ಉತ್ತರಭಾರತದಲ್ಲಿರುವ ಶಿಮ್ಲಾ ಮತ್ತು ಕರ್ನಾಟಕದ ಉಡುಪಿ ಟಯರ್ 2 ನಗರಗಳಾಗುವತ್ತ ದಾಪುಗಾಲಿಡುತ್ತಿದ್ದು, ಶೀಘ್ರವೇ ‘ಡೇ ಝೀರೋ’ ಪರಿಸ್ಥಿತಿಗಳನ್ನು ಎದುರಿಸಲಿವೆ.
ಹಿಮಾಲಯ ತಪ್ಪಲಿನಲ್ಲಿರುವ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಪ್ರವಾಸಿಗಳ ಹಬ್ ಆಗಿರುವುದೇ ಇಂದು ಅದು ನೀರಿನ ಬವಣೆಯನ್ನು ಎದುರಿಸುತ್ತಿರುವುದಕ್ಕೆ ಮುಖ್ಯ ಕಾರಣ.
0.7 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಶಿಮ್ಲಾಕ್ಕೆ ನಿತ್ಯ 10 ಸಾವಿರ ಪ್ರವಾಸಿಗರು ಆಗಮಿಸುತ್ತಾರೆ, ಅದರಲ್ಲೂ ಬೇಸಿಗೆ ಕಾಲದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತದೆ.
ಮಾಧ್ಯಮ ವರದಿಗಳ ಪ್ರಕಾರ, ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಸಮಯದಲ್ಲಿ, ನೀರಿನ ಬೇಡಿಕೆ ದಿನಕ್ಕೆ 45 ಮಿಲಿಯನ್ ಲೀಟರ್ (ಎಂಎಲ್ಡಿ) ಗೆ ಏರುತ್ತದೆ. ಆದರೆ, ಕಡಿಮೆ ಮಳೆಯಿಂದಾಗಿ, ಶಿಮ್ಲಾದಲ್ಲಿ ಕೇವಲ 18 ರಿಂದ 27 ಎಂಎಲ್ಡಿ ಮಾತ್ರ ನೀರಿನ ಸಂಗ್ರಹವಿದೆ.
ಶಿಮ್ಲಾದಲ್ಲಿ ಏಳು ಮೇಲ್ಮೈ ನೀರಿನ ಮೂಲಗಳಿವೆ, ಅವು ಸುಮಾರು 54 ಎಂಎಲ್ಡಿ ನೀರನ್ನು ಪೂರೈಸುತ್ತವೆ. ಆದರೆ ಬೆಟ್ಟದ ಈ ಪಟ್ಟಣವು ನೀರಿನ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರೀ ಅಂತರವನ್ನು ಎದುರಿಸುತ್ತಿದೆ.
2015 ರಲ್ಲಿ ಪ್ರಕಟವಾದ ‘ದಿ ಈಜಿಪ್ಟಿನ ಜರ್ನಲ್ ಆಫ್ ರಿಮೋಟ್ ಸೆನ್ಸಿಂಗ್ ಅಂಡ್ ಸ್ಪೇಸ್ ಸೈನ್ಸಸ್’ ಪ್ರಕಾರ, 2013 ರಲ್ಲಿ 8 ಎಂಎಲ್ಡಿಯಾಗಿದ್ದ ಶಿಮ್ಲಾದಲ್ಲಿನ ನೀರಿನ ಬೇಡಿಕೆ-ಪೂರೈಕೆ ಅಂತರವು 2031ರ ವೇಳೆಗೆ ಐದು ಪಟ್ಟು ಮತ್ತು 2051ರ ವೇಳೆಗೆ 12 ಪಟ್ಟು ಹೆಚ್ಚಾಗಲಿದೆ.
2019 ರ ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್, ಶಿಮ್ಲಾ ಮಹಾನಗರ ಪಾಲಿಕೆಗೆ ವಾಟರ್ ಟ್ಯಾಂಕರ್ಗಳನ್ನು ಸರಬರಾಜು ಮಾಡದಂತೆ ಆದೇಶಿಸಿತ್ತು, ಸಾಮಾನ್ಯ ನಾಗರಿಕರಿಗೆ ಮಾತ್ರವಲ್ಲದೇ, ವಿವಿಐಪಿಗಳಿಗೂ ಕೂಡ ವಾಟರ್ ಟ್ಯಾಂಕರ್ ಪೂರೈಕೆ ಮಾಡಬಾರದು ಎಂದಿತ್ತು.
ನಗರದಲ್ಲಿ ಯಾವುದೇ ನಿರ್ಮಾಣ ಕಾರ್ಯವನ್ನು ಮಾಡಬಾರದು ಎಂದೂ ಹೈಕೋರ್ಟ್ ನಗರಪಾಲಿಕೆಗೆ ನಿರ್ದೇಶನ ನೀಡಿದೆ ಮತ್ತು ಕಾರು ತೊಳೆಯುವುದನ್ನು ನಿಷೇಧಿಸುವಂತೆ ಆದೇಶಿಸಿದೆ. ದೊಡ್ಡ ಜಲಾಶಯ ಸಾಮರ್ಥ್ಯ ಹೊಂದಿರುವ ಸಂಸ್ಥೆಗಳಿಂದ ನೀರನ್ನು ಬೇರೆಡೆಗೆ ತಿರುಗಿಸುವಂತೆ ಸೇನೆಗೆ ಸೂಚಿಸಿದೆ.
ಉಡುಪಿ ಮತ್ತು ಮಂಗಳೂರು
ಕರಾವಳಿ ಕರ್ನಾಟಕದಲ್ಲಿರುವ ಉಡುಪಿ ಈ ವರ್ಷ ತೀವ್ರ ಸ್ವರೂಪದ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ.
ಮೇ ತಿಂಗಳ ಆರಂಭದಲ್ಲಿ, ಕುಡಿಯುವ ನೀರು ಇಲ್ಲದ ಕಾರಣ ಇಲ್ಲಿನ ಶಾಲೆಗಳು ಅರ್ಧ ದಿನ ಮಾತ್ರ ಕಾರ್ಯನಿರ್ವಹಿಸಿವೆ.
ಕೆಲವು ಶಾಲೆಗಳು ಅನಿವಾರ್ಯವಾಗಿ ಶೈಕ್ಷಣಿಕ ಆರಂಭವನ್ನು ಮುಂದೂಡಿವೆ ಮತ್ತು ಬೇಸಿಗೆ ರಜೆಯನ್ನು ಒಂದು ವಾರಗಳ ಕಾಲ ವಿಸ್ತರಿಸಿವೆ. ಎಲ್ಲದಕ್ಕೂ ಮಿಗಿಲಾಗಿ, ಕಾರ್ಕಳ ತಾಲೂಕಿನಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು 100 ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು.
ಸ್ವರ್ಣ ನದಿ ಮತ್ತು ಅದರ ಮೇಲೆ ನಿರ್ಮಾಣವಾಗಿರುವ ಬಜೆ ಅಣೆಕಟ್ಟು ಜಿಲ್ಲೆಯ ನೀರಿನ ಪ್ರಮುಖ ಮೂಲ. ಈ ವರ್ಷ ಈ ಅಣೆಕಟ್ಟಿನ ನೀರಿನ ಸಂಗ್ರಹ ಶೂನ್ಯಕ್ಕೆ (ಡೆಡ್ ಸ್ಟೋರೇಜ್) ಇಳಿದಿತ್ತು.
ಡೆಡ್ ಸ್ಟೋರೇಜ್, ನೀರನ್ನು ಗುರುತ್ವಾಕರ್ಷಣೆಯಿಂದ ಬರಿದು ಮಾಡಲು ಸಾಧ್ಯವಿಲ್ಲ ಮತ್ತು ಅದನ್ನು ಪಂಪ್ ಮಾಡಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಉಡುಪಿಯನ್ನು ಆರು ವಲಯಗಳಾಗಿ ವಿಂಗಡಿಸಲಾಗಿದೆ ಮತ್ತು ಪ್ರಸ್ತುತ ಆರು ದಿನಗಳಿಗೊಮ್ಮೆ ತಲಾ ಒಂದೊಂದು ವಲಯಗಳಿಗೆ ಸ್ವರ್ಣದಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಉಡುಪಿ ಜಿಲ್ಲಾಡಳಿತವು ಎಲ್ಲಾ 35 ಪುರಸಭೆಯ ವಾರ್ಡ್ಗಳಿಗೆ ಟ್ಯಾಂಕರ್ಗಳ ಮೂಲಕ ನೀರನ್ನು ಪೂರೈಸುತ್ತದೆ. ಸುಮಾರು 121 ಗ್ರಾಮಗಳಿಗೆ 141 ಟ್ಯಾಂಕರ್ಗಳ ಸಹಾಯದಿಂದ ನೀರಿನ್ನು ಪೂರೈಕೆ ಮಾಡಲಾಗುತ್ತಿದೆ. ಖಾಸಗಿ ಬೋರ್ವೆಲ್ಗಳ ಮೂಲಕವೂ ನೀರಿನ ಕೊರತೆಯಿರುವ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು.
ನೀರಿನ ಕೊರತೆಯನ್ನು ನೀಗಿಸಲು ಉಡುಪಿ ಸಿಟಿ ಮುನ್ಸಿಪಲ್ ಕೌನ್ಸಿಲ್ 2019 ರ ಮೇ ತಿಂಗಳಲ್ಲಿ ಬಜೆ ಅಣೆಕಟ್ಟಿನ ಹಿಂದಿರುವ ಸ್ವರ್ಣದಿಂದ ಹೂಳು ತೆಗೆಯಲು ಟೆಂಡರ್ ಕರೆದಿತ್ತು. ಎಂಟು ವರ್ಷಗಳ ಹಿಂದೆಯೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿತ್ತು
ಬಜೆ ಅಣೆಕಟ್ಟಿನಿಂದ ಹೂಳು ತೆಗೆಯುವುದು ಅತ್ಯಗತ್ಯ ಕಾರ್ಯವಾಗಿತ್ತು. ಪ್ರಸ್ತುತ, ಉತ್ತಮ ಮಳೆಯಾದ ನಂತರ ಪರಿಸ್ಥಿತಿ ಸುಧಾರಿಸಿದೆ ಮತ್ತು 2019 ರ ಜೂನ್ 17 ರಿಂದ ಅಣೆಕಟ್ಟಿನ ಒಳಹರಿವು ಹೆಚ್ಚಾಗಿದೆ.
ನಗರದ ನೀರಿನ ಬಿಕ್ಕಟ್ಟನ್ನು ಎದುರಿಸಲು ಮಂಗಳೂರು ಮಹಾನಗರ ಪಾಲಿಕೆಯು ಏಪ್ರಿಲ್ನಿಂದ ನೀರು ಪೂರೈಕೆಗೆ ಮಿತಿಯನ್ನು ನಿಗದಿಪಡಿಸಿತ್ತು.
ವರ್ಷ ಪೂರ್ತಿ ಸಮರ್ಪಕವಾಗಿ ಮತ್ತು ನಿರಂತರವಾಗಿ ನೀರನ್ನು ಪೂರೈಕೆ ಮಾಡುವ ಸಲುವಾಗಿ 1993 ರಲ್ಲಿ ತುಂಬೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಯಿತು. ಮಂಗಳೂರಿನ ಭವಿಷ್ಯದ ನೀರು ಸರಬರಾಜು ಅಗತ್ಯಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ 2016 ರಲ್ಲಿ ಕಿಂಡಿ ಅಣೆಕಟ್ಟಿನ 50 ಮೀಟರ್ ಕೆಳಗಿನ ನೀರಿನ ಹರಿವಿನಲ್ಲಿ ಮತ್ತೊಂದು ಅಣೆಕಟ್ಟು ನಿರ್ಮಿಸಿ ಕಾರ್ಯಾರಂಭಿಸಲಾಯಿತು.
ಆದರೆ ಈ ವರ್ಷ ನೇತ್ರಾವತಿಯಲ್ಲಿ ಒಳ ಹರಿವು ಇಲ್ಲದ ಕಾರಣ, ಮಹಾನಗರ ಪಾಲಿಕೆಯು ವಾಟರ್ ರೇಷನಿಂಗ್ (ನೀರಿನ ಪೂರೈಕೆಗೆ ಮಿತಿ ನಿಗದಿಪಡಿಸುವಿಕೆ) ನಿರ್ಧಾರವನ್ನು ತೆಗೆದುಕೊಂಡಿತು.
ನೀರು ಸರಬರಾಜಿನ ಕೊರತೆಯಿಂದಾಗಿ ಮಂಗಳೂರಿನಲ್ಲಿ ವಾಟರ್ ಟ್ಯಾಂಕರ್ಗಳು ಎಗ್ಗಿಲ್ಲದಂತೆ ತಲೆ ಎತ್ತುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಸಣ್ಣ, ಖಾಸಗಿ ನೀರಿನ ಟ್ಯಾಂಕರ್ಗಳು ಮಂಗಳೂರಿನಲ್ಲಿ 1,600 ರೂಗಳಿಗೆ ದಿನಕ್ಕೆ ಎರಡು ಬಾರಿಯಂತೆ ನೀರು ಸರಬರಾಜು ಮಾಡುತ್ತಿವೆ. ಸರಬರಾಜು ಮಾಡಿದ ನೀರು ಕೆಸರುಮಯವಾಗಿದ್ದು ಅದನ್ನು ಶುದ್ಧೀಕರಿಸಿಯೇ ಕುಡಿಯಬೇಕಾಗಿದೆ.
ಈಗಿನಿಂದಲೇ ನೀರು ಸಂಗ್ರಹ ಕಾರ್ಯ, ಮಳೆ ನೀರು ಕೊಯ್ಲು, ಇಂಗು ಗುಂಡಿಗಳು, ನೀರಿನ ಮಿತ ಬಳಕೆಯ ಕುರಿತು ಜಾಗೃತಿ ಮೂಡಿಸದಿದ್ದರೆ, ಮುಂಬರುವ ದಿನಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗುವ ಪರಿಸ್ಥಿತಿ ಬರಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.