ಸಂಸ್ಕೃತದ ಮೂಲಕ ಭಾರತ ತನ್ನನ್ನು ತಾನು ಸಮೃದ್ಧವಾಗಿ ಮತ್ತು ಸಕ್ರಿಯವಾಗಿ ಶತಮಾನಗಳಿಂದಲೂ ಅಭಿವ್ಯಕ್ತಿಗೊಳಿಸುತ್ತಾ ಬಂದಿದೆ ಮತ್ತು ದೇಶದ ಭವಿಷ್ಯವು ಈ ಅತ್ಯಂತ ಕ್ರಿಯಾಶೀಲ ಭಾಷೆಯ ಮೇಲೆಯೇ ಹೆಚ್ಚಾಗಿ ಅವಲಂಬಿಸಿದೆ. ಆದರೆ ನಮ್ಮ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಮುಖ್ಯವಾಹಿನಿಯ ಪಠ್ಯಕ್ರಮದಿಂದ ಸಂಸ್ಕೃತವನ್ನು ದೂರವಿಡುವ ಪ್ರಯತ್ನ ಮಾಡುತ್ತಾ ಬಂದಿರುವ ಕಾರಣದಿಂದಾಗಿ ಅತ್ಯುನ್ನತ ಜ್ಞಾನ ಮತ್ತು ಪ್ರತಿಭೆಯ ಈ ಶ್ರೇಷ್ಠ ಭಾಷೆಯೂ ನಮ್ಮಿಂದ ದೂರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ ಬದಲಾಗುತ್ತಿದೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಸಂಸ್ಕೃತ ಪುನರುತ್ಥಾನವಾಗುತ್ತಿದೆ ಎಂದರೆ ಭಾರತದ ನಿಜವಾದ ಚೈತನ್ಯ ಮತ್ತು ಅದರ ಆತ್ಮ-ಶಕ್ತಿಯ ಪುನರುಜ್ಜೀವನವಾಗುತ್ತಿದೆ ಎಂದೇ ಅರ್ಥ. ಸಂಸ್ಕೃತದ ಮೂಲಕವೇ ನಾವು ನಮ್ಮ ಪೂರ್ವಜರನ್ನು ಶ್ರೇಷ್ಠ ನಾಗರಿಕತೆಗಳಲ್ಲಿ ಒಂದಾಗಿಸಿದ ಅಂಶಗಳೊಂದಿಗೆ ಬೆಸೆದುಕೊಳ್ಳಲು ಸಾಧ್ಯವಾಗುತ್ತದೆ.
ಮಾನವ ಪ್ರಜ್ಞೆಯನ್ನು ಭವ್ಯವಾದ ಎತ್ತರಕ್ಕೆ ಏರಿಸುವ ಒಂದು ದೊಡ್ಡ ಶಕ್ತಿ ಸಂಸ್ಕೃತಕ್ಕೆ ಇದೆ. ಈ ಭಾಷೆಯ ಮೂಲಕ ವ್ಯಕ್ತಪಡಿಸಿದ ಚಿಂತನೆಗಳು ಒಬ್ಬರನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿವೆ. ಈ ಭಾಷೆಯನ್ನು ಪ್ರಜ್ಞಾಪೂರ್ವಕವಾಗಿ ಬಳಸುವವನ ಪ್ರಜ್ಞೆಯು ವಿಸ್ತಾರವಾಗುತ್ತದೆ. ಇದು ಅನೇಕ ಹಂತಗಳಲ್ಲಿ ಕಾರ್ಯನಿರ್ವಹಿಸುವ ಒಂದು ಶಕ್ತಿ, ಸಂಪೂರ್ಣ ಶುದ್ಧೀಕರಿಸುವ, ಸದಾ ರಚನಾತ್ಮಕವಾಗಿ ಮತ್ತು ಸೃಜನಶೀಲವಾಗಿಡುವ ಭಾಷೆ. ಆದ್ದರಿಂದ ಸಂಸ್ಕೃತದ ಮರುಶೋಧನೆ ಎಂದರೆ, ಸಂಸ್ಕೃತದ ಶಬ್ದಗಳಲ್ಲಿನ ಗುಪ್ತ ಶಕ್ತಿಗಳ ಬಗ್ಗೆ ಜಾಗೃತಿ ಮೂಡಿಸುವುದು ಆಗಿದೆ.
‘ಸತ್ತ ಭಾಷೆ’ ಎಂದರೆ मृतभाषा ಎಂದು ಸಂಸ್ಕೃತದಲ್ಲಿ ಅನುವಾದಿಸಲಾಗುವುದಿಲ್ಲ, ಯಾಕೆಂದರೆ ಸತ್ತವರು ಎಂದರೆ ಯಾವಾಗಲೂ ಮೃತಪಟ್ಟವರು ಎಂದೇ ಆಗಬೇಕಿಲ್ಲ. ಈ ಕೆಳಗಿನ ನುಡಿಗಟ್ಟುಗಳಲ್ಲಿ ‘ಸತ್ತವರನ್ನು’ ಎಂಬ ಪದವನ್ನು ಭಾಷಾಂತರಿಸಲು ಪ್ರಯತ್ನಿಸಿದರೆ, ಅದು ಎಷ್ಟು ಹಾಸ್ಯಾಸ್ಪದವಾಗಿದೆ ಎಂಬುದು ನಮಗೆ ಅರ್ಥವಾಗುತ್ತದೆ. ಡೆಡ್ ಟೆಲಿಫೋನ್, ಡೆಡ್ ಲೆಟರ್, ಡೆಡ್ ಕ್ಯಾಪಿಟಲ್, ಡೆಡ್ ಸ್ಲೋ, ಡೆಡ್ ಸೈಲೆನ್ಸ್, ಡೆಡ್ ಸೆಂಟರ್ ಮತ್ತು ಡೆಡ್ ಎಂಡ್.
Dead Body मृतशरीरम्
Dead Center स्थिरकेन्द्रम्
Dead Letter निर्ज्ञातपत्रम् / सङ्केतरहितपत्रम्
Dead Loss परिपूर्णहानि:
Dead Language अबहुजनकथितभाषा
Dead Rent (fixed rent) स्थिरभाटकम्
Dead Slow अतिमन्थरता
Dead Capital स्थिरमूलधनम्
Dead Telephone निष्क्रियदूरवाणी
ಸಂಸ್ಕೃತದ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಇದ್ದು, ಅದು ಸಂಸ್ಕೃತವನ್ನು ಸತ್ತ ಭಾಷೆ, ಕಠಿಣ ಭಾಷೆ, ಹಿಂದೂ ಭಾಷೆ, ಉದ್ಯೋಗಾವಕಾಶವಿಲ್ಲದ ಭಾಷೆ ಎಂಬಿತ್ಯಾದಿಗಳ ಮೂಲಕ ಬಿಂಬಿಸುತ್ತಿದೆ. ಆದರೆ, ಈಗ ಪರಿಸ್ಥಿತಿ ಬದಲಾಗುತ್ತಿದೆ. ಪ್ರಸ್ತುತ ಸಂಸ್ಕೃತದ ಸ್ಥಿತಿಯನ್ನು ಅವಲೋಕನ ಮಾಡಿದರೆ, ನಮ್ಮ ದೇಶದಲ್ಲಿ ಈಗ 16 ಸಂಸ್ಕೃತ ವಿಶ್ವವಿದ್ಯಾಲಯಗಳಿವೆ, ಅಲ್ಲಿ ಸಂಸ್ಕೃತ ಮಾಧ್ಯಮದ ಮೂಲಕ ವಿವಿಧ ವಿಷಯಗಳನ್ನು ಕಲಿಸಲಾಗುತ್ತದೆ. 1 ರಿಂದ 12ನೇ ತರಗತಿಯವರೆಗೆ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಸಂಸ್ಕೃತ ಐಚ್ಛಿಕ ಭಾಷೆಗಳಲ್ಲಿ ಒಂದಾಗಿದೆ. ಹೆಚ್ಚಿನ ರಾಜ್ಯಗಳ ಮಾಧ್ಯಮಿಕ ಶಿಕ್ಷಣ ಮಂಡಳಿಗಳು 6 ನೇ ತರಗತಿಯಿಂದ 10ನೇ ತರಗತಿಯವರೆಗೆ ‘ಮೂರು ಭಾಷಾ ಸೂತ್ರ’ದ ಭಾಗವಾಗಿ ಸಂಸ್ಕೃತವನ್ನು ಇಟ್ಟಿವೆ. 11 ಮತ್ತು 12ನೇ ತರಗತಿಯವರೆ ಎರಡನೇ ಐಚ್ಛಿಕ ಭಾಷೆಯಾಗಿ ಸಂಸ್ಕೃತವನ್ನು ಕಲಿಸುತ್ತವೆ. ಉತ್ತರಾಖಂಡವು ಭಾರತದಲ್ಲಿ ಸಂಸ್ಕೃತವನ್ನು ಎರಡನೇ ಅಧಿಕೃತ ಭಾಷೆಯಾಗಿ ಹೊಂದಿರುವ ರಾಜ್ಯ. ನರ್ಸರಿ ಮಟ್ಟದಿಂದಲೇ ಕಡ್ಡಾಯವಾಗಿ ಸಂಸ್ಕೃತವನ್ನು ಕಲಿಸುವ ಶಾಲೆಗಳಿವೆ. ಕೆಲವು ರಾಜ್ಯಗಳು ಇದನ್ನು ಮಾತೃಭಾಷೆಯೊಂದಿಗೆ ಸಂಯೋಜಿತ ಕೋರ್ಸ್ ಆಗಿ ಕಲಿಸುತ್ತಿವೆ. ಒಟ್ಟಾರೆಯಾಗಿ ದೇಶದಲ್ಲಿ ಸುಮಾರು ಐದು ಕೋಟಿ ವಿದ್ಯಾರ್ಥಿಗಳು ಶಾಲಾ ಮಟ್ಟದಲ್ಲಿ ಸಂಸ್ಕೃತವನ್ನು ಕಲಿಯುತ್ತಾರೆ ಎಂದು ಅಂದಾಜಿಸಲಾಗಿದೆ. ಶಾಲಾ ಮಟ್ಟದಲ್ಲಿ ಸುಮಾರು 5000 ಸಾಂಪ್ರದಾಯಿಕ ಪಾಠಶಾಲಾಗಳು ಮತ್ತು ದೇಶದಲ್ಲಿ ಸುಮಾರು 1000 ವೇದಶಾಲೆಗಳಿವೆ. ಭಾರತದಲ್ಲಿ ಸಂಸ್ಕೃತ ಮಾಧ್ಯಮಿಕ ಶಿಕ್ಷಣ ಮಂಡಳಿ ಅಥವಾ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹೊಂದಿರುವ ಕೆಲವು ರಾಜ್ಯಗಳಿವೆ. ಆದರೂ ಸಂಸ್ಕೃತದ ಯಾವ ಸಂಸ್ಥೆಯನ್ನೂ ಹೊಂದದ ಅನೇಕ ರಾಜ್ಯಗಳು ನಮ್ಮ ದೇಶದಲ್ಲಿ ಇವೆ. ಸುಮಾರು 120 ಸಾಮಾನ್ಯ ವಿಶ್ವವಿದ್ಯಾಲಯಗಳು ಯುಜಿ ಮತ್ತು ಪಿಜಿ ಮಟ್ಟದಲ್ಲಿ ಸಂಸ್ಕೃತವನ್ನು ನೀಡುತ್ತವೆ. ಸಂಸ್ಕೃತದಲ್ಲಿ 10 ಸಂಸ್ಕೃತ ಅಕಾಡೆಮಿಗಳು, 16 ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, 60 ಕ್ಕೂ ಹೆಚ್ಚು ನಿಯತಕಾಲಿಕಗಳು ಮತ್ತು ಮಾಸ ಪತ್ರಿಕೆಗಳು ಇವೆ. ಸಂಸ್ಕೃತದ ಜನಪ್ರಿಯತೆಗಾಗಿ ಸುಮಾರು 100 ಎನ್ಜಿಒಗಳು ಕಾರ್ಯನಿರ್ವಹಿಸುತ್ತಿವೆ.
ಆಲ್ ಇಂಡಿಯಾ ರೇಡಿಯೋ ದಿನಕ್ಕೆ ಎರಡು ಬಾರಿ ಸಂಸ್ಕೃತ ಬುಲೆಟಿನ್ಗಳನ್ನು ಪ್ರಸಾರ ಮಾಡುತ್ತದೆ. ದೆಹಲಿ ದೂರದರ್ಶನವು ಸಂಸ್ಕೃತ ಸುದ್ದಿಗಳನ್ನು ದಿನಕ್ಕೆ ಎರಡು ಬಾರಿ ಮತ್ತು ವಾರಕ್ಕೆ ಅರ್ಧ ಗಂಟೆಯ ವಿಶೇಷ ಬುಲೆಟಿನ್ ಪ್ರಸಾರ ಮಾಡುತ್ತದೆ. ದಿವ್ಯವಾಣಿ ಸಂಸ್ಕೃತ ರೇಡಿಯೊ ದಿನದ 24 ಗಂಟೆಯೂ ಸಂಸ್ಕೃತದಲ್ಲೇ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ ಮತ್ತು ಇದು ಜಾಗತಿಕವಾಗಿ 165 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರವನ್ನು ಕಾಣುತ್ತದೆ. ಹಲವು ಆನ್ ಲೈನ್ ವೇದಿಕೆಗಳು ಸಂಸ್ಕೃತದ ವಿವಿಧ ಆಯಾಮಗಳನ್ನು ಪ್ರಚುರಪಡಿಸುತ್ತಿವೆ ಮತ್ತು ಜನರು ಅಪ್ಡೇಟ್ ಆಗಿ ಇಡುತ್ತಿವೆ. ಸಂಸ್ಕೃತದಲ್ಲಿ ನೂರಾರು ಮೂಲ ಬರಹಗಳು ಮತ್ತು ಸಂಶೋಧನಾ ಕೃತಿಗಳು ಪ್ರತಿವರ್ಷ ಪ್ರಕಟಗೊಳ್ಳುತ್ತವೆ. ಸಂಸ್ಕೃತದ ಸೃಜನಶೀಲ ಬರಹಗಾರರಿಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ.
ಕರ್ನಾಟಕದ ಮುತ್ತೂರು, ಮಧ್ಯಪ್ರದೇಶದ ಜಿರಿ ಮುಂತಾದ ಏಳು ಗ್ರಾಮಗಳಲ್ಲಿ ಸಂಸ್ಕೃತವು ದೈನಂದಿನ ಜೀವನದ ಭಾಷೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಕುಟುಂಬಗಳು ಸಂಸ್ಕೃತ ಕುಟುಂಬಗಳಾಗುವ ಸಲುವಾಗಿ ಸಂಸ್ಕೃತವನ್ನು ಕಲಿಯಲು ಮುಂದೆ ಬರುತ್ತಿವೆ. ಅದರಲ್ಲೂ ವಿದೇಶಗಳಲ್ಲಿ ಸಂಸ್ಕೃತದ ಜನಪ್ರಿಯತೆ ಹೆಚ್ಚುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಸ್ಕೃತದ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಂಸ್ಕೃತದಲ್ಲಿ ಗುಣಾತ್ಮಕವಾಗಿ ಮಕ್ಕಳ ಸಾಹಿತ್ಯವನ್ನು ರಚಿಸಲು, ಮೌಲ್ಯಮಾಪನ ಮಾಡಲು ಮತ್ತು ಪ್ರಚಾರ ಮಾಡಲು ಸಂಪೂರ್ಣವಾಗಿ ಸಮರ್ಪಿತಗೊಂಡಿರುವ ವಿಶ್ವದ ಏಕೈಕ ಸಂಸ್ಥೆ ‘ಸಂಸ್ಕೃತ ಬಾಲಸಾಹಿತ್ಯ ಪರಿಷತ್’.
ಭಾರತದಲ್ಲಿ ಸುಮಾರು ಇಪ್ಪತ್ತೈದು ಸಾವಿರ ಜನರು ಸಂಸ್ಕೃತವನ್ನು ತಮ್ಮ ಮಾತೃಭಾಷೆಯಾಗಿ ನೋಂದಾಯಿಸಿಕೊಂಡಿದ್ದಾರೆ. ಅನೇಕ ಜನರು ಸಂಸ್ಕೃತದಲ್ಲಿ ಮಾತನಾಡುತ್ತಾರೆ, ಸಂಸ್ಕೃತದಲ್ಲಿ ಬ್ಲಾಗ್ ಬರೆಯುತ್ತಾರೆ, ಸಂಸ್ಕೃತದಲ್ಲಿ ಇ-ಮೇಲ್ ಕಳುಹಿಸುತ್ತಾರೆ, ಸಂಸ್ಕೃತದಲ್ಲಿ ಟ್ವೀಟ್ ಮಾಡುತ್ತಾರೆ, ಸಂಸ್ಕೃತದಲ್ಲಿ ವಾಟ್ಸಾಪ್ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಸಂಸ್ಕೃತ ಸಮ್ಮೇಳನಗಳಲ್ಲಿ ಹೆಚ್ಚಿನ ಅವಧಿಯಲ್ಲಿ ಸಂಪೂರ್ಣ ಸಂಭಾಷಣೆ, ಚರ್ಚೆಗಳು, ಪ್ರಸ್ತುತಿಗಳು ಸಂಸ್ಕೃತದಲ್ಲೇ ಇರುತ್ತವೆ. ಭಾರತೀಯ ಸಂವಿಧಾನದ ಅಧಿಕೃತ ಭಾಷೆಗಳಲ್ಲಿ ಸಂಸ್ಕೃತವೂ ಒಂದು. ಸಂಸ್ಕೃತ ಮಾತನಾಡುವುದು ಸಾಮಾನ್ಯವಲ್ಲದಿದ್ದರೂ, ಪ್ರತಿಯೊಂದು ಭಾರತೀಯ ಭಾಷೆ ಮತ್ತು ಉಪಭಾಷೆಯು ಸಂಸ್ಕೃತ ಮೂಲಗಳಿಂದ ಪಡೆದ ಶಬ್ದಕೋಶವನ್ನು ಹೊಂದಿದೆ.
ಸಂಸ್ಕೃತದಲ್ಲಿ ಅನೇಕ ಕಂಪ್ಯೂಟೇಶನಲ್ ಭಾಷಾ ಸಾಧನಗಳನ್ನು ಅಭಿವೃದ್ಧಿ ಮಾಡಿರುವುದರಿಂದ ಈಗ ಈ ಭಾಷೆಯಲ್ಲಿ ಜನರ ಆಸಕ್ತಿ ಹೆಚ್ಚುತ್ತಿದೆ. ಡಿಜಿಟಲ್ ಮಾಧ್ಯಮ, ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಭಾಷಾ ಬೋಧನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಭಾಷೆಯನ್ನು ಕಲಿಯುವುದರಿಂದ ಇಡೀ ಪ್ರಪಂಚದ ಸಾಮಾಜಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಬೇರುಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ ಎಂಬುದನ್ನು ಅನೇಕ ಜನರು ಮನಗಂಡಿದ್ದಾರೆ.
ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದು ಪ್ರಾಚೀನ ಭಾರತದ ಕಲಿಕೆಯನ್ನು ಸಾಕಾರಗೊಳಿಸುವ ಸಂಪೂರ್ಣ ಜ್ಞಾನ ವ್ಯವಸ್ಥೆ. ವಿಶ್ವ ಸಾಹಿತ್ಯದ ಶ್ರೇಷ್ಠತೆ ಮಾತ್ರವಲ್ಲದೇ, ಸಂಸ್ಕೃತವು ಅಪಾರ ವೈಜ್ಞಾನಿಕ ಜ್ಞಾನದ ನಿಧಿಯೂ ಆಗಿದೆ. ವು ದೂರವಾಗಿರುವ ಕೊಂಡಿಯನ್ನು ಮತ್ತೆ ಬೆಸೆಯಲು ಮತ್ತು ಅಂತರ್ ಶಿಸ್ತನ್ನು ಪ್ರೋತ್ಸಾಹಿಸಲು ಸಂಸ್ಕೃತ ಬೇಕು. ಸಂಸ್ಕೃತದಲ್ಲಿನ ಅಮೂಲ್ಯವಾದ ಜ್ಞಾನವು ಇಂದಿನ ಜ್ಞಾನ ವ್ಯವಸ್ಥೆಯನ್ನು ಉತ್ಕೃಷ್ಟಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಮುಖ್ಯವಾಗಿ, ಇದು ಇತರ ಎಲ್ಲ ಭಾರತೀಯ ಭಾಷೆಗಳ ಸಮೃದ್ಧಿಗೆ ಅಪಾರ ಕೊಡುಗೆ ನೀಡುತ್ತದೆ.
ಸಂಸ್ಕೃತವನ್ನು ಕಲಿಯುವ ಅತ್ಯಂತ ಪ್ರಾಯೋಗಿಕ ಮೌಲ್ಯವು ತಾರ್ಕಿಕವಾಗಿ ಯೋಚಿಸಲು ಮನಸ್ಸಿಗೆ ತರಬೇತಿ ನೀಡುತ್ತದೆ, ಅಭಿವ್ಯಕ್ತಿಗೆ ಸ್ಪಷ್ಟತೆಯನ್ನು ತರುತ್ತದೆ, ಬೌದ್ಧಿಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಪದಗಳ ಅರ್ಥಗಳ ಬಗ್ಗೆ ತೀವ್ರ ಒಳನೋಟವನ್ನು ನೀಡುತ್ತದೆ. ಸಂಸ್ಕೃತದ ವೈಬ್ರೇಶನ್ ಮೆದುಳಿನ ಕಾರ್ಯಚಟುವಟಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅಲ್ಲದೇ, ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಮತ್ತು ಗಮನ ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಪ್ರಜ್ಞೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಮಹತ್ವದ ಪರಿವರ್ತನೆಯನ್ನು ತರಲು ಅಪಾರ ಶಕ್ತಿಯನ್ನು ಒದಗಿಸುತ್ತದೆ. ಇದರಿಂದ ನಿಜವಾದ ಸಂತೋಷ ಸಿಗುತ್ತದೆ. ಹೃದಯ ಮತ್ತು ಮನಸ್ಸಿಗೆ ಅಮರತ್ವದ ಪರಿಪೂರ್ಣ ಪ್ರಜ್ಞೆಯನ್ನು ಸಂಸ್ಕೃತ ತುಂಬಿಸುತ್ತದೆ. ಸಂಸ್ಕೃತದ ಪರಿಶುದ್ಧತೆಯು ನಮ್ಮನ್ನು ಸೆಳೆಯುತ್ತದೆ, ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ನಮ್ಮ ಜೀವನದ ನಿಜವಾದ ಗುರಿಯನ್ನು ನಿರಂತರವಾಗಿ ನೆನಪಿಸುತ್ತದೆ, ನಮ್ಮೊಳಗೆ ಇರುವ ಸತ್ಯದ ಬಗೆಗಿನ ಅರಿವನ್ನು ನಮಗೆ ಮೂಡಿಸುತ್ತದೆ. ಈ ಭಾಷೆಯ ಲಯಬದ್ಧ ಸೌಂದರ್ಯ ಮತ್ತು ಮಧುರತೆ, ಅದರ ಶಬ್ದಗಳ ಕಂಪನ ಶುದ್ಧತೆ, ಅದರ ಧ್ವನಿ ಶಬ್ದದ ಸಮೃದ್ಧತೆ, ಅದರ ಮೂಲ-ಶಬ್ದಗಳ ಪಾರದರ್ಶಕತೆ ಮತ್ತು ಅದರ ಶಬ್ದಕೋಶಗಳ ಸಮೃದ್ಧತೆ ಮತ್ತು ಚಿಂತನೆಯ ವಿಷಯಗಳು, ಇವೆಲ್ಲವೂ ಸಂಸ್ಕೃತವನ್ನು ನಿಜವಾಗಿಯೂ ಶ್ರೇಷ್ಠ ಭಾಷೆಯನ್ನಾಗಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.