ಬಿಜೆಪಿಯನ್ನು ರಾಜಕೀಯ ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿದ್ದ ಚಾಣಾಕ್ಷ ರಾಜಕಾರಣಿ ಅಮಿತ್ ಶಾ ಈಗ ದೇಶದ ಗೃಹಸಚಿವರಾಗಿದ್ದಾರೆ. ಶಾ ಅವರಿಗೆ ಹೆಚ್ಚು ಪ್ರೇರಣೆಯನ್ನು ನೀಡುವ ಇತಿಹಾಸದ ಒಂದು ವ್ಯಕ್ತಿತ್ವವೆಂದರೆ ಅದು ಚಾಣಕ್ಯ. ಚಾಣಕ್ಯ ಓರ್ವ ತತ್ವಜ್ಞಾನಿ, ಮಾರ್ಗದರ್ಶಕ, ಅರ್ಥಶಾಸ್ತ್ರಜ್ಞ, ನ್ಯಾಯಾಧೀಶ ಮತ್ತು ರಾಜ ಸಲಹೆಗಾರ. ಮೌರ್ಯ ಸಾಮ್ರಾಜ್ಯ ಉಗಮಕ್ಕೆ ಸಹಾಯ ಮಾಡಿದ ನಿಪುಣ. ಶಾ ಅವರ ಕಛೇರಿಯಲ್ಲಿ ಬಲ ಬದಿ ಚಾಣಕ್ಯನ ಫೋಟೋವಿದೆ, ಎಡ ಬದಿ ರಾಷ್ಟ್ರವಾದಿ ವಿ.ಡಿ ಸಾವರ್ಕರ್ ಅವರ ಫೋಟೋವಿದೆ.
ಜೂನ್ 8 ರಂದು ಪುಣೆಯಲ್ಲಿ ಮಾತನಾಡಿದ್ದ ಶಾ ಅವರು, ಭಾರತವು ಬಲಿಷ್ಠವಾಗಲು ಎಲ್ಲಾ ಕ್ಷೇತ್ರದಲ್ಲೂ ‘ಚಾಣಕ್ಯ ನೀತಿ’ಯನ್ನು ಅನುಸರಿಸುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದ್ದರು. ಚಾಣಕ್ಯನ ನೀತಿಯ ಅನುಸಾರ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದಿದ್ದರು. “ಚಾಣಕ್ಯ, ರಾಜ ದೇವರು ಎನ್ನುವ ಭಾವನೆಯನ್ನು ತೊಡೆದು ಹಾಕಿದ ಮತ್ತು ರಾಜ ಸಂವಿಧಾನವನ್ನು ಅನುಸರಿಸುವವ ಎಂದು ಪ್ರತಿಪಾದಿಸಿದ. ಮೋದಿಯವರು ಪ್ರಧಾನ ಸೇವಕ್ ಎಂದು ತನ್ನನ್ನು ಹೇಳುವಾಗ ಅದೇ ಪ್ರೇರಣೆಯೊಂದಿಗೆ ಹೇಳುತ್ತಾರೆ” ಎಂದಿದ್ದಾರೆ.
ಜಗತ್ತು ಕಂಡ ಶ್ರೇಷ್ಠ ಸಾಮ್ರಾಜ್ಯಗಳಲ್ಲಿ ಒಂದಾದ ಮೌರ್ಯ ಸಾಮ್ರಾಜ್ಯವನ್ನು ನಿರ್ಮಿಸಲು ಚಾಣಕ್ಯ ಸಹಾಯ ಮಾಡಿದ್ದ. ಆತ ರಾಜಕೀಯ ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಶ್ರೇಷ್ಠ ಚಿಂತಕರಾಗಿದ್ದನು. ದೇಶದ ಗೃಹ ಸಚಿವರಾಗಿ, ಅಮಿತ್ ಶಾ ಅವರು ದೇಶದ ‘ಆಂತರಿಕ ಭದ್ರತೆ’ ಸಮಸ್ಯೆಗಳನ್ನು ಪರಿಹರಿಸಲು ಈ ಮಹಾನ್ ದಾರ್ಶನಿಕನ ಬೋಧನೆಗಳನ್ನು ಅನುಸರಿಸುತ್ತಿದ್ದಾರೆ.
ಒಂದು ರಾಷ್ಟ್ರವು ಚಾಣಕ್ಯನ ಸಿದ್ಧಾಂತಗಳನ್ನು ಅನುಸರಿಸಿದರೆ, ಅದನ್ನು ಚಾಣಕ್ಯನ ರಾಜ್ಯ ಎಂದು ಕರೆಯಬಹುದು. ಚಾಣಕ್ಯನ ರಾಜ್ಯದ ಪರಿಕಲ್ಪನೆಯು ಸಮಾಜದಲ್ಲಿ ಆಡಳಿತದ ಕಡಿಮೆ ಹಸ್ತಕ್ಷೇಪವನ್ನು ವಾದಿಸುತ್ತದೆ, ಆಡಳಿತದ ಪಾತ್ರವು ರಕ್ಷಣೆ, ಆಂತರಿಕ ಭದ್ರತೆ ಮತ್ತು ಕಾನೂನಿನ ನಿಯಮವನ್ನು ಸ್ಥಾಪಿಸುವುದು ಮತ್ತು ಹಿಂಸಾಚಾರದ ಮೇಲೆ ನಿಯಂತ್ರಣವನ್ನು ಹೊಂದಿರುವುದಾಗಿದೆ ಎಂದು ತೋರಿಸುತ್ತದೆ.
ಆಂತರಿಕ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಚಾಣಕ್ಯ ರಾಜಿ ಸಂಧಾನ ಮತ್ತು ಬಲತ್ಕಾರದ ನೀತಿ ಎರಡರ ಸಲಹೆಯನ್ನೂ ನೀಡಿದ್ದಾನೆ. “ಅವನು (ರಾಜ) ಅತೃಪ್ತಿ ಅಥವಾ ಸ್ವಾಭಾವಿಕವಾಗಿ ಅಸಮಾಧಾನ ಹೊಂದಿರುವವರ ಬಗ್ಗೆ ರಾಜಿ ನೀತಿಯನ್ನು ಬಳಸಿಕೊಳ್ಳಬಹುದು. ಉಡುಗೊರೆಯನ್ನು ಮನುಷ್ಯನನ್ನು ತೃಪ್ತಿಪಡಿಸುವ ನೆಪದಲ್ಲಿ ನೀಡಬಹುದು ಅಥವಾ ಅವನ ದುಃಖ ಅಥವಾ ಸಂಕಟದ ಬಗ್ಗೆ ಕಾಳಜಿಯ ದೃಷ್ಟಿಯಿಂದ ಕೊಡುಗೆ ನೀಡಬಹುದು ”ಎಂದು ಮಹಾನ್ ಚಿಂತಕ ಚಾಣಕ್ಯ ಹೇಳಿದ್ದಾನೆ.
ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಇದೇ ರೀತಿಯ ನಿಲುವನ್ನು ಅನುಸರಿಸಿದ್ದಾರೆ. “ಸಾಮಾನ್ಯ ಕಾಶ್ಮೀರಿ ಇದು ತನ್ನ ಸರ್ಕಾರ ಎಂದು ಭಾವಿಸಬೇಕಿದೆ” ಎಂದು ಹೇಳಿದ್ದರು. ಲೋಕಸಭೆಯಲ್ಲಿ ಗೃಹ ಸಚಿವರಾದ ಬಳಿಕ ಅವರು ಮೊದಲು ಪರಿಚಯಿಸಿದ ಶಾಸನವೇ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ. ಈ ಮಸೂದೆಯಲ್ಲಿ ಅಂತರರಾಷ್ಟ್ರೀಯ ಗಡಿಯ 10 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. “ಈ ಮಸೂದೆ ಯಾರನ್ನೂ ಮೆಚ್ಚಿಸುವುದಕ್ಕಾಗಿ ಅಲ್ಲ, ಅಂತರರಾಷ್ಟ್ರೀಯ ಗಡಿಯ ಬಳಿ ವಾಸಿಸುವವರಿಗಾಗಿ” ಎಂದು ಶಾ ಹೇಳಿದರು. ಈ ಮೂಲಕ ಶಾ ಅವರು ಇಲ್ಲಿ ರಾಜಿ ನೀತಿಯನ್ನು ಬಳಸುತ್ತಿದ್ದಾರೆ ಮತ್ತು ರಾಜ್ಯದ ಜನರನ್ನು ತಮ್ಮವರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಅಮಿತ್ ಶಾ ಅವರ ಈ ವಿಧಾನದಲ್ಲಿ ಚಾಣಕ್ಯನ ತಂತ್ರದ ರಾಜಿ ಭಾಗವು ಸ್ಪಷ್ಟವಾಗಿ ಗೋಚರಿಸುತ್ತದೆ.
ಆಂತರಿಕ ಬೆದರಿಕೆಗಳನ್ನು ಎದುರಿಸಲು ಬಲವಂತದ ತಂತ್ರಗಳ ಬಗ್ಗೆಯೂ ಚಾಣಕ್ಯ ನಿರ್ದಯನಾಗಿ ವಿವರಿಸಿದ್ದಾನೆ ಮತ್ತು ‘ಟಾರ್ಗೆಟೆಡ್ ಹತ್ಯೆಗಳನ್ನು’ ಕೂಡ ಬೆಂಬಲಿಸಿದ್ದಾನೆ. ಪಿತೂರಿ ಮಾಡುವ ನಾಯಕರಿಗೆ ಮರಣದಂಡನೆಯೇ ಶಿಕ್ಷೆ ಎಂದು ಸೂಚಿಸಿದ್ದಾನೆ. “ಪಿತೂರಿ ಮಾಡುವ ನಾಯಕರನ್ನು ಮುಗಿಸುವ ಮೂಲಕ ಅಸಮಾಧಾನ ಅಥವಾ ವಿಶ್ವಾಸದ್ರೋಹವನ್ನು ತೊಡೆದುಹಾಕಬಹುದು. ಇಂತಹ ನಾಯಕರ ಅನುಪಸ್ಥಿತಿಯಲ್ಲಿ ಜನರನ್ನು ಸುಲಭವಾಗಿ ಆಡಳಿತ ನಡೆಸಬಹುದು ಮತ್ತು ಈ ರೀತಿ ಮಾಡಿದರೆ ಶತ್ರುಗಳ ಒಳಸಂಚುಗಳಲ್ಲಿ ಜನರು ಭಾಗವಹಿಸುವುದಿಲ್ಲ ”ಎಂದು ಅರ್ಥಶಾಸ್ತ್ರದಲ್ಲಿ ಚಾಣಕ್ಯ ಬರೆದಿದ್ದಾನೆ.
ಶಾ ಆಕ್ರಮಣಕಾರಿಯಾಗಿ ಪ್ರತ್ಯೇಕತಾವಾದಿ ನಾಯಕರೊಂದಿಗೆ ವ್ಯವಹರಿಸುತ್ತಿದ್ದಾರೆ. “ಹೌದು, ಇಂದು ಅವರ ಮನಸ್ಸಿನಲ್ಲಿ ಭಯವಿದೆ. ಅದು ಇರಬೇಕು ಮತ್ತು ಅದು ಮುಂದೆ ಹೆಚ್ಚಾಗಲಿದೆ ”ಎಂದು ಪ್ರತ್ಯೇಕತಾವಾದಿ ನಾಯಕರ ಬಗ್ಗೆ ಸಂಸತ್ತಿನಲ್ಲಿ ಶಾ ಹೇಳಿದ್ದಾರೆ. 370 ನೇ ವಿಧಿ ಸಂವಿಧಾನದಲ್ಲಿ “ತಾತ್ಕಾಲಿಕ” ನಿಬಂಧನೆ ಮಾತ್ರ ಎಂದು ಅವರು ಹೇಳಿದ್ದಾರೆ. ಪ್ರತ್ಯೇಕತಾವಾದಿ ಮುಖಂಡರಿಗೆ ‘ಭದ್ರತೆ’ ಒದಗಿಸುವ ನೀತಿಯನ್ನು ಟೀಕಿಸಿದ ಅವರು, 2 ಸಾವಿರ ವ್ಯಕ್ತಿಗಳ ಸುರಕ್ಷತೆಯನ್ನು ಸರ್ಕಾರ ಪರಿಶೀಲಿಸಿದೆ ಮತ್ತು 919 ವ್ಯಕ್ತಿಗಳಿಂದ ಭದ್ರತೆಯನ್ನು ಹಿಂದೆ ಪಡೆಯಲಾಗಿದೆ ಎಂದು ಸಂಸತ್ತಿಗೆ ತಿಳಿಸಿದರು.
“ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ಅನ್ನು ಇಲ್ಲಿಯವರೆಗೆ ಏಕೆ ನಿಷೇಧಿಸಲಾಗಿಲ್ಲ ಎಂದು ನಾನು ಆಶ್ಚರ್ಯ ಪಡುತ್ತೇನೆ. ಅವರು ಯಾವ ವಿಮೋಚನೆ ಬಯಸುತ್ತಾರೆ ಮತ್ತು ಯಾರಿಂದ? ಬಹಿರಂಗವಾಗಿ ಪ್ರತ್ಯೇಕತಾವಾದಿ ಹೆಸರನ್ನು ಯಾಕೆ ನಿಷೇಧಿಸಲಾಗಿಲ್ಲ? ಹಿಂದಿನ ಸರ್ಕಾರಗಳು ಜಮಾತೆ-ಇ-ಇಸ್ಲಾಮಿಯನ್ನು ಯಾಕೆ ನಿಷೇಧಿಸಲಿಲ್ಲ? ”ಎಂದು ಅಮಿತ್ ಶಾ ಸಂಸತ್ತಿನಲ್ಲಿ ಪ್ರಶ್ನಿಸಿದ್ದಾರೆ. ಚಾಣಕ್ಯನ ಮಾದರಿಯನ್ನು ಅನುಸರಿಸಿ, ಅಮಿತ್ ಶಾ ಭಯೋತ್ಪಾದಕರ ಹಣದ ಮೂಲಗಳನ್ನೇ ಕಿತ್ತು ಬಿಡುವತ್ತ ಗಮನ ಹರಿಸಿದ್ದಾರೆ. ಭಯೋತ್ಪಾದಕರಿಗೆ ಧನಸಹಾಯದ ಮೂಲವಾಗಿರುವ ಪ್ರತ್ಯೇಕತಾವಾದಿ ನಾಯಕರನ್ನು ಸದೆ ಬಡಿಯುವುದರಿಂದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳು ಸುಲಲಿತವಾಗಲಿವೆ. ಕಾಶ್ಮೀರ ಭೇಟಿಯ ವೇಳೆ ಅಮಿತ್ ಶಾ ಈ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವನ್ನು ಎತ್ತಿ ತೋರಿಸಿದ್ದರು.
ಕಣಿವೆಯಲ್ಲಿ ಪಾಕಿಸ್ಥಾನ ಬೆಂಬಲಿತ ಭಯೋತ್ಪಾದನೆಯೊಂದಿಗೆ ವ್ಯವಹರಿಸುವುದರ ಹೊರತಾಗಿಯೂ, ಮಾವೋವಾದಿ ಭಯೋತ್ಪಾದನೆಯನ್ನು ಎದುರಿಸುವ ತಂತ್ರ (ಚಾಣಕ್ಯನ ಪ್ರಕಾರ ಇಂತಹವರು ‘ಆಂತರಿಕ ಅಸ್ಥಿರತೆಯ ಮೂಲ ಮತ್ತು ಆಂತರಿಕ ಆಕ್ರಮಣಕಾರಿ ಬೆದರಿಕೆ ವರ್ಗಕ್ಕೆ ಸೇರುತ್ತಾರೆ ಮತ್ತು ಇವರು ಅತ್ಯಂತ ಅಪಾಯಕಾರಿ. ಇವರನ್ನು ಚಾಣಕ್ಯ ವಿಷಕಕ್ಕುವ ಹಾವಿಗೆ ಹೋಲಿಸುತ್ತಾನೆ). ಅಮಿತ್ ಶಾ ಅವರು ಮಾವೋವಾದಿಗಳ ವಿಷಯದಲ್ಲಿ ಚಾಣಕ್ಯನ ಮಾದರಿಯನ್ನು ಅನುಸರಿಸುತ್ತಿದ್ದಾರೆಂದು ತೋರುತ್ತದೆ. ನಾಯಕರನ್ನು ಗುರಿಯಾಗಿಸುವುದೇ ಮಾವೋವಾದಿ ಅಥವಾ ನಕ್ಸಲ್ ಬೆದರಿಕೆಗಳನ್ನು ಎದುರಿಸುವ ಚಾಣಕ್ಯ ತಂತ್ರ. ಮಾವೋವಾದಿ ಸಮಸ್ಯೆಗೆ ಸಂಬಂಧಿಸಿದಂತೆ ತನ್ನ ಮೊದಲ ಸಭೆಯಲ್ಲಿ, ಅಮಿತ್ ಶಾ ಅವರು ಮಾವೋವಾದಿ ನಾಯಕರು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಯೋಜನೆಗಳನ್ನು ಹಾಕಿದ್ದಾರೆ.
ಕಳೆದ ತಿಂಗಳು, ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಶಾ ಅವರು ಚಾಣಕ್ಯನ ನೀತಿಗಳನ್ನು ಅನುಸರಿಸುತ್ತಾರೆ ಎಂಬುದು ಬಹಳ ಸ್ಪಷ್ಟವಾಗಿದೆ. ಚಾಣಕ್ಯ ಅಧಃಪತನವಾಗುತ್ತಿದ್ದ ಶ್ರೇಷ್ಠ ಸಾಮ್ರಾಜ್ಯಗಳಲ್ಲಿ ಒಂದನ್ನು ನಿರ್ಮಿಸಲು ಸಹಾಯ ಮಾಡಿದರು ಮತ್ತು ಶಾ ಅವರ ತತ್ವಗಳು ಮತ್ತು ಬೋಧನೆಗಳನ್ನು ಬಳಸಿಕೊಂಡು ಭಾರತವನ್ನು ಅದೇ ರೀತಿ ನಿರ್ಮಾಣ ಮಾಡಲು ಯೋಜಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.