ನಾನು ಯಾವಾಗಲೂ ಹೇಳುತ್ತೇನೆ ಹಿಂದುತ್ವವು ಮಾನವೀಯತೆಗೆ ಅತ್ಯುತ್ತಮ ಆಯ್ಕೆ ಎಂದು. ಹಿಂದುತ್ವ ಭಾರತದಿಂದ ಭಾರತಕ್ಕೆ ಮತ್ತು ಜಗತ್ತಿಗೆ ನೀಡಲ್ಪಟ್ಟ ಉಡುಗೊರೆಯಾಗಿದೆ ಮತ್ತು ಯೋಗವು ಹಿಂದುತ್ವದೊಂದಿಗೆ ಚೆನ್ನಾಗಿ ಬೆರೆತುಕೊಂಡಿದೆ. ನಾನು ಯಾವಾಗಲೂ ಯೋಗದ ಪ್ರೇಮಿ, ಯಾಕೆಂದರೆ ಅದು ನಿಜವಾಗಿಯೂ ಮನಸ್ಸು, ದೇಹ ಮತ್ತು ಆತ್ಮಕ್ಕೆ ಮಾಂತ್ರಿಕ ಶಕ್ತಿಯನ್ನು ತುಂಬುತ್ತದೆ. ಯೋಗವು ಮನಸ್ಸು, ದೇಹ ಮತ್ತು ಆತ್ಮವನ್ನು ಒಟ್ಟುಗೂಡಿಸುತ್ತದೆ, ಅದರಿಂದ ನಮ್ಮ ದೇಹ ಮತ್ತು ಚಿಂತನೆಯು ಸಾಮರಸ್ಯವನ್ನು ಪಡೆಯುತ್ತದೆ. ದುರದೃಷ್ಟವಶಾತ್, ಹೆಚ್ಚಿನ ಪಾಶ್ಚಾತ್ಯರು ಯೋಗದ ಬಗ್ಗೆ ತಪ್ಪು ಗ್ರಹಿಕೆ ಹೊಂದಿದ್ದಾರೆ.
ಅಮೆರಿಕಾದಲ್ಲಿ ಯೋಗವು ಬೃಹದಾಕಾರವಾಗಿ ಬೆಳೆಯುತ್ತಿದೆ. 2012 ರಲ್ಲಿ ಯೋಗ ಉದ್ಯಮದ ಆದಾಯ 6.9 ಬಿಲಿಯನ್ ಆಗಿದ್ದರೆ, 2020 ರ ವೇಳೆಗೆ ಅದು 11.56 ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ದುಃಖದ ವಿಷಯವೆಂದರೆ, ಹಣ ಮಾಡುವ ಸಲುವಾಗಿಯೇ ಅಮೆರಿಕದಲ್ಲಿ ಬಹಳಷ್ಟು ಮಂದಿ ಯೋಗ ಶಿಕ್ಷಕರಾಗಿ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಅವರು ಯೋಗದ ಆಧ್ಯಾತ್ಮಿಕತೆ ಮತ್ತು ಅದರ ಮೂಲ ಅಂಶಗಳಿಂದ ದೂರವೇ ಉಳಿಯುತ್ತಿದ್ದಾರೆ.
ನಾನು ಯೋಗ ತರಗತಿಗಳಿಗೆ ಹೋಗಿದ್ದೇನೆ, ಅವರು ಬಳಸುವ ವಿಭಿನ್ನ ಶೈಲಿಗಳು ಮತ್ತು ವಿಧಾನಗಳ ಬಗ್ಗೆ ನೋಡಿದ್ದೇನೆ ಮತ್ತು ಕೇಳಿದ್ದೇನೆ. ಆದರೆ ಅದು ಕೇವಲ ಒಂದು ರೀತಿಯ ವ್ಯಾಯಾಮವಾಗಿದೆ. ಅಂತಹ ತರಗತಿಗಳಲ್ಲಿ ಕೆಲವು ಯೋಗ ಮಾದರಿಗಳನ್ನು ಬಳಸಿಕೊಂಡು ಬೊಜ್ಜು ಕರಗಿಸಲು ಸ್ಕ್ವಾಟ್ಗಳನ್ನು ಮತ್ತು ಪುಷ್ ಅಪ್ಗಳನ್ನು ಮಾಡಿಸುತ್ತಾರೆ. ಅವರು ನಮ್ಮನ್ನು ಪರಿವರ್ತಿಸುವ ಯೋಗದ ನಿಜವಾದ ಉದ್ದೇಶ, ಮೂಲ ಆಶಯಗಳಿಂದ ದೂರವೇ ಉಳಿದುಕೊಂಡಿದ್ದಾರೆ. ಯೋಗ ಎಂಬುದು ಕೇವಲ ವ್ಯಾಯಾಮ ಅಲ್ಲ, ಅದು ನಮ್ಮನ್ನು ನಾವು ಕಂಡುಕೊಳ್ಳುವ ಬಗೆ.
ಇಂದು ಜನರು ನಿರಾಳತೆಯನ್ನು ಪಡೆದುಕೊಳ್ಳುವ ದಾರಿ ಕಾಣದೆ ಆತಂಕಕ್ಕೊಳಗಾಗುತ್ತಾರೆ, ನಿರಾಶರಾಗುತ್ತಾರೆ. ಅಂತಹವರಿಗೆ ಯೋಗವು ಸಾಕಷ್ಟು ಸಹಾಯ ಮಾಡುತ್ತದೆ, ಆದರೆ ದೇಶಾದ್ಯಂತದ ಇರುವ ಯೋಗ ಸ್ಟುಡಿಯೋಗಳು ಯೋಗವನ್ನು ಅದರ ಮೂಲ ಸ್ವರೂಪಕ್ಕಿಂತ ವಿಭಿನ್ನವಾಗಿ ಬಿಂಬಿಸುತ್ತಿವೆ. ಭಾರತದಿಂದ ನಮಗೆ ಉಡುಗೊರೆಯಾಗಿ ಸಿಕ್ಕ ಯೋಗದ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅಮೆರಿಕಾದಲ್ಲಿ ಮುಖ್ಯವಾಹಿನಿಯ ಯೋಗವು ಒಂದರ್ಥದಲ್ಲಿ ಹಠ ಯೋಗದಂತೆಯೇ ಇರಬಹುದು ಆದರೆ ಅದು ಸಾಂಪ್ರದಾಯಿಕ ಪ್ರಕಾರಗಳಿಗಿಂತ ತುಂಬಾ ಭಿನ್ನವಾಗಿದೆ. ಹಲವರು ಯೋಗದ ಬಗ್ಗೆ ಅಸ್ಪಷ್ಟ ಪರಿಕಲ್ಪನೆಯನ್ನು ಹೊಂದಿದ್ದಾರೆಂಬುದು ಅಲ್ಲಿ ಎದ್ದು ಕಾಣುತ್ತದೆ. ಬಹುಶಃ ಅದರಲ್ಲೂ ಕೆಲವು ಪ್ರಯೋಜನಗಳಿರಬಹುದು ಆದರೆ ಸಾಂಪ್ರದಾಯಿಕ ಯೋಗವು ಅದರ ಮೂಲ ರೂಪದಲ್ಲಿ ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ನಿಜ ಅರ್ಥದಲ್ಲಿ ಅದು ಪರ್ಯಾಯ ಔಷಧಿಯಿದ್ದಂತೆ. ಯೋಗದ ನೈಜ ಕಲೆಗಳನ್ನು ಅನ್ವೇಷಿಸಲು ಬಯಸುವ ಯಾರಿಗೂ ಅದರ ಪ್ರಯೋಜನಗಳ ಪಟ್ಟಿಯನ್ನು ನೀಡಿದರೆ ಸಾಕು. ಅವರು ಅದರೊಳಗೆ ಆಳವಾಗಿ ಇಳಿದು ಬಿಡುತ್ತಾರೆ.
ಯೋಗಕ್ಕೆ ಒತ್ತಡ ಕಡಿಮೆ ಮಾಡುವ, ಸಮತೋಲನ ವೃದ್ಧಿಸುವ, ಬಲಿಷ್ಠತೆ ಹೆಚ್ಚಿಸುವ, ಕಡಿಮೆ ರಕ್ತದೊತ್ತಡ ಸಮಸ್ಯೆ ನೀಗಿಸುವ, ಬೊಜ್ಜು ಕರಗಿಸುವ, ಮೂಡನ್ನು ಬದಲಿಸುವ, ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ, ಗಾಯ ಗುಣಪಡಿಸುವ, ಆಧ್ಯಾತ್ಮಿಕತೆಯನ್ನು ಉತ್ತೇಜಿಸುವ ಮ್ಯಾಜಿಕ್ ಇದೆ. ಯೋಗವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಪ್ರತಿಯಾಗಿ ಸಕಾರಾತ್ಮಕ ಆಲೋಚನೆಗಳನ್ನು ಉಂಟುಮಾಡುವ ಸ್ನಾಯುಗಳನ್ನು ಸಡಿಲಗೊಳಿಸಿ ನರಗಳನ್ನು ಶಾಂತಗೊಳಿಸುತ್ತದೆ. ಯೋಗವು ಖಿನ್ನತೆಯನ್ನು ದೂರ ಮಾಡುತ್ತದೆ ಮತ್ತು ಆತಂಕವನ್ನು ಕುಗ್ಗಿಸುತ್ತದೆ. ಯೋಗವನ್ನು ಸಕ್ರಿಯವಾಗಿ ಅಭ್ಯಾಸ ಮಾಡಿದರೆ ಯಾರೊಬ್ಬರೂ ಔಷಧಿಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರುವುದೇ ಇಲ್ಲ.
ಪಾಶ್ಚಾತ್ಯರು ಯೋಗದ ಕೆಲವು ಸ್ವರೂಪಗಳನ್ನು ಮಾತ್ರ ಮಾಡುತ್ತಿದ್ದಾರೆ, ಆದರೆ ದುಃಖಕರವೆಂದರೆ, ಭಾರತದಲ್ಲಿ ವಾಸಿಸುವ ಅನೇಕ ಜನರು ಯೋಗವನ್ನು ಅಭ್ಯಾಸ ಮಾಡುವುದೇ ಇಲ್ಲ. ಭಾರತದಲ್ಲಿ ಅನೇಕರು ಭಾರ ಎತ್ತುವ ಅಥವಾ ಕಾರ್ಡಿಯೊದಂತಹ ಪಾಶ್ಚಾತ್ಯ ರೀತಿಯ ವ್ಯಾಯಾಮವನ್ನು ಹಲವಾರು ಮಂದಿ ಭಾರತೀಯರು ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆ ಶೈಲಿಯ ವ್ಯಾಯಾಮಗಳು ಅದ್ಭುತವಾದವುಗಳು ಆದರೆ ಯೋಗವು ನಮ್ಮನ್ನು ಸರಿಯಾದ ದಾರಿಯಲ್ಲಿ ಇಡುವುದರಿಂದ ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಯೋಗ ಅಭ್ಯಾಸವನ್ನು ನಾವು ಮಾಡಿಕೊಳ್ಳಬೇಕು. ನಮ್ಮ ಪ್ರಕ್ಷುಬ್ಧ ಜೀವನಕ್ಕೆ ಯೋಗವು ಪ್ರತಿನಿರೋಧಕವಾಗಿದೆ. ಹಿಂದೂ ಧರ್ಮ ಮತ್ತು ಯೋಗದ ಪ್ರಾಚೀನ ಬೋಧನೆಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುತ್ತದೆ ಮತ್ತು ಪರಿವರ್ತಿಸುತ್ತದೆ. ತಮ್ಮನ್ನು ಪುನಃ ಕಂಡುಕೊಳ್ಳಲು ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಲೇಬೇಕು.
ಯೋಗವನ್ನು ಅಭ್ಯಾಸ ಮಾಡಲು ಆರಂಭಿಸಿದಾಗ ನಾವು ಹಿಂದೆಂದೂ ನೋಡದಂತಹ ನಮ್ಮ ಬಗೆಗಿನ ವಿಷಯಗಳನ್ನು ಕಲಿಯಲು ಮತ್ತು ಅನ್ವೇಷಿಸಲು ಪ್ರಾರಂಭಿಸುತ್ತೇವೆ. ನಾವು ಜಗತ್ತು ಮತ್ತು ಪ್ರಾಣಿಗಳ ಬಗ್ಗೆ ಹೆಚ್ಚು ಸಹಾನುಭೂತಿಯನ್ನು ಹೊಂದಲು ಆರಂಭಿಸುತ್ತೇವೆ ಮತ್ತು ಸಸ್ಯಾಹಾರಿಗಳಾಗಿ ಪರಿವರ್ತನೆಗೊಳ್ಳಲೂ ಬಹುದು. ಇದು ಯೋಗದ ಆಧ್ಯಾತ್ಮಿಕ ಭಾಗ, ಯೋಗದ ಮಾಂತ್ರಿಕ ಭಾಗ, ಇದು ವಿವರಿಸಲಾಗದ್ದು ಆದರೆ ನಿಜವಾದುದ್ದು. ಅಂದರೆ ಕಣ್ಣಿಗೆ ಕಾಣದಿದ್ದರೂ ಅಚಲವಾಗಿರುವ ನಂಬಿಕೆಯಾಗಿದೆ. ಇದು ಭಾರತದ ಪ್ರಾಚೀನ ಆಚರಣೆಯ ಸೌಂದರ್ಯ ಮತ್ತು ಮಾಂತ್ರಿಕ ಶಕ್ತಿಯಾಗಿದೆ. ಆಧುನಿಕ ಜಗತ್ತಿಗೆ ಯೋಗವು ಪ್ರಾಚೀನ ಕೊಡುಗೆಯಾಗಿದೆ. ಜಗತ್ತಿಗೆ ಭಾರತವು ನೀಡಿದ ಅನೇಕ ಉಡುಗೊರೆಗಳು ಮತ್ತು ಕೊಡುಗೆಗಳಲ್ಲಿ ಇದೂ ಒಂದಾಗಿದೆ!
Renee Lynn
(The writer is a social activist and founder of Voice for India Project
through which she tells the world about the real India )
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.