ವಿಶ್ವ ಜನಸಂಖ್ಯಾ ದಿನವನ್ನು ಪ್ರತಿವರ್ಷ ಜುಲೈ 11 ರಂದು ಆಚರಿಸಲಾಗುತ್ತದೆ. ಜನಸಂಖ್ಯೆಯ ಸಮಸ್ಯೆಗಳ ಬಗ್ಗೆ ತುರ್ತು ಮತ್ತು ಮಹತ್ವದ ಗಮನವನ್ನು ಹರಿಸುವ ಸಲುವಾಗಿ ಈ ದಿನವನ್ನು ಆಚರಿಸುತ್ತಾ ಬರಲಾಗಿದೆ. ವಿಶ್ವ ಜನಸಂಖ್ಯಾ ದಿನವನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು 1989 ರಲ್ಲಿ ಆರಂಭಿಸಿತು. ಜನಸಂಖ್ಯಾ ದಿನದ ಬಗ್ಗೆ ನಾವು ಹೆಚ್ಚು ಕೇಳಿರದಿದ್ದರೂ, ಸುಮಾರು ಮೂರು ದಶಕಗಳಿಂದ ಇದನ್ನು ಆಚರಿಸಲಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನ ಗುರಿ. 1987ರ ಜುಲೈ 11ರಂದು ಆಚರಿಸಲಾದ “ಫೈವ್ ಬಿಲಿಯನ್ ಡೇ” ದಿನದಿಂದ ಸ್ಫೂರ್ತಿಯನ್ನು ಪಡೆದುಕೊಂಡು ಈ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವದ ಜನಸಂಖ್ಯೆಯು 5 ಬಿಲಿಯನ್ ತಲುಪಿದ ದಿನವನ್ನು ‘ಫೈವ್ ಬಿಲಿಯನ್ ಡೇ’ ಎಂದು ಆಚರಿಸಲಾಗಿತ್ತು.
ವಿಶ್ವ ಜನಸಂಖ್ಯಾ ದಿನದ ವಿಷಯ ಮತ್ತು ಮಹತ್ವ
ಹೆಚ್ಚುತ್ತಿರುವ ಜನಸಂಖ್ಯೆಯು ಉಂಟುಮಾಡುವ ದೊಡ್ಡ ಸಮಸ್ಯೆಯೆಂದರೆ, ಅದು ನೈಸರ್ಗಿಕ ಸಂಪನ್ಮೂಲಗಳನ್ನು ಕ್ಷಿಪ್ರಗತಿಯಲ್ಲಿ ಕರಗುವಂತೆ ಮಾಡುತ್ತಿದೆ ಮತ್ತು ಅದು ಸುಸ್ಥಿರತೆಗೆ ದೊಡ್ಡ ಮಟ್ಟದ ಬೆದರಿಕೆಯನ್ನೊಡ್ಡುತ್ತಿದೆ. ಆದರೂ, ಈ ಬೆದರಿಕೆಗಳ ನಡುವೆಯೂ ವಿಶ್ವ ಜನಸಂಖ್ಯಾ ದಿನವನ್ನು ಸಹೋದರತ್ವದ ಮನೋಭಾವವನ್ನು ಆಚರಿಸುವ ಒಂದು ಅವಕಾಶವಾಗಿಯೂ ನಾವು ನೋಡಬೇಕು. ಈ ದಿನ, ನಾವು ಮನುಷ್ಯರಾಗಿ ಪರಸ್ಪರರ ಬಗ್ಗೆ ಹೊಂದಿರುವ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು.
ಜನಸಂಖ್ಯೆಯ ವಿಭಾಗವು ಜನಸಂಖ್ಯೆಯ ಮೇಲಿನ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ವಿಶ್ವಸಂಸ್ಥೆ ವ್ಯವಸ್ಥೆಯ ಏಜೆನ್ಸಿಗಳು, ಕಾರ್ಯಕ್ರಮಗಳು, ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.
ವಿಶ್ವ ಜನಸಂಖ್ಯಾ ದಿನವನ್ನು ವಿವಿಧ ದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಯುನೈಟೆಡ್ ನೇಷನ್ಸ್ ಫಂಡ್ ಫಾರ್ ಪಾಪ್ಯುಲೇಶನ್ ಆಕ್ಟಿವಿಟೀಸ್ (ಯುಎನ್ಎಫ್ಪಿಎ) ಕೌಂಟಿ ಆಫೀಸ್ ಈ ದಿನವನ್ನು ಪೋಸ್ಟರ್ ಮತ್ತು ಪ್ರಬಂಧ ಸ್ಪರ್ಧೆಗಳು ಮತ್ತು ಕ್ರೀಡೆ, ಸಂಗೀತ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತವೆ. 2011 ರಲ್ಲಿ ವಿಶ್ವ ಜನಸಂಖ್ಯೆಯು 7 ಬಿಲಿಯನ್ ಗಡಿ ದಾಟಿದೆ. ಈ ಸಂದರ್ಭದಲ್ಲಿ, ಯುಎನ್ಎಫ್ಪಿಎ ಮತ್ತು ಅದರ ಪಾಲುದಾರರು ಜನರನ್ನು ಒಳಗೊಳ್ಳುವ ಗುರಿಯನ್ನು ಹೊಂದಿರುವ 7 ಬಿಲಿಯನ್ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. 7 ಬಿಲಿಯನ್ ಜನರಿಂದ ಉದ್ಭವಾಗುವ ಸಮಸ್ಯೆಗಳನ್ನು ಪರಿಹರಿಸಲು ಬದ್ಧತೆಗಳನ್ನು ಉತ್ತೇಜಿಸುವ, ಅವಕಾಶಗಳು ಮತ್ತು ಸವಾಲುಗಳಿಗೆ ಸಂಬಂಧಿಸಿದ ಕ್ರಮಗಳನ್ನು ಹುಟ್ಟುಹಾಕುವ ಕ್ರಮಗಳನ್ನು ಈ ಕಾರ್ಯಕ್ರಮಗಳು ಒಳಗೊಂಡಿದ್ದವು.
ಪ್ರಸ್ತುತ 7 ಬಿಲಿಯನ್ ಇರುವ ಜನಸಂಖ್ಯೆ, 2043ರ ವೇಳೆಗೆ 9 ಬಿಲಿಯನ್ ಮತ್ತು 2083ರ ವೇಳೆ 10 ಬಿಲಿಯನ್ ಆಗಬಹುದು ಎಂದು ಅಂದಾಜಿಸಲಾಗಿದೆ.
ಜನಸಂಖ್ಯೆ ಏರುತ್ತಿರುವಂತೆ ಅಪರಾಧ ಪ್ರಕರಣಗಳು, ಹವಮಾನ ವೈಪರೀತ್ಯಗಳು, ಆರ್ಥಿಕ ಸಮಸ್ಯೆಗಳು ಏರುತ್ತಾ ಸಾಗುತ್ತಿವೆ. ಹೆಚ್ಚುತ್ತಿರುವ ಮಾನವ ಚಟುವಟಿಕೆಗಳಿಂದ ಪ್ರಕೃತಿಯ ಮೇಲೆ ತೀವ್ರ ಹೊಡೆತ ಬೀಳುತ್ತಿದೆ. ಅಷ್ಟೇ ಅಲ್ಲದೇ ಆರೋಗ್ಯ, ಆರೋಗ್ಯಯುತ ತಾಯಿತನ, ಮಾನವ ಹಕ್ಕು, ತುರ್ತು ಪರಿಸ್ಥಿತಿಯಂತಹ ತೊಂದರೆಗಳೂ ಹೆಚ್ಚುತ್ತಿವೆ. ಇದೆಲ್ಲವುದರ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ವಿಶ್ವ ಜನಸಂಖ್ಯಾ ದಿನದ ಸಂದರ್ಭದಲ್ಲಿ ಮಾಡಬೇಕಿದೆ.
ಜಗತ್ತಿನಲ್ಲಿ ಎರಡನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲೂ ಈ ದಿನವನ್ನು ಆಚರಿಸಲಾಗುತ್ತಿದೆ. ಜನಸಂಖ್ಯಾ ಸ್ಫೋಟ ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.