2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ದೇಶ ಸ್ವಚ್ಛವಾಗಿರಬೇಕು ಎಂಬ ಕಲ್ಪನೆಯೊಂದಿಗೆ ಸ್ವಚ್ಛ ಭಾರತ ಆಂದೋಲನಕ್ಕೆ ಕರೆಕೊಟ್ಟರು. ಇದೀಗ ನರೇಂದ್ರ ಮೋದಿಯವರು ಎರಡನೇ ಭಾರಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದಾರೆ. ಅವರು ಕರೆ ಕೊಟ್ಟ ಸ್ವಚ್ಛತಾ ಆಂದೋಲನವು ಐದನೇ ವರ್ಷದಲ್ಲಿ ಮುನ್ನಡೆಯುತಿದೆ. 2014 ರಲ್ಲಿ ದೇಶದಾದ್ಯಂತ ಹಲವರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು ಕೆಲವರು ಅದನ್ನು ಮುಂದುವರಿಸಿದರೆ ಇನ್ನು ಹಲವರು ಅರ್ಧದಲ್ಲೇ ಬಿಟ್ಟರು. ಅದರೆ ಅದನ್ನು ತಪಸ್ಸಿನಂತೆ ಮುಂದುವರಿಸಿ ಗ್ರಾಮೀಣ ಪ್ರದೇಶದಲ್ಲಿ ಕಳೆದ ಐದು ವರ್ಷಗಳಿಂದ ಪ್ರತಿ ವಾರ ಸದ್ಧಿಲ್ಲದೆ ಸ್ವಚ್ಛತಾ ಆಂದೋಲನ ಮಾಡಿದ ಮಡಪ್ಪಾಡಿಯ ಮಹಾತ್ಮಾ ಗಾಂಧಿ ಗ್ರಾಮ ಸೇವಾ ತಂಡ ಮಾತ್ರ ಗಮನ ಸೆಳೆದಿದೆ.
ಹೌದು ಅದು ಹನ್ನೆರಡು ಜನರ ತಂಡ. ಬಹುತೇಕ ಮಂದಿ ಪ್ರಾಯದಲ್ಲಿ ಐವತ್ತರ ಗಡಿ ದಾಟಿದವರು. ಜೊತೆಗೆ ಕೆಲವು ಯುವಕರು. ಮಳೆ ಇರಲಿ, ಬಿಸಿಲಿರಲಿ, ಚಳಿಯಲ್ಲಿ ನಡುಗುತಿರಲಿ ಪ್ರತಿ ಶನಿವಾರ ಬೆಳಿಗ್ಗೆ ಏಳು ಗಂಟೆಗೆ ಇವರು ಒಟ್ಟು ಸೇರುತ್ತಾರೆ. ಮತ್ತೆ ಒಂದೂವರೆ ಗಂಟೆಗಳ ಶ್ರಮದಾನ. ಸಾರ್ವಜನಿಕ, ರಸ್ತೆ, ಚರಂಡಿ, ರಿಪೇರಿ ಸೇರಿದಂತೆ ಇವರ ಕಾಯಕ ಮುಂದುವರಿಯುತ್ತದೆ. ಪ್ರತಿ ವಾರ ಸುಳ್ಯ ತಾಲೂಕಿನ ಮಡಪ್ಪಾಡಿಯಲ್ಲಿ ಮಹಾತ್ಮ ಗಾಂಧೀ ಗ್ರಾಮ ಸೇವಾ ತಂಡದ ಸದಸ್ಯರು ನಡೆಸುತ್ತಿರುವ ಮಾದರಿ ಕೆಲಸ ಇದೀಗೆ ಐದನೇ ವರ್ಷದಲ್ಲಿ ಮುನ್ನಡೆಯುತಿದ್ದು ವಾರಗಳ ಸಂಖ್ಯೆಯಲ್ಲಿ ದ್ವಿಶತಕದತ್ತ ಮುನ್ನಡೆದಿದೆ. ವಾರದಲ್ಲಿ ಕೇವಲ ಒಂದೂವರೆ ಘಂಟೆ ಮೀಸಲಿಟ್ಟರೆ ತಮ್ಮ ಊರಿನಲ್ಲಿ ಅದ್ಭುತವನ್ನು ಸಾಧಿಸಬಹುದು ಎಂಬುದಕ್ಕೆ ಮಡಪ್ಪಾಡಿಯ ಗ್ರಾಮೀಣ ಪ್ರದೇಶದಲ್ಲಿ 182 ವಾರಗಳನ್ನು ಪೂರೈಸಿ ಸದ್ದಿಲ್ಲದೆ ನಡೆದ ಈ ವಿನೂತನ ಪ್ರಯೋಗ ಸಾಕ್ಷಿಯಾಗಿದೆ. ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮದೂ ಒಂದು ಅಳಿಲ ಸೇವೆ ನೀಡಬೇಕೆಂಬ ಹಂಬಲದಿಂದ ಮಡಪ್ಪಾಡಿಯ ಉತ್ಸಾಹಿಗಳ ತಂಡ ನಿರಂತರ ಸ್ವಚ್ಛತಾ ಕಾರ್ಯ ಮತ್ತು ಶ್ರಮದಾನವನ್ನು ನಡೆಸಿ ಗ್ರಾಮ ಸ್ವರಾಜ್ಯದೆಡೆಗೆ ಮಾದರಿ ಹೆಜ್ಜೆಯನ್ನಿರಿಸಿದ್ದಾರೆ.
ಪ್ರತಿ ಶನಿವಾರ ಬೆಳಿಗ್ಗೆ ಏಳು ಗಂಟೆಗೆ ಇವರು ಒಟ್ಟಾಗಿ ಶ್ರಮದಾನವನ್ನು ಆರಂಭಿಸುತ್ತಾರೆ. ಆದ್ಯತೆಯ ಮೇರೆಗೆ ವಿವಿಧ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಾರೆ. ಮಡಪ್ಪಾಡಿ ಗ್ರಾಮವನ್ನು ಸಂಪರ್ಕಿಸುವ ರಸ್ತೆಯ ದುರಸ್ಥಿ, ರಸ್ತೆ ಬದಿಯಲ್ಲಿ ಆವರಿಸಿರುವ ಕಾಡು, ಪೊದೆಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವುದು, ಬಸ್ ನಿಲ್ದಾಣ ಮತ್ತಿತರ ಸಾರ್ವಜನಿಕ ಕಟ್ಟಡಗಳನ್ನು ಸುಸ್ಥಿತಿಯಲ್ಲಿಡಲು ಕಾಮಗಾರಿ ನಡೆಸುವುದು, ರಸ್ತೆ ಬದಿಯ ಚರಂಡಿ ನಿರ್ಮಾಣ, ಸ್ವಚ್ಛತಾ ಕಾರ್ಯ, ಮೋರಿ, ಮುಳುಗು ಸೇತುವೆಗಳಲ್ಲಿ ಸಿಲುಕಿರುವ ಕಸ ಕಡ್ಡಿಗಳನ್ನು ತೆರವು ಮಾಡುವುದು, ಶಾಲೆ, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿನ ಸ್ವಚ್ಛತೆ, ಶಾಲೆಯ ಅಡಕೆ ತೋಟದ ನಿರ್ವಹಣೆ, ರಸ್ತೆ ಬದಿಯಲ್ಲಿ ಇವರು ನೆಟ್ಟ ಮರ ಗಿಡಗಳ ಪೋಷಣೆ ಮತ್ತಿತರ ಕಾಮಗಾರಿ ಸೇರಿದಂತೆ ಹಲವು ಕೆಲಸಗಳನ್ನು ಇವರು ನಿರ್ವಹಿಸುತ್ತಾರೆ.
2014 ರ ಅಕ್ಟೋಬರ್ ತಿಂಗಳಲ್ಲಿ ದೇಶದಾದ್ಯಂತ ಸ್ವಚ್ಛತಾ ಆಂದೋಲನ ಆರಂಭಗೊಂಡಾಗ ಅ. 18, 2014 ರಂದು ಏಳು ಜನರ ತಂಡದೊಂದಿಗೆ ಇವರು ಸ್ವಚ್ಛತಾ ಕೆಲಸವನ್ನು ಆರಂಭಿಸಿದರು. ಬಳಿಕ ತಂಡದ ಸದಸ್ಯರ ಸಂಖ್ಯೆ 14 ಕ್ಕೆ ಏರಿತ್ತು. ಈಗ 12 ಮಂದಿ ಸಕ್ರೀಯರಾಗಿದ್ದಾರೆ. ಈ ರೀತಿ ಶ್ರಮದಾನವನ್ನು ಆರಂಭಿಸಿದಾಗ ಇದನ್ನು ಯಾವಾಗಲೂ ಮುಂದುವರಿಸಲು ಸಾಧ್ಯವೇ ಎಂಬ ಸಂದೇಹ ಇವರನ್ನು ಕಾಡಿತ್ತು. ಆದರೆ ದಿನ ಕಳೆದಂತೆ ಇವರ ಉತ್ಸಾಹ ಇಮ್ಮಡಿಯಾಗಿ ನಿರಂತರವಾಗಿ ಶ್ರಮದಾನದಲ್ಲಿ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ವೃತವಾಗಿ ಸ್ವೀಕರಿಸಿದರು.
ವ್ಯವಸ್ಥಿತ ದಾಖಲೆ
ತಂಡದ ಶ್ರಮದಾನದ ಬಗ್ಗೆ ಹಾಜರಿ ಪುಸ್ತಕ ಮತ್ತು ಕೆಲಸದ ವಿವರಗಳನ್ನು ದಾಖಲಿಸಿಕೊಳ್ಳಲಾಗಿದೆ. ಪೋಟೋಸ್, ವೀಡಿಯೋಗಳನ್ನು ತೆಗೆದು ದಾಖಲೀಕರಣ ಮಾಡಲಾಗಿದೆ. ಯಾವುದೇ ದೇಣಿಗೆಯನ್ನೂ ಸಾರ್ವಜನಿಕರಿಂದ ಸ್ವೀಕರಿಸಿಲ್ಲ, ಶ್ರಮದಾನಕ್ಕೆ ಅಗತ್ಯವಿರುವ ಪರಿಕರಗಳನ್ನು ಸದಸ್ಯರೇ ಹೊಂದಿಸಿಕೊಳ್ಳಬೇಕು. ಶ್ರಮದಾನದ ಸ್ಥಳ ಮತ್ತು ವಿವರಗಳನ್ನು ತಂಡದ ಸಂಚಾಲಕ ಎಂ.ಡಿ.ವಿಜಯಕುಮಾರ್ ಎಸ್ಎಂಎಸ್ ಮೂಲಕ ತಿಳಿಸುತ್ತಾರೆ. ಸರಿಯಾಗಿ ಸಮಯಕ್ಕೆ ಹಾಜರಾಗಬೇಕು, ಒಂದೂವರೆ ಗಂಟೆ ಪೂರ್ತಿಯಾಗಿ ಕೆಲಸ ಮಾಡಬೇಕು ಇತ್ಯಾದಿ ಸ್ವಯಂ ಶಿಸ್ತನ್ನೂ ತಂಡ ಅನುಸರಿಸಿಕೊಂಡು ಬಂದಿದೆ. ಸಮಸವಸ್ತ್ರವನ್ನು ಧರಿಸಿಯೇ ತಂಡದ ಸದಸ್ಯರು ಶ್ರಮದಾನಕ್ಕೆ ಹಾಜರಾಗುತ್ತಾರೆ. ಈ ತಂಡದಲ್ಲಿರುವ ಎಲ್ಲಾ ಸದಸ್ಯರೂ ಒಂದಲ್ಲಾ ಒಂದು ರೀತಿಯಲ್ಲಿ ಸದಾ ಕ್ರಿಯಾಶೀಲರಾಗಿ ‘ಬಿಝಿ’ಯಾಗಿರುವವರೇ. ಆದರೂ ಎಲ್ಲರಿಗೂ ಹೊಂದಿಕೆಯಾಗುವ ಸಮಯವನ್ನು ಆರಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ.
ಕೃಷಿಕ ಎಂ.ಡಿ.ವಿಜಯಕುಮಾರ್ ಈ ರೀತಿಯ ಆಶಯವನ್ನು ಇತರರಲ್ಲಿ ಹಂಚಿಕೊಂಡಾಗ ಎಲ್ಲರೂ ಖುಷಿಯಲ್ಲಿ ಒಪ್ಪಿಕೊಂಡು ಈ ಕೆಲಸವನ್ನು ಆರಂಭಿಸಿದರು. ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪಿ.ಸಿ.ಜಯರಾಮ, ಗ್ರಾಮದ ಪ್ರಮುಖರಾದ ಗಂಗಯ್ಯ ಪೂಂಬಾಡಿ, ಸೋಮಶೇಖರ ಕೇವಳ, ರಾಜಕುಮಾರ್ ಪೂಂಬಾಡಿ, ಪ್ರಶಾಂತ್ ಪೂಂಬಾಡಿ, ಸುನಿಲ್ ಮಡಪ್ಪಾಡಿ, ಚಂದ್ರಶೇಖರ ಗುಡ್ಡೆಮನೆ, ಶಶಿಧರ ಕೇವಳ, ಶಿವಪ್ಪ ಪೂಂಬಾಡಿ, ವಿಶ್ವನಾಥ ಗೋಳ್ಯಾಡಿ, ವಿಶ್ವನಾಥ ಕಜೆ ತಂಡದ ಸದಸ್ಯರಾಗಿದ್ದು ತಪ್ಪದೇ ಶ್ರಮದಾನದಲ್ಲಿ ಭಾಗವಹಿಸುತ್ತಾರೆ.
ಸ್ವಚ್ಛತಾ ಪ್ರಶಸ್ತಿಯ ಗರಿ
ನಿರಂತರ ಸ್ವಚ್ಛತಾ ಅಭಿಯಾನಕ್ಕೆ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ನೀಡುವ ಸುಳ್ಯ ತಾಲೂಕು ಮಟ್ಟದ ಸ್ವಚ್ಛತಾ ಪುರಸ್ಕಾರ ಮಹಾತ್ಮ ಗಾಂಧೀ ಗ್ರಾಮ ಸೇವಾ ತಂಡಕ್ಕೆ ಈ ಹಿಂದೆ ಲಭಿಸಿತ್ತು. ನೂರು ವಾರದ ಗಡಿ ದಾಟಿದ ಸಂದರ್ಭದಲ್ಲಿ ಗ್ರಾಮದಲ್ಲಿ ಸರಳ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಐದು ವರ್ಷ ಪೂರೈಸುವ ಸಂದರ್ಭದಲ್ಲಿ ಮುಂದಿನ ಅಕ್ಟೋಬರ್ನಲ್ಲಿ ತಂಡ ಮಾಡಿದ ಸ್ವಚ್ಛತಾ ಕೆಲಸಗಳ ಬಗ್ಗೆ ಜಿಲ್ಲಾ ಮಟ್ಟದ ಪ್ರದರ್ಶನ ಮಾಡುವ ಉದ್ದೇಶ ಇದೆ ಎನ್ನುತ್ತಾರೆ
‘ಈ ರೀತಿಯ ಪರಿಕಲ್ಪನೆ ಆರಂಭಿಸಿದಾಗ ಇದನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವೇ ಎಂಬ ಸಂದೇಹ ಕಾಡಿತ್ತು. ಆದರೆ ಸದಸ್ಯರ ಅರ್ಪಣಾ ಮನೋಭಾವ ಮತ್ತು ನಿರಂತರ ಪ್ರಯತ್ನದಿಂದ 182 ವಾರಗಳನ್ನು ಪೂರೈಸಲು ಸಾಧ್ಯವಾಗಿದೆ. ಸಮಾಜದಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದನ್ನು ಮುಂದೆಯೂ ಸಾಧ್ಯವಾದಷ್ಟು ಮುಂದುವರಿಸಬೇಕೆಂಬ ಬಯಕೆ ನಮ್ಮದು”
-ಎಂ.ಡಿ.ವಿಜಯಕುಮಾರ್, ಮಹಾತ್ಮಾಗಾಂಧೀ ಗ್ರಾಮ ಸೇವಾ ತಂಡದ ಸಂಚಾಲಕ
✍ ಸುಳ್ಯನ್ಯೂಸ್.ಕಾಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.