ಈ ಶಾಲೆಯಲ್ಲಿ ಮಕ್ಕಳಿಗೆ ಪಾಠವನ್ನು ಅರೆದು ಮಕ್ಕಳ ತಲೆಗೆ ತುಂಬಿಸುವುದಲ್ಲ. ಸರಕಾರಿ ಶಾಲೆಯ ವಿಜ್ಞಾನ ಶಿಕ್ಷಕಿಯೊಬ್ಬರ ಕಾಳಜಿ, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಆಸಕ್ತಿಯಿಂದ ಜಲ ಸಂರಕ್ಷಣೆಯ ಅರಿವಿನ ಪ್ರಾಕ್ಟಿಕಲ್ ಪಾಠ, ಬದುಕಿಗೆ ಬೇಕಾದ ಪಾಠವನ್ನು ಇಲ್ಲಿ ಮಾಡಲಾಗುತ್ತದೆ. ಇಂತಹದ್ದೊಂದು ಕಾರ್ಯ ಕಳೆದ 3 ವರ್ಷಗಳಿಂದ ನಡೆಯುತ್ತಿದೆ. ಎಲ್ಲಾ ಶಾಲೆಗಳಲ್ಲೂ ಮಾಡಬಹುದಾದ ಈ ಸಣ್ಣ ಕಾರ್ಯದ ಪರಿಣಾಮ ಮಾತ್ರ ಅಪಾರ.
ಈ ಬಾರಿಯ ಬೇಸಗೆ ಎಲ್ಲರಿಗೂ ಬೆವರು ಮಾತ್ರವಲ್ಲ ಕಣ್ಣೀರು ತರಿಸಿದ್ದು ಸತ್ಯ. ದಕ್ಷಿಣ ಕನ್ನಡದಂತಹ ಜಿಲ್ಲೆಯಲ್ಲೂ ವಿಪರೀತ ಸಂಕಷ್ಟ ಬಂದಿದೆ. ನೀರಿಗಾಗಿ ಹಾಹಾಕಾರ ಕಂಡುಬಂದಿತ್ತು. ಮಳೆಗಾಗಿ ಪ್ರಾರ್ಥನೆ ನಡೆದಿತ್ತು. ಹೀಗಾಗಿ ಈ ಬಾರಿ ನೀರಿನ ಮಹತ್ವ ತಿಳಿದಿದೆ. ಈ ಬರ ಬಾರದಂತೆ ಏನು ಮಾಡಬಹುದು ಎಂಬ ಯೋಚನೆ ಹಲವರಲ್ಲಿ ಕಾಡಿದೆ. ಇಂತಹ ಯೋಚನೆ ಬಂದಾಗ ಕೆಲವೊಂದು ಮಾದರಿ ಕಾರ್ಯಗಳನ್ನು ಜನರ ಮುಂದೆ, ಆಸಕ್ತರ ಮುಂದೆ ತೆರೆದಿಡಬೇಕಾಗುತ್ತದೆ. ಕನಿಷ್ಟ ಒಬ್ಬರಾದರೂ ಈ ಪ್ರಯೋಗ ಮಾಡಿದರೆ ಭವಿಷ್ಯದಲ್ಲಿ ಅಷ್ಟು ಸಮಸ್ಯೆ ಕಡಿಮೆಯಾದೀತು. ಪ್ರತೀ ತಾಲೂಕಿನಲ್ಲಿ ಇಂತಹ ಶಿಕ್ಷಕರು ಇದ್ದರೆ ಬರವ ಮೆಟ್ಟಿ ನಿಲ್ಲಲು ಹೆಚ್ಚು ದಿನ ಬೇಕಾಗಿಲ್ಲ.
ಎಲ್ಲೆಡೆ ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದೊಂದು ಶಾಲೆಯಲ್ಲಿ ಮಕ್ಕಳಿಗೆ ಕಲಿಸುವ ಪ್ರಾಕ್ಟಿಕಲ್ ಪಾಠ ರಾಜ್ಯಕ್ಕೆ ಮಾದರಿಯಾಗಿದೆ. ಅದು ಮಂಗಳೂರು ತಾಲೂಕಿನ ಬಡಗುಲಿಪಾಡಿ ಗ್ರಾಮದ ಮಳಲಿಯಲ್ಲಿರುವ ಸರಕಾರಿ ಪ್ರೌಢಶಾಲೆ. ಇಲ್ಲಿನ ಮಕ್ಕಳು ಒಬ್ಬೊಬ್ಬರು ಕನಿಷ್ಟ ಒಂದೊಂದು ಇಂಗುಗುಂಡಿ ಮಾಡುತ್ತಾರೆ. ಶಾಲೆಯಲ್ಲಿ 250 ಮಕ್ಕಳು ಇದ್ದಾರೆ. ಕಳೆದ 3 ವರ್ಷಗಳಿಂದ ಈ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಆದರೆ ಒಬ್ಬ ವಿದ್ಯಾರ್ಥಿ ಒಂದು ಗುಂಡಿಯಲ್ಲ, ಕನಿಷ್ಟ 10 ಗುಂಡಿಯಾದರೂ ಮಾಡುತ್ತಾರೆ. ಇಲ್ಲಿನ ಶಿಕ್ಷಕಿ ಪದ್ಮಶ್ರೀ ಮಳಲಿ ಆಸಕ್ತಿಯಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರತೀ ಬಾರಿ ಶಾಲೆ ಆರಂಭವಾದ ಕೂಡಲೇ ಈ ಕೆಲಸಕ್ಕೆ ಚಾಲನೆ ದೊರೆಯುತ್ತದೆ. ಜಲಜಾಗೃತಿ ಬಗ್ಗೆ ಅರಿವು ನೀಡಿ ತಂಡಗಳ ರಚನೆಯಾಗುತ್ತದೆ. ಶಾಲೆಯಲ್ಲಿ ಜಾಗ ಇಲ್ಲ. ಅದಕ್ಕಾಗಿ ಮನೆಯಲ್ಲಿ ಅಥವಾ ಆಸುಪಾಸಿನ ಪ್ರದೇಶದಲ್ಲಿ ಇಂಗುಗುಂಡಿ ಮಾಡಲು ಹೇಳುತ್ತಾರೆ. ಇದಕ್ಕಾಗಿ ಮನೆಯವರ ಸಹಕಾರ ಕೇಳಲು ಸೂಚನೆ ಕೊಡಲಾಗುತ್ತದೆ. ತಂಡ ರಚನೆ ಮಾಡುವಾಗ ಆಯಾ ಪ್ರದೇಶದ ಮಕ್ಕಳನ್ನು ಸೇರಿಸಿ ತಂಡ ರಚನೆ ಮಾಡಲಾಗುತ್ತದೆ. ಹೀಗಾಗಿ ಕೆಲವು ತಂಡದಲ್ಲಿ 5-6 ಮಕ್ಕಳು ಇದ್ದರೆ ಕೆಲವು ತಂಡದಲ್ಲಿ 3-4 ಮಕ್ಕಳು ಇರುತ್ತಾರೆ. ಎಲ್ಲಾ ಮಕ್ಕಳು ಕನಿಷ್ಟ ಒಂದು ಗುಂಡಿ ರಚನೆ ಮಾಡಲೇಬೇಕು. ಅದು ಅವರೇ ಮಾಡಬಹುದು ಅಥವಾ ಅವರ ಹೆತ್ತವರ ಸಹಾಯವನ್ನೂ ಪಡೆಯಬಹುದು. ಒಟ್ಟಿನಲ್ಲಿ ನೀರು ಉಳಿಸುವ ಹಾಗೂ ಜಲ ಸಂರಕ್ಷಣೆಯ ಅರಿವು ಮನಸ್ಸಿನಲ್ಲಿ ಮೂಡಿಸುವುದು ಇದರ ಉದ್ದೇಶ ಎಂದು ಹೇಳುತ್ತಾರೆ ಶಿಕ್ಷಕಿ ಪದ್ಮಶ್ರೀ. ಕಳೆದ ವರ್ಷ 250 ಇಂಗು ಗುಂಡಿ ರಚನೆ ಆಗಿದೆ ಸತತ 3 ವರ್ಷಗಳಿಂದ ಈ ಪ್ರಯತ್ನ ಆಗಿದೆ.
ವಿದ್ಯಾರ್ಥಿಗಳು ಎಷ್ಟು ಆಸಕ್ತರಾಗಿದ್ದಾರೆ ಎಂದರೆ, ಈ ತಂಡ ರಚನೆಯಾದ ತಕ್ಷಣವೇ ಈ ಶಾಲೆಯ ವಿದ್ಯಾರ್ಥಿನಿ ಸುಪ್ರಿಯಾ ಒಬ್ಬಳೇ 16 ಇಂಗುಗುಂಡಿ ಮಾಡಿದ್ದಾಳೆ, ಲಿಖಿತ್ ಎಂಬ ವಿದ್ಯಾರ್ಥಿ 20 ಇಂಗುಗುಂಡಿ ರಚನೆ ಮಾಡಿದ್ದಾರೆ. ಇದರ ಜೊತೆಗೆ ವಿಷ್ಣುಪ್ರಸಾದ್, ಅಕ್ಷಯ್, ಧನುಷ್ ಬಂಗೇರ, ಧನುಷ್, ಫಹಿಲ್, ಹರ್ಷಿತ್, ಜಿತೇಶ್, ಧನರಾಜ್ ಇವರ ತಂಡ ಒಂದು ದೊಡ್ಡ ಗುಂಡಿ ಹಾಗೂ 2 ಸಣ್ಣ ಇಂಗು ಗುಂಡಿಯಲ್ಲಿ ನಿರತವಾಗಿದೆ. ವಿಖಿತಾ ಎಂಬ ವಿದ್ಯಾರ್ಥಿನಿ 3 ಇಂಗು ಗುಂಡಿ ಮಾಡಿದ್ದಾಳೆ. ಅಚ್ಚರಿ ಎಂದರೆ ಮಕ್ಕಳ ಈ ಕಾರ್ಯದಲ್ಲಿ ಹೆತ್ತವರೂ ಸಹಾಯ ಮಾಡುತ್ತಾರೆ. ಹೆತ್ತವರೂ ಭಾಗಿಯಾದರೆ ದಿನದಲ್ಲಿ ಅರ್ಧ ಗಂಟೆ ಕೆಲಸ..!. ಈಗ ಶಾಲೆಯ ಆರಂಭವಾದ್ದರಿಂದ ಮಕ್ಕಳಿಗೆ ಓದಿನ ಕೆಲಸವೂ ಹೆಚ್ಚಿರುವುದಿಲ್ಲ. ಇಂಗು ಗುಂಡಿಯೂ ಅಷ್ಟೇ ಮಳೆಗಾಲದ ಮುಂದೆ ಮಾಡುವ ಕಾರ್ಯ.
ಈ ಶಾಲೆಯ ಜಲ ಜಾಗೃತಿ ಇಲ್ಲಿಗೇ ಮುಗಿಯುವುದಿಲ್ಲ, ಮಳೆಗಾಲದ ನಂತರ ಮತ್ತೆ ಆರಂಭವಾಗುತ್ತದೆ. ಮಳೆಗಾಲದ ನಂತರ ಮಕ್ಕಳಿಂದಲೇ ಸಣ್ಣ ಸಣ್ಣ ಕಟ್ಟಗಳು ನಿರ್ಮಾಣವೂ ನಡೆಯುತ್ತದೆ, ಮಳಲಿ ಪ್ರದೇಶದಲ್ಲಿ ಅಷ್ಟೊಂದು ನೀರಿನ ಸಮಸ್ಯೆ ಇಲ್ಲ. ಹಾಗಿದ್ದರೂ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಶಿಕ್ಷಕಿ ಪದ್ಮಶ್ರೀ ಹೇಳುತ್ತಾರೆ. ವರ್ಷದ ಕೊನೆಗೆ ಜಲದರಿವಿನ ಯಶೋಗಾಥೆ ಎಂಬ ಪುಸ್ತಕವನ್ನೂ ಮಾಡುತ್ತೇವೆ ಇದು ಹಸ್ತಪತ್ರಿಕೆ, ಇದರಲ್ಲಿ ಮಕ್ಕಳೇ ನೀರಿನ ಬಗ್ಗೆ ಬರೆಯುತ್ತಾರೆ, ಚಿತ್ರ ಮಾಡುತ್ತಾರೆ. ಇದು ಸಂಚಿಕೆಯ ರೂಪದಲ್ಲಿರುತ್ತದೆ ಎಂದು ಪದ್ಮಶ್ರೀ ಅವರು ಹೇಳುವಾಗ ಒಂದು ಸರಕಾರಿ ಶಾಲೆಯ ಶಿಕ್ಷಕಿಗೆ ಇರುವ ನೀರಿನ ಕಾಳಜಿ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು. ಏಕೆಂದರೆ ಜಲಜಾಗೃತಿ ಮಕ್ಕಳಿಂದಲೇ ಆರಂಭವಾದರೆ ಭವಿಷ್ಯದಲ್ಲಿ ಬರದ ಮಾತು ಬಾರದಾದೀತು.
ಜಾಗೃತಿ ಆಗಬೇಕಿರುವುದು ಮಕ್ಕಳಲ್ಲಿ. ಸ್ವಚ್ಛ ಭಾರತ ಪರಿಕಲ್ಪನೆ ಈಗ ಫೋಕಸ್ ಮಾಡುತ್ತಿರುವುದು ಮಕ್ಕಳಲ್ಲಿ. ಜಲದ ಅರಿವೂ ಹಾಗೆಯೇ, ಮಕ್ಕಳಲ್ಲಿ ಈಗಲೇ ಜಾಗೃತಿ ಮೂಡಿದರೆ ಮಾತ್ರವೇ ಭವಿಷ್ಯದಲ್ಲಿ ಜಲದ ಅರಿವು ಹಾಗೂ ಉಳಿವು ಸಾಧ್ಯವಿದೆ. ಮಕ್ಕಳಲ್ಲಿ ಜಲಜಾಗೃತಿ ಉಂಟಾದರೆ ಭವಿಷ್ಯದಲ್ಲಿ ಬರದ ಮಾತಿರದು. ಅದೂ ಶಾಲೆಯಲ್ಲಿ ಆರಂಭವಾದರೆ, ಶಿಕ್ಷಕರು ಈ ಮಾತು ಹೇಳಿದರೆ ಮಕ್ಕಳು ತಕ್ಷಣವೇ ಜಾರಿಗೆ ತರುತ್ತಾರೆ. ಹೀಗಾಗಿ ಶಾಲೆಗಳಲ್ಲಿ ಈ ಬಗ್ಗೆ ಸಣ್ಣ ಪ್ರಯತ್ನ ಮಾಡಿದರೆ ಬರದ ಮಾತಿಗೆ ವಿದಾಯ ಹೇಳುವ ಪ್ರಯತ್ನಕ್ಕೆ ಮುನ್ನುಡಿ ಬರೆಯಬಹುದು.
✍ ಸುಳ್ಯನ್ಯೂಸ್.ಕಾಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.