ಪುರಾತನ ಕಾಲದಿಂದ ಭಾರತ ಜೀವನದ ಕುರಿತು ಒಂದು ಅನನ್ಯ ಕಲ್ಪನೆಯನ್ನು ಮುಂದಿರಿಸಿದೆ. ಇದಕ್ಕೆ ಕಾರಣ ಜೀವನದ ಕುರಿತ ಭಾರತೀಯ ಚಿಂತನೆ ಅಧ್ಯಾತ್ಮದ ಮೇಲೆ ಆಧಾರಿತವಾದುದೇ ಆಗಿದೆ. ಸತ್ಯಕ್ಕೆ ಅನೇಕ ಮುಖಗಳು ಇವೆ ಮತ್ತು ಅನೇಕ ಮಾರ್ಗಗಳಿಂದ ಅದನ್ನು ತಲುಪಬಹುದು ಎನ್ನುವುದು ಭಾರತದ ನಂಬಿಕೆಯಾಗಿದೆ. ವಿಧವಿಧವಾದರೂ ಈ ಮಾರ್ಗಗಳು ಸಮಾನವಾಗಿವೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ವಿಕಾಸಶೀಲವಾದ ವೈವಿಧ್ಯತೆಗಳ ನಡುವೆ ಏಕತೆಯನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ವಿವಿಧತೆಯನ್ನು ವ್ಯತ್ಯಾಸ ಎಂದು ಭಾರತ ಕಾಣುವುದಿಲ್ಲ. ಪ್ರತಿಯೊಂದು ಆತ್ಮವೂ ದೈವಿಕವಾದುದು ಮತ್ತು ಅದೇ ದೈವಿಕತೆ ಸಜೀವ ಹಾಗೂ ನಿರ್ಜೀವ ಎಲ್ಲದರಲ್ಲೂ ವ್ಯಾಪಿಸಿದೆ ಎಂದು ನಮ್ಮ ಅಧ್ಯಾತ್ಮವು ತಿಳಿಸುತ್ತದೆ. ಹಾಗಾಗಿ ನಾವು ಪರಸ್ಪರ ಸೇರಿಕೊಂಡಿದ್ದೇವೆ. ಈ ಸೇರುವಿಕೆಯನ್ನು ತಿಳಿಯುವುದು, ಅದರ ವ್ಯಾಪ್ತಿಯನ್ನು ಹಿಗ್ಗಿಸುವುದು ಮತ್ತು ಅದರ ಏಳಿಗೆಗಾಗಿ ಶ್ರಮಿಸುವುದು ಧರ್ಮದ ಮೂಲವಾಗಿದೆ. ರಿಲಿಜನ್ಗಿಂತ ಭಿನ್ನವಾಗಿರುವ ಧರ್ಮದ ಕಲ್ಪನೆ ಪ್ರತ್ಯೇಕತೆಯಲ್ಲ, ಇದು ಎಲ್ಲರನ್ನೂ ಒಳಗೊಂಡು ಎಲ್ಲರ ಒಳಿತಿಗಾಗಿ ಇರುವುದು.
ಇದು ಹಿಂದುವಿನ ಜೀವನದ ಕಲ್ಪನೆ; ಯಾವುದೇ ಜಾತಿ, ಮತ, ಪ್ರದೇಶ ಅಥವಾ ಭಾಷೆಗೆ ಸೇರಿದ್ದರೂ ಭಾರತರದಲ್ಲಿ ಬದುಕುವವರು ಈ ಬದುಕಿನ ಕಲ್ಪನೆಯನ್ನು ಒಪ್ಪುತ್ತಾರೆ. ಆದ್ದರಿಂದ ಹಿಂದುವಾಗಿರುವುದು ಅಥವಾ ಹಿಂದುತ್ವ ಎಲ್ಲ ಭಾರತೀಯರ ಗುರುತಾಗಿದೆ. ಆರೆಸ್ಸೆಸ್ ಸಂಸ್ಥಾಪಕ ಡಾ. ಕೆ. ಬಿ. ಹೆಡಗೇವಾರ್ ಬೇರೆ ಬೇರೆ ಜಾತಿ, ಮತ, ಪ್ರದೇಶ ಅಥವಾ ಭಾಷೆಗೆ ಸೇರಿದ ಭಾರತೀಯರಲ್ಲಿ ಏಕತೆಯ ಭಾವವನ್ನು ಜಾಗೃತಗೊಳಿಸುವ ಉಪಕರಣವನ್ನಾಗಿ ಹಿಂದುತ್ವವನ್ನು ಬಳಸಿದರು. ಇಡೀ ಸಮಾಜವನ್ನು ಸಂಘಟಿಸಿ ಹಿಂದುತ್ವದ ಸೂತ್ರದಲ್ಲಿ ಬಂಧಿಸಲು ಅವರು ಆರಂಭಿಸಿದರು.
ಆದರೆ ತಮ್ಮ ವೈಯಕ್ತಿಕ ಮತ್ತು ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆದಿಡಲು ಬಯಸುವವರು ಹಿಂದುತ್ವ ಮತ್ತು ಸಂಘವನ್ನು ವಿರೋಧಿಸತೊಡಗಿದರು. ಸಂಘವನ್ನು ಕೋಮುವಾದಿ, ಪ್ರತಿಗಾಮಿ, ವಿಭಜನಕಾರಿ, ಅಲ್ಪಸಂಖ್ಯಾತ ವಿರೋಧಿ ಇತ್ಯಾದಿಯಾಗಿ ದೂರತೊಡಗಿದರು. ಇಂತಹ ಆರೋಪಗಳ ಮೂಲಕ ಮಹಾತ್ಮರು ಮತ್ತು ಹಿಂದುತ್ವದ ಪ್ರತಿಪಾದಕರಾಗಿದ್ದ ಸ್ವಾಮಿ ವಿವೇಕಾನಂದ ಮತ್ತು ದಯಾನಂದ ಸರಸ್ವತಿಯಂತವರು ಮಾಡಿದ ಮಹೋನ್ನತ ಕಾರ್ಯಗಳನ್ನು ತಿರಸ್ಕರಿಸಿ ವಿರೋಧಿಸಿದರು.
ಹೀಗಿದ್ದ ವಿರೋಧಗಳ ಹೊರತಾಗಿಯೂ ಹಿಂದುತ್ವದ ನೆಲೆಗಟ್ಟಿನ ಆಧಾರದ ಮೇಲೆ ನಿರ್ಮಿತವಾದ ಸಂಘದ ಕಾರ್ಯ ವಿಸ್ತರಣೆಯಾಗುತ್ತ ಹೋಯಿತು. ನಂತರ ಅದೇ ದುರುದ್ದೇಶಪೂರಿತ ವಿಮರ್ಶಕರು ಹಿಂದುತ್ವ ಸರಿ, ಆದರೆ ಮೃದು ಹಿಂದುತ್ವ ಮತ್ತು ಕಟ್ಟರ್-ಹಿಂದುತ್ವದ ನಡುವೆ ಅಂತರವಿದೆ ಎನ್ನತೊಡಗಿದರು. ಸ್ವಾಮಿ ವಿವೇಕಾನಂದರಂತವರ ಹಿಂದುತ್ವ ಮೃದು, ಆದರೆ ಆರೆಸ್ಸೆಸ್ನ ಹಿಂದುತ್ವ ಕಟ್ಟರ್ ಆದ್ದರಿಂದ ಖಂಡಿಸಲು ಯೋಗ್ಯವಾದುದು ಎಂದು ವಾದಿಸತೊಡಗಿದರು. ಅಂತಹ ನಿರಾಕರಣವಾದಿಗಳಿಂದ ನಾನೇಕೆ ಹಿಂದುವಲ್ಲ ಮತ್ತು ನಂತರ ನಾನೇಕೆ ಹಿಂದು ಮುಂತಾದ ಶೀರ್ಷಿಕೆಯ ಪುಸ್ತಕಗಳು ರಚಿತವಾದವು. ಆದರೂ ಇಂತಹ ಪ್ರಯತ್ನಗಳ ಹೊರತಾಗಿಯೂ ಹಿಂದುತ್ವದ ಮಾನ್ಯತೆ ಹೆಚ್ಚಾಗುತ್ತ ಸಾಗಿತು. ಇದಕ್ಕೆ ಕಾರಣ ಭಾರತದ ಆತ್ಮ ಮತ್ತು ಅದರ ಪ್ರಜ್ಞೆಯ ಅಭಿವ್ಯಕ್ತಿಯೇ ಆಗಿದೆ. ಅದನ್ನು ಯಾವುದೇ ಮಹಾಕಾವ್ಯದೊಂದಿಗೆ ಸ್ಫರ್ಧೆಗಿಳಿಯುವ ಪುಸ್ತಕದಿಂದಲೂ ಎದುರಿಸಲು ಸಾಧ್ಯವಿಲ್ಲ.
ಸ್ವಾರ್ಥ ಹಿತಾಸಕ್ತಿಯುಳ್ಳ ದುರುಳ ಶಕ್ತಿಗಳು ಹಿಂದೂಯಿಸಂ ಒಳ್ಳೆಯದು ಆದರೆ ಹಿಂದುತ್ವ ಕೆಟ್ಟದ್ದು ಎನ್ನುವ ಗೊಂದಲ ಸೃಷ್ಟಿಸಲು ಆರಂಭಿಸಿದರು. ಹಿಂದೂಯಿಸಂ ಮತ್ತು ಹಿಂದುತ್ವ ಇವುಗಳ ನಡುವೆ ಏನು ವ್ಯತ್ಯಾಸವೇನು ಎಂದು ಮಾಧ್ಯಮಗಳು ಕೇಳುತ್ತವೆ. ಇವೆರಡೂ ಒಂದೇ ಎನ್ನುವುದು ಇದಕ್ಕೆ ಉತ್ತರ. ಒಂದು ಇಂಗ್ಲೀಷನಲ್ಲಿದೆ ಇನ್ನೊಂದು ಕನ್ನಡದಲ್ಲಿದೆ ಅಥವಾ ಹಿಂದಿ, ಮರಾಠಿ ಇತ್ಯಾದಿ ಭಾರತೀಯ ಭಾಷೆಯಲ್ಲಿದೆ. ಡಾ. ಎಸ್. ರಾಧಾಕೃಷ್ಣನ್ ‘ದ ಹಿಂದೂ ವ್ಯೂ ಆಫ್ ಲೈಫ್’ ಎನ್ನುವ ಪುಸ್ತಕವನ್ನು ಇಂಗ್ಲೀಷ್ ಭಾಷೆಯಲ್ಲಿ ಬರೆದರು. ಹಾಗಾಗಿ ಅದರಲ್ಲಿ ಹಿಂದೂಯಿಸಂ ಎನ್ನುವ ಶಬ್ದವನ್ನು ಬಳಸಿದರು. ಅವರು ಕನ್ನಡದಲ್ಲಿ ಪುಸ್ತಕವನ್ನು ಬರೆದಿದ್ದರೆ ಹಿಂದುತ್ವ ಎಂದೇ ಬಳಸುತ್ತಿದ್ದರೇನೋ. ಸ್ವಾತಂತ್ರ್ಯವೀರ ಸಾವರ್ಕರರು ಇಂಗ್ಲೀಷ್ನಲ್ಲಿ ಹಿಂದುತ್ವ ಪುಸ್ತಕವನ್ನು ಬರೆದಿದ್ದರೆ ಅವರು ಬಹುಶಃ ಹಿಂದೂಯಿಸಂ ಎನ್ನುವ ಶಬ್ದವನ್ನೇ ಬಳಸುತ್ತಿದ್ದರು. ಆದರೂ, ಹಿಂದುತ್ವ ಎನ್ನುವುದು ಹಿಂದೂಯಿಸಂ ಎನ್ನುವ ಬದಲು ಹಿಂದೂನೆಸ್ ಎಂದು ಭಾಷಾಂತರವಾಗುವುದು ಸೂಕ್ತ.
ಕಳೆದ ವರ್ಷ ದೆಹಲಿಯ ವಿಗ್ಯಾನ್ ಭವನದಲ್ಲಿ ಮೂರು ದಿವಸ ನಡೆದ ಉಪನ್ಯಾಸದಲ್ಲಿ ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಹಿಂದು ಮತ್ತು ಹಿಂದುತ್ವಗಳ ಅರ್ಥವನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಆದರೆ ತಮ್ಮ ದುರುದ್ದೇಶಗಳಿಗೆ ಈ ಅರ್ಥ ಹೊಂದಿಕೆಯಾಗದ ಕಾರಣ ವಿರೋಧಿಸುವವರು ಇದನ್ನು ಉಲ್ಲೇಖಿಸುವುದೇ ಇಲ್ಲ. ನಿಜವಾದ ವೈಚಾರಿಕ ಸಂಘರ್ಷ ಇರುವುದು ಭಾರತದ ಕುರಿತು ಇರುವ ಎರಡು ಭಿನ್ನ ವಿಚಾರಧಾರೆಗಳ ನಡುವೆ. ಒಂದು ದೇಶದ ಸನಾತನ ಆಧ್ಯಾತ್ಮಿಕ ಸಂಪ್ರದಾಯಗಳ ಆಳವಾದ ಬೇರುಗಳುಳ್ಳ ಭಾರತೀಯ ಕಲ್ಪನೆ, ಇನ್ನೊಂದು ಪರಕೀಯ ಅಥವಾ ವಿದೇಶೀ ಪರಿಕಲ್ಪನೆ.
ಓರ್ವ ಪತ್ರಕರ್ತ ರಾಜಕಾರಣಿ ಈ ಚುನಾವಣೆಯಲ್ಲಿ ಹಿಂದು ಇಂಡಿಯಾ ಮತ್ತು ಹಿಂದುತ್ವ ಇಂಡಿಯಾದ ನಡುವೆ ಆಯ್ಕೆಯಾಗಬೇಕು ಎಂದು ಇತ್ತೀಚೆಗೆ ಹೇಳಿದರು. ಹಿಂದು ಇಂಡಿಯಾದ ಕುರಿತು ಇಂತವರು ಮಾತಾಡಲು ಏಕೈಕ ಕಾರಣ ಬೆಳೆಯುತ್ತಿರುವ ಹಿಂದುತ್ವದ ಪ್ರಭಾವ. ಅದು ಅವರ ಬದ್ಧತೆಯನ್ನು ಪ್ರತಿಬಿಂಬಿಸುವುದಿಲ್ಲ, ಕೇವಲ ಅನುಕೂಲಕ್ಕಾಗಿ ಮಾತ್ರ ಹೀಗೆ ಹೇಳಲಾಗುತ್ತದೆ. ಹಿಂದುತ್ವದ ಆಧಾರದ ಮೇಲೆ ಭಾರತ ಒಗ್ಗೂಡುತ್ತಿರುವುದರಿಂದ ಅವರ ಜಾತಿ, ಭಾಷೆ, ಪ್ರಾಂತ ಅಥವಾ ಮತ ಆಧಾರಿತ ರಾಜಕಾರಣ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ ಮತ್ತು ಅವರ ಬೆಂಬಲ ಕಡಿಮೆಯಾಗುತ್ತಿದೆ. ಅವರ ಚಿಲ್ಲರೆ ರಾಜಕಾರಣಕ್ಕೆ ಸಮಾಜವನ್ನು ಒಡೆಯುವುದು ಅನಿವಾರ್ಯ- ಜಾತಿ, ಭಾಷೆ ಅಥವಾ ಮತದ ಆಧಾರದ ಮೇಲೆ. ಇಲ್ಲವಾದರೆ ಹಿಂದು ಮತ್ತು ಹಿಂದುತ್ವ ಎನ್ನುವುದರ ಮೇಲೆ. ಆದರೆ ಇಂದು ಸಾಮಾನ್ಯ ಭಾರತೀಯ ಇವರ ಬಲೆಗೆ ಬೀಳುವಷ್ಟು ಮೂರ್ಖನಲ್ಲ.
ಗೊಂದಲ ಹುಟ್ಟಿಸುವ ಸಲುವಾಗಿ ಬಳಸಲಾಗುವ ಇನ್ನೊಂದು ಪದ ಹಿಂದುವಾದಿ ಅಥವಾ ಹಿಂದೂಯಿಸ್ಟ್. ವಿಶ್ವದಲ್ಲಿ ಕ್ಯಾಪಿಟಲಿಸ್ಟ್, ಕಮ್ಯುನಿಸ್ಟ್ ಅಥವಾ ಸೋಷಿಯಲಿಸ್ಟ್ ಮೊದಲಾದ ವಿಚಾರವಾದಗಳಿವೆ. ಆದರೆ ಭಾರತದಲ್ಲಿ ಪಾಶ್ಚಿಮಾತ್ಯದಲ್ಲಿರುವಂತ ಇಸಂಗೆ ಸ್ಥಾನವಿಲ್ಲ. ಪಾಶ್ಚಿಮಾತ್ಯದಲ್ಲಿರುವ ಇಸಂಗಳಿಗೆ ಇನ್ನೊಬ್ಬರ ಮೇಲೆ ಬಲಪೂರ್ವಕವಾಗಿಯಾದರೂ ಸರಿ ತಮ್ಮ ಚಿಂತನೆಯನ್ನು ಹೇರುವ ಹಾಗೂ ಅಧೀನಕ್ಕೊಳಪಡಿಸುವ ಪೃವೃತ್ತಿಯಿದೆ. ಭಾರತದಲ್ಲಿ ಹಿಂದುತ್ವ (ಹಿಂದುನೆಸ್) ಎಂದರೆ ಹಿಂದು ಹೆಸರಿನಲ್ಲಿ ಆಧ್ಯಾತ್ಮಿಕತೆಯ ಬೆಳಕಿನಲ್ಲಿ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ಔದ್ಯೋಗಿಕ ಬದುಕನ್ನು ಬಾಳುತ್ತಿರುವ ಒಂದು ಸಮಗ್ರ ಜೀವನದ ಕಲ್ಪನೆಯಾಗಿದೆ.
ಆದ್ದರಿಂದ ವಿಭಜನಕಾರಿ ಮತ್ತು ಗೊಂದಲಕಾರಿಗಳನ್ನು ಬಹಿರಂಗಪಡಿಸುವುದು ಮತ್ತು ಬದ್ಧತಯ ಕಾರ್ಯ ಮತ್ತು ಆಚರಣೆಗಳ ಮೂಲಕ ಸನಾತನ ಹಿಂದುತ್ವದ ತತ್ವವನ್ನು ಸ್ಥಾಪಿಸುವುದು ಅತ್ಯಗತ್ಯವಾಗಿದೆ. ಇದರಿಂದ ಶತಮಾನಗಳಿಂದ ಪ್ರಪಂಚಕ್ಕೆ ತಿಳಿದಿರುವ ಭಾರತದ ನಿಜವಾದ ಗುರುತು ವಿಶ್ವದ ಮುಂದೆ ಮತ್ತೆ ತೆರೆಯಲಿದೆ. ಭಾರತದ ಪುರುಷಾರ್ಥ ಸಮಾಜದ ಪ್ರತಿ ಅಂಗ ಮತ್ತು ರಾಷ್ಟ್ರೀಯ ಜೀವನದಲ್ಲಿ ಅಭಿವ್ಯಕ್ತವಾಗಲಿದೆ. ಸ್ವದೇಶಿ ಸಮಾಜ ಎನ್ನುವ ಪ್ರಬಂಧದಲ್ಲಿ ರವೀಂದ್ರನಾಥ ಠಾಕೂರರು ಹೇಳಿದಂತೆ ಎಲ್ಲಕ್ಕೂ ಮೊದಲು, ನಾವು ನಿಜವಾಗಿ ಯಾರಾಗಿರುವೆವೋ ಅವರೇ ಆಗಬೇಕು (“First of all, We will have to become what We actually are”).
ಮೂಲ ಲೇಖನ : ಮನಮೋಹನ ವೈದ್ಯ, ಆರೆಸ್ಸೆಸ್ ಸಹಸರಕಾರ್ಯವಾಹರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.