9.45 ಟ್ರಿಲಿಯನ್ ಡಾಲರ್ ಜಿಡಿಪಿ (ಪಿಪಿಪಿ) ಹೊಂದಿರುವ ಭಾರತ, ಈ ವಿಷಯದಲ್ಲಿ ಚೀನಾ ಮತ್ತು ಅಮೆರಿಕಾ ನಂತರ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ. ಭಾರತದ ಬೆಳವಣಿಗೆಯ ದರವು ಶೇ. 8 ರ ಸಮೀಪದಲ್ಲಿದೆ ಮತ್ತು ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿಕೊಂಡಿದೆ. ಆದರೆ ಈ ಪ್ರಗತಿಯು ಲಕ್ಷಾಂತರ ನಿವಾಸಿಗಳು ಮತ್ತು ವಲಸಿಗರಿಗೆ ಆರ್ಥಿಕ ಅವಕಾಶಗಳನ್ನು ಒದಗಿಸುವ ಕೆಲವು ಭಾರತೀಯ ನಗರಗಳಿಂದಾಗಿ ಸ್ಥಿರವಾಗಿ ಉಳಿದುಕೊಂಡಿದೆ. ಜಿಡಿಪಿ (ಪಿಪಿಪಿ) ಯ ದೃಷ್ಟಿಯಿಂದ ಭಾರತದ ಟಾಪ್ 10 ನಗರಗಳ ಪಟ್ಟಿ ಇಲ್ಲಿದೆ.
10. ವಿಶಾಖಪಟ್ಟಣಂ: $ 43.5 ಬಿಲಿಯನ್
ಸಾಮಾನ್ಯವಾಗಿ ವೈಜಾಗ್ ಎಂದು ಕರೆಯಲ್ಪಡುವ ಈ ನಗರ, ಪೂರ್ವ ಭಾರತದ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ ಮತ್ತು ಆಂಧ್ರಪ್ರದೇಶದ ಅತಿದೊಡ್ಡ ನಗರವಾಗಿದೆ. ಸಾಫ್ಟ್ವೇರ್, ಔಷಧಿ, ಜವಳಿ ಮತ್ತು ವ್ಯಾಪಾರ (ಬಂದರು ನಗರವಾಗಿ)ಗಳು ವಿಶಾಖಪಟ್ಟಣಂನನ್ನು ಆರ್ಥಿಕತೆಯಲ್ಲಿ ಪ್ರಮುಖ ಕೊಡುಗೆ ನೀಡುವ ನಗರವಾಗಿ ಹೊರಹೊಮ್ಮಿಸಿದೆ.
9. ಸೂರತ್: $ 59.8 ಬಿಲಿಯನ್
ವಜ್ರ ಮತ್ತು ಜವಳಿಗಳ ಬಗ್ಗೆ ಯೋಚಿಸಿದಾಗ, ನಮ್ಮ ಮನಸ್ಸಿಗೆ ಬರುವ ಮೊದಲ ನಗರವೆಂದರೆ ಅದು ಸೂರತ್. ಶೇ. 90 ಕ್ಕಿಂತಲೂ ಹೆಚ್ಚು ವಜ್ರವನ್ನು ಈ ನಗರದಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ರಫ್ತು ಮಾಡಲಾಗುತ್ತದೆ.
8. ಅಹ್ಮದಾಬಾದ್: $ 68 ಬಿಲಿಯನ್
ಗುಜರಾತ್ನ ಅತಿದೊಡ್ಡ ನಗರ ಮತ್ತು ಗುಜರಾತಿನಿಂದ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಎರಡನೇಯ ನಗರ. ಪಿಎಂ ನರೇಂದ್ರ ಮೋದಿಯವರ ಕರ್ಮಭೂಮಿ. ಟೊರೆಂಟ್ ಫಾರ್ಮಾ, ನಿರ್ಮಾದಂತಹ ಪ್ರಮುಖ ಕಂಪನಿಗಳಿಗೆ ಅಹ್ಮದಾಬಾದ್ ತಾಯ್ನಾಡು. ಗುಜರಾತ್ ಮೂಲದ ಅದಾನಿ ಗ್ರೂಪ್ನಂತಹ ಎಲ್ಲಾ ಪ್ರಮುಖ ವ್ಯಾಪಾರ ಸಂಸ್ಥೆಗಳಿಗೆ ಇದು ನೆಲೆಯಾಗಿದೆ.
7. ಪುಣೆ: $ 69 ಬಿಲಿಯನ್
ಕಳೆದ ಎರಡು ದಶಕಗಳಿಂದ ಈ ನಗರವು ಮುಂಬಯಿಗೆ ಪರ್ಯಾಯವಾಗಿ ಮಾರ್ಪಟ್ಟಿದೆ. ‘ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ’ ಎಂದು ಇದು ಕರೆಯಲ್ಪಟ್ಟಿದೆ. ಈ ನಗರದಲ್ಲಿ ಟಾಟಾ, ಮರ್ಸಿಡಿಸ್ ಮತ್ತು ವೋಕ್ಸ್ವ್ಯಾಗನ್ ಸಂಸ್ಥೆಗಳು ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದೆ. ಇದರ ಪರಿಣಾಮ ಈ ನಗರ ಅಟೋಮೊಬೈಲ್ ಸೆಕ್ಟರ್ ಹಬ್ ಆಗಿ ಹೊರಹೊಮ್ಮಿದೆ. ಇದು ಬಿಪಿಓ ಮತ್ತು ಐಟಿ ಉದ್ಯಮದ ಕೇಂದ್ರವಾಗಿಯೂ ಹೊರಹೊಮ್ಮಿದೆ.
6. ಹೈದರಾಬಾದ್: $ 75.2 ಬಿಲಿಯನ್
ಈ ನಗರ ಜನಪ್ರಿಯ ತೆಲುಗು ಚಲನಚಿತ್ರೋದ್ಯಮದ ಕೇಂದ್ರ ಮತ್ತು ಹೊಸದಾಗಿ ರಚನೆಯಾದ ತೆಲಂಗಾಣದ ರಾಜಧಾನಿ. ಗೂಗಲ್, ಮೈಕ್ರೋಸಾಫ್ಟ್, ಸ್ಯಾಮ್ಸಂಗ್ ಮತ್ತು ಡೆಲ್ನಂತಹ ಕೆಲವು ಪ್ರಮುಖ ಜಾಗತಿಕ ತಂತ್ರಜ್ಞಾನ ದೈತ್ಯರು ಈ ನಗರದಲ್ಲಿ ತಮ್ಮ ಕಚೇರಿಗಳನ್ನು ಹೊಂದಿದ್ದಾರೆ ಮತ್ತು ಈ ನಗರ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ್ದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಡಾ. ರೆಡ್ಡಿ’ಸ್ ಲ್ಯಾಬೋರೇಟರಿ ಮತ್ತು ಅರಬಿಂದೋ ಫಾರ್ಮಾಗಳ ಪ್ರಧಾನ ಕೇಂದ್ರ ಕಛೇರಿಯನ್ನು ಹೊಂದಿರುವ ಈ ನಗರ ಭಾರತದ ಔಷಧೀಯ ವಲಯದ ಕೇಂದ್ರವಾಗಿದೆ.
5. ಚೆನ್ನೈ: $ 78.6 ಬಿಲಿಯನ್
ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ಉದಯದ ಮೊದಲು ದಕ್ಷಿಣ ಭಾರತದ ಕೇಂದ್ರವಾಗಿತ್ತು ಚೆನ್ನೈ. ಭಾರತದ ವಾಹನ ಉದ್ಯಮದ ಶೇ. 40ರಷ್ಟನ್ನು ಇದು ಹೊಂದಿದೆ ಮತ್ತು ಬೆಂಗಳೂರಿನ ನಂತರ ಎರಡನೇ ಅತಿದೊಡ್ಡ ಐಟಿ ವಲಯವನ್ನು ಇದು ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ, ಇದು ಆಗ್ನೇಯ ಮತ್ತು ಪಶ್ಚಿಮ ಏಷ್ಯಾದ ಜನರಿಗೆ ಆರೋಗ್ಯ ಪ್ರವಾಸೋದ್ಯಮದ ತಾಣವಾಗಿ ಹೊರಹೊಮ್ಮಿದೆ.
4. ಬೆಂಗಳೂರು: $ 110 ಬಿಲಿಯನ್
ಈ ನಗರವನ್ನು ‘ಭಾರತದ ಸಿಲಿಕಾನ್ ವ್ಯಾಲಿ’ ಎಂದು ಕರೆಯಲಾಗುತ್ತದೆ. ಬೆಂಗಳೂರು ಕೇವಲ ಐಟಿ ಹಬ್ ಮಾತ್ರವಲ್ಲ, ಇದು ಭಾರತದ ರಕ್ಷಣಾ ಮತ್ತು ವಾಯುಯಾನ ಉದ್ಯಮದ ಕೇಂದ್ರವೂ ಆಗಿದೆ. BHEL, ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಕಚೇರಿಗಳನ್ನು ಈ ನಗರ ಹೊಂದಿದೆ.
3. ಕೋಲ್ಕತಾ: $ 150.1 ಬಿಲಿಯನ್
ಐತಿಹಾಸಿಕವಾಗಿ, ಕೊಲ್ಕತ್ತಾ ಬ್ರಿಟಿಷ್ ಯುಗದಿಂದ 1970 ರವರೆಗೆ ದೇಶದ ಆರ್ಥಿಕ ರಾಜಧಾನಿಯಾಗಿತ್ತು, ಬಳಿಕ ಈ ಸ್ಥಾನಮಾನ ಮುಂಬಯಿ ಪಾಲಾಯಿತು. ಎಡಪಂಥೀಯರ ದುರ್ಬಳಕೆ ಮತ್ತು ಭ್ರಷ್ಟಾಚಾರದಿಂದ ಇದು ಬಳಲುತ್ತಿದ್ದರೂ, ಈ ನಗರವು ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ನಗರ ಚಹಾ ಉದ್ಯಮಕ್ಕೆ ನೆಲೆಯಾಗಿದೆ ಮತ್ತು ಐಟಿಸಿಯಂತಹ ಕೆಲವು ಪ್ರಮುಖ ಎಫ್ಎಂಸಿಜಿ ಕಂಪೆನಿಗಳ ತವರಾಗಿದೆ. ಕೋಲ್ಕತ್ತಾವು ಮಮತಾ ಬ್ಯಾನರ್ಜಿಯ ಕಳಪೆ ನೀತಿಗಳಿಂದಾಗಿ ಇತರ ನಗರಗಳ ಮುಂದೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ ಮತ್ತು ಇಂದು ಅದರ ಜಿಡಿಪಿ (ಪಿಪಿಪಿ) ಮುಂಬಯಿಯ ಅರ್ಧದಷ್ಟಿದೆ.
2. ದೆಹಲಿ: $ 293.6 ಬಿಲಿಯನ್
ದೇಶದ ರಾಜಧಾನಿಯಾಗಿ ದೆಹಲಿ ಒಂದು ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದೆ, ಅದರಲ್ಲೂ ವಿಶೇಷವಾಗಿ ಆರ್ಥಿಕ ಉದಾರೀಕರಣದ ನಂತರ. ಇದರ ನೆರೆಯ ನಗರಗಳಾದ ಗುರ್ಗಾಂವ್ ಮತ್ತು ನೋಯ್ಡಾ ಎರಡು ದಶಕಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಸೇವಾ ವಲಯದ ಕೇಂದ್ರವಾಗಿ ಹೊರಹೊಮ್ಮಿದೆ. ರಿಯಲ್ ಎಸ್ಟೇಟ್, ದೂರಸಂಪರ್ಕ, ಹೋಟೆಲ್ಗಳು ಮತ್ತು ಮಾಧ್ಯಮಗಳು ದೆಹಲಿಯ ಆರ್ಥಿಕತೆಯ ಪ್ರಮುಖ ವಲಯಗಳಾಗಿವೆ.
1. ಮುಂಬಯಿ: $310 ಬಿಲಿಯನ್
ಕಳೆದ ನಾಲ್ಕು ದಶಕಗಳಿಂದ ಈ ನಗರವು ದೇಶದ ಆರ್ಥಿಕ ರಾಜಧಾನಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಟಾಟಾ ಬಿರ್ಲಾ ಮತ್ತು ಅಂಬಾನಿಯಂತಹ ಭಾರತದ ಅತ್ಯಂತ ಶಕ್ತಿಶಾಲಿ ಕಾರ್ಪೊರೇಟ್ಗಳಿಗೆ ಇದು ನೆಲೆಯಾಗಿದೆ. ಈ ನಗರವು ಹಗಲು ರಾತ್ರಿ ಎನ್ನದೇ ಸದಾ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಇದು, ಭಾರತದ ಹಣಕಾಸು ಉದ್ಯಮ, ಬಾಲಿವುಡ್, ಔಷಧಿ, ಐಟಿ ಮತ್ತು ಇನ್ನೂ ಅನೇಕವುಗಳಿಗೆ ನೆಲೆಯಾಗಿದೆ. ವಾಸ್ತವವಾಗಿ, ಬಹುತೇಕ ಎಲ್ಲಾ ಪ್ರಮುಖ ವಲಯಗಳು ಮೊದಲು ಮುಂಬಯಿಯಲ್ಲಿ ಬೆಳೆಯುತ್ತವೆ ಮತ್ತು ನಂತರ ಅಗ್ಗದ ಭೂಮಿ ಮತ್ತು ಕಾರ್ಮಿಕ ಸೌಲಭ್ಯಗಳನ್ನು ಹುಡುಕುತ್ತಾ ಇತರ ನಗರಗಳಿಗೆ ಸ್ಥಳಾಂತರಗೊಳ್ಳುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.