ಹಿರಿಯರನ್ನು ಗೌರವಿಸುವುದು ಭಾರತೀಯ ಸಂಸ್ಕಾರದ ಅವಿಭಾಜ್ಯ ಭಾಗ. ಹಿರಿತನ ಮತ್ತು ಹಿರಿಯರನ್ನು ಗೌರವಿಸದವ ಜೀವನದಲ್ಲಿ ಎಂದಿಗೂ ಶ್ರೇಯಸ್ಸನ್ನು ಗಳಿಸಲಾರ ಎಂಬುದು ಭಾರತೀಯರ ಬಲವಾದ ನಂಬಿಕೆ. ತಂದೆ ತಾಯಿಯೇ ಆಗಿರಲಿ, ಗುರು ಹಿರಿಯರೇ ಆಗಿರಲಿ, ಇವರೆಲ್ಲಾ ಗೌರವಕ್ಕೆ, ಪ್ರೀತಿ ಔದಾರ್ಯಕ್ಕೆ ಅರ್ಹರಾದವರು. ಯವ್ವನವನ್ನು ದಾಟಿ ಅಪರಿಮಿತವಾದ ಅನುಭವಗಳೊಂದಿಗೆ ಹಿರಿತನವನ್ನು ಅಪ್ಪಿಕೊಂಡ ಇವರಿಗೆ ಕಿರಿಯರಾದ ಎಲ್ಲರೂ ಗೌರವವನ್ನು ನೀಡಲೇಬೇಕು.
ಇಂದು ವಿಶ್ವ ಹಿರಿಯರ ನಿಂದನಾ ಜಾಗೃತಿ ದಿನ. ಪ್ರತಿ ವರ್ಷ ಜೂನ್ 15ರಂದು ಹಿರಿಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಮತ್ತು ಅವರ ಸಂಕಷ್ಟಗಳ ವಿರುದ್ಧ ಧ್ವನಿ ಎತ್ತುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಹಿರಿಯರ ನಿಂದನೆಯ ತಡೆಗಾಗಿ ಇರುವ ಅಂತಾರಾಷ್ಟ್ರೀಯ ನೆಟ್ವರ್ಕ್ ನ ಮನವಿಗೆ ಓಗೊಟ್ಟು 2011ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ದಿನವನ್ನು ಆಚರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಜಗತ್ತಿನಲ್ಲಿ ಇಂದು ಹಿರಿಯರು ನಾನಾ ತರನಾದ ನಿಂದನೆಗಳಿಗೆ, ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ರೂಢಿಸಿಕೊಂಡಿರುವ ಭಾರತದಲ್ಲೂ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಹಿರಿಯರ ಸಂಖ್ಯೆ ಕಡಿಮೆಯಿಲ್ಲ. ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಹಿರಿಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅದು ಕೂಡ ತಮ್ಮ ಸ್ವಂತ ಮನೆಯಲ್ಲಿ, ತಮ್ಮ ಸ್ವಂತ ಮಕ್ಕಳು ಮರಿಗಳಿಂದಲೇ ನಿಂದನೆಗಳನ್ನು ಅನುಭವಿಸುವ ಹಿರಿಯರ ಸಂಖ್ಯೆ ಹೆಚ್ಚಿದೆ. ಕೌಟುಂಬಿಕ ಮೌಲ್ಯಗಳು ಕುಸಿತ ಕಂಡಿರುವುದೇ ಹಿರಿಯರ ಈ ದುಃಸ್ಥಿತಿಗೆ ಪ್ರಮುಖ ಕಾರಣ.
ದುಡಿದು ತಿನ್ನುವ ತನಕ ಮಾತ್ರ ಮನುಷ್ಯನ ಅಸ್ತಿತ್ವಕ್ಕೊಂದು ಬೆಲೆ ಇರುತ್ತದೆ, ದುಡಿಮೆ ನಿಂತಾದ ಮೇಲೆ ವ್ಯಕ್ತಿ ತನ್ನ ಕುಟುಂಬಕ್ಕೆ ಭಾರವಾಗಿ ಹೋಗುತ್ತಾನೆ. ಅದರಲ್ಲೂ ಹಣವಿಲ್ಲದ, ಅನಾರೋಗ್ಯ ಪೀಡಿತ ಹಿರಿಯರನ್ನು ಅವರ ಹತ್ತಿರದವರೇ ಅಸಡ್ಡೆ, ಅಸಹನೆಯಿಂದ ನೋಡುತ್ತಾರೆ,ಅವರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ.
ವಿಶ್ವಸಂಸ್ಥೆಯ ವರದಿಯ ಪ್ರಕಾರ, ಪ್ರತಿ 6 ಮಂದಿಯಲ್ಲಿ ಒಬ್ಬ ಹಿರಿಯ ವ್ಯಕ್ತಿ ಒಂದಲ್ಲ ಒಂದು ವಿಧದ ನಿಂದನೆಗೆ ಒಳಗಾಗುತ್ತಾರೆ. ಇಂತಹ ನಿಂದನೆಗಳು ದಿರ್ಘಾವಧಿಯ ದೈಹಿಕ ಗಾಯ ಮತ್ತು ಮಾನಸಿಕ ಅಸ್ವಸ್ಥತೆಯನ್ನೂ ಉಂಟು ಮಾಡಬಲ್ಲದು. ತಮ್ಮನ್ನು ಕಷ್ಟಪಟ್ಟು ಬೆಳೆಸಿದ್ದಾರೆ, ವಿದ್ಯೆ ಕೊಡಿಸಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳದ ಎಷ್ಟೋ ಮಕ್ಕಳು ತಮ್ಮ ತಂದೆ ತಾಯಿಯನ್ನು ಅನಾಥಾಶ್ರಮದಲ್ಲಿ ಬಿಡುತ್ತಿದ್ದಾರೆ. ಕೊನೆಯುಸಿರು ಇರುವವರೆಗೂ ಅಲ್ಲೇ ಮಕ್ಕಳ ನೆನಪಿನಲ್ಲಿ ಆ ಹಿರಿ ಜೀವಗಳು ಬದುಕುತ್ತವೆ.
ವಯಸ್ಸಾದ ಕಾಲದಲ್ಲಿ ಮನುಷ್ಯನಿಗೆ ಬೇಕಾಗಿರುವುದು ತನ್ನವರ ಬೆಂಬಲ ಮಾತ್ರ. ದೇಹ ದುರ್ಬಲವಾದಾಗ, ಮನಸ್ಸು ವಿಚಲಿತಗೊಂಡಾಗ ಸಾಂತ್ವನ ನೀಡುವ, ಆಧಾರಸ್ತಂಭವಾಗಿ ನಿಲ್ಲುವ ಬಂಧುಗಳನ್ನು ಹಿರಿಜೀವಗಳು ಅಪೇಕ್ಷಿಸುತ್ತವೆ. ಈ ಅಪೇಕ್ಷೆಯನ್ನು ಈಡೇರಿಸುವ ಕರ್ತವ್ಯ ಪ್ರತಿ ಕಿರಿಯರದ್ದು ಆಗಿರುತ್ತದೆ.
ಪ್ರತಿ ಮನುಷ್ಯ ಕೂಡ ಯವ್ವನವನ್ನು ದಾಟಿ ಮುಪ್ಪನ್ನು ಹೊಂದಲೇ ಬೇಕು. ಮುಪ್ಪಿನ ಕಾಲದಲ್ಲಿ ತನ್ನ ಬದುಕು ಚೆನ್ನಾಗಿರಬೇಕೆಂದು ಬಯಸುವ ಪ್ರತಿ ವ್ಯಕ್ತಿ ಕೂಡ ತನ್ನ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಲೇ ಬೇಕು. ಈ ವಿಷಯದಲ್ಲಿ ಕರ್ಮ ಯಾರನ್ನೂ ಬಿಡುವುದಿಲ್ಲ ಎಂಬುದನ್ನು ಎಲ್ಲರು ಅರ್ಥ ಮಾಡಿಕೊಳ್ಳಲೇಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.