ನವದೆಹಲಿ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಚೀನಾದ ಪ್ರಸಿದ್ಧ ಶಾವೋಲಿನ್ ದೇವಾಲಯದಿಂದ ಹಿಡಿದು ಬ್ರಿಟನ್ನ ಐಕಾನಿಕ್ ಸೈಂಟ್ ಪಾಲ್ಸ್ ಕ್ಯಾಥೆಡ್ರಲ್ ಮತ್ತು ಭಾರತದ ಸಂಸತ್ತಿನ ಆವರಣದಿಂದ ಹಿಡಿದು ಹಿಮಾಲಯದವರೆಗೆ ನಾಯಕರುಗಳು ಮತ್ತು ಸಾಮಾನ್ಯರು ಯೋಗವನ್ನು ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರಾಚೀನ ಅಭ್ಯಾಸವಾದ ಯೋಗ ಧರ್ಮ, ಜಾತಿ, ಬಣ್ಣ, ಲಿಂಗ ಮತ್ತು ಪ್ರದೇಶವನ್ನು ಮೀರಿದ್ದು ಎಂದು ಹೇಳಿದರು. ವಿಶ್ವದಾದ್ಯಂತದ ಜನರು ಅದನ್ನು ನಿಜ ಎಂದು ನಿರೂಪಿಸಿಬಿಟ್ಟರು.
ಭಾರತದಲ್ಲಿ ಮೋದಿಯವರ ನೇತೃತ್ವದಲ್ಲಿ ಝಾರ್ಖಾಂಡಿನ ರಾಂಚಿಯಲ್ಲಿ ಬೃಹತ್ ಯೋಗ ಸಮಾರಂಭವನ್ನು ಆಯೋಜನೆಗೊಳಿಸಲಾಗಿತ್ತು, ಸುಮಾರು 40 ಸಾವಿರ ಮಂದಿಯ ಜೊತೆಗೂಡಿ ಮೋದಿ ಇಲ್ಲಿ ಯೋಗ ಮಾಡಿದರು.
ದೇಶದಾದ್ಯಂತ ತೆರಳಿ ಕೇಂದ್ರ ಸಚಿವರುಗಳು ಯೋಗ ಕಾರ್ಯಕ್ರಮಗಳಲ್ಲಿ ಭಾಗಿಯಾದರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೋಹ್ಟಕ್ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೆಹಲಿಯಲ್ಲಿ, ನಿತಿನ್ ಗಡ್ಕರಿಯವರು ನಾಗ್ಪುರದಲ್ಲಿ ಯೋಗ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದರು. ವಿದೇಶಾಂಗ ಸಚಿವ ಜೈಶಂಕರ್ ಅವರು ಪ್ರವಾಸಿ ಭಾರತೀಯ ಕೇಂದ್ರದಲ್ಲಿ 60 ರಾಯಭಾರಿಗಳ ಜೊತೆಗೂಡಿ ಯೋಗ ಮಾಡಿದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ತಿನ ಆವರಣದಲ್ಲಿ 400 ಮಂದಿಯ ಜೊತೆಗೂಡಿ ಯೋಗ ಮಾಡಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಯೋಗ ಕಾರ್ಯಕ್ರಮ ನೆರವೇರಿಸಿದರು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೆಂಪು ಕೋಟಿಯಲ್ಲಿ ಸಾವಿರಾರು ಮಂದಿಯ ಜೊತೆಗೂಡಿ ಯೋಗ ಮಾಡಿದರು.
ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆ ಸಿಬ್ಬಂದಿಗಳು ರೋಗ್ಟಂಗ್ ಪಾಸ್ ಬಳಿ ಯೋಗ ನಡೆಸಿದರು. ವಿಶ್ವದ ಅತೀ ಎತ್ತರ ಯುದ್ಧಭೂಮಿ ಸಿಯಾಚಿನ್ ನಲ್ಲೂ ಯೋಧರು ಕೊರೆಯುವ ಚಳಿಯ ನಡುವೆ ಯೋಗ ಮಾಡಿದರು.
ಚೀನಾ ರಾಜಧಾನಿ ಬೀಜಿಂಗ್ ನಗರದಲ್ಲಿ ಭಾರತದ ಚೀನಾದಲ್ಲಿನ ರಾಯಭಾರಿ ವಿಕ್ರಮ್ ಮಿಸ್ರಿ ಅವರ ನೇತೃತ್ವದಲ್ಲಿ ಯೋಗ ಸಮಾರಂಭ ನೆರವೇರಿತು, ಇಸ್ರೇಲಿನ ಟೆಲಿ ಅವಿವ್ ನಲ್ಲಿ 400 ಮಂದಿ ಯೋಗ ಮಾಡಿದರು, ಅಲ್ಲಿನ ಭಾರತೀಯ ರಾಯಭಾರಿ ಪವಣ್ ಕಪೂರ್ ಇದರ ನೇತೃತ್ವ ವಹಿಸಿದ್ದರು.
ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರೂ, ತಾವು ಯೋಗ ಮಾಡಿದ ವೀಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಯೋಗವನ್ನು ವಿಶ್ವ ವೇದಿಕೆಗೆ ತಂದ ಮೋದಿಯ ಕಾರ್ಯವನ್ನು ಅವರು ಬಣ್ಣಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.