ವಿಶ್ವ ಯೋಗ ದಿನದ ಕಾರ್ಯಕ್ರಮದ ಅಂಗವಾಗಿ ಶಾಲೆಯೊಂದಕ್ಕೆ ಯೋಗದ ಕುರಿತು ಮಾತನಾಡುವುದಕ್ಕೆ ಹೋಗಿದ್ದೆ. ಛೆ… ಯೋಗದ ಕುರಿತು ಮಾತನಾಡುವುದು ಏನು ಬಂತು? ಆಸನಗಳನ್ನು ಹಾಕಬೇಡವೇ? ಪ್ರಾಣಾಯಾಮ ಮಾಡಬೇಡವೇ? ಎಂಬ ಪ್ರಶ್ನೆಯೂ ಬಂತು. ಆದರೆ ಆಸನ ಪ್ರಾಣಾಯಾಮ ಗಳಿಗಿಂತಲೂ ಮಹತ್ವದ ಮೊದಲ ಹೆಜ್ಜೆಗಳು ಬಹಳಷ್ಟು ಇವೆ ಎಂಬುದಕ್ಕೆ ಪಾತಂಜಲ ಯೋಗಸೂತ್ರವೇ ನಮಗೆ ಪ್ರಥಮಗುರು. ಏಕೆಂದರೆ ಮೊದಲ ಸೂತ್ರ ಹೇಳುವುದು ಅದನ್ನೇ ತಾನೆ? “ಯೋಗ ಚಿತ್ತವೃತ್ತಿ ನಿರೋಧ” ಹಾಗಾದರೆ ಆಸನ ಪ್ರಾಣಾಯಾಮ ಗಳಿಗಿಂತಲೂ ಮೊದಲು ನಾವು ಕಂಡುಕೊಳ್ಳಬೇಕಾದ ಮತ್ತು ಆ ಮೂಲಕ ಅನುಷ್ಠಾನಗೊಳಿಸ ಬೇಕಾದ ಮೊದಲ ಹೆಜ್ಜೆಗಳು ಬೇರೆಯೇ ಇವೆ ಎಂದಾಯಿತು. ಆದರೆ ಮೊದಲ ಹೆಜ್ಜೆಗಳಿಗೂ ಮೊದಲು ಎಲ್ಲಿಂದ ಆರಂಭಿಸಬಹುದು ಈ ಯೋಗವನ್ನು? ಎಂದು ಯೋಚಿಸಿದರೆ ಅದಕ್ಕೆ ಸಿಗುವ ಉತ್ತರ ಒಂದೇ” ನಾಮಸ್ಮರಣೆ” ಯಾರ ನಾಮ? ಸ್ಮರಣೆ ಯಾಕಾಗಿ? ಎನ್ನುವ ಪ್ರಶ್ನೆಗಳು ಜೊತೆಗೆ ಹುಟ್ಟಿಕೊಳ್ಳುತ್ತವೆ ತಾನೆ?
ಬಹುಶಹ ನಮ್ಮನ್ನು ಸೇರಿಸಿಕೊಂಡು ಈ ಜಗತ್ತನ್ನು ಅರ್ಥಮಾಡಿಕೊಳ್ಳುವುದು ನಾವು ನಮಗೆ ಮತ್ತು ಜಗತ್ತಿಗೆ ಇಟ್ಟುಕೊಂಡ ಹೆಸರುಗಳಿಂದಲೇ ಅಲ್ಲವೇ. ಹಾಗಾಗಿ ಈ ಜಗತ್ತಿಗೆ ಅತೀತವಾದ, ಭಗವಂತ ದೇವರು ಎಂದೆಲ್ಲ ನಾವು ಕರೆಯುವ ಆ ಶಕ್ತಿಯನ್ನು ಕೂಡ ಕಂಡುಕೊಳ್ಳುವ ಬಗೆ ” ನಾಮ” ಕ್ಕಿಂತ ಭಿನ್ನವಾಗಿ ಇರಲು ಸಾಧ್ಯವಿಲ್ಲ. ಆದರೆ ಎಷ್ಟರಮಟ್ಟಿಗೆ ಅರ್ಥವಾಗುತ್ತದೆ ಎಂಬುದು ನಾವು ನಾಮದೊಂದಿಗೆ ಹೊಂದಿದ ತಾದಾತ್ಮ್ಯವನ್ನು ಅವಲಂಬಿಸಿದೆ. ದೇಹದೊಂದಿಗೆ ಜಗತ್ತಿನೊಂದಿಗೆ ತಾದಾತ್ಮ್ಯ ಹೊಂದಿದಷ್ಟು, ಅಷ್ಟೇ ತೀವ್ರತೆಯಲ್ಲಿ ಅವುಗಳು ಅರ್ಥವಾಗುತ್ತವೆ. ಹಾಗಾದರೆ ನಾಮದ ತೀವ್ರತೆ ಎಷ್ಟು ಇದೆ ಎಂಬುದು ಮುಖ್ಯ. ಭಗವಂತನ ನಾಮಸ್ಮರಣೆ ಮಾಡುವಾಗ ಎಷ್ಟರ ಮಟ್ಟಿಗೆ ನಮ್ಮ ಮನಸ್ಸು ಅದಕ್ಕೆ ಬಿದ್ದಿದೆ ಎಂಬುದು ಅಷ್ಟೇ ಪ್ರಾಮುಖ್ಯ. ಇಲ್ಲವಾದರೆ ನಾವು ಜಗತ್ತಿನ ವಸ್ತುಗಳನ್ನು ಉಚ್ಚರಿಸಿದರೆ ಅಷ್ಟೇ ಫಲ, ನಾಮಸ್ಮರಣೆಯಿಂದ.
ಆ ದಿನ ಆ ಶಾಲೆಯಲ್ಲಿ ಉಪನ್ಯಾಸ ಮುಗಿದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವಿತ್ತು. ಒಬ್ಬ ವಿದ್ಯಾರ್ಥಿ ಪ್ರಶ್ನೆ ಕೇಳಿದ” ಮನಸ್ಸನ್ನು ಏಕಾಗ್ರಗೊಳಿಸುವುದು ಹೇಗೆ?”. ಅದಕ್ಕೆ ನಾನೆಂದೆ, ” ಅದು ನಿನ್ನ ಪ್ರಶ್ನೆಯಲ್ಲ. ಅದು ಅರ್ಜುನನ ಪ್ರಶ್ನೆ. ಅರ್ಜುನ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನಿಗೆ ಕೇಳುತ್ತಾನೆ-“ಕೃಷ್ಣ, ಗಾಳಿಯನ್ನು ಹಿಡಿಯುವುದು ಎಷ್ಟು ಕಷ್ಟವೋ, ಈ ಮನಸ್ಸನ್ನು ಹಿಡಿಯುವುದು ಕೂಡ ಅಷ್ಟೇ ಕಷ್ಟವಲ್ಲವೇ? ಅದಕ್ಕೆ ಕೃಷ್ಣ ಉತ್ತರಿಸುತ್ತಾನೆ- ಅಭ್ಯಾಸದಿಂದ ಮತ್ತು ವೈರಾಗ್ಯದಿಂದ ಈ ಮನಸ್ಸನ್ನು ನಿಗ್ರಹಿಸಿ ಏಕಾಗ್ರಗೊಳಿಸಬಹುದು”. ಹಾಗಾದರೆ ಅಭ್ಯಾಸವೆಂದರೇನು? ಮನಸ್ಸು ಇತರ ವಿಷಯಗಳ ಕಡೆಗೆ ಅತ್ತಿಂದಿತ್ತ ಚಲಿಸುವಾಗ ಅದನ್ನು ದೇವರನಾಮವನ್ನು ಜಪಿಸಿ ಮತ್ತೆ ಹಿಂದಕ್ಕೆ ತರುವುದು. ವೈರಾಗ್ಯವೆಂದರೆ ಕಾವಿ ಬಟ್ಟೆ ತೊಟ್ಟು ಹಿಮಾಲಯಕ್ಕೆ ಹೋಗಬೇಕೆಂದು ಅರ್ಥವಲ್ಲ. ನಮ್ಮ ಕಣ್ಣ ಮುಂದೆ ಆಗುತ್ತಿರುವ ಜಗತ್ತಿನ ಆಗುಹೋಗುಗಳನ್ನು ಕಣ್ತೆರೆದು ನೋಡುವುದು ಮತ್ತು ಅದರಲ್ಲಿರುವ ಹುಟ್ಟು, ಸಾವು, ಮುಪ್ಪು, ರೋಗ ಇತ್ಯಾದಿಗಳನ್ನು ಬುದ್ಧಿಪೂರ್ವಕವಾಗಿ ಗಮನಿಸಿ ಜಗತ್ತಿನ ವಿಷಯಗಳ ಬಗ್ಗೆ ಜಿಗುಪ್ಸೆ ತಳೆಯುವುದು. ಇದಾವುದೂ ಶಾಶ್ವತವಲ್ಲ ಮತ್ತು ದುಃಖಕ್ಕೆ ಕಾರಣ ಎಂದು ನಮ್ಮ ಬುದ್ಧಿ ಗ್ರಹಿಸುವುದು. ಆದಕಾರಣ ವೈರಾಗ್ಯವೆಂಬುದು ಬಾಹ್ಯದಿಂದ ಆರಂಭವಾಗುವ ಸಂಗತಿಯಲ್ಲ. ಅಂತರಂಗದಿಂದ ಮೊದಲುಗೊಂಡು ಬಹಿರಂಗದಲ್ಲಿ ಸ್ಥಿತ್ಯಂತರವನ್ನು ತರುವ ಒಂದು ಪ್ರಕ್ರಿಯೆ. ಹಾಗಾದರೆ ಯಾವುದು ಮೊದಲು? ಅಭ್ಯಾಸ ಮೊದಲೋ, ವೈರಾಗ್ಯ ಮೊದಲೋ? ಆದರೆ ಅಭ್ಯಾಸವಿಲ್ಲದೆ ವೈರಾಗ್ಯವಿಲ್ಲ, ವೈರಾಗ್ಯವಿಲ್ಲದೆ ಅಭ್ಯಾಸವಿಲ್ಲ. ಒಂದು ಮತ್ತೊಂದನ್ನು ಬಿಟ್ಟು ಇಲ್ಲ. ಅದಕ್ಕೆ ನನ್ನ ಆಧ್ಯಾತ್ಮಿಕ ಗುರುಗಳಾದ ಶ್ರೀ ಆರ್ಬಿನಿತ್ಯಾನಂದಂ ಅವರು ಹೇಳುತ್ತಿದ್ದುದು ನನಗೆ ನೆನಪಾಗುತ್ತಿದೆ-” ಈ ಮನಸ್ಸಿಗೆ ಇದು (ಜಗತ್ತು) ಅಸತ್ಯ ಅಂತಲೂ ಕಾಣಬೇಕು, ಇದಕ್ಕಿಂತ ಬೇರೆಯಾದ ಒಂದು ಸತ್ಯ ಇದೆ ಅಂತಲೂ ನಂಬಿಕೆ ಬೇಕು” ಎಂದು ಹೇಳುತ್ತಿದ್ದರು. ಅಂದರೆ ವೈರಾಗ್ಯ ಬಂದಾಗ, ಜಗತ್ತು ಅಸತ್ಯ ಎಂದು ಮನಸ್ಸಿಗೆ ಅರಿವಾಗತೊಡಗಿದಾಗ ಅದು, ಆ ಮನಸ್ಸು ಇನ್ನೊಂದು ಸತ್ಯದ ಕಡೆಗೆ ಜರುಗುವ ಒಂದು ಪಲ್ಲಟಕ್ಕೆ ತೆರೆದುಕೊಳ್ಳುತ್ತದೆ. ಆಗ ಆ ಪ್ರಕ್ರಿಯೆಯನ್ನು, ಆ ವ್ಯಾಕುಲತೆಯನ್ನು ಕಾಯ್ದುಕೊಳ್ಳುವಲ್ಲಿ ನೆರವಾಗುವಂಥದ್ದು ಭಗವಂತನ ನಾಮಸ್ಮರಣೆ. ಅದರ ನಿರಂತರತೆ, ನಮ್ಮ ವ್ಯಾಕುಲತೆಯ ತೀವ್ರತೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಅವಲಂಬಿಸಿದೆ. ಅದನ್ನು ದುಃಖ ಎನ್ನುವುದಕ್ಕಿಂತ ನಿರ್ವಿಣ್ಣತೆ ಅಥವಾ ವ್ಯಾಕುಲತೆ ಎಂದು ಕರೆಯುವುದು ಸೂಕ್ತ. ದುಃಖ ಎಂದರೆ ತನಗೆ ಬೇಕಾದದ್ದು ಸಿಕ್ಕದಾಗ ಉಂಟಾಗುವ ಒಂದು ಹತಾಶೆಯ ಅಥವಾ ಜಿಗುಪ್ಸೆಯ ಮನಸ್ಥಿತಿ. ಆದರೆ ನಿರ್ವಿಣ್ಣತೆ ಅಥವಾ ವಿಷಾದ ಹಾಗಲ್ಲ. ಬಹುಶಃ ವಿಷಾದ ಇಲ್ಲದೆ ಇದ್ದರೆ ಯೋಗವು ಇಲ್ಲ. ಆದಕಾರಣ ಭಗವದ್ಗೀತೆ ಆರಂಭವಾಗುವುದು ಮೊದಲ ಅಧ್ಯಾಯ “ವಿಷಾದಯೋಗ”ದಿಂದ. ಆದಕಾರಣ ಮನಸ್ಸನ್ನು ಹೊಂದಿಕೊಂಡು ವಿಷಾದವೂ ಯೋಗವಾಗಬಹುದು. ಅಂದರೆ ಯೋಗಕ್ಕೆ ನಾಂದಿ ಹಾಡಬಹುದು. ಹಾಗೆ ವಿಷಾದವು ಬಂದಾಗ, ಯೋಗದ ಕುರಿತಾದ ಜಿಜ್ಞಾಸೆಗೆ ಉತ್ತರ ಕೊಡುವ ಗುರು ತಾನಾಗೇ ನಮ್ಮ ಬಳಿಗೆ ಬರಬಹುದು. ಬಹುಶಃ ಇದೊಂದು ಪ್ರಕೃತಿ ನಿಯಮವೋ ಏನೋ.
ಹಾಗಾದರೆ ನಾಮಸ್ಮರಣೆಯ ಅಭ್ಯಾಸ ಅಥವಾ ನಾಮಸ್ಮರಣೆಯ ಊರುಗೋಲು ಇಲ್ಲದಿದ್ದರೆ ಏನಾಗುತ್ತದೆ? ಮನಸ್ಸಿನ ಕೆಸರೆರಚಾಟ ಮುಂದುವರಿಯುತ್ತದೆ ಮತ್ತು ಕೊಳೆತು ನಾರುತ್ತದೆ. ನಿರಂತರ ಸಂಕಟಕ್ಕೆ ಈಡಾಗುತ್ತದೆ. ಈಗ ಒಂದು ಕಥೆ ನೆನಪಾಗುತ್ತಿದೆ. ಮಾವುತನೊಬ್ಬ ತನ್ನ ಆನೆಯನ್ನು ನಿತ್ಯವೂ ಕೊಳದಲ್ಲಿ ಸ್ನಾನ ಮಾಡಿಸಿ ತನ್ನ ಗುಡಿಸಲಿಗೆ ಕರೆದುಕೊಂಡು ಬರುತ್ತಿದ್ದ. ಆದರೆ ಮಾರ್ಗಮಧ್ಯದಲ್ಲಿ ಆನೆಯು ತನ್ನ ಸೊಂಡಿಲಿನಿಂದ ಕೆಸರನ್ನು ಕೊಳಕನ್ನು ತನ್ನೆಡೆಗೆ ಎರಚಿಕೊಂಡು ಮತ್ತೆ ತನ್ನ ಮೈಯ್ಯನ್ನು ಕೊಳಕು ಮಾಡಿಕೊಳ್ಳುತ್ತಿತ್ತು. ಮಾವುತ ಚಿಂತೆಗೀಡಾದ. ತನ್ನ ಸ್ನೇಹಿತನ ಬಳಿ ಈ ವಿಷಯವನ್ನು ಹೇಳಿದ. ಅದಕ್ಕೆ ಸ್ನೇಹಿತನು ನಕ್ಕು ಉಪಾಯವೊಂದನ್ನು ತಿಳಿಸಿದ. ಸ್ನಾನ ಮಾಡಿಸಿ ಹಿಂತಿರುಗುವಾಗ ಆನೆಯ ಸೊಂಡಿಲಿಗೆ ಮರದ ದಿಮ್ಮಿಯನ್ನು ತಗುಲಿಸಲು ಹೇಳಿದ. ಮಾವುತ ಅಂತೆಯೇ ಮಾಡಿದ. ಆನೆ ಕೆಸರು ಎರಚಿಕೊಳ್ಳುವುದಕ್ಕೆ ಬದಲು ಸೊಂಡಿಲಿನಿಂದ ದಿಮ್ಮಿಯನ್ನು ತಿರುಗಿಸುತ್ತಾ ಗುಡಿಸಲಿಗೆ ಸಾಗಿತು. ಅಂದರೆ ಕೆಸರನ್ನು ಎರಚಿಕೊಳ್ಳಲಿಲ್ಲ. ಆನೆಯ ಸೊಂಡಿಲು ಎಂದರೆ ನಮ್ಮ ಮನಸ್ಸು ಇದ್ದಂತೆ. ಅದಕ್ಕೆ ಹಿಡಿದು ಕೊಳ್ಳುವುದಕ್ಕೆ ಒಂದು ಬೇಕು. ಒಳ್ಳೆಯದು ಸಿಗದಿದ್ದರೆ ಕೆಸರು ಕೊಳಕನ್ನು ಆದರೂ ಅದು ಎರಚಿಕೊಳ್ಳುತ್ತದೆ, ನಮ್ಮ ಮನಸ್ಸಿನಂತೆ. ಅದಕ್ಕೊಂದು ಊರುಗೋಲು, ಅಂದರೆ ನಾಮಸ್ಮರಣೆಯ ಆಲಂಬನ ಸಿಕ್ಕಿದಾಗ ಏಕಾಗ್ರತೆಯನ್ನು ಭಂಗಗೊಳಿಸುವ, ದುಷ್ಟ ಚಿತ್ತವೃತ್ತಿಗಳು ದೂರಸರಿದು ದೇವರನಾಮದ ಏಕಾಗ್ರತೆಯ ಬಲ ಸಿದ್ಧಿಸುತ್ತದೆ. ಆದರೆ ಆ ನಾಮವನ್ನು ಯಾವ ಭಾವದಿಂದ, ಎಷ್ಟು ತೀವ್ರವಾಗಿ ಅಂತರಂಗಕ್ಕೆ ಹಚ್ಚಿದ್ದೇವೆ ಎಂಬುದರ ಮೇಲೆ ಪರಿಣಾಮ ನಿರ್ಧಾರವಾಗುತ್ತದೆ. ದೇವರ ಹೆಸರು ಹೇಳಿದಾಕ್ಷಣ ಉಂಟಾಗುವ ರೋಮಾಂಚ ಮತ್ತು ಆನಂದಬಾಷ್ಪಗಳು ಸಿದ್ಧಿಸಿದ ಏಕಾಗ್ರತೆಗೆ ಸಾಕ್ಷಿ ಹೇಳುತ್ತವೆ. ಅದಕ್ಕಲ್ಲವೇ ನಾವು ಹನುಮಂತನನ್ನು “ಬಾಷ್ಪವಾರಿ ಪರಿಪೂರ್ಣ ಲೋಚನಂ”, ಅಂದರೆ ರಾಮನ ಹೆಸರನ್ನು ಹೇಳಿದಾಗ ಕಣ್ಣೀರಿನಿಂದ ತುಂಬಿಕೊಳ್ಳುವ ಆಂಜನೇಯನನ್ನು ಸ್ಮರಿಸುತ್ತೇನೆ ಎಂದು ಅರ್ಥ. ಹಾಗಾದರೆ ಹನುಮಂತನು, ಪ್ರತೀಕವೂ ಹೌದು, ನಾಮಸ್ಮರಣೆಯ ರೂವಾರಿಯೂ ಹೌದು, ಏಕಾಗ್ರತೆಯ ಪ್ರತೀಕವೂ ಹೌದು. ಆದಕಾರಣ ಭಗವಂತನ ಸಾಕಾರ ಸಾಮ್ರಾಜ್ಯದಲ್ಲಿ ಪ್ರವೇಶ ಪಡೆಯುವುದಕ್ಕೆ ಬೇಕಾದ ಏಕಾಗ್ರತೆಗೆ ಆಂಜನೇಯನು ಮೊದಲ ಗುರು.
✍ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.