“ಧೈರ್ಯವಿದ್ದರೆ ನನ್ನ ಎದುರು ಬಂದು ಘೋಷಣೆ ಕೂಗಿ, ನಿಮ್ಮನ್ನೆಲ್ಲ ಜೀವಂತ ಚರ್ಮ ಸುಲಿದು ಬಿಡುತ್ತೇನೆ” ಛೀ ಕೇಳಲು ಎಷ್ಟು ಕ್ರೂರವಾಗಿದೆ ಅಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ರಾಜ್ಯದ ಮುಖ್ಯಮಂತ್ರಿ ತನ್ನ ಪ್ರಜೆಗಳಿಗೆ ಹೇಳುವ ಮಾತು. ಇದು ಮೊನ್ನೆ ಮೊನ್ನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭಾತ್ಪರ್ನಲ್ಲಿ ನಡೆದ ಘಟನೆ. ಈ ಸಂಬಂಧ ಹತ್ತು ಜನರನ್ನು ಬಂಧಿಸಿಯೂ ಆಯಿತು. ಹೇಯ ಅನಿಸುವಂತೆ ಇಬ್ಬರ ಕೊಲೆಯೂ ನಡೆದುಹೋಯಿತು. ಲೋಕಸಭಾ ಚುನಾವಣೆಗಳಲ್ಲಿ 120ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರಿಂದ ಮಮತಾ ಬ್ಯಾನರ್ಜಿ ಭಯ ಮುಗಿಲು ಮುಟ್ಟಿದೆ. ತಾನೊಬ್ಬ ಮುಖ್ಯಮಂತ್ರಿ ಎನ್ನುವುದನ್ನು ಮರೆತು, ಈ ವರ್ತನೆ ಅತಿರೇಕಕ್ಕೆ ಹೋಗಿದೆ. ನಿಜವಾಗಿಯೂ ದೀದಿ ಎಂದು ಕರೆಯಲು ಮನಸ್ಸು ಬರುವುದಿಲ್ಲ. ಅಮಾಯಕರ ಜೀವಿಗಳಿಗೆ ಬೆಲೆಯೇ ಇಲ್ಲ.
ಮುಂದುವರಿದಂತೆ ಆ ಮಾತುಗಳ ನೀವೇ ಕೇಳಿ “ನೀವೆಲ್ಲ ಹೊರಗಡೆಯಿಂದ ಬಂದು ನೆಲೆಸಿದ್ದೀರಿ. ಘೋಷಣೆ ಕೂಗುವವರ್ಯಾರು ಇಲ್ಲಿಯವರಲ್ಲ”. ಹಾಗಾದರೆ ರೋಹಿಂಗ್ಯಾಗಳ ಕುರಿತು, ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಮಮತಾ ಮಾತನಾಡಿದ್ದು ಇದೆಯೇ? ರಾಜ್ಯದ ಗೌರವಾನ್ವಿತ ಸ್ಥಾನದಲ್ಲಿದ್ದು, ಮತ್ತೊಂದು ಪಕ್ಷದ ಕಛೇರಿಯ ಗೋಡೆಯ ಮೇಲೆ ಟಿಎಂಸಿ ಚಿಹ್ನೆ ಬಿಡಿಸುವ ಕ್ಷುಲ್ಲಕತನ ಯಾರಿಗೆ ಇರಲು ಸಾಧ್ಯ?
1998 ರಲ್ಲಿ ಕಾಂಗ್ರೆಸ್ನಿಂದ ಬೇರ್ಪಟ್ಟು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC or TMC) ಸ್ಥಾಪಿಸಲಾಯಿತು. ಅಂದಿನಿಂದಲೂ ಪಕ್ಷದ ಸರ್ವಾಧಿಕಾರವನ್ನು ಪಡೆದದ್ದು ಮಮತಾ ಬ್ಯಾನರ್ಜಿ. ಆ ಕ್ಷಣದಿಂದಲೇ ತನ್ನ ಪ್ರಯತ್ನ ಮಾಡುತ್ತಲೇ ಬಂದ ಮಮತಾಗೆ ಸಿಕ್ಕಿದ್ದು ಸಿಂಗೂರ್ ಹೋರಾಟ. ವಿಶ್ವದಲ್ಲಿ ಅತಿ ಹೆಚ್ಚು ಸತತ 34 ವರ್ಷಗಳ ಇತಿಹಾಸ ಹೊಂದಿದ್ದ ಕಮ್ಯೂನಿಸ್ಟ್ ಸರ್ಕಾರವನ್ನು ಮಣಿಸಿದ್ದು ಮಮತಾ ಬ್ಯಾನರ್ಜಿ. ಟಾಟಾ ಕಂಪನಿಗೆ ‘ವಿಶೇಷ ಆರ್ಥಿಕ ವಲಯ’ ಅಡಿ ಕಮ್ಯುನಿಸ್ಟರು ನೀಡಲು ಹೊರಟಿದ್ದ ರೈತರ ಜಮೀನಿನ ಪರವಾಗಿ ಹೋರಾಟ ನಡೆಸಿ, ಕೇಳಲು ಎಷ್ಟು ಹೆಮ್ಮೆ ಅನಿಸುವುದು ಅಲ್ಲವೇ? ಸಿಂಗೂರ್ ಎಂಬುದು ಕೋಲ್ಕತ್ತದಿಂದ ಕೇವಲ 40 ಕಿ.ಮೀ.ಗಳ ದೂರದಲ್ಲಿರುವ ಒಂದು ಕುಗ್ರಾಮ. ಈಗಲೂ ಅದು ರುದ್ರಭೂಮಿ. ಆ ಒಣ ಭೂಮಿಯಲ್ಲಿ ಯಾರೂ ಬೇಸಾಯ ಮಾಡುವುದಿಲ್ಲ. ಅಂತಹ ಜಮೀನಿನಲ್ಲಿ ಟಾಟಾ ನ್ಯಾನೋ ಸ್ಥಾವರ ಸ್ಥಾಪಿಸಲು ಹೊರಟಿದ್ದು, ರೈತ ಬಚಾವ್ ಟಾಟಾ ಹಟಾವ್ ಎಂದು ಪ್ರತಿಭಟನೆ ಮಾಡಿದ್ದು ಮಮತಾ ಬ್ಯಾನರ್ಜಿ. ಇಲ್ಲಿ ಬಹುಪಾಲು ಅನುಕಂಪ ಮತ್ತು ಬೆಂಬಲ ಪಡೆದ ಮಮತಾ ಬ್ಯಾನರ್ಜಿ ದೊಡ್ಡ ಪಾಲು ಕಮ್ಯುನಿಸ್ಟರನ್ನೇ ಎತ್ತಿ ಬಗಲಿಗೆ ಹಾಕಿಕೊಂಡರು. ಇದು ಎರಡು ಬಾರಿ ಅಧಿಕಾರ ಹಿಡಿಯಲು ಅನುಕೂಲವಾಗುವಂತೆ ವಾತಾವರಣ ನಿರ್ಮಾಣ ಮಾಡಿತು. ವಿವಾದಗಳಿಗೆ ಮಮತಾಗೆ ಬಿಡಲಾರದ ನಂಟು. ಅವುಗಳನ್ನು ಒಮ್ಮೆ ನೋಡೋಣ.
ಅತ್ಯಾಚಾರದ ಹೆಚ್ಚಳ ಕುರಿತು – ತಾನು ಒಬ್ಬ ಸ್ತ್ರೀಯಾಗಿ, ಅತ್ಯಾಚಾರ ಪ್ರಕರಣಗಳು ಹೆಚ್ಚಲು “ಮಹಿಳೆಯರು ಮತ್ತು ಪುರುಷರ ನಡುವೆ ಹೆಚ್ಚಿನ ಸಲಿಗೆ ಬೆಳೆಯುತ್ತಿರುವುದೇ ಕಾರಣ. ಇದೊಂದು ತೆರೆದ ಮಾರುಕಟ್ಟೆಯ ಹಾಗೆ ಬಹಳ ಆಯ್ಕೆಗಳಿವೆ.” ಇದು ಆ ನಿಕೃಷ್ಟ ಮನೋಸ್ಥಿತಿಯನ್ನು ಬಿಂಬಿಸುತ್ತದೆ.
ದಿನೇಶ್ ತ್ರಿವೇದಿ ರಾದ್ಧಾಂತ – ಯಾರೇ ನಾಯಕರನ್ನು ತೆಗೆದುಕೊಳ್ಳಿ. ತನ್ನ ಪಕ್ಷದ ಒಬ್ಬ ಸಂಸದ ಬೆಳೆಯುತ್ತಿದ್ದರೆ ಹೆಮ್ಮೆ ಪಡುತ್ತಾರೆ. ಮಮತಾ ಬ್ಯಾನರ್ಜಿ ಹಾಗಲ್ಲ. 2009-10ರ ಸಾಲಿನಲ್ಲಿ ಕೇಂದ್ರ ರೈಲ್ವೆ ಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಎರಡು ವರ್ಷ ಸದರಿ ಇಲಾಖೆಯ ನಷ್ಟಕ್ಕೆ ದೂಡಿದ್ದರು. ಆಗ ರಾಜೀನಾಮೆ ನೀಡಿ, ತನ್ನ ಪಕ್ಷದ ದಿನೇಶ್ ತ್ರಿವೇದಿಗೆ ಮಂತ್ರಿಗಿರಿ ಕೊಡಿಸಿದರು. ನಂತರ ತ್ರಿವೇದಿ ಪ್ರತಿ ಕಿ.ಮೀ.ಗೆ 2.30 ಪೈಸೆ ದರ ಹೆಚ್ಚಿಸಿದರು. ಅದರಿಂದ ರೈಲ್ವೆ ಇಲಾಖೆಗೆ 4200 ಕೋಟಿ ರೂಪಾಯಿಗಳ ಲಾಭ ಅಂದಾಜಿಸಲಾಗಿದ್ದು, ಜನರು ಬೆಂಬಲ ನೀಡಿದ್ದರು. ಆ ಏಳಿಗೆಯ ಸಹಿಸದ ಮಮತಾ ಅವರಿಂದ ರಾಜೀನಾಮೆ ಕೊಡಿಸಿದರು. ಇಂತಹ ಅಸೂಯೆ ಯಾರಿಗೆ ಇರಲು ಸಾಧ್ಯ?
ಅಭಿವ್ಯಕ್ತಿ ಸ್ವಾತಂತ್ರ್ಯ – ದರಿದ್ರ ತುಕ್ಡೆ ಗ್ಯಾಂಗ್ ಬೆಂಬಲಕ್ಕೆ ನಿಲ್ಲುವ, ಟಿಎಂಸಿ ಕಾರ್ಯಕರ್ತರಿಗಷ್ಟೇ ಸ್ವಾತಂತ್ರ್ಯ ನೀಡುವ ಮಮತಾ ನಡೆದು ಬಂದ ದಾರಿ ಹಾಗಿದೆ. ಅವರ ವ್ಯಂಗ್ಯ ಚಿತ್ರಗಳನ್ನು ಬಿಡಿಸಿದರು ಎಂಬ ಕಾರಣಕ್ಕೆ ಜಾಧವಪುರ ವಿಶ್ವವಿದ್ಯಾಲಯದ ಅಂಬಿಕೇಶ್ ಮಹಾಪಾತ್ರರ ಜೈಲಿಗೆ ಕಳಿಸಿದ್ದರು. ಇದನ್ನು ಸಮರ್ಥನೆ ಮಾಡಿಕೊಂಡಿದ್ದರು. ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ ಅಲ್ಲವೇ? CNN-IBN ಸಂದರ್ಶನದಲ್ಲಿ ಸಾನಿಯಾ ಭಾರದ್ವಾಜ್ ಎಂಬ ವಿದ್ಯಾರ್ಥಿನಿಗೆ ಉತ್ತರಿಸಲಾಗದೆ ನೀವೆಲ್ಲಾ ಕಮ್ಯುನಿಸ್ಟರು ಎಂದು ಕೂಗಿಕೊಂಡು ಓಡಿ ಹೋಗಿದ್ದರು ಮಮತಾ. ಇಂತಹ ಇಬ್ಬಂದಿತನದ ಸೋಗು ಯಾರಿಗಿರಲು ಸಾಧ್ಯ?
ಕಾಮನಬಿಲ್ಲಿಗೂ ಜಾತಿಯ ಸೋಂಕು – ಸದಾ ತನ್ನ ಕುತ್ಸಿತ ರಾಜಕಾರಣಕ್ಕೆ ಹೆಸರುವಾಸಿಯಾದದ್ದು ಮಮತಾ ಬ್ಯಾನರ್ಜಿ. ಬಂಗಾಳೀ ಭಾಷೆಯಲ್ಲಿ ‘ರಾಮಧೋನು’ ಎಂದು ಕಾಮನಬಿಲ್ಲಿಗೆ ಕರೆಯಲಾಗುತ್ತದೆ. ಅಂದರೆ ಶ್ರೀರಾಮನ ಬಿಲ್ಲು ಎಂದರ್ಥ. ಆದರೆ ಅದನ್ನು 2017 ರಲ್ಲಿ ‘ರಂಗಧೋನು’ ಎಂದು ತಿದ್ದುಪಡಿ ಮಾಡಿದ ಮಮತಾ ಓಲೈಕೆ ರಾಜಕಾರಣದ ತುದಿ ತಲುಪಿದರು. ತುಷ್ಟೀಕರಣಕ್ಕೆ ಬೇರೆ ಯಾವ ಉದಾಹರಣೆ ಬೇಕು?
ದುರ್ಗಾ ಪೂಜೆ ನಿಷೇಧ – ಎರಡನೆಯ ಬಾರಿ ಮುಖ್ಯಮಂತ್ರಿ ಆದ ಮೇಲಂತೂ ಮಮತಾ ತಲೆ ತಿರುಗಿಹೋಯಿತು. ಹಿಂದೂ ಧರ್ಮವನ್ನು ತುಳಿಯಲು ಟೊಂಕ ಕಟ್ಟಿ ನಿಂತರು. ಬಂಗಾಳ ಎಂದೊಡನೆ ನೆನಪಾಗುವುದು ದುರ್ಗಾ ಪೂಜೆ, ಅದ್ದೂರಿ ಮೆರವಣಿಗೆಗಳು. ಇಂತಹ ಐತಿಹಾಸಿಕ ಹಿನ್ನೆಲೆಯ ಸಂಸ್ಕೃತಿಯ ಮಮತಾ ಒಂದು ವರ್ಗದ ತುಷ್ಟೀಕರಣಕ್ಕಾಗಿ ನಿಷೇಧಿಸಿದರು. ನೂರಾರು ವರ್ಷಗಳಿಂದ ಇಲ್ಲದ ಸಮಸ್ಯೆ ಈಗ ಬರಲು ಸಾಧ್ಯವೇ ಇಲ್ಲ. ಇದು ಓಲೈಕೆ ರಾಜಕಾರಣದ ಮತ್ತೊಂದು ಹಂತ. ಇಷ್ಟು ಕೆಳ ಮಟ್ಟದ ಚಿಂತನೆ ಯಾರಿಗಿರಲು ಸಾಧ್ಯ?
ಅಧಿಕಾರಿಗಳ ಆತ್ಮಹತ್ಯೆ- ತೀರ ಇತ್ತೀಚಿನ ಒಂದು ಘಟನೆ ತಿಳಿಯುವುದಾದರೆ, ಫೆಬ್ರವರಿ ತಿಂಗಳಿನಲ್ಲಿ ಮಾಜಿ ಐಪಿಎಸ್ ಅಧಿಕಾರಿ ಗೌರವ್ ದತ್ತ್ ಹತ್ತು ವರ್ಷಗಳಿಂದ ತನ್ನ ಉಳಿತಾಯ ಮತ್ತು ಸವಲತ್ತುಗಳನ್ನು ತಡೆ ಹಿಡಿಯಲಾಗಿದೆ ಹಾಗೂ ಸಾಕ್ಷಿಗಳೇ ಇರದ ಎರಡು ಕೇಸ್ಗಳನ್ನು ಮಮತಾ ಅನಾವಶ್ಯಕ ಎಳೆದು ಹಿಂಸಿಸುತ್ತಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡರು. ಇಂತಹ ಘಟನೆಗಳ ಯಾವ ಮಾಧ್ಯಮದಲ್ಲೂ ಹೆಚ್ಚು ಕಾಣುವುದಿಲ್ಲ ಯಾಕೆ?
ಶಾರದ ಚಿಟ್ ಫಂಡ್ ಹಗರಣ ಮತ್ತು ರೋಸ್ವ್ಯಾಲಿ ಹಗರಣ – ಭ್ರಷ್ಟಾಚಾರದ ತುತ್ತ ತುದಿ ತಲುಪಿರುವುದಕ್ಕೆ ಇದು ಮತ್ತೊಂದು ಸಾಕ್ಷಿ. ಈ ಹಗರಣ ಸಂಬಂಧ ಅನೇಕ ಮಂತ್ರಿಗಳು, ಅಧಿಕಾರಿಗಳು ಮತ್ತು ಸ್ವತಃ ತನ್ನ ಹೆಸರು ಬಂದಿದ್ದರೂ ಮಮತಾರದ್ದು ದಿವ್ಯ ಮೌನ. ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ತಮ್ಮ ಮನೆ, ಹಣ ಕಳೆದುಕೊಂಡು ಬೀದಿ ಪಾಲಾದ ಹಗರಣ. ಅವರು ಇದರಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಶಾರದಾ ಚಿಟ್ ಫಂಡ್ ಹಗರಣದ ಆರೋಪಿ ಮಮತಾ ರಚಿಸಿದ ಕೆಲಸಕ್ಕೆ ಬಾರದ ಚಿತ್ರವನ್ನು 1.8 ಕೋಟಿ ರೂಪಾಯಿಗಳ ಕೊಟ್ಟು ಖರೀದಿಸಿದ. ಹಾಗೆಯೇ ಇಪ್ಪತ್ತಕ್ಕೂ ಹೆಚ್ಚಿನ ಚಿತ್ರಗಳು ಶಾರದಾ ಚಿಟ್ ಫಂಡ್ ಸಂಸ್ಥೆಯ ಶೇರುದಾರರು ಕೊಂಡುಕೊಂಡಿದ್ದರು!
ತೆಹಲ್ಕಾ ಪತ್ರಿಕೆಯ ಮ್ಯಾಥ್ಯೂ ಸ್ಯಾಮುಯೆಲ್ ನಡೆಸಿದ ‘ನಾರದ ಕುಟುಕು ಕಾರ್ಯಾಚರಣೆ’ ಹಗರಣವನ್ನು ಬಟಾಬಯಲು ಮಾಡಿತ್ತು. ಸದರಿ ಹಗರಣದ ಸಂಬಂಧ ಮತ್ತೊಬ್ಬ ಆರೋಪಿ ಕೋಲ್ಕತ್ತದ ಪೋಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ವಿಚಾರಣೆಗೆ ಸಿಬಿಐ ತನಿಖಾ ತಂಡ ತೆರಳಿದ್ದಾಗ ಸಿಬಿಐ ಅಧಿಕಾರಿಗಳನ್ನು ಬಂಧಿಸಲಾಯಿತು. ಮಮತಾ ಬ್ಯಾನರ್ಜಿ ಅವರು ಧರಣಿ ಕೈಗೊಂಡರು. ಸುಪ್ರೀಂ ಕೋರ್ಟಿನ ನಿರ್ದೇಶನದ ಮೇರೆಗೆ ತಮ್ಮ ಧರಣಿ ಹಿಂಪಡೆದರು. ಹಾಗಾದರೆ ಪಶ್ಚಿಮ ಬಂಗಾಳಕ್ಕೆ ಬೇರೆಯೇ ಸಂವಿಧಾನ ಇದೆಯೇ?
ರೋಹಿಂಗ್ಯಾ ನಿರಾಶ್ರಿತರು- ಬಾಂಗ್ಲಾ ಮತ್ತು ಮಯನ್ಮಾರ್ಗಳ ನಿರಾಶ್ರಿತರಿಗೆ ಬ್ಯಾನರ್ಜಿ ಅಕ್ಷರಶಃ ಮಮತಾಮಯಿ ಆದರು. ಅವರಿಗಾಗಿ ಟೊಂಕ ಕಟ್ಟಿ ನಿಂತ ಇವರು ಲಕ್ಷಾಂತರ ಅಕ್ರಮ ಮತದಾರರನ್ನು ಸೃಷ್ಟಿಸಿಕೊಂಡರು. ಅಕ್ರಮ ವಲಸಿಗರ ವಿರುದ್ಧ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳಿಗೆ ಮಮತಾ ವಿರೋಧಿಯಾಗುವ ಹಿಂದಿನ ಕಾರಣ ನಿಗೂಢ ಅಲ್ಲವೇ?
ಇದಿಷ್ಟೇ ಅಲ್ಲದೆ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸಿದ ಅನ್ಯ ಪಕ್ಷೀಯರ ಮೇಲೆ ಹಲ್ಲೆ, ಕುಟುಂಬಸ್ಥರ ಮೇಲೆ ದೌರ್ಜನ್ಯ ಹೀಗೆ ಸಾಲು ಸಾಲು ದುರ್ನಡತೆಯ ತೋರಲಾಯಿತು. ಬೇಸತ್ತ ಅನೇಕ ಟಿಎಂಸಿ ನಾಯಕರು ಅನ್ಯ ಪಕ್ಷಗಳ ಸೇರಿದರು.
ಇತ್ತೀಚೆಗೆ ನಡೆದ ಲೋಕ ಚುನಾವಣಾ ಸಂದರ್ಭದಲ್ಲಿ ಬಂಗಾಳದಲ್ಲಿ ಚುನಾವಣೆ ನಡೆದ ಪರಿಯನ್ನು ಅನೇಕ ವಿಡಿಯೋಗಳು ಜಗಜ್ಜಾಹಿರು ಮಾಡಿದ್ದವು. ಪರಿಣಾಮವಾಗಿ, ಒಟ್ಟು 42 ಲೋಕಸಭಾ ಕ್ಷೇತ್ರಗಳಲ್ಲಿ 34ರಿಂದ 22 ಸ್ಥಾನಗಳಿಗೆ ಟಿಎಂಸಿ ಕುಸಿದಿದೆ. ಅಲ್ಲದೆ ಮೋದಿಯವರು ತೃಣಮೂಲ ಕಾಂಗ್ರೆಸ್ನ ಸುಮಾರು 40ಕ್ಕೂ ಹೆಚ್ಚು ಶಾಸಕರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದಿದ್ದರು. ಯಾವಾಗ ತನ್ನ ಎಲ್ಲ ಪ್ರಯತ್ನಗಳು ಕೈ ಕೊಟ್ಟವೋ ಆಗ ರಾಜೀನಾಮೆ ಪ್ರಹಸನ ಆರಂಭಿಸಲಾಯಿತು.
ಜೈ ಶ್ರೀರಾಮ್ ವಿವಾದ – ಭಾರತದೆಲ್ಲೆಡೆ ಯಾರೇ ಎದುರಾಗಲಿ ಜೈ ಶ್ರೀರಾಮ್, ಜೈ ಶ್ರೀಕೃಷ್ಣ, ಜೈ ಜಿನೇಂದ್ರ ಹೀಗೆ ಅನೇಕ ರೀತಿಯಲ್ಲಿ ಸಂಭೋದಿಸಿ ಮಾತನಾಡಿಸುವ ಪದ್ಧತಿ ಇದೆ. ಆದರೆ ಲೋಕ ಚುನಾವಣೆ ಮುಗಿದ ಮೇಲೆ ಮತಿಗೆಟ್ಟವರಂತೆ ಆಡುತ್ತಿರುವ ಮಮತಾ ಬ್ಯಾನರ್ಜಿ ಯಾರೇ ಜೈ ಶ್ರೀರಾಮ್ ಎಂದರೂ ಚೇಳು ಕುಟುಕಿದಂತೆ ಆಡುತ್ತಿದ್ದಾರೆ. ಘೋಷಣೆ ಕೂಗಿದವರನ್ನು ಬಂಧಿಸಲಾಗಿದೆ ಎಂದರೆ ಅವರ ಸ್ತಿಮಿತ ಎಲ್ಲಿಗೆ ಮುಟ್ಟಿದೆ ಎಂದು ಅರ್ಥವಾಗುತ್ತದೆ.
ವಕೀಲರಾದ ಪಾರ್ಥ ಘೋಷ್ರವರು ಕೋಲ್ಕತ್ತ ಹೈಕೋರ್ಟ್ಗೆ ಸಲ್ಲಿಸಿದ ಮನವಿಯಲ್ಲಿ ಜೈ ಶ್ರೀರಾಮ್ ಎಂದು ಹೇಳುವುದು ಹಿಂದೂಗಳ ಸಾಂವಿಧಾನಿಕ ಹಕ್ಕು. ಇದಕ್ಕೆ ಸರ್ಕಾರ ತಡೆ ಒಡ್ಡಬಾರದು ಎಂದು ಹೇಳಿದ್ದಾರೆ. ಆದರೆ ಮೂರು ಕಾಸುಗಳ ನಟನಿಗೆ, ಸತ್ತ ರಾಜಕಾರಣಿಗಳಿಗೆ ಮಧ್ಯ ರಾತ್ರಿ ತೆರೆದುಕೊಳ್ಳುವ ನಮ್ಮ ನ್ಯಾಯಾಂಗ ವ್ಯವಸ್ಥೆ ಇದಕ್ಕೆ ನಾಲ್ಕು ವಾರಗಳ ಸಮಯ ತೆಗೆದುಕೊಂಡಿದೆ. ಹಾಗಾದರೆ ಈ ನಡುವಿನ ಸಮಯದಲ್ಲಿ ನಡೆಯುವ ಸಾವು ನೋವಿನ ಜವಬ್ದಾರಿ ಯಾರದು?
ವೈದ್ಯರ ಮುಷ್ಕರ – ಒಂದು ವಾರದ ಹಿಂದೆ ಕೋಲ್ಕತ್ತದ ಸರ್ಕಾರೀ ಆಸ್ಪತ್ರೆಯಲ್ಲಿ ಮೃತನಾದ ವ್ಯಕ್ತಿಯ ಸಂಬಂಧಿಕರು ವೈದ್ಯಾಧಿಕಾರಿಗೆ ಥಳಿಸಿದ ಘಟನೆ ನಡೆಯಿತು. ಹಲ್ಲೆ ಮಾಡಿದವರು ಟಿಎಂಸಿ ಕಾರ್ಯಕರ್ತರು ಎಂದು ದೃಢಪಟ್ಟಿದೆ. ಆದರೆ ಈ ಬಗ್ಗೆ ಕ್ಯಾರೇ ಅನ್ನದ ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರನ್ನು ನಿಂದಿಸಿದರು. ಆ ಸಂಬಂಧ ದೇಶವ್ಯಾಪಿ ಮುಷ್ಕರ ನಡೆದು, ಸುಮಾರು ಐನೂರಕ್ಕೂ ಹೆಚ್ಚಿನ ವೈದ್ಯರು ರಾಜೀನಾಮೆ ನೀಡಿದ್ದರು. 3.70 ಲಕ್ಷ ವೈದ್ಯರ ಬೆಂಬಲವೂ ದೊರೆತಿತ್ತು.
ಮಮತಾ ಬ್ಯಾನರ್ಜಿಯ ಉದ್ಧಟತನದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಮಿತ್ ಷಾ, ಮೋದಿ ಮತ್ತು ಯೋಗಿ ಆದಿತ್ಯನಾಥರಿಗೆ ಸಭೆಗಳನ್ನು ನಡೆಸಲು ಅನುಮತಿ ನೀಡಿರಲಿಲ್ಲ. ಎಷ್ಟು ಕೆಳಮಟ್ಟದ ರಾಜಕೀಯ ಮಾಡುತ್ತಾರೆ ಎಂದರೆ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಕೇವಲ ಟಿಎಂಸಿ ಕಾರ್ಯಕರ್ತರಿಂದ ಹತ್ಯೆಗೊಂಡ ಕುಟುಂಬದವರನ್ನು ಆಹ್ವಾನಿಸಿದ ಒಂದೇ ಕಾರಣಕ್ಕೆ ಮಮತಾ ಬ್ಯಾನರ್ಜಿ ಬರಲಿಲ್ಲ. ‘ಪರಿವರ್ತನೆ’ ಎಂಬ ಹೆಸರಿನಲ್ಲಿ ಅಧಿಕಾರ ಹಿಡಿದ ಮಮತಾ ಬ್ಯಾನರ್ಜಿ ಮಾಡುತ್ತಿರುವುದೇನು? ಅನಭಿಷಿಕ್ತ ರಾಣಿಯಂತೆ ಮೆರೆಯುವ ಗುಂಗು ಹತ್ತಿಸಿಕೊಂಡಂತೆ ಕಾಣುತ್ತಿದೆ.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.