ಛತ್ತೀಸ್ಗಢ ಬಿಲ್ಸಾಪುರದ ಜಿಲ್ಲಾ ಕಲೆಕ್ಟರ್ ಆಗಿರುವ ಸಂಜಯ್ ಕುಮಾರ್ ಅಲಂಗ್ ಅವರು ಸೆಂಟ್ರಲ್ ಜೈಲಿನಲ್ಲಿ ವಾರ್ಷಿಕ ಪರಿಶೀಲನೆಯಲ್ಲಿ ತೊಡಗಿದ್ದರು. ಜೈಲಿನ ನಿರ್ವಹಣೆಯ ಬಗ್ಗೆ, ಕೈದಿಗಳ ಬಗ್ಗೆ ಪರಿಶೀಲನೆ ಮತ್ತು ಅವರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ ವೇಳೆ ಅವರಿಗೆ ಅಚ್ಚರಿ ಎನಿಸುವಂತಹ ದೃಶ್ಯ ಗೋಚರಿಸಿತು. ಪುಟಾಣಿ ಬಾಲಕಿಯೊಬ್ಬಳು ಮಹಿಳಾ ಕೈದಿಗಳ ನಡುವೆ ಕುಳಿತಿದ್ದಳು. ಆಕೆಯ ಬಗ್ಗೆ ವಿಚಾರಿಸಿದಾಗ ಆಕೆ ಕೈದಿಯೊಬ್ಬನ ಮಗಳು ಎಂದು ತಿಳಿದು ಬಂತು. ತಡ ಮಾಡದೆ ತಕ್ಷಣವೇ ಆಕೆಯನ್ನು ಇಂಟರ್ನ್ಯಾಷನಲ್ ಸ್ಕೂಲ್ಗೆ ಹಾಕಿ ತಮ್ಮ ಸ್ವಂತ ಖರ್ಚಿನಲ್ಲಿ ಓದಿಸುತ್ತಿದ್ದಾರೆ ಈ ಅಧಿಕಾರಿ.
ಕರ್ತವ್ಯಕ್ಕೂ ಮಿಗಿಲಾದ ಕಾರ್ಯವನ್ನು ಮಾಡಿ, ಬಾಲಕಿಯೊಬ್ಬಳ ಜೀವನವನ್ನು ರೂಪಿಸಲು ಮುಂದಾದ ಸಂಜಯ್ ಕುಮಾರ್ ಅವರ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಶ್ಲಾಘನೆಗಳ ಮಹಾಪೂರ ಹರಿದು ಬಂದಿದೆ. ಅವರು ಬಾಲಕಿಯೊಬ್ಬಳಿಗೆ ಗುಣಮಟ್ಟದ ಶಿಕ್ಷಣವನ್ನು ಅವರು ಒದಗಿಸಿದ್ದು ಮಾತ್ರವಲ್ಲ, ಕೈದಿಗಳ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಸಮಾಜಕ್ಕೊಂದು ಉತ್ತಮ ಸಂದೇಶವನ್ನೂ ಅವರು ರವಾನಿಸಿದ್ದಾರೆ.
ಕೆಲವೊಮ್ಮೆ ಜೀವನ ಅದೃಷ್ಟದ ಮೇಲೆ ನಿಂತಿರುತ್ತದೆ. ಖುಷಿ ವಿಷಯದಲ್ಲೂ ಅದೇ ಆಗಿದ್ದು, ಇಲ್ಲಿ ವಿಧಿ ಆಕೆಯನ್ನು ಜೈಲಿನಲ್ಲಿರುವಂತೆ ಮಾಡಿತ್ತು. ಆದರೀಗ ಅದೇ ವಿಧಿ ಆಕೆಗೆ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಓದುವ ಅವಕಾಶ ಮಾಡಿಕೊಟ್ಟಿದೆ. ಸಂಜಯ್ ಕುಮಾರ್ ಅವರು ಜೈಲಿಗೆ ವಾರ್ಷಿಕ ಪರಿಶೀಲನೆಗೆಂದು ನೀಡಿದ ಭೇಟಿ ಈ ಬಾಲಕಿಯ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಟ್ಟಿದೆ.
ಖುಷಿಯ ತಾಯಿ ಆಕೆ 15 ದಿನಗಳ ಮಗು ಇರುವಾಗಲೇ ಜಾಂಡೀಸ್ ರೋಗಕ್ಕೆ ತುತ್ತಾಗಿ ಅಸುನೀಗಿದ್ದಾರೆ. ಬಳಿಕ ಆಕೆಯ ತಂದೆ ಗಂಭೀರವಾದ ಅಪರಾಧ ಎಸಗಿ ಐದು ವರ್ಷಗಳ ಹಿಂದೆ ಜೈಲು ಪಾಲಾಗಿದ್ದಾರೆ. ಹೀಗಾಗಿ ಮನೆಯಿಂದ ಜೈಲಿಗೆ ಅನಿವಾರ್ಯವಾಗಿ ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ಆಕೆಗೆ ಎದುರಾಗಿತ್ತು. ಮನೆಯಲ್ಲಿ ಆಕೆಯನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ.
ನಿಯಮಗಳ ಪ್ರಕಾರ, ಮಹಿಳಾ ಕೈದಿಗಳ ಮಕ್ಕಳು ಮಾತ್ರ ತಾಯಿಯ ಜೊತೆ ಜೈಲಿನಲ್ಲಿ ಇರಬಹುದು. ಆದರೆ ಖುಷಿಯ ಪ್ರಕರಣದಲ್ಲಿ ತಾಯಿ ಇಲ್ಲದ, ಆಕೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವವರು ಯಾರೂ ಇಲ್ಲದ ಕಾರಣ ಆಕೆ ತನಗೆ ಆರು ವರ್ಷ ಪೂರೈಸುವವರೆಗೂ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದೊದಗಿತ್ತು. ಆದರೆ ಐಎಎಸ್ ಅಧಿಕಾರಿ ಸಂಜಯ್ ಕುಮಾರ್ ಕಣ್ಣಿಗೆ ಬಿದ್ದ ಬಾಲಕಿ ಈಗ ಬಿಲ್ಸಾಪುರದ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಓದುತ್ತಿದ್ದಾಳೆ.
ಅಧಿಕಾರಿಗಳ ಪ್ರಕಾರ, ಮಹಿಳಾ ಕೈದಿಗಳ ಮಕ್ಕಳು ಅಥವಾ ಜೈಲಿನಲ್ಲಿ ಹುಟ್ಟಿದ ಮಕ್ಕಳನ್ನು ಆರು ವರ್ಷಗಳವರೆಗೆ ಜೈಲಿನಲ್ಲಿ ಇಟ್ಟುಕೊಳ್ಳಬಹುದು. ಬಳಿಕ ಅವರನ್ನು ಸಂಬಂಧಿಕರಿಗೆ ಅಥವಾ ಸರ್ಕಾರಿ ಆಶ್ರಮಕ್ಕೆ ನೀಡಬೇಕು. ಇಂತಹ ಮಕ್ಕಳು ಶಾಲೆಯಿಂದ ಹೊರಗಿರದಂತೆ ನೋಡಿಕೊಳ್ಳಲು ಇವರನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಖುಷಿಯೂ ಪುರುಷ ಕೈದಿಯ ಮಗಳಾದರೂ ಆಕೆಗೆ ಆರು ವರ್ಷದವರೆಗೆ ಜೈಲಿನಲ್ಲಿ ಇರಬೇಕಾದುದು ದುರಂತ. ಆದರೆ ಇಂದು ಆಕೆಯ ಪರಿಸ್ಥಿತಿ ಬದಲಾಗಿದ ಎಂಬುದು ಸಮಾಜದಲ್ಲಿ ಒಳ್ಳೆಯದು ಇನ್ನೂ ಇದೆ ಎಂಬುದು ದ್ಯೋತಕ.
ಖುಷಿಗೆ ಉತ್ತಮ ಶಿಕ್ಷಣವನ್ನು ಒದಗಿಸಿರುವ ಸಂಜಯ್ ಅವರು, ಆಕೆ ಭವಿಷ್ಯದಲ್ಲಿ ಏನಾಗುತ್ತಾಳೋ ಅದಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನೂ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.