ತಮಿಳುನಾಡು ರಾಜಧಾನಿ ಚೆನ್ನೈ ನೀರಿನ ಅಭಾವದಿಂದಾಗಿ ಅಕ್ಷರಶಃ ತತ್ತರಿಸಿ ಹೋಗಿದೆ. ಅಲ್ಲಿನ ಬಡವರು, ಶ್ರೀಮಂತರು, ಮಕ್ಕಳು ಎಲ್ಲರೂ ನೀರು ಯಾವಾಗ ಪೂರೈಕೆ ಆಗುತ್ತದೆ ಎಂದು ಗಂಟೆ ಗಟ್ಟಲೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ನೀರಿನ ಸಮಸ್ಯೆಯಿಂದಾಗಿ ಅಲ್ಲಿನ ಉದ್ಯಮಗಳು ಸ್ಥಗಿತಗೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಹೋಟೆಲ್, ರೆಸ್ಟೋರೆಂಟ್ಗಳು ನೀರಿನ ಅಭಾವದಿಂದ ತಟ್ಟೆ, ಪ್ಲೇಟುಗಳನ್ನು ಬಿಟ್ಟು ಬಾಳೆ ಎಲೆಯಲ್ಲಿ ಆಹಾರ ಬಡಿಸುತ್ತಿವೆ.
ದೇವರೇ ಒಂದು ಬಾರಿ ಮಳೆ ಬರಲಿ ಎಂದು ಚೆನ್ನೈಗರು ಪ್ರಾರ್ಥನೆ ನಡೆಸುತ್ತಿದ್ದಾರೆ. ಟ್ಯಾಂಕ್ ನೀರು ಇನ್ನು ಬಹಳಷ್ಟು ದಿನ ಬಾರದು ಎಂಬುದು ಅವರಿಗೆ ಚೆನ್ನಾಗಿಯೇ ತಿಳಿದಿದೆ. ಒಂದು ಟ್ಯಾಂಕರ್ ನೀರಿಗೆ ರೂ. 4 ಸಾವಿರದಿಂದ 5 ಸಾವಿರದವರೆಗೆ ತಗಲುತ್ತದೆ. ಇದೇ ಪರಿಸ್ಥಿತಿ ಮುಂದುವರೆದರೆ ಸಾವಿರ ಲೀಟರ್ ನೀರಿಗೆ ಎಷ್ಟು ಹಣವನ್ನು ವ್ಯಯ ಮಾಡಬೇಕಾದಿತು. ನೀತಿ ಆಯೋಗವೂ 2020ರ ವೇಳೆಗೆ ದೇಶದ 21 ನಗರಗಳಲ್ಲಿ ನೀರು ಇರುವುದಿಲ್ಲ ಎಂಬ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ.
ನೀರು ಅಪಾಯದಲ್ಲಿರುವ ಈ ಕಾಲದಲ್ಲಿ, ಪ್ರತಿ ಹನಿಯೂ ಲೆಕ್ಕಕ್ಕೆ ಬರುತ್ತದೆ. ಹೀಗಾಗಿ ಪರಿಸರ ಸಂರಕ್ಷಣೆ ಎಂಬುದು ನಮಗೆ ಅನಿವಾರ್ಯವಾಗಿದೆ. ನಾವು ಬಳಸುವ ಶೇಕಡಾ 80ರಷ್ಟು ನೀರನ್ನು ಉಳಿಸಲು ಸಾಧ್ಯವಾಗುವಂತಹ ಅವಕಾಶವಿದ್ದರೆ ಅದನ್ನು ಯಾಕೆ ತಾನೆ ನಾವು ಬಳಸಿಕೊಳ್ಳಬಾರದು? ಈಗಾಗಲೇ ಅನೇಕರು ನೀರಿನ ಸಂರಕ್ಷಣೆಯಲ್ಲಿ ನಮಗೆ ಮಾದರಿಯಾಗುವಂತಹ ಕಾರ್ಯವನ್ನು ಮಾಡಿ ತೋರಿಸಿದ್ದಾರೆ. ಅಂತಹವರಲ್ಲಿ ಡಾ.ಶೇಖರ್ ರಾಘವನ್ ಕೂಡ ಒಬ್ಬರು.
ಡಾ. ರಾಘವನ್ ಅವರು ಚೆನ್ನೈನಲ್ಲಿ ‘ರೈನ್ ಮ್ಯಾನ್’ ಎಂದೇ ಪ್ರಸಿದ್ಧರಾಗಿದ್ದಾರೆ. ಕಳೆದ ಎರಡು ದಶಕಗಳಿಂದ ಅವರು ಮಳೆನೀರು ಕೊಯ್ಲು ಮಾಡುತ್ತಾ, ಇತರರಿಗೆ ಇದನ್ನು ಮಾಡಲು ಉತ್ತೇಜನ ನೀಡುತ್ತಾ ಬಂದಿದ್ದಾರೆ. ಅವರ ಅವಿಶ್ರಾಂತ ಕಾರ್ಯವನ್ನು ಇಂದು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಇಂದು ನೀರಿನ ಅಭಾವದ ಕಾಲದಲ್ಲಿ ನಿತ್ಯ 20ಕ್ಕೂ ಅಧಿಕ ಮಂದಿ ಫೋನ್ ಕಾಲ್ಗಳನ್ನು ಮಾಡಿ ಅವರಿಗೆ ಮನೆಯ ಆವರಣದಲ್ಲಿ ಮಳೆ ನೀರು ಕೊಯ್ಲು ಅಳವಡಿಸುವುದು ಹೇಗೆ ಎಂಬ ಬಗ್ಗೆ ವಿಚಾರಿಸುತ್ತಿದ್ದಾರೆ.
ನಿತ್ಯ ಮನೆಗಳಿಗೆ ಭೇಟಿ ನೀಡುವ ಅವರು, ಅವರಿಗೆ ಮಳೆ ಕೊಯ್ಲು ನಡೆಸಲು ಉತ್ತೇಜಿಸುತ್ತಾರೆ. ಮಳೆ ಕೊಯ್ಲು ಅಳವಡಿಸುವ ಕಾಲ ಈಗ ಕೂಡಿ ಬಂದಿದೆ ಎಂದು 71 ವರ್ಷದ ಡಾ.ರಾಘವನ್ ಹೇಳುತ್ತಾರೆ.
ಚೆನ್ನೈನಲ್ಲೇ ಹುಟ್ಟಿ ಬೆಳೆದಿರುವ ಡಾ.ರಾಘವನ್ ಅವರ ಮನೆ ಬೀಚ್ ಪಕ್ಕದಲ್ಲೇ ಇದೆ. ಅವರ ಮನೆಯಿರುವ ಪ್ರದೇಶವು ಅವರನ್ನು ಮಳೆ ನೀರು ಕೊಯ್ಲು ಮಾಡುವಂತೆ ಪ್ರೇರೇಪಿಸಿತು.
2003ರಲ್ಲಿ ಚೆನ್ನೈನಲ್ಲಿ ಮಳೆ ಕಮ್ಮಿಯಾದಾಗ ಅಲ್ಲಿನ ಸರ್ಕಾರವೇ ಎಲ್ಲಾ ಮನೆಗಳು ಮತ್ತು ಕಟ್ಟಡಗಳು ಮಳೆ ನೀರು ಕೊಯ್ಲು ಅನ್ನು ಅಳಡಿಸುವಂತೆ ಸೂಚನೆ ನೀಡಿತ್ತು. ಆ ವೇಳೆ ಡಾ.ರಾಘವನ್ ಅವರ ಪ್ರಯತ್ನವೂ ಚುರುಕುಗೊಂಡಿತ್ತು.
“ನಾನು ಸುಮಾರು 50 ವರ್ಷಗಳಿಂದ ನನ್ನ ಮನೆಯಲ್ಲಿ ವಾಸಿಸುತ್ತಿದ್ದೇನೆ” ಎಂದು ವಿವರಿಸುವ ಅವರು, “ನನ್ನ ಪ್ರದೇಶವು ಅಭಿವೃದ್ಧಿ ಹೊಂದಿದ ರೀತಿ ಯಾವಾಗಲೂ ನನ್ನನ್ನು ಚಿಂತೆಗೀಡು ಮಾಡುತ್ತದೆ. ಸಿಮೆಂಟ್ ರಸ್ತೆಗಳು ಮತ್ತು ಬೃಹತ್ ಕಟ್ಟಡಗಳು ನೀರನ್ನು ನೆಲಕ್ಕೆ ಹಿಂಗದಂತೆ ನಿರ್ಬಂಧಿಸಿವೆ. ಇದರಿಂದಾಗಿ ಎಲ್ಲಾ ನೀರು ಸಮುದ್ರಕ್ಕೆ ಹೋಗುವ ದಾರಿಯನ್ನು ಕಂಡುಕೊಂಡಿವೆ. ಅದು ಒಂದಾ ಸಮುದ್ರವನ್ನು ಸಂಧಿಸುತ್ತದೆ ಅಥವಾ ನಗರವನ್ನು ಪ್ರವಾಹಕ್ಕೀಡು ಮಾಡುತ್ತದೆ. 1995 ರಲ್ಲಿ, ನಾನು ಮನೆ ಮನೆಗೆ ಹೋಗಿ ಮಳೆನೀರು ಕೊಯ್ಲು ಮಾಡುವಂತೆ ಜನರಿಗೆ ಮನವಿ ಮಾಡಿಕೊಂಡೆ. ಆರಂಭದಲ್ಲಿ, ನನಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು, ಆದರೆ ಮೂರು ವರ್ಷಗಳಲ್ಲಿ ನನ್ನ ಸಂದೇಶಕ್ಕೆ ಮಹತ್ವ ಸಿಗಲು ಪ್ರಾರಂಭವಾಯಿತು. ಅದು ನನ್ನ ಹೋರಾಟ ಪ್ರಾರಂಭದ ಹಂತವಾಗಿತ್ತು” ಎಂದು ಡಾ.ರಾಘವನ್ ಹೇಳುತ್ತಾರೆ.
ತನ್ನ ಸಂದೇಶಗಳಿಗೆ ಮಹತ್ವ ಸಿಗುತ್ತಿದ್ದಂತೆ ಅವರು ‘ರೈನ್ ಸೆಂಟರ್’ ಅನ್ನು ಚೆನ್ನೈನಲ್ಲಿ ರಚನೆ ಮಾಡಿದ್ದಾರೆ. ಮಳೆ ನೀರು ಕೊಯ್ಲು ಪ್ರಯತ್ನವನ್ನು ತಳಮಟ್ಟದಿಂದಲೇ ಸಂಘಟಿಸುವುದು ಈ ರೈನ್ ಸೆಂಟರಿನ ಮುಖ್ಯ ಉದ್ದೇಶ.
ಪ್ಲಂಬರ್ಸ್ ಮತ್ತು ಬಾವಿ ತೋಡುವವರ ತಂಡವನ್ನು ಹೊಂದಿರುವ ಡಾ.ರಾಘವನ್ ಅವರು, ನಗರದಾದ್ಯಂತ ಸಂಚರಿಸಿ ಮಳೆ ನೀರು ಕೊಯ್ಲು ಸಮೀಕ್ಷೆಯನ್ನು ನಡೆಸಿದ್ದಾರೆ. ಮನೆಮನೆಗೆ ತೆರಳಿ ಮಳೆ ನೀರು ಕೊಯ್ಲು ಮಾಡುವ ಮಾದರಿಯನ್ನು ತೋರಿಸಿದ್ದಾರೆ.
ಇದೀಗ ಮತ್ತೆ ಚೆನ್ನೈನಲ್ಲಿ ಮಳೆ ಕಡಿಮೆಯಾಗಿದೆ. ನೀರಿನ ಬವಣೆ ಮುಗಿಲು ಮುಟ್ಟಿದೆ. ಹೀಗಾಗಿ ಡಾ.ರಾಘವನ್ ಅವರ ಪ್ರಯತ್ನಕ್ಕೆ ಮತ್ತಷ್ಟು ಸಫಲತೆ ಸಿಗಲು ಆರಂಭಿಸಿದೆ. ಹೆಚ್ಚು ಹೆಚ್ಚು ಜನರು ಇವರ ಬಳಿ ಬಂದು ಮಳೆ ಕೊಯ್ಲು ಅಳವಡಿಸುವ ವಿಧಾನದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಮಳೆ ನೀರು ಕೊಯ್ಲು ಅಳವಡಿಸುವ ವಿಧಾನವನ್ನು ಅವರು ಹೇಗೆ ಮಾಡುತ್ತಾರೆ ಎಂಬುದರ ವಿವರ ಇಲ್ಲಿದೆ.
⭕ ನೀರು ಸಂಗ್ರಹವಾಗುವ ಪ್ರದೇಶಗಳನ್ನು ಮತ್ತು ನೀರಿನ ಸುಗಮ ಹರಿವಿಗೆ ಅವಕಾಶವಿರುವ ಇಳಿಜಾರನ್ನು ಗುರುತಿಸುವುದು.
⭕ ಸಂಗ್ರಹಿಸಿದ ನೀರನ್ನು ಶೇಖರಿಸಲು ರೀಚಾರ್ಜ್ ಬಾವಿಯನ್ನು ನಿರ್ಮಾಣ ಮಾಡುವುದು ಮತ್ತು ಅದನ್ನು ಮೂಲ ಬಾವಿಗೆ ಹರಿಯುವಂತೆ ಮಾಡುವುದು.
⭕ ರೂಫ್ ಟಾಪ್ ಮತ್ತು ಡ್ರೈವ್ವೇಗಳು ಪೈಪ್ ಲೈನ್ ಮೂಲಕ ರೀಚಾರ್ಜ್ ಬಾವಿಗೆ ಕನೆಕ್ಟ್ ಆಗುತ್ತವೆ. ರೀಚಾರ್ಜ್ ಬಾವಿಗಳಿಗೆ ನೀರು ಹರಿಯುವಿಕೆ ನಿಯಂತ್ರಿಸಲು ಡ್ರೈವ್ವೇಗಳಲ್ಲಿ ಸ್ಪೀಡ್ ಬ್ರೇಕರ್ಗಳನ್ನು ನಿರ್ಮಾಣ ಮಾಡುವುದು.
⭕ ರೀಚಾರ್ಜ್ ಬಾವಿಗಳನ್ನು ವಸತಿ ಸಂಕೀರ್ಣದ ವಿಸ್ತೀರ್ಣ ಮತ್ತು ಪ್ರದೇಶದಲ್ಲಿನ ಮಳೆಯ ಪ್ರಮಾಣವನ್ನು ಅವಲಂಬಿಸಿ ಸುಮಾರು 1 ಅಡಿ ಎತ್ತರ, 15 ಅಡಿ ಆಳ ಮತ್ತು 3-5 ಅಡಿ ಅಗಲವಾಗಿ ನಿರ್ಮಿಸುವುದು. ಅಗಲಕ್ಕೆ ಅನುಗುಣವಾಗಿ ರಿಚಾರ್ಜ್ ಬಾವಿ ನಿರ್ಮಾಣದ ದರ ನಿಗದಿಯಾಗುತ್ತದೆ. ಇದಕ್ಕೆ ಬೇಕಾದ ಸಲಹೆ ಸೂಚನೆಗಳು ಉಚಿತವಾಗಿವೆ.
⭕ ಭೂಮಿಯಲ್ಲಿರುವ ಮರಳು ಪದರವನ್ನು ತಲುಪಿದ ನಂತರ ಕೆಲವು ಅಡಿ ಆಳವನ್ನು ಅಗೆಯುವುದು. ಇದರಿಂದ, ನೀರು ಫಿಲ್ಟರ್ ಆಗುತ್ತದೆ ಮತ್ತು ಅಂತರ್ಜಲವನ್ನು ಇದು ಪುನರ್ಭರ್ತಿ ಮಾಡುತ್ತದೆ.
ಈಗಾಗಲೇ ಡಾ.ರಾಘವನ್ ಅವರು ಅನೇಕ ಮನೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿದ್ದಾರೆ. ಪ್ರಸ್ತುತ ಅವರು 200 ಮನೆಗಳಿರುವ ವಸತಿ ಸಂಕೀರ್ಣಗಳಲ್ಲಿ ಮಳೆನೀರು ಕೊಯ್ಲು ಅಳವಡಿಸುವುದಕ್ಕೆ ಮೊದಲ ಪ್ರಾಶಸ್ತ್ಯವನ್ನು ನೀಡುತ್ತಿದ್ದಾರೆ. ಹೆಚ್ಚು ಹೆಚ್ಚು ಮನೆಗಳನ್ನು ನೀರಿನ ಸಂರಕ್ಷಣೆಗೆ ಒಳಪಡಿಸುವುದು ಅವರ ಉದ್ದೇಶ ಮತ್ತು ಇಂದಿನ ಚೆನ್ನೈನ ಪರಿಸ್ಥಿತಿಗೆ ಅದು ಅತ್ಯಗತ್ಯವೂ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.