ಅದರ ಪರಿಣಾಮ ನಿರೀಕ್ಷೆಯಷ್ಟು ಆಗದಿದ್ದರೂ ಸ್ವಚ್ಛತೆಯ ಬಗ್ಗೆ ದೇಶದಾದ್ಯಂತ ಜನಮನದಲ್ಲಿ ಜಾಗೃತಿ ಮೂಡಿಸುವಲ್ಲಿ ಅತ್ಯಂತ ಫಲಪ್ರದವಾಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ದಿಲ್ಲಿಯಿಂದ ಹಿಡಿದು ಹಳ್ಳೆಯವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಟಕ್ನಿಂದ ಹಿಡಿದು ಕಟಕ್ವರೆಗೆ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿರುವುದನ್ನು ದೇಶಾದ್ಯಂತ ಸಂಚರಿಸುವವರು ಕಾಣಬಹುದು. ದಶಕದ ಹಿಂದೆ ಯಾವುದೇ ರಾಜ್ಯಗಳಿಗೆ ಹೋದರೂ ಗಬ್ಬು ವಾಸನೆ ಬೀರುವ ಸಾರ್ವಜನಿಕ ಶೌಚಾಲಯಗಳು, ಊರಿನ ರಸ್ತೆಯ ಇಕ್ಕೆಲಗಳಲ್ಲೂ ಕಸದ ರಾಶಿ, ಕಾರ್ಖಾನೆ ಕಚೇರಿಗಳಲ್ಲಿ ಧೂಳಿನ ವಾಸನೆ, ರೈಲ್ವೇ ನಿಲ್ದಾಣಗಳಲ್ಲಿ ಉಗಿದ ಪಾನ್, ಜರ್ದಾಗಳ ದುರ್ಗಂಧ, ಎಲ್ಲೆಂದರಲ್ಲಿ ಕಸಕಡ್ಡಿ, ತ್ಯಾಜ್ಯಗಳ ರಾಶಿಯ ಅಸಹನೀಯ ವಾತಾವರಣವೇ ನಮ್ಮನ್ನು ಸ್ವಾಗತಿಸುತ್ತಿತ್ತು. ಆದರೆ ಈಗ ಅಂತಹ ಅಸಹನೀಯ ವಾತಾವರಣ ಅಷ್ಟಾಗಿ ಕಂಡುಬರುತ್ತಿಲ್ಲ. ಸ್ವತಃ ನನ್ನ ಅನುಭವಕ್ಕೇ ಇದು ಬಂದಿದೆ. ಕಳೆದೆರಡು ತಿಂಗಳಲ್ಲಿ ನಾನು ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಮಧ್ಯಪ್ರದೇಶ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಎಲ್ಲೆಡೆ ಸ್ವಚ್ಛತೆಯ ಬಗ್ಗೆ ಜನಮನದಲ್ಲಿ ಹೊಸಬಗೆಯ ಧನಾತ್ಮಕ ಅರಿವು ಮೂಡಿರುವುದನ್ನು ಕಣ್ಣಾರೆ ಕಂಡಿರುವೆ. ಹೀಗೆ ಸ್ವಚ್ಛತಾ ಅಭಿಯಾನಕ್ಕೆ ಮೋದಿ ಹೊಸದಾಗಿ ಚಾಲನೆ ನೀಡಿದ್ದರಿಂದಲೇ ಈ ಬದಲಾವಣೆ ಸಾಧ್ಯವಾಗಿದೆ ಎಂಬುದರಲ್ಲಿ ಉತ್ಪ್ರೇಕ್ಷೆ ಇಲ್ಲ.
ಈಗ ಗಾಂಧಿ ಜಯಂತಿಯ 150 ನೇ ವರ್ಷದ ಅಂಗವಾಗಿ ಮೋದಿ ಘೋಷಿಸಿರುವ 150 ಕಿ.ಮೀ. ಪಾದಯಾತ್ರೆ ಯೋಜನೆ ಕೂಡ ಸ್ವಚ್ಛತಾ ಅಭಿಯಾನದಷ್ಟೇ ಮಹತ್ವದ್ದು ಹಾಗೂ ಪರಿಣಾಮಕಾರಿಯಾದುದು. ಈ ಪಾದಯಾತ್ರೆ ಮುಖ್ಯವಾಗಿ ಗ್ರಾಮಗಳು ಹಾಗೂ ಸಾರ್ವಜನಿಕರನ್ನು ಕೇಂದ್ರೀಕೃತವಾಗಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಬಿಜೆಪಿ ಸಂಸದರು ಪ್ರತಿ ಕ್ಷೇತ್ರದಲ್ಲೂ 150 ಗುಂಪುಗಳನ್ನು ಮಾಡಬೇಕು. ಆ ಗುಂಪುಗಳು ಒಟ್ಟು 150 ಕಿಮೀ. ಕ್ರಮಿಸಬೇಕು. ಈ ಎಲ್ಲ ಗುಂಪುಗಳಲ್ಲೂ ಸಂಸದರು ಭಾಗಿಯಾಗಬೇಕು ಎಂಬುದು ನಿರೀಕ್ಷೆ. ಚುನಾವಣೆಯ ಸಂದರ್ಭ ಬಿಟ್ಟರೆ ನಮ್ಮ ಜನಪ್ರತಿನಿಧಿಗಳು ಸಾರ್ವಜನಿಕರೊಂದಿಗೆ ನೇರಾನೇರ ಮುಖಾಮುಖಿಯಾಗುವ, ಅವರ ಕಷ್ಟ-ಸುಖ ವಿಚಾರಿಸುವ, ಅವರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸುವ ಸಂದರ್ಭಗಳೇ ಇರುವುದಿಲ್ಲ. ಒಮ್ಮೆ ಚುನಾವಣೆ ಮುಗಿದು, ಗೆದ್ದ ಬಳಿಕ ಮುಂದಿನ ಐದು ವರ್ಷಗಳವರೆಗೆ ಕ್ಷೇತ್ರದುದ್ದಕ್ಕೆ ಸಂಚರಿಸುವ ಸಂಸದರನ್ನು ದುರ್ಬೀನು ಹಾಕಿ ಹುಡುಕಬೇಕಾದ ಸ್ಥಿತಿ ಈಗಿನದು. ಈ ಮಾತಿಗೆ ಬಿಜೆಪಿ ಸಂಸದರೂ ಹೊರತೇನಲ್ಲ (ಎಲ್ಲರೂ ಹೀಗೆಯೇ ಎಂಬುದು ನನ್ನ ಮಾತಿನ ಅರ್ಥವಲ್ಲ). ಹೀಗಿರುವಾಗ ಪ್ರಧಾನಿ ಮೋದಿ ಗಾಂಧಿ ಜಯಂತಿ ಮತ್ತು ಸರ್ದಾರ್ ಪಟೇಲರ ಜಯಂತಿಗಳನ್ನು ನೆಪ ಮಾಡಿಕೊಂಡು ಬಿಜೆಪಿ ಸಂಸದರಿಗೆ ಉತ್ತಮ ಹೊಸ ಟಾಸ್ಕನ್ನೇ ನೀಡಿದ್ದಾರೆನ್ನಬಹುದು. ಸದಾ ಹವಾನಿಯಂತ್ರಿತ ವಾಹನಗಳಲ್ಲೇ ಸಂಚರಿಸುವ, ಹಳ್ಳಿಗಳಿಗೆ ಅಷ್ಟಾಗಿ ಭೇಟಿ ನೀಡಲು ಮನಸ್ಸು ಮಾಡದ ಸಂಸದರಿಗೆ ಈಗ ಮೊದಲ ಬಾರಿಗೆ ೧೫೦ ಕಿ.ಮೀ. ನಡೆದುಕೊಂಡೇ ಕ್ಷೇತ್ರ ಸುತ್ತುವ ‘ಪಾದಯಾತ್ರೆ ಭಾಗ್ಯ’ ದೊರಕಿರುವುದು ಅವರ ಯಾವ ಜನ್ಮದ ಪಣ್ಯದ ಫಲವೋ ಗೊತ್ತಿಲ್ಲ! ಸಂಸದರಿಗೆ ಇಂತಹುದೊಂದು ‘ಪಾದಯಾತ್ರೆ ಭಾಗ್ಯ’ ಕರುಣಿಸಿರುವ ಪ್ರಧಾನಿ ಮೋದಿಯವರಿಗೆ ಮತದಾರ ಪ್ರಭುಗಳಂತೂ ದೊಡ್ಡದೊಂದು ಥ್ಯಾಂಕ್ಸ್ ಹೇಳಲೇಬೇಕಾಗಿದೆ.
ಮೋದಿ ಸ್ವಚ್ಛತಾ ಅಭಿಯಾನದಲ್ಲಿ ದೇಶದ ಜನರು ಸೇರಿದಂತೆ, ಬಿಜೆಪಿಯ ಎಲ್ಲ ಕಾರ್ಯಕರ್ತರೂ ಪಾಲ್ಗೊಳ್ಳಬೇಕೆಂದು ಸೂಚಿಸಿದ್ದರು. ಆದರೆ ಕೆಲವು ರಾಜ್ಯಗಳಲ್ಲಿ ಸ್ವಚ್ಛತಾ ಅಭಿಯಾನ ಯೋಜನಾಬದ್ಧವಾಗಿ ನಡೆಯುವಂತೆ ಬಿಜೆಪಿ ಗಮನಹರಿಸಲೇ ಇಲ್ಲ ಎನ್ನುವುದು ಕಹಿ ಸಂಗತಿಯಾದರೂ ಸತ್ಯ. ಕರ್ನಾಟಕದಲ್ಲಿ ಗಾಂಧಿ ಜಯಂತಿ ಸಂದರ್ಭದಲ್ಲಿ ಆರಂಭವಾಗಬೇಕಿದ್ದ ಸ್ವಚ್ಛತಾ ಅಭಿಯಾನಕ್ಕೆ ಡಿಸೆಂಬರ್ ತಿಂಗಳು ಮುಗಿಯುವವರೆಗೂ ಬಿಜೆಪಿ ಆಗ ಚಾಲನೆ ನೀಡಿರಲಿಲ್ಲ. ಬಿಜೆಪಿಯ ಹಲವು ಕಾರ್ಯಕರ್ತರು, ಹಿತೈಷಿಗಳು ತಾವಾಗಿ ಆಸಕ್ತಿ ವಹಿಸಿ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೋ ನಿಜ. ಆದರೆ ಪಕ್ಷದ ವತಿಯಿಂದ ಸ್ವಚ್ಛತಾ ಅಭಿಯಾನಕ್ಕೆ ಸ್ಪಷ್ಟವಾದ ರೂಪು-ರೇಷೆ ನೀಡಿ, ಅದು ರಾಜ್ಯದಲ್ಲಿ ಯಶಸ್ವಿಯಾಗುವಂತೆ ಮಾಡಿರಲಿಲ್ಲ. ಜನಪ್ರತಿನಿಧಿಗಳು ಇದೊಂದು ತಾವೇ ಮುಂಚೂಣಿಯಲ್ಲಿ ನಿಂತು ಯಶಸ್ವಿಗೊಳಿಸಬೇಕಾದ ಕಾರ್ಯವೆಂದು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಕೆಲವು ರಾಜ್ಯಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ತಾವೂ ಪಾಲ್ಗೊಂಡಿದ್ದೇವೆಂದು ಪ್ರಚಾರ ಪಡೆಯಲು, ಕಸವಿಲ್ಲದ ಸ್ವಚ್ಛವಾಗಿದ್ದ ಜಾಗದಲ್ಲಿ ಕಸ ತಂದು ಸುರಿದು, ಅದನ್ನು ಗುಡಿಸಿ ಹಾಕುವಂತೆ ನಟಿಸುವ ಫೋಟೋ ತೆಗೆಸಿ, ಮಾಧ್ಯಮಗಳಲ್ಲಿ ಪ್ರಕಟಿಸಿದ ಆಭಾಸದ ಪ್ರಕರಣಗಳೂ ಆಗ ನಡೆದಿದ್ದವು.
ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ನೀಡಿರುವ 150 ಕಿಮೀ.
ಪಾದಯಾತ್ರೆಯ ಈ ಹೊಸ ಟಾಸ್ಕ್ ಅನ್ನು ಸಂಸದರು ಹೇಗೆ ನಿರ್ವಹಿಸಲಿದ್ದಾರೆ? ಎಷ್ಟರ ಮಟ್ಟಿನ ಪ್ರಾಮಾಣಿಕ ಕಾಳಜಿಯೊಂದಿಗೆ ಯಶಸ್ವಿಗೊಳಿಸಲಿದ್ದಾರೆ? ಎಂಬ ಬಗ್ಗೆ ಮತದಾರರಲ್ಲಿ ಅದರಲ್ಲೂ ಬಿಜೆಪಿ ಅಭಿಮಾನಿಗಳಲ್ಲಿ ಕುತೂಹಲವಂತೂ ಇದ್ದೇ ಇದೆ. ಕಾಲ್ನಡಿಗೆಯ ಅಭ್ಯಾಸವೇ ಇರದ ಕೆಲವು ಸಂಸದರು 150 ಕಿ.ಮೀ. ನಷ್ಟು ದೂರ ಹೇಗೆ ಸಂಚರಿಸುತ್ತಾರೆ ಎಂಬ ಆತಂಕವೂ ಮನೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಸ್ನೇಹಿತರೊಬ್ಬರು “ಎಲ್ಲ ಎಂಪಿಗಳಿಗೂ ಒಂದು ಜಿಪಿಎಸ್ ಮತ್ತು ಬಾಡಿ ವಿಯರಿಂಗ್ ಕೆಮೆರಾ ಕೊಟ್ಟು ಮಾನಿಟರ್ ಮಾಡಬೇಕು. ಇಲ್ಲಾ ಅಂದ್ರೆ ಮನೇಲೇ ಕೂತು 300 ಕಿ.ಮೀ. ಲೆಕ್ಕ ಕೊಡ್ತಾರೆ” ಎಂಬ ಕಾಮೆಂಟ್ ಹಾಕಿದ್ದರು!
ಆದರೆ ಪ್ರಧಾನಿ ಮೋದಿ ರೂಪಿಸಿದ ಈ ಪಾದಯಾತ್ರೆ ಯೋಜನೆ ಯಶಸ್ವಿಯಾದರೆ ಬಿಜೆಪಿಗಷ್ಟೇ ಅಲ್ಲ, ಇಡೀ ದೇಶಕ್ಕೆ ಪ್ರಯೋಜನವಾಗಲಿದೆ. ಮೊದಲ ಬಾರಿಗೆ ಮತದಾರರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು, ನೇರವಾಗಿ ತಮ್ಮ ಸಂಸದರನ್ನು ನಿರ್ಭಿಡೆಯಿಂದ ಭೇಟಿಯಾಗಲು ಅವಕಾಶ ಸಿಗಲಿದೆ. ಜನರ ಅಭಿಪ್ರಾಯ ಸಂಗ್ರಹಿಸಿ, ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಜನಪರ ಕಲ್ಯಾಣ ಕಾರ್ಯಕ್ರಮ ಯೋಜನೆಗಳನ್ನು ಅನುಷ್ಠಾನಗೊಳಿಸಲು ಈ ಪಾದಯಾತ್ರೆ ಅತ್ಯುತ್ತಮ ಅವಕಾಶ ಒದಗಿಸಲಿದೆ.
ಸದಾ ಜನರ ನಡುವೆಯೇ ಸಂಚರಿಸುವ ಒಡಿಶಾದ ಪ್ರತಾಪಚಂದ್ರ ಸಾರಂಗಿಯಂಥ ಬಿಜೆಪಿ ಸಂಸದರು 150 ಕಿ.ಮೀ. ಪಾದಯಾತ್ರೆಯನ್ನು ಯಶಸ್ವಿಯಾಗಿ ನಡೆಸುತ್ತಾರೆಂಬ ಬಗ್ಗೆ ಯಾರಿಗೂ ಅನುಮಾನ ಉಳಿದಿಲ್ಲ. ಆದರೆ ಉಳಿದವರೂ ಈ ಯೋಜನೆಗೆ ಪ್ರಾಮಾಣಿಕವಾಗಿ ಸಾಥ್ ನೀಡುತ್ತಾರಾ? ಈ ಯೋಜನೆಯನ್ನು ಯಶಸ್ವಿಗೊಳಿಸಿ ಮೋದಿಯವರಿಗೆ ಒಳ್ಳೆಯ ಹೆಸರು ತರುತ್ತಾರಾ? ಯಾವುದಕ್ಕೂ ಅಕ್ಟೋಬರ್ ತಿಂಗಳು ಮುಗಿಯುವವರೆಗೆ ತಾಳ್ಮೆಯಿಂದ ಕಾದು ನೋಡಬೇಕು.
✍ ದು. ಗು. ಲಕ್ಷ್ಮಣ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.