ಎಂಜಿನಿಯರ್ ಆಗುವುದು ಬಹುತೇಕ ಮಂದಿಯ ಕನಸಾಗಿರುತ್ತದೆ. ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವವನ್ನು ಈ ವೃತ್ತಿ ತಂದುಕೊಡುತ್ತದೆ ಎಂಬ ಅನಿಸಿಕೆ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಅದಕ್ಕಾಗಿಯೇ ಅದೆಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಎಂಜಿಯರ್ ಆಗು ಎಂದು ಒತ್ತಡ ಹಾಕುತ್ತಲೇ ಇರುತ್ತಾರೆ. ಇನ್ನು ಕೆಲ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರ ಬೇರೆಯದ್ದೇ ಇದ್ದರೂ, ಸುಖ ಜೀವನದ ಕನಸಿನೊಂದಿಗೆ ಎಂಜಿನಿಯರ್ ಮಾಡುತ್ತಾರೆ ಉದ್ಯೋಗಕ್ಕೂ ಸೇರುತ್ತಾರೆ. ಇಂತಹ ಒಂದಿಷ್ಟು ಮಂದಿ ಭವಿಷ್ಯದಲ್ಲೊಂದು ದಿನ ಈ ಉದ್ಯೋಗ ನನ್ನ ಆಯ್ಕೆಯಲ್ಲ ಎಂಬುದನ್ನು ಮನಗಂಡು ತಮ್ಮ ಆಸಕ್ತಿಯ ಕ್ಷೇತ್ರಕ್ಕೆ ಮರಳುವ ಪ್ರಯತ್ನವನ್ನು ಮಾಡುತ್ತಾರೆ. ಅಂತಹವರಲ್ಲಿ ಈ ಐವರು ಕೂಡ ಸೇರಿದ್ದಾರೆ.
ನಾಲ್ಕು ವರ್ಷದ ಪದವಿ, ಕೈತುಂಬಾ ಸಂಬಳ ನೀಡುವ ಉದ್ಯೋಗವನ್ನು ಬಿಟ್ಟು ಆರೋಗ್ಯಯುತವಾದ ಜೀವನವನ್ನು ನಡೆಸಬೇಕು ಎಂಬ ಉದ್ದೇಶದೊಂದಿಗೆ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅದರಲ್ಲಿ ಯಶಸ್ವಿಯಾದ ಐವರು ಎಂಜಿನಿಯರ್ಗಳ ಯಶೋಗಾಥೆ ಇಲ್ಲಿದೆ.
1. ಹರೀಶ್ ಧನ್ದೇವ್, ಜೈಸಲ್ಮೇರ್ (ರಾಜಸ್ಥಾನ)
ಜೈಸಲ್ಮೇರ್ನ ಆರ್ಯ ಎಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿಯನ್ನು ಪಡೆದುಕೊಂಡಿರುವ ಇವರು, 2013ರಲ್ಲಿ ಮುನ್ಸಿಪಲ್ ಕಾರ್ಪೋರೇಶನಿನಲ್ಲಿ ಕಿರಿಯ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದರು. ಇವರ ತಂದೆ ನಿವೃತ್ತಿಯ ಬಳಿಕ ತಮ್ಮ ಪೂರ್ವಜನರ 80 ಎಕರೆ ಭೂಮಿಯಲ್ಲಿ ಕೃಷಿಯನ್ನು ಮಾಡಲು ಮುಂದಾದಾಗ ಹರೀಶ್ ಅವರಿಗೆ ಕೃಷಿಯಲ್ಲಿ ಆಸಕ್ತಿ ಹೆಚ್ಚಾಯಿತು. ಅಲ್ಲಿಂದ ಕೃಷಿ ಚಟುವಟಿಕೆಯಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡರು.
ಕೃಷಿಯಲ್ಲಿ ತೊಡಗುತ್ತಿದ್ದ ಸಂದರ್ಭದಲ್ಲಿ, ಅನೇಕ ರೈತರು ಕಷ್ಟಪಟ್ಟು ದುಡಿಯುತ್ತಾರೆ, ಆದರೆ ಅವರಿಗೆ ಹೆಚ್ಚಿನ ಜ್ಞಾನವಿಲ್ಲ, ಆದ್ದರಿಂದಲೇ ಅವರು ತಮ್ಮ ಕೃಷಿಯಲ್ಲಿ ಅತ್ಯುತ್ತಮ ಸಾಧನೆ ಮಾಡಲು ವಿಫಲರಾಗಗುತ್ತಿದ್ದಾರೆ ಎಂಬುದನ್ನು ಹರೀಶ್ ಗಮನಿಸಿದರು. ನಿಧಾನವಾಗಿ, ಸಮಯ ಕಳೆದಂತೆ, ಹರೀಶ್ ಅವರು ಎಂಜಿನಿಯರ್ ಆಗಿ ಕಲಿತ ಕೌಶಲ್ಯಗಳನ್ನು ಮತ್ತು ಯೋಜನೆಗಳನ್ನು ಕೃಷಿಗೆ ಅನ್ವಯಿಸಲು ಮುಂದಾದರು ಮತ್ತು ಅದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರು. ಆದರೆ ಈ ಸಂದರ್ಭದಲ್ಲೂ ಅವರಿಗೆ ಉತ್ತಮ ಸಂಬಳ ನೀಡುವ, ಸ್ಥಿರವಾದ ಸರ್ಕಾರಿ ಕೆಲಸವನ್ನು ತೊರೆದು ಅಪರಿಚಿತ ಕೃಷಿ ವಲಯದತ್ತ ಹಾರುವುದಕ್ಕೆ ಅಂಜಿಕೆ ಇತ್ತು.
ಆದರೆ ಕೆಲವು ತಿಂಗಳುಗಳು ನಂತರ ಅವರು ತಮ್ಮ ಜೀವನವನ್ನೇ ಬದಲಾಯಿಸುವ ದೃಢ ನಿರ್ಧಾರವನ್ನು ತೆಗೆದುಕೊಂಡರು, ಹರೀಶ್ ಅಂತಿಮವಾಗಿ ತನ್ನ ಕೆಲಸವನ್ನು ತ್ಯಜಿಸಿದರು ಮತ್ತು ಕೃಷಿಯನ್ನು ಪೂರ್ಣ ಸಮಯದ ವೃತ್ತಿಜೀವನವನ್ನಾಗಿ ತೆಗೆದುಕೊಳ್ಳುವ ಧೈರ್ಯವನ್ನು ಮಾಡಿದರು. ಅಲೋವೆರಾವನ್ನು ಸಾವಯವವಾಗಿ ಬೆಳೆಯಲು ಆರಂಭಿಸಿದ ಅವರು, ಆರು ವರ್ಷಗಳ ಊಹೆಗೂ ಮೀರಿದ ಆದಾಯವನ್ನು ಗಳಿಸಲಾರಂಭಿಸಿದರು. ಇಂದು ಅವರ ವಾರ್ಷಿಕ ವಹಿವಾಟು 1.5 ಕೋಟಿ ರೂ.ಗಳಿಂದ 2 ಕೋಟಿ ರೂಪಾಯಿಗಳಾಗಿದೆ.
2.ಸಚಿನ್ ಕಾಳೆ, ಮೆಧಪರ್ (ಛತ್ತೀಸ್ಗಢ)
ಕೃಷಿ ಬಗೆಗಿನ ತನ್ನ ತಾತನ ಅಪೂರ್ಣ ಕನಸುಗಳು ಸಚಿನ್ ಕಾಳೆ ಅವರಿಗೆ ಕೃಷಿಯನ್ನು ಕೈಗೆತ್ತಿಕೊಳ್ಳಲು ಪ್ರೇರಣೆ ನೀಡಿತು. ಎಂಜಿನಿಯರಿಂಗ್ ಪೂರೈಸಿದ್ದ ಇವರು ಗೋರೆಗಾಂವ್ನಲ್ಲಿ Punj Lloyd ಕಂಪನಿಯ ಮ್ಯಾನೇಜರ್ ಆಗಿ ವಾರ್ಷಿಕ 24 ಲಕ್ಷ ರೂಪಾಯಿಗಳ ವೇತನವನ್ನು ಪಡೆಯುತ್ತಿದ್ದ ಅವರು, 2013ರಲ್ಲಿ ಗೋರೆಗಾಂವಿನ ದುಬಾರಿ ಜೀವನವನ್ನು ಬಿಟ್ಟು ರೈತನಾಗಲು ತಮ್ಮ ಹುಟ್ಟೂರು ಮೇಧಪರ್ಗೆ ಆಗಮಿಸಿದರು.
ಅಲ್ಲಿ ಭತ್ತ ಮತ್ತು ಋತುಗಳಿಗೆ ತಕ್ಕುನಾದ ತರಕಾರಿಗಳನ್ನು ಬೆಳೆಯಲಾರಂಭಿಸಿದರು.
ಕೃಷಿ ಬಗ್ಗೆ ಯಾವ ಅನುಭವವೂ ಇಲ್ಲದ ಅವರಿಗೆ ಎಲ್ಲವೂ ಸವಾಲಾಗಿತ್ತು. ಆದರೆ ನಿಧಾನಕ್ಕೆ ಭೂಮಿ ಅಗೆಯುವುದರಿಂದ ಹಿಡಿದು ಬಿತ್ತನೆ ಮಾಡುವವರೆಗಿನ ಕಾಯಕವನ್ನೂ ಅವರು ಕಲಿತರು.
ಅವರ ಪರಿಶ್ರಮ, ಶ್ರದ್ಧೆ ಮತ್ತು ಕೌಶಲ್ಯ ಫಲ ನೀಡಿತು. ಎಲ್ಲಿ ತನ್ನ ಕೃಷಿ ಹೆಚ್ಚು ಫಲದಾಯಕವಾಗಿರುತ್ತದೆ, ಎಲ್ಲಿ ಹೆಚ್ಚು ಲಾಭ ನೀಡುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಡೆಲ್ ವೊಂದನ್ನು ಅವರು ರೂಪಿಸಿದರು. ಬಳಿಕ ಅವರು ತಮ್ಮದೇ ಆದ ಇನ್ನೋವೇಟಿವ್ ಅಗ್ರಿಲೈಫ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಸ್ಥಾಪಿಸಿದರು. ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಮಾಡುವ ರೈತರಿಗೆ ಇದು ಸಹಾಯ ಮಾಡುತ್ತದೆ.
ಇಂದು ಸಚಿನ್ ಅವರ ಕಂಪನಿ 200 ಎಕರೆ ಭೂಮಿಯಲ್ಲಿ ಕೃಷಿ ಮಾಡುವ ಸುಮಾರು 137 ಸಂತುಷ್ಟ ರೈತರಿಗೆ ಸಹಾಯ ಮಾಡುತ್ತಿದ್ದು, ವಾರ್ಷಿಕ ರೂ.2ಕೋಟಿಗಳ ವಹಿವಾಟು ನಡೆಸುತ್ತಿದೆ.
3. ಸಿವಿ ಶ್ರೀನಿಧಿ, ಚಾಮರಾಜನಗರ (ಕರ್ನಾಟಕ)
ಎಲ್ಲಾ ಎಂಜಿನಿಯರಿಂಗ್ ಪದವೀಧರರಂತೆ ಚಾಮರಾಜನಗರದ ಶ್ರೀನಿಧಿ ಅವರಿಗೂ ಐಟಿ ಸೆಕ್ಟರಿನಲ್ಲಿ ದೊಡ್ಡ ಉದ್ಯೋಗ ಪಡೆಯಬೇಕೆಂಬ ಕನಸಿತ್ತು. ಆದರೆ ಆ ವಲಯದಲ್ಲಿನ ಒತ್ತಡ ಮತ್ತು ಸ್ಪರ್ಧಾತ್ಮಕತೆಯ ಬಗ್ಗೆ ಇತರರಿಂದ ಕೇಳಿ ತಿಳಿದುಕೊಂಡಿದ್ದ ಅವರಿಗೆ ಆ ವಲಯದಲ ಬಗ್ಗೆ ಭ್ರಮನಿರಸನಗೊಂಡಿತ್ತು.
ಇದರಿಂದಾಗಿ, ಅವರು ತಮ್ಮ ಕನಸಿನ ಪಥವನ್ನು ಬದಲಾಯಿಸಿಕೊಂಡರು. ಕೃಷಿ ಬಗ್ಗೆ ಏನೂ ತಿಳಿಯದಿದ್ದರೂ ಅದರತ್ತ ಧುಮುಕಿದರು.
ನಿಷ್ಪ್ರಯೋಜಕವಾಗಿ ಬಿದ್ದಿದ್ದ ಕುಟುಂಬದ ಎಕರೆಗಟ್ಟಲೆ ಭೂಮಿಯಲ್ಲಿ ಕೃಷಿ ಮಾಡಲು ಮುಂದಾದರು. ಆದರೆ ಕುಟುಂಬದವರ ವಿರೋಧ ವ್ಯಕ್ತವಾಗಿತ್ತು, ಮೊದಲು ವೃತ್ತಿಯನ್ನು ಆಯ್ದುಕೊಳ್ಳು ಬಳಿಕ ಕೃಷಿ ಕಡೆ ಗಮನವಹಿಸು ಎಂಬ ಸಲಹೆಗಳನ್ನು ನೀಡಲಾರಂಭಿಸಿದರು.
ಆದರೆ ನಿರ್ಧಾರದಿಂದ ಹಿಂದೆ ಸರಿಯದ ಶ್ರೀನಿಧಿ, ನಾವೀನ್ಯ ಮಾರುಕಟ್ಟೆ ಕಾರ್ಯತಂತ್ರದ ಮೂಲಕ ಆರಂಭಿಕ ಕೃಷಿ ವೈಫಲ್ಯಗಳನ್ನು ಮೆಟ್ಟಿ ನಿಂತರು. ಬಳಿಕ, ತಮ್ಮ ಸಾವಯವ ಕಬ್ಬು ಮತ್ತು ಬಾಳೆಹಣ್ಣಿನ ಮೂಲಕ ಯಶಸ್ವಿ ಕೃಷಿಕನಾಗಿ ಹೊರಹೊಮ್ಮಿದರು. ಅವರ ಶ್ರಮ ಫಲ ನೀಡಿದ್ದು, ಇಂದು ಅವರು ಲಕ್ಷಾಂತರ ಆದಾಯಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.
4.ರಾಕೇಶ್ ಸಿಹಗ್, ಬೈಜಲ್ಪುರ ಗ್ರಾಮ (ಹರಿಯಾಣ)
ಬಾಲ್ಯದಲ್ಲಿ ರಾಕೇಶ್ ಅವರಿಗೆ ತಮ್ಮ ತಂದೆಯ ಹೆಜ್ಜೆಯನ್ನು ಅನುಸರಿಸಲು ಆಸಕ್ತಿ ಇರಲಿಲ್ಲ. ಗದ್ದೆಯಲ್ಲಿ ದುಡಿಯುವ ಬದಲು ಸ್ಥಿರ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಅವರು ಆದ್ಯತೆ ನೀಡಿದರು. ಹೈಸ್ಕೂಲ್ ಶಿಕ್ಷಣ ಪೂರೈಸಿದ ಬಳಿಕ ಅಂಬಾಲಗೆ ತೆರಳಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮ ಮಾಡಿದರು.
ಆದರೆ 2016ರ ನಂತರ ಎಲ್ಲವೂ ಬದಲಾಯಿತು, ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಉದ್ಯೋಗ ರಾಕೇಶ್ ಉದ್ಯೋಗ ತೊರೆದರು.
ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು, ತನ್ನ ಸಹೋದರ ಮತ್ತು ಮಾವನೊಂದಿಗೆ ಸೇರಿ ನರ್ಸರಿಯನ್ನು ಆರಂಭಿಸಿದರು. ಸುಮಾರು 70 ಸಾವಿರ ಗಿಡಗಳನ್ನು ನೆಟ್ಟರು. ಆದರೆ, ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಆರಿಸಿಕೊಳ್ಳುವ ಬದಲು, ಅವರು ಝೀರೋ ಬಜೆಟ್ ನ್ಯಾಚುರಲ್ ಫಾರ್ಮಿಂಗ್ (ZBNF) ಮತ್ತು ಬಹು ಆಯಾಮದ ಕೃಷಿಯನ್ನು ಆರಿಸಿಕೊಂಡರು.
ವರ್ಷಗಳ ಕಾಲ ಹಾಕಿದ ಪರಿಶ್ರಮ ಮತ್ತು ಶ್ರದ್ಧೆಯ ಫಲವಾಗಿ, ರಾಕೇಶ್ ಇಂದು ವಾರ್ಷಿಕ ರೂ.40 ಲಕ್ಷ ಆದಾಯ ಗಳಿಸುತ್ತಾರೆ. ಈಗ ಅವರ ಜೀವನದಲ್ಲಿ ಎಲ್ಲವೂ ಸರಿಯಾಗಿದೆ. ಸಂಕಷ್ಟಗಳು ದೂರವಾಗಿವೆ.
5.ಭವ್ಯ ದೀಪೇಶ್, ಬೆಂಗಳೂರು
ಇವರು ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಭವ್ಯ ಅವರಿಗೆ, ತನ್ನದೇ ಆದ ಭೂಮಿಯನ್ನು ಹೊಂದುವ ಮತ್ತು ಅಲ್ಲಿ ತನ್ನ ಪತಿ ಫಾರ್ಮಹೌಸ್ ಸ್ಥಾಪನೆ ಮಾಡಬೇಕು ಕನಸಿತ್ತು. ಈ ಕನಸು ಅವರನ್ನು ತನ್ನ ಕೃಷಿಕ ಸ್ನೇಹಿತರೊಂದಿಗೆ ಹಲವಾರು ನರ್ಸರಿ ಮತ್ತು ಫಾರ್ಮ್ ಗಳಿಗೆ ಪ್ರವಾಸ ಹೋಗುವಂತೆ ಮಾಡಿತು. ಈ ವೇಳೆ ಅವರಿಗೆ, ಬೆಂಗಳೂರಿನ ಹಸಿರು ಕೈಗಾರಿಕೆಗಳ ವಿಷಯುಕ್ತ ನೀರು ಮತ್ತು ಗಾಳಿಗಳಿಂದಾಗಿ ಹದಗೆಡುತ್ತಿದೆ ಎಂಬುದು ಅರಿವಾಯಿತು.
ಇದು ಅವರನ್ನು ವಿಭಿನ್ನ ಪಥದಲ್ಲಿ ಸಾಗುವಂತೆ ಮಾಡಿತು. ಪತಿಯ ಸಹಕಾರದೊಂದಿಗೆ, ಹಲವಾರು ಸವಾಲುಗಳನ್ನು ಮೆಟ್ಟಿನಿಂತ ಬಳಿಕ ಪ್ಲಾಟ್ಗಳನ್ನು ಲೀಸ್ಗೆ ಪಡೆದುಕೊಂಡು ಅವರು ಸಾವಯವ ಹಸಿರನ್ನು ಬೆಳೆಯಲಾರಂಭಿಸಿದರು.
ಇಂದು ತಾಜಾ ಹಸಿರು ಸೊಪ್ಪುಗಳನ್ನು, ತರಕಾರಿಗಳನ್ನು ಖರೀದಿ ಮಾಡಲು ಜನರು ಭವ್ಯ ಅವರನ್ನು ಹುಡುಕಿಕೊಂಡು ಬರುತ್ತಾರೆ. ಬಂದ ಗ್ರಾಹಕರಿಗೆ ಇವರು ಗಿಡದಿಂದ ಕಿತ್ತು ತರಕಾರಿಗಳನ್ನು ನೀಡುತ್ತಾರೆ. ಬಾಯಿಯಿಂದ ಬಾಯಿಗೆ ಪ್ರಚಾರವನ್ನು ಪಡೆದುಕೊಂಡ ಇವರು ಇಂದು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ರಿಸಿಡೆನ್ಶಿಯಲ್ ಕಾಂಪ್ಲೆಕ್ಸ್ನಲ್ಲಿ ಇವರು ವಾರಕ್ಕೆ ಎರಡು ಬಾರಿ ತರಕಾರಿ ಮಾರಾಟ ಮಾಡುತ್ತಾರೆ. ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಇವರು ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಭಾರತ ಕೃಷಿ ಪ್ರಧಾನ ದೇಶ. ರೈತರೇ ನಮ್ಮ ಬೆನ್ನೆಲುಬು. ಆದರೆ ಇಂದು ನಾವು ಕೃಷಿಯಿಂದ ವಿಮುಖರಾಗಿ ಐಷಾರಾಮಿ ಜೀವನಕ್ಕೆ ಮಾರುಹೋಗುತ್ತಿದ್ದೇವೆ. ಆದರೆ ಆರೋಗ್ಯಯುತ ನೆಮ್ಮದಿಯ ಬದುಕು ನಮ್ಮದಾಗುವುದು ಪ್ರಕೃತಿಯ ಮಡಿಲಿನಲ್ಲಿ ನಾವಿದ್ದಾಗ ಮಾತ್ರ. ಯೋಜನೆ ಬದ್ಧವಾಗಿ, ಕಷ್ಟಪಟ್ಟು ಬೆವರು ಸುರಿಸಿ ದುಡಿದವರನ್ನು ಎಂದಿಗೂ ಕೃಷಿ ಕೈಬಿಡುವುದಿಲ್ಲ ಎಂಬುದನ್ನು ಈ ಐವರು ಎಂಜಿನಿಯರ್ ಪದವೀಧರರು ಸಾಧಿಸಿ ತೋರಿಸಿದ್ದಾರೆ.
ಕೃಪೆ: thebetterindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.