ಮಕ್ಕಳ ಬೆಳವಣಿಗೆಯಲ್ಲಿ ಮಹತ್ವ ಪಾತ್ರವನ್ನು ವಹಿಸುವ ಹಸಿರು ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸುವುದು ಪೋಷಕರಿಗೆ ಒಂದು ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಮನೆಗಳಲ್ಲಿ ಎಷ್ಟೇ ಒತ್ತಾಯ ಮಾಡಿದರೂ ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸುವುದು ಸುಲಭದ ಮಾತಾಗಿರುವುದಿಲ್ಲ. ಆದರೆ ಹಸಿರು ತರಕಾರಿ ತಿನ್ನುವ ಹವ್ಯಾಸ ಮಕ್ಕಳಿಗೆ ಶಾಲೆಯಲ್ಲೇ ಬೆಳೆದರೆ ಎಷ್ಟು ಚೆನ್ನಾಗಿರುತ್ತದಲ್ಲವೇ? ಪೋಷಕರ ಮಾತು ಕೇಳದ ಮಕ್ಕಳು ಶಿಕ್ಷಕರ ಮಾತನ್ನಂತು ಖಂಡಿತಾ ಕೇಳುತ್ತಾರೆ. ಆದರೆ ಪಾಠ ಹೇಳಿಕೊಡುವುದರ ಜೊತೆಗೆ ಉತ್ತಮವಾದುದನ್ನು ತಿನ್ನುವುದನ್ನು ಕಲಿಸುವ ಶಾಲೆಗಳು ಇದ್ದಾವೆಯೇ?
ಖಂಡಿತಾ ಇದೆ. ಅಸ್ಸಾಂನ 7 ಜಿಲ್ಲೆಗಳ 500 ಶಾಲೆಗಳಲ್ಲಿ ಮಕ್ಕಳೇ ಸಾವಯವ ಮಾದರಿಯಲ್ಲಿ ಬೆಳೆಸಿದ ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸಲಾಗುತ್ತಿದೆ.
ಹಿಂದೆ ತರಕಾರಿ ಕಂಡ ತಕ್ಷಣ ಮಾರುದ್ದ ಓಡುತ್ತಿದ್ದ ನಮ್ಮ ಮಕ್ಕಳು ಈಗ ತರಕಾರಿ ತಿನ್ನಿಸಲಾರಂಭಿಸಿದ್ದು ಹೇಗೆ ಎಂಬ ಪೋಷಕರ ಕುತೂಹಲಕ್ಕೆ ಶಾಲೆಗಳಲ್ಲಿ ಉತ್ತರ ಸಿಕ್ಕಿದೆ. ಶಾಲೆಗಳ ಆವರಣದಲ್ಲಿ ಶಿಕ್ಷಕರು ಮಕ್ಕಳ ಮೂಲಕ ತಕಾರಿ ಗಿಡಗಳನ್ನು ಬೆಳೆಸಿದ್ದಾರೆ. ಅದರಲ್ಲಿ ಆದ ತರಕಾರಿಗಳನ್ನು ಬಿಸಿಯೂಟದ ವೇಳೆ ಮಕ್ಕಳಿಗೆ ಬಡಿಸಲಾಗುತ್ತದೆ. ಹೀಗೆ ತರಕಾರಿಯ ರುಚಿ ಹತ್ತಿಸಿಕೊಂಡ ಮಕ್ಕಳು ಮನೆಗಳಲ್ಲೂ ತರಕಾರಿಯನ್ನು ಇಷ್ಟಪಟ್ಟು ತಿನ್ನುತ್ತಿದ್ದಾರೆ.
ಅಸ್ಸಾಂನ 6,7 ಮತ್ತು 8 ತರಗತಿಯ ಸುಮಾರು 50 ಸಾವಿರ ಮಕ್ಕಳು ತಮ್ಮ ತಮ್ಮ ಶಾಲೆಗಳ ಆವರಣದಲ್ಲಿ ತರಕಾರಿ ಕೃಷಿಗಳನ್ನು ಮಾಡಿದ್ದಾರೆ. ಫಾರ್ಮ್2 ಫುಡ್ ಫೌಂಡೇಶನ್ ಎಂಬ ಸಂಸ್ಥೆ ಈ ಕಾರ್ಯಕ್ರಮವನ್ನು ಆರಂಭಿಸಿದ್ದು ಅಸ್ಸಾಂನ 7 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗಿದೆ.
ಈ ತರಕಾರಿಗಳನ್ನು ರಾಸಾಯನಿಕ ಮತ್ತು ಕೀಟನಾಶಕಗಳಿಂದ ಮುಕ್ತವಾಗಿ ಬೆಳೆಯಲಾಗುತ್ತದೆ ಮತ್ತು ಶೇ.100 ರಷ್ಟು ನೈಸರ್ಗಿಕವಾಗಿರುತ್ತವೆ. ‘ಫಾರ್ಮ್ಪ್ರೆನ್ಯೂಯರ್ಸ್ (ಕೃಷಿ + ಉದ್ಯಮಿ)ಗಳು ಎಂದೂ ಕರೆಯಲ್ಪಡುವ ಈ ಶಾಲಾ ವಿದ್ಯಾರ್ಥಿಗಳು ಫಾರ್ಮ್ 2 ಫುಡ್ ಫೌಂಡೇಶನ್ ಪ್ರಾರಂಭಿಸಿದ ಕಾರ್ಯಕ್ರಮದ ಭಾಗವಾಗಿದ್ದಾರೆ ಮತ್ತು ತರಕಾರಿ ಕೃಷಿ ಮಾಡುತ್ತಿದ್ದಾರೆ. ಸಂಸ್ಥೆಯು ಕಡಿಮೆ ವೆಚ್ಚದ ಸಾವಯವ ಕೃಷಿಯನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ನ್ಯೂಟ್ರಿಷನ್ ಗಾರ್ಡನ್ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಕೃಷಿ ಚಟುವಟಿಕೆಗಳ ಮೂಲಕ, ಸಂಸ್ಥೆಯು ಅನಾರೋಗ್ಯಕರ ಆಹಾರ ಪದ್ಧತಿಯನ್ನು ಬದಲಾಯಿಸುವ ಕಾರ್ಯೋನ್ಮುಖವಾಗಿದೆ. ಇದಲ್ಲದೆ, ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಬೆಳೆಯುವ ತರಕಾರಿಗಳನ್ನು ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಬಿಸಿಯೂಟ ಪ್ರಾಧಿಕಾರಕ್ಕೆ ಮಾರಲಾಗುತ್ತಿದೆ.
ಕೃಷಿಯ ಜೊತೆಗೆ, ವಿದ್ಯಾರ್ಥಿ ಸಮುದಾಯಕ್ಕೆ ವರ್ಮಿ-ಕಾಂಪೋಸ್ಟ್, ವರ್ಮಿ-ವಾಶ್ ಮತ್ತು ಜೈವಿಕ ಕೀಟನಾಶಕಗಳನ್ನು ತಯಾರಿಸಿ ಮಾರಾಟ ಮಾಡುವ ಮತ್ತು ಲಾಭ ಗಳಿಸುವ ವಿದ್ಯೆಯನ್ನೂ ಸಂಸ್ಥೆಯೂ ಕಲಿಸಿಕೊಟ್ಟಿದೆ.
ದೀಪ್ಜೋತಿ ಸೋನು ಬ್ರಹ್ಮ ಅವರ ಕನಸಿನ ಕೂಸಾಗಿರುವ ಫಾರ್ಮ್ 4 ಫುಡ್ ಫೌಂಡೇಶನ್ ಸಂಸ್ಥೆಯು 2011 ರಲ್ಲಿ ಸ್ಥಾಪನೆಗೊಂಡಿತು. ಕೆಲವು ಸ್ನೇಹಿತರ ಜೊತೆಗೂಡಿ ಅಸ್ಸಾಂನ ಸ್ಥಳೀಯ ರೈತರ ಭೂಮಿಯ ಬಳಕೆಯನ್ನು ಉತ್ತಮಗೊಳಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಇದನ್ನು ಸ್ಥಾಪನೆ ಮಾಡಲಾಗಿದೆ.
ಅಸ್ಸಾಂನಲ್ಲಿ ಹುಟ್ಟಿ ಬೆಳೆದ ಸೋನು, ರಾಜ್ಯದ ಹಿಂಸಾತ್ಮಕ ಆಂದೋಲನಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಈ ಆಂದೋಲನಗಳು ಜನರ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ದುರ್ಬಲಗೊಳಿಸಿದ್ದನ್ನು ಅವರು ಕಂಡಿದ್ದಾರೆ.
ಅಸ್ಸಾಂ ಅತಿ ಹೆಚ್ಚು ಭತ್ತದ ಬಳಕೆಯ ಪ್ರಮಾಣವನ್ನು ಹೊಂದಿದೆ ಮತ್ತು ಇಲ್ಲಿ ಮಳೆ ಚೆನ್ನಾಗಿದ್ದರೂ ಕೂಡ ಪಂಜಾಬ್ ಮತ್ತು ಹರಿಯಾಣದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಂತೆಯೇ, ಶುದ್ಧನೀರನ್ನು ಹೊಂದಿದ್ದರೂ ಕೂಡ ಅಸ್ಸಾಂ ಮೀನುಗಳನ್ನು ಆಮದು ಮಾಡಿಕೊಳ್ಳುತ್ತದೆ. ಚಹಾವನ್ನು ಹೊರತುಪಡಿಸಿ, ನಮಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಕೊರತೆಯಿದೆ, ಅದರಲ್ಲೂ ವಿಶೇಷವಾಗಿ ಶಿಕ್ಷಣ. ಉನ್ನತ ಶಿಕ್ಷಣಕ್ಕಾಗಿ ನಾನು ರಾಜ್ಯದಿಂದ ಹೊರಬಂದಾಗಲೇ ಆಂದೋಲನಗಳ ಪರಿಣಾಮಗಳನ್ನು ಅರಿತುಕೊಂಡಿದ್ದು ಎಂದು ಸೋನು ಹೇಳುತ್ತಾರೆ.
ದೆಹಲಿಯಲ್ಲಿ ಅಧ್ಯಯನ ಮಾಡುವಾಗ, ಸಾಮಾಜಿಕ ಸಂಭಾಷಣೆಯನ್ನು ಉತ್ತೇಜಿಸಲು ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಶಾಂತಿಯುತ ಪ್ರತಿಭಟನೆಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಸೋನು ನೋಡಿದ್ದರು.
ದೆಹಲಿಯಲ್ಲಿ ಒಂದು ಅರ್ಥಪೂರ್ಣವಾದ ಸಾಮಾಜಿಕ ಕ್ರಮವಿತ್ತು, ಅದು ಸಂಭಾಷಣೆ ಮತ್ತು ಚರ್ಚೆಗಳಿಗೆ ಒಂದು ವೇದಿಕೆಯನ್ನು ಸೃಷ್ಟಿಸಿತ್ತು. ಇದು ಅಸ್ಸಾಂನಲ್ಲಿ ಕಾಣೆಯಾಗಿದೆ. TISS ನ ತಜ್ಞರು ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ನನಗೆ ವಿಭಿನ್ನ ದೃಷ್ಟಿಕೋನಗಳನ್ನು ನೀಡಿದರು ಎಂದು ಅವರು ಹೇಳುತ್ತಾರೆ.
ತನ್ನ ಅಧ್ಯಯನದ ಸಮಯದಲ್ಲಿ ಮತ್ತು ನಂತರವೂ ಕೂಡ ಸೋನು ಹಲವು ಆಂದೋಲನಗಳಲ್ಲಿ ತೊಡಗಿಕೊಂಡರು. ಅವರು ಸುಮಾರು 15 ವರ್ಷಗಳ ಕಾಲ ಹಲವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ.
ಹಲವು ವರ್ಷಗಳಿಂದ ಗಳಿಸಿದ ಎಲ್ಲಾ ಕಲಿಕೆ, ಜ್ಞಾನ ಮತ್ತು ಅನುಭವದಿಂದ ಶಸ್ತ್ರಸಜ್ಜಿತರಾದ ಸೋನು ಮತ್ತೆ ಜೋರ್ಹತ್ ಜಿಲ್ಲೆಗೆ ತೆರಳಿ ರೈತರಿಗೆ ತರಬೇತಿ ನೀಡಲು ತನ್ನದೇ ಆದ ಕಂಪನಿಯನ್ನು ಪ್ರಾರಂಭಿಸಿದರು.
ಅಸ್ಸಾಂನ ಎಲ್ಲಾ ಶಾಲೆಗಳಲ್ಲಿ ಸಾವಯವ ಕೃಷಿಯನ್ನು ಪ್ರಾರಂಭಿಸುವ ಗುರಿ ಸೋನುಗೆ ಹೊಳೆದಿತ್ತು, ಆದರೆ ಅವರು ನಿರೀಕ್ಷಿಸಿದ ರೀತಿಯ ಪ್ರತಿಕ್ರಿಯೆ ಅದಕ್ಕೆ ಸಿಗಲಿಲ್ಲ.
ಕೃಷಿಯ ಸಾಂಪ್ರದಾಯಿಕ ವಿಧಾನಗಳನ್ನು ಬದಲಾಯಿಸುವುದು ಕಷ್ಟಕರವಾಗಿತ್ತು. ನಾವು ಸ್ವಲ್ಪ ಯಶಸ್ಸನ್ನು ಗಳಿಸಿದ್ದೇವೆ ಆದರೆ ಕೃಷಿ ಸಮುದಾಯದ ಪ್ರತಿರೋಧವು ಅದನ್ನು ಮರೆಮಾಡಿದೆ. ರಾಜ್ಯವು ಶ್ರೀಮಂತ ಸ್ಥಳೀಯ ಸಂಪನ್ಮೂಲಗಳನ್ನು ಹೊಂದಿರುವ ಮತ್ತು ಯುವ ಸಾಮರ್ಥ್ಯವನ್ನು ಹೊಂದಿರುವ ಪ್ರದೇಶವಾಗಿರುವುದರಿಂದ, ನಾವು ನಮ್ಮ ಗಮನವನ್ನು ವಯಸ್ಕರಿಂದ ಮಕ್ಕಳಿಗೆ ವರ್ಗಾಯಿಸಿದ್ದೇವೆ ಎಂದು ಸೋನು ಹೇಳುತ್ತಾರೆ.
ಸೋನು ಅವರು, ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ಪುಸ್ತಕಗಳಲ್ಲಿ ಅಧ್ಯಯನ ಮಾಡಿದ ಪರಿಕಲ್ಪನೆಗಳೊಂದಿಗೆ ಕೃಷಿ ತಂತ್ರಗಳನ್ನು ಸಂಯೋಜಿಸಿದರು. ಸೋನು ಜೋರ್ಹತ್ ಜಿಲ್ಲೆಯ ಶಾಲೆಗಳನ್ನು ಸಂಪರ್ಕಿಸಿ ಪ್ರಾಯೋಗಿಕ ಆಧಾರದ ಮೇಲೆ ಕೃಷಿ ಮಾದರಿಯನ್ನು ಜಾರಿಗೆ ತಂದರು. ಅವರು ಪ್ರಾರಂಭಿಸಿದಾಗ ಇದು ಬೂಟ್ ಸ್ಟ್ರಾಪ್ಡ್ ಮಾದರಿಯಾಗಿತ್ತು, ಬಳಿಕ, ಸೋನು ಮತ್ತು ಅವರ ತಂಡವು ಈ ಪ್ರದೇಶದಲ್ಲಿ ‘ಬೀಜ್ ದಾನ್’ (ಬೀಜ ದಾನ)ಗೆ ಚಾಲನೆಯನ್ನು ನೀಡಿತು, “ಜಿಲ್ಲೆಯ ಹೆಚ್ಚಿನ ಜನಸಂಖ್ಯೆಯು ಕೃಷಿಯಲ್ಲಿ ನಿರತವಾಗಿದೆ ಮತ್ತು ಬೇಸಿಗೆ ರಜಾದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಪೋಷಕರಿಗೆ ಕೃಷಿ ಕಾರ್ಯಗಳಲ್ಲಿ ಸಹಾಯ ಮಾಡುತ್ತಾರೆ . ಆದ್ದರಿಂದ, ಬೀಜ್ ದಾನ್ ಸರಾಗವಾಗಿ ನಡೆಯಿತು ಎಂದು ಅವರು ಹೇಳುತ್ತಾರೆ.
ಮಕ್ಕಳು ಮನೆ ಮನೆಗೆ ತೆರಳಿ ಬೀಜಗಳನ್ನು ಸಂಗ್ರಹ ಮಾಡಿದರು. ಅಲ್ಲದೇ, ಗ್ರಾಮಸ್ಥರು ಮಕ್ಕಳಿಗೆ ಕೃಷಿಯ ಬಗ್ಗೆ ಜ್ಞಾನವನ್ನೂ ನೀಡಿದರು. ಹೇಗೆ ಬಿತ್ತ ಬೇಕು, ಹೇಗೆ ಬೆಳೆಸಬೇಕು ಎಂಬುದನ್ನು ಕಲಿಸಿಕೊಟ್ಟರು. ಮಾತ್ರವಲ್ಲ ಮಕ್ಕಳು ಶಾಲೆಗಳಲ್ಲಿ ಕೃಷಿ ಮಾಡುವ ಪೋಷಕರೂ ಬಂದು ವೀಕ್ಷಣೆ ಮಾಡಿದರು.
ಬೀಜಗಳನ್ನು ಬಿತ್ತನೆ ಮಾಡುವುದರಿಂದ ಹಿಡಿದು ಕೊಯ್ಲು ಮಾಡುವವರೆಗೆ ಶಾಲಾ ಮಕ್ಕಳು ಕೃಷಿ ವಿಧಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ದಿನ ಕಳೆಯುತ್ತಿದ್ದಂತೆ ಹಲವಾರು ಸರ್ಕಾರಿ ಶಾಲೆಗಳಲ್ಲಿ ಈ ಕೃಷಿ ಮಾದರಿಯನ್ನು ಜಾರಿಗೆ ತರಲಾಯಿತು.
ಒಬ್ಬೊಬ್ಬ ವಿದ್ಯಾರ್ಥಿಯು ತನ್ನದೇ ಆದ ಕೃಷಿಯನ್ನು ಶಾಲಾ ಆವರಣದಲ್ಲಿ ಮಾಡಬಹುದಾಗಿದೆ. ಆ ತರಕಾರಿಯನ್ನು ಮಾರಿ ಬಂದ ಹಣದಲ್ಲಿ ರೂ.5 ಮಕ್ಕಳಿಗೆ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಬ್ಯಾಂಕ್ ಖಾತೆಯನ್ನು ತೆರೆಯಲು ಹೇಳಿ ಹಣವನ್ನು ಅದಕ್ಕೆ ಜಮಾ ಮಾಡಲಾಗುತ್ತಿದೆ.
ಪರಿಸರ ಸ್ನೇಹಿ ಅಭ್ಯಾಸಗಳಿಗೆ ವಿದ್ಯಾರ್ಥಿಗಳನ್ನು ಪರಿಚಯಿಸುವ, ಕೃಷಿಯ ಬಗ್ಗೆ ಇರುವ ಸಾಮಾನ್ಯ ನಕಾರಾತ್ಮಕ ಗ್ರಹಿಕೆ ಬದಲಿಸುವ ಮತ್ತು ಅದೇ ಸಮಯದಲ್ಲಿ, ಅವರಿಗೆ ವ್ಯವಹಾರದ ಬಗ್ಗೆ ಕಲಿಸುವ ಈ ಮಾದರಿಯೂ ನಿಜಕ್ಕೂ ಅರ್ಥಪೂರ್ಣ ಶಿಕ್ಷಣ ಮಕ್ಕಳಿಗೆ ಸಿಗುವಂತೆ ಮಾಡುತ್ತಿದೆ. ಭಾರತದ ಎಲ್ಲಾ ಶಾಲೆಗಳಲ್ಲಿ ಈ ಕಡಿಮೆ-ವೆಚ್ಚದ ಕೃಷಿ ಮಾದರಿ ಅನುಷ್ಠಾನಕ್ಕೆ ಬಂದರೆ ಸರ್ವರಿಗೂ ಉಜ್ವಲ ಮತ್ತು ಆರೋಗ್ಯಕರ ಭವಿಷ್ಯ ಸಿಕ್ಕಂತಾಗುತ್ತದೆ.
ಮೂಲ : ಬೆಟರ್ ಇಂಡಿಯಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.