ಶ್ರೀನಗರ: ಪ್ರತ್ಯೇಕತಾವಾದಿ ಚಳುವಳಿಯನ್ನು ಚುರುಕುಗೊಳಿಸಲು 90ರ ದಶಕದಲ್ಲಿ ‘ಆಜಾದಿ’ ಘೋಷಣೆಗಳಿಗೆ ಪ್ರಾರಂಭ ನೀಡುತ್ತಿದ್ದ ಜಮ್ಮು ಕಾಶ್ಮೀರ ರಾಜ್ಯದ ಮಸೀದಿಗಳು, ಇನ್ನು ಮುಂದೆ ತಮ್ಮ ಲೌಡ್ ಸ್ಪೀಕರ್ಗಳನ್ನು ಮಾದಕ ದ್ರವ್ಯದ ವಿರುದ್ಧ ಸಂದೇಶ ಸಾರಲು ಬಳಸಿಕೊಳ್ಳಲಿವೆ. ಕಣಿವೆ ರಾಜ್ಯದಲ್ಲಿ ಡ್ರಗ್ಸ್ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
“ಡ್ರಗ್ಸ್ ಸಮಸ್ಯೆಯು ಅಪಾಯಕಾರಿ ಮಟ್ಟವನ್ನು ತಲುಪಿದೆ ಮತ್ತು ಮಾದಕದ್ರವ್ಯ ಸಾಗಾಣೆದಾರರನ್ನು ಹತ್ತಿಕ್ಕುವ ಕ್ರಮಗಳ ಬಗ್ಗೆ ನಾವು ಚಿಂತನೆ ಆರಂಭಿಸಿದ್ದೇವೆ” ಎಂದು ಧಾರ್ಮಿಕ ಮುಖಂಡ ಹಾಗೂ ಹುರಿಯತ್ ಕಾನ್ಫರೆನ್ಸ್ ಮುಖ್ಯಸ್ಥ ಮಿರ್ವಾಯಿಜ್ ಉಮರ್ ಫಾರೂಕ್ ಹೇಳಿದ್ದಾರೆ.
ಮಾದಕದ್ರವ್ಯ ಸೇವನೆಯು ಚಟವು ಕಣಿವೆ ರಾಜ್ಯದ ಹದಿಹರೆಯದವರಲ್ಲಿ ಮತ್ತು ಯುವಕರಲ್ಲಿ ಹೆಚ್ಚಾಗುತ್ತಿದೆ. ಇಲ್ಲಿನ ಶ್ರೀ ಮಹಾರಾಜ ಹರಿ ಸಿಂಗ್ (ಎಸ್ಎಂಎಚ್ಎಸ್) ಆಸ್ಪತ್ರೆಯ ಡಿ-ಆ್ಯಡಿಕ್ಷನ್ ಕೇಂದ್ರದಲ್ಲಿನ ಅಧಿಕೃತ ದಾಖಲೆಗಳು ಡ್ರಗ್ಸ್ ಆ್ಯಡಿಕ್ಷನ್ ಬಗೆಗಿನ ಅತ್ಯಂತ ಆತಂಕಕಾರಿಯಾದ ಮಾಹಿತಿಯನ್ನು ಬಹಿರಂಗಪಡಿಸಿವೆ. ಜನವರಿ 1 ರಿಂದ ಜನವರಿ 20 ರವರೆಗೆ ಮಾದಕ ದ್ರವ್ಯ ಸೇವನೆ ಚಟ ಬಿಡಿಸಿಕೊಳ್ಳಲು 342 ಮಂದಿ ದಾಖಲಾಗಿದ್ದಾರೆ. ಇವರಲ್ಲಿ 309 ಮಂದಿ ಹೆರಾಯಿನ್ ಬಳಸುತ್ತಿದ್ದವರಾಗಿದ್ದಾರೆ.
2012 ರಿಂದ ಡಿ-ಆ್ಯಡಿಕ್ಷನ್ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿರುವ ಡಾ. ಯಾಸಿರ್ ಎಚ್ ರಾಥರ್ ಅವರು, ಕಾಶ್ಮೀರದ ಯುವಕರು ಕ್ಯಾನಬಿಸ್ನಂತಹ ದ್ರಾವಕಗಳಿಂದ ಹೆರಾಯಿನ್ ಮತ್ತು ಬ್ರೌನ್ ಶುಗರ್ನಂತಹ ಹಾರ್ಡ್ಕೋರ್ ಡ್ರಗ್ಸ್ಗಳಿಗೆ ಬದಲಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 2016 ರಲ್ಲಿ, ಡಿ-ಆ್ಯಡಿಕ್ಷನ್ ಕೇಂದ್ರಕ್ಕೆ ದಾಖಲಾದವರ ಪೈಕಿ ಶೇ.15ರಷ್ಟು ಮಂದಿ ಮಾತ್ರ ಹೆರಾಯಿನ್ ವ್ಯಸನಿಗಳಾಗಿದ್ದರು. ಆದರೆ ಈ ಪ್ರಮಾಣವು 2018 ರಲ್ಲಿ ಶೇ.46ಕ್ಕೆ ಏರಿಕೆಯಾಗಿದೆ.
ನೆರೆಯ ಪಾಕಿಸ್ಥಾನದಿಂದ ಕಾಶ್ಮೀರಕ್ಕೆ ಡ್ರಗ್ಸ್ ಸಾಗಾಣೆಯಾಗುತ್ತಿದೆ. ಪಂಜಾಬಿನಲ್ಲಿ ಡ್ರಗ್ಸ್ ವಿರುದ್ಧದ ಕಾನೂನನ್ನು ಕಠಿಣಗೊಳಿಸಿರುವುದರಿಂದ ಈಗ ಸಾಗಾಣೆದಾರರು ಕಾಶ್ಮೀರದತ್ತ ಬರುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವಜನತೆಯನ್ನು ಮಾದಕವ್ಯಸನದಿಂದ ದೂರವಿಡುವ ಸಲುವಾಗಿ ಇಮಾಮ್ಗಳು ಮಸೀದಿಯ ಲೌಡ್ ಸ್ಪೀಕರ್ ಮೂಲಕ ಸಂದೇಶಗಳನ್ನು ರವಾನಿಸಲು ಮುಂದಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.