ಭಾರತವು ಬ್ರಿಟಿಷ್ ವಸಾಹತುವಾಗುವ ಪೂರ್ವದಲ್ಲಿ ತನ್ನದೇ ಆದ, ವ್ಯವಸ್ಥಿತವಾದ ಶಿಕ್ಷಣ ವ್ಯವಸ್ಥೆಯೊಂದನ್ನು ಹೊಂದಿತ್ತೇ? ಎನ್ನುವ ಪ್ರಶ್ನೆಯನ್ನು ನಾಡಿನ ಬಹುದೊಡ್ಡ ವಿದ್ವಾಂಸರು, ಸಂಶೋಧಕರು, ವಿಮರ್ಶಕರೆನ್ನಿಸಿಕೊಂಡವರ ಬಳಿ ಕೇಳಿದರೆ ಸಿಗಬಹುದಾದ ಉತ್ತರ ಏನಿರಬಹುದು? ನಮ್ಮ ದೇಶದ ವೈಚಾರಿಕ ವಲಯದಲ್ಲಿ ಬ್ರಿಟಿಷ್ ಆರಾಧನಾ ಭಾವನೆಯೊಂದು ಅನೂಚಾನವಾಗಿ ಬೆಳೆದುಕೊಂಡು ಬಂದಿದೆ. ಇದರ ಪರಿಣಾಮವಾಗಿ ಬ್ರಿಟಿಷರೇ ಭಾರತೀಯರ ಉದ್ಧಾರಕರು ಎಂಬ ಧೋರಣೆಯೊಂದಿಗೆ, ಅವರಿಂದಲೇ ನಾವೊಂದು ರಾಷ್ಟ್ರವಾದೆವು, ಅವರಿಂದಲೇ ನಮ್ಮೊಳಗೆ ವೈಚಾರಿಕತೆಯ ಪ್ರವೇಶವಾಯಿತು, ಅವರಿಂದಲೇ ಅನಾಗರಿಕರಾಗಿದ್ದ ನಾವು ನಾಗರಿಕರಾದೆವು ಎಂದು ಬಲವಾಗಿ ನಂಬಿರುವ ವಿದ್ವತ್ ವಲಯ ಈ ಮೇಲಿನ ಪ್ರಶ್ನೆಗೂ ಕೊಡಬಹುದಾದ ಉತ್ತರವೂ’ ಬ್ರಿಟಿಷರಿಂದಲೇ ನಮ್ಮಲ್ಲಿ ಶಿಕ್ಷಣ ವ್ಯವಸ್ಥೆಯೂ ರೂಪುಗೊಂಡಿತು’ ಎಂದೇ ಆಗಿರುತ್ತದೆ. ಹೀಗೊಂದು ಉತ್ತರವನ್ನು ಭಾರತೀಯರ ಮೆದುಳುಗಳಿಗೆ ತುಂಬಿಸಿದವರೂ ಬ್ರಿಟಿಷರೇ ! ತಾವು ಭಾರತಕ್ಕೆ ಬರುವ ಮೊದಲು ಇಲ್ಲೊಂದು ಶಿಕ್ಷಣ ಪದ್ಧತಿಯೆನ್ನುವುದು ವ್ಯವಸ್ಥಿತವಾಗಿರಲಿಲ್ಲ, ಸಾರ್ವತ್ರಿಕವಾಗಿರಲಿಲ್ಲ ಎನ್ನುವ ಸುಳ್ಳನ್ನು ಬುದ್ಧಿಪೂರ್ವಕವಾಗಿಯೇ ಬಿತ್ತಿ ಪ್ರಚಾರ ಮಾಡಿಕೊಂಡು ಬಂದರು. ಹೀಗೆ ಪ್ರಚಾರ ಮಾಡುತ್ತಲೇ ಇಲ್ಲಿಂದ ಶಿಕ್ಷಣ ವ್ಯವಸ್ಥೆಯನ್ನು ಬುಡಸಹಿತ ನಾಶಮಾಡುತ್ತಾ ಬಂದರು.
ಬ್ರಿಟಿಷರ ಈ ಬಗೆಯ ಆಕ್ರಮಣವನ್ನು ಗುರುತಿಸಿದ ಮಹಾತ್ಮಗಾಂಧಿ 1931 ರ ಲಂಡನ್ನ ದುಂಡು ಮೇಜಿನ ಸಮ್ಮೇಳನದಲ್ಲಿ ಬಲವಾದ ಉತ್ತರವನ್ನೇ ನೀಡಿದ್ದರು. ಅಂದು ನೀಡಿದ ಉತ್ತರ ಭಾರತದ ಇತಿಹಾಸದಲ್ಲೇ ಹೊಸದೊಂದು ಅನ್ವೇಷಣೆಗೆ ನಾಂದಿ ಹಾಡಿದ್ದು ವಿಶೇಷ. ಅಂದು ಮಾತನಾಡಿದ ಗಾಂಧಿ’ ಈ ದೇಶದಲ್ಲಿ ಉತ್ತಮವಾದ ಶಿಕ್ಷಣ ವ್ಯವಸ್ಥೆಯೇ ಇತ್ತು. ಬ್ರಿಟಿಷ್ ಆಡಳಿತಗಾರರು ಭಾರತಕ್ಕೆ ಬಂದು ನಮ್ಮ ಶಿಕ್ಷಣ ವ್ಯವಸ್ಥೆಯ ಬುಡವನ್ನೇ ಕೀತ್ತು ಹಾಕುವ ಕೆಲಸಕ್ಕೆ ಕೈಹಾಕಿದರು. ಸುಂದರವಾದ ಶಿಕ್ಷಣ ವೃಕ್ಷದ ಬೇರುಗಳನ್ನೇ ಕಿತ್ತು ಹಾಕುವ ಪ್ರಯತ್ನದಲ್ಲಿ ಈ ವೃಕ್ಷ ನೆಲಕ್ಕುರುಳಿತು’ ಎನ್ನುತ್ತಾರೆ.
ಯಾವ ಶಿಕ್ಷಣ ವ್ಯವಸ್ಥೆ ತಾನೇ ಆಗಿ ವಿನಾಶ ಹೊಂದುವುದಕ್ಕೆ ಯೋಗ್ಯ ಎಂದು ಬ್ರಿಟಿಷರು ಭಾವಿಸಿದ್ದರೋ, ಅಂತಹ ಶಿಕ್ಷಣ ವ್ಯವಸ್ಥೆಯ ಬಗ್ಗೆ ಬ್ರಿಟಿಷರೇ ಸಂಗ್ರಹಿಸಿದ ಅಮೂಲ್ಯ ದಾಖಲೆಗಳನ್ನು ಇಂಗ್ಲೆಂಡ್ನ ಆರ್ಕೈವ್ಗಳಿಂದಲೇ ಸಾವಿರಾರು ಪುಟಗಳಲ್ಲಿ ಸಂಗ್ರಹಿಸಿ, ಬ್ರಿಟಿಷರೇ ಸೃಷ್ಟಿಸಿದ ಶಿಕ್ಷಣದ ಕಥನವನ್ನು ಸುಳ್ಳೆಂದು ನಿರೂಪಿಸಿದ ಓರ್ವ ಸಂಶೋಧಕನ ಬಗ್ಗೆ, ಸುಮಾರು 90 ಪುಟಗಳ ಪೀಠಿಕೆಯ ರೂಪದ ಮಾತುಗಳಿಗೆ 400 ಪುಟಗಳ ದಾಖಲೆಗಳನ್ನು ಆಧಾರವಾಗಿ ನೀಡಿದ ಅಧ್ಯಯನಕಾರನೊಬ್ಬನ ಬಗ್ಗೆ ವಿದ್ವತ್ ಜಗತ್ತಿನಲ್ಲಿ ಎಷ್ಟು ಮೌನ, ತಿರಸ್ಕಾರ ಇದೆ ಎಂದರೆ ನಮ್ಮ ನಾಡಿನಲ್ಲಿ ಶಿಕ್ಷಣಶಾಸ್ತ್ರವನ್ನೇ ದಶಕಗಳ ಕಾಲ ಅಧ್ಯಯನ ಮಾಡಿದ ಅಭ್ಯಾಸಿಗಳೂ ಕೂಡ ಅವರ ಬಗ್ಗೆ ಒಂದು ಪುಟದ ಮಾಹಿತಿಯನ್ನಾಗಲೀ ಓದಲಿಲ್ಲ. ಕೊನೆಯ ಪಕ್ಷ ವಿಶ್ವವಿದ್ಯಾಲಯಗಳ ಸಿಲೆಬಸ್ನ ಕೊನೆಯಲ್ಲಿ ನೀಡುವ ರೆಫರೆನ್ಸ್ ಪುಸ್ತಕಗಳ ಪಟ್ಟಿಯಲ್ಲೂ ಆ ವ್ಯಕ್ತಿ ಹಾಗೂ ಅವರ ಪುಸ್ತಕದ ಹೆಸರನ್ನು ಒಂದು ಸಾಲಿನಲ್ಲಿ ಮುದ್ರಿಸಿರಲಿಕ್ಕಿಲ್ಲ ಎಂದರೆ ಆಶ್ಚರ್ಯವಾದೀತು ! ಅಂತಹ ನಿರ್ಲಕ್ಷಿತ ವಿದ್ವಾಂಸರೆಂದರೆ ಶ್ರೀ ಧರ್ಮಪಾಲ್. ಅವರ ಅದ್ಯಯನ ಪೂರ್ಣಕೃತಿಯೇ ’ ದಿ ಬ್ಯೂಟಿಫುಲ್ಟ್ರೀ’ (ಕನ್ನಡದಲ್ಲಿ ’ಚೆಲುವ ತರು’ಹೆಸರಿನಲ್ಲಿ ಅನುವಾದವಾಗಿದೆ). ವಿದ್ವತ್ ಜಗತ್ತಿನ ದಾರ್ಷ್ಟ್ಯ, ಅಹಂನ ಪರಾಕಾಷ್ಟೆ ಎಂದರೆ ಬ್ರಿಟಿಷ್ ಮಾದರಿಯ ಓದು, ಅಧ್ಯಯನ, ವಿಶ್ಲೇಷಣೆಗೆ ಸಡ್ಡು ಹೊಡೆದು ಸತ್ಯ ಶೊಧನೆಗಿಳಿದ ಋಷಿ ಸದೃಶ್ಯ ವಿದ್ವಾಂಸರನ್ನು ಮೂಲೆಗುಂಪು ಮಾಡಿ ಸೇಡು ತೀರಿಸಿಕೊಂಡ ದೊಡ್ಡ ಪಟ್ಟಿಯೇ ಇದೆ. ಆ ಸಾಲಿನಲ್ಲಿ ಧರ್ಮಪಾಲ್, ರಾಮ್ ಸ್ವರೂಪ್. ಸೀತಾರಾಮ್ ಗೋಯೆಲ್ , ಆನಂದಕುಮಾರಸ್ವಾಮಿ… ಹೀಗೆ ಅನೇಕರಿದ್ದಾರೆ.
ಗಾಂಧಿ 1931 ರಲ್ಲಿ ದುಂಡು ಮೇಜಿನ ಸಮ್ಮೇಳನದಲ್ಲಿ ಆಡಿದ ಮಾತಿಗೆ ಸಾಕ್ಷ್ಯರೂಪದಲ್ಲಿ ಧರ್ಮಪಾಲರ ’ದಿ ಬ್ಯೂಟಿಫುಲ್ ಟ್ರೀ’ 1983 ರಲ್ಲಿ ಪ್ರಕಟವಾಯಿತು. ಈ ಕೃತಿ ವಸಾಹತುಶಾಹಿ ಮಾನಸಿಕತೆಯಿಂದ ಬಿಡಿಸಿಕೊಳ್ಳಬೇಕಾದ ಅಧ್ಯಯನದ ಕ್ರಮವೊಂದಕ್ಕೆ ನಿದರ್ಶನವೂ ಹೌದು. ಭಾರತ ಬೌದ್ಧಿಕ ದಾಸ್ಯದಿಂದ ಕಳಚಿಕೊಳ್ಳಬೇಕಾದರೆ ತನ್ನ ಕಣ್ಣುಗಳಿಂದಲೇ ತನ್ನ ಪೂರ್ವವನ್ನು ನೋಡಿಕೊಳ್ಳುವ ದೃಷ್ಟಿ ಪ್ರಾಪ್ತವಾಗಬೇಕಾಗಿದೆ. ಸೋಲು, ಶರಣಾಗತಿ, ಅನಾಗರಿಕತೆ, ಮೌಢ್ಯಗಳೇ ನಮ್ಮ ಚರಿತ್ರೆ ಎಂದು ನಿರೂಪಿಸುವ ಇತಿಹಾಸ, ಸಮಾಜ ವಿಜ್ಞಾನ, ಸಾಹಿತ್ಯ ಪಠ್ಯಗಳು ಕತ್ತಲ ಯುಗದ ಚಿತ್ರಣಗಳನ್ನು ನಿರಾಧಾರವಾಗಿ ನಮ್ಮ ಮೆದುಳುಗಳಿಗೆ ಇಂದಿಗೂ ತುಂಬಿಸುತ್ತಿರುವುದನ್ನು ಕಂಡು ಮೆಕಾಲೆಯ ಆತ್ಮ ನಕ್ಕಿರಬಹುದು !! ಧರ್ಮಪಾಲ್ ನಿರೂಪಿಸಿದ 18 ನೇ ಶತಮಾನದ ದೇಶಿ ಶಿಕ್ಷಣದ ಚಿತ್ರಣಗಳು ನಮ್ಮನ್ನು ಅದಕ್ಕಿಂತಲೂ ಪೂರ್ವದ ನಮ್ಮದೇ ಪೂರ್ವಜರ ಮೌಲ್ಯಯುತ ಪರಂಪರೆ, ಸಾಧನೆಯ ಶೋಧಕ್ಕೆ ತೆರೆದುಕೊಳ್ಳುವಂತೆ ಪ್ರೇರೇಪಿಸುತ್ತದೆ.
1822 ರಲ್ಲಿ ಸರ್ಥಾಮಸ್ ಮನ್ರೋ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ, ಆಡಮ್ 1836 ರಲ್ಲಿ ಬಂಗಾಳದಲ್ಲಿ, ಲೈಟನರ್ 1882 ರಲ್ಲಿ ಪಂಜಾಬ್ನಲ್ಲಿ ದೇಶಿಯ ಶಿಕ್ಷಣದ ಕುರಿತು ಕಲೆಕ್ಟರ್ಗಳಿಂದ ಮಾಡಿಸಿದ ಸರ್ವೇಕ್ಷಣೆಯಿಂದ ಸಂಗ್ರಹಿಸಿದ ಅಂಕಿ ಅಂಶಗಳೇ ಈ ಕೃತಿಯೊಡಲಿನ ದಾಖಲೆಗಳು. ಭಾರತದ ಶಿಕ್ಷಣ ಪದ್ಧತಿ, ಅದರ ಪಾಠಕ್ರಮ, ಒಂದೊಂದು ನಿರ್ಧಿಷ್ಟ ಪ್ರದೇಶಗಳಲ್ಲಿ ಇರುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ, ಕಲಿಕೆಯ ಅವಧಿ ಹಾಗೂ ಶಿಕ್ಷಣ ಪಡೆಯುತ್ತಿದ್ದವರ ಸಾಮಾಜಿಕ ಹಿನ್ನೆಲೆಯ ಕುರಿತು ಸಂಗ್ರಹಿಸಿದ ದಾಖಲೆಗಳು ಈ ಸರ್ವೆಯಲ್ಲಿದೆ. ಈ ದಾಖಲೆಗಳು ಹೇಳುವ ಅಂಕಿ ಅಂಶಗಳ ಆಧಾರದಲ್ಲೇ ಅಂದಿನ ಇಂಗ್ಲೆಂಡಿನ ಶಿಕ್ಷಣ ಪದ್ಧತಿಗಿಂತ ಭಾರತದ ಶಿಕ್ಷಣ ಪದ್ಧತಿಯಾವ ನೆಲೆಯಿಂದಲೂ ಕಡಿಮೆಯದ್ದಾಗಿರಲಿಲ್ಲ ಎಂದು ತಿಳಿಯುತ್ತದೆ. ಇಂಗ್ಲೆಂಡಿನ ವಿದ್ಯಾರ್ಥಿಗಳು ಕಲಿಯುತ್ತಿದ್ದ ಪಾಠಕ್ರಮಕ್ಕಿಂತ, ಅಧ್ಯಾಪನಕ್ಕಿಂತ, ವಿದ್ಯಾಭ್ಯಾಸದ ಅವಧಿಗಿಂತ, ಭಾರತದ ವಿದ್ಯಾರ್ಥಿಗಳ ಪಾಠಕ್ರಮಗಳು ಮೇಲ್ಮಟ್ಟದ್ದಿದ್ದಿತು, ಅಧ್ಯಾಪನವು ಮೇಲ್ದರ್ಜೆಯದ್ದಾಗಿತ್ತು, ವಿದ್ಯಾಭ್ಯಾಸದ ಅವಧಿಯು ಹೆಚ್ಚಿನದ್ದಾಗಿತ್ತು. ಅಂದಿನ ಶಾಲೆಗಳಲ್ಲಿ ನಡೆಯುತ್ತಿದ್ದ ಪಾಠ ಪ್ರವಚನಗಳು ಸ್ವಾಭಾವಿಕವಾಗಿದ್ದ ಕಾರಣದಿಂದ ವಿದ್ಯಾರ್ಥಿಗಳಿಗೆ ಉಸಿರುಗಟ್ಟಿಸುವಂತಿರಲಿಲ್ಲ, ಶಿಕ್ಷಣವು ಸಮಾಜದ ಎಲ್ಲಾ ವರ್ಗದ-ಜಾತಿಯ ಜನರಿಗೂ ಮುಕ್ತವಾಗಿತ್ತು. ಬ್ರಿಟಿಷ್ ಪೂರ್ವದ ಭಾರತದಲ್ಲಿ ಶಿಕ್ಷಣಕ್ಕಾಗಿಯೇ ಮೀಸಲಾದ ಆರ್ಥಿಕ ವ್ಯವಸ್ಥೆಯೊಂದು ಸದೃಢವಾಗಿದ್ದ ಕಾರಣದಿಂದ ರಾಜಕೀಯ ವ್ಯತ್ಯಾಸಗಳ ಹೊರತಾಗಿಯೂ ಶಿಕ್ಷಣವು ಸುಸೂತ್ರವಾಗಿ ನಡೆಯುತ್ತಿತ್ತು ಎನ್ನುವ ವಿವರಗಳು ಬ್ರಿಟಿಷರೇ ಸಂಗ್ರಹಿಸಿದ ದಾಖಲೆಗಳಲ್ಲಿದೆ. ಈ ವಿವರಗಳು ಬ್ರಿಟಿಷ್ ಹಸ್ತಕ್ಷೇಪಕ್ಕಿಂತ ಪೂರ್ವದ ಭಾರತದಲ್ಲಿ ನಡೆಯುತ್ತಿದ್ದ ಶಿಕ್ಷಣ ವ್ಯವಸ್ಥೆಯ ಕುರಿತು ಲಭ್ಯವಾಗುವ ಅಪೂರ್ವ ದಾಖಲೆಗಳು ಎಂದೇ ಹೇಳಬೇಕು.
ಒಂದೊಂದು ಜಿಲ್ಲೆಯ ಕಲೆಕ್ಟರ್ಗಳೂ ಸಂಗ್ರಹಿಸಿದ ಅಂಕಿ-ಅಂಶಗಳು ಕುತೂಹಲಕಾರಿಯಾಗಿ ಕಾಣುತ್ತದೆ. ಉದಾಹರಣೆಗೆ ಮದ್ರಾಸ್ ಕಲೆಕ್ಟರ್ನ ವರದಿಯು ಹೇಳುವಂತೆ ’ವಿದ್ಯಾರ್ಥಿಗಳು 13ನೇ ವಯಸ್ಸಿಗೆ ಬರುತ್ತಿದ್ದಂತೆಯೇ ಬೇರೆ ಬೇರೆ ವಿಷಯಗಳಲ್ಲಿ ಅವರ ಜ್ಞಾನವು ಅಸಾಧಾರಣ ಮಟ್ಟಕ್ಕೆ ಏರುತ್ತಿತ್ತು’ ಎನ್ನುತ್ತದೆ. ಅಂದಿನ ಶಾಲೆಗಳಲ್ಲಿ ಕಲಿಸಲಾಗುವ ಸಾಮಾನ್ಯ ಪಠ್ಯಗಳಿಂದ ತೊಡಗಿ ಉನ್ನತ ವಿದ್ಯಾಸಂಸ್ಥೆಗಳು, ಅಲ್ಲಿ ಕಲಿಸಲಾಗುವ ವಿಷಯಗಳವರೆಗಿನ ವಿವರಗಳಿವೆ. ವೇದ, ಶಾಸ್ತ್ರ, ಕಾನೂನು, ಖಗೋಳ, ಗಣಿತಸಾಸ್ತ್ರ ಮೊದಲಾದ ವಿಷಯಗಳನ್ನು ಕಲಿಸಲಾಗುತ್ತಿದ್ದ ಈ ಸಂಸ್ಥೆಗಳಲ್ಲಿ ಬೇರೆ ಬೇರೆಜಾತಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದರು. ಕಾನೂನು, ಖಗೋಳಶಾಸ್ತ್ರ, ವೈದ್ಯವಿಜ್ಞಾನ, ಶಸ್ತ್ರಚಿಕಿತ್ಸೆಯೇ ಮೊದಲಾದ ವೃತ್ತಿಪರತೆಯನ್ನು ಬಯಸುವ ವಿದ್ಯೆಗಳನ್ನು ಬ್ರಾಹ್ಮಣೆತರರೇ ಹೆಚ್ಚು ಸಂಖ್ಯೆಯಲ್ಲಿ ಕಲಿಯುತ್ತಿದ್ದರು. ಬಿಹಾರ – ಬಂಗಾಳಗಳಲ್ಲಿ ನಡೆಸಿದ ಸಮೀಕ್ಷೆಯು ಗುರುತಿಸುವಂತೆ ಪ್ರತಿಯೊಂದು ಹಳ್ಳಿಯೂ ಒಂದು ಶಾಲೆಯನ್ನು ಹೊಂದಿದೆ. ಅದರಲ್ಲಿಯೂ 1830 ರ ಕಾಲಕ್ಕೆ ಈ ಪ್ರಾಂತಗಳ ಒಟ್ಟು 1,50,748 ಹಳ್ಳಿಗಳ ಪೈಕಿ 1,00,000 ಹಳ್ಳಿಗಳಲ್ಲಿ ಪ್ರಸ್ತುತ ಶಾಲೆಗಳಿವೆ ಎಂದು ದಾಖಲಿಸುತ್ತಾರೆ. ಆ್ಯಡಮ್ ನಡೆಸಿದ ಈ ಸಮೀಕ್ಷೆಯ ದಾಖಲೆಗಳ ಅನುಸಾರ ಸಮಾಜದ ಎಲ್ಲಾ ಸ್ತರಗಳ ಜನಗಳಿಗೂ ಪ್ರಾಥಮಿಕ ಶಿಕ್ಷಣ ದೊರೆಯುತ್ತಿತ್ತು. ಸಮಾಜದ ಎಲ್ಲಾ ಜಾತಿ ಸಮುದಾಯಗಳಿಗೆ ಸೇರಿದವರೂ ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿದ್ದರು ಎನ್ನುತ್ತದೆ.
ಕೃಷಿ ಉಪಕರಣಗಳ ತಯಾರಿ, ಉಕ್ಕಿನ ಉತ್ಪಾದನೆ, ಉಡುಪು ತಯಾರಿಕೆ, ಲೋಹದ ಕೆಲಸವೇ ಮೊದಲಾದ ತಾಂತ್ರಿಕ ಪರಿಣತಿಯು ಈ ಸಮಾಜದಲ್ಲಿ ಕುಲಕಸುಬಾಗಿ ವಂಶಪಾರಂಪರ್ಯವಾಗಿ ಬರುತ್ತಿತ್ತು. ಬ್ರಿಟಿಷ್ ಆಡಳಿತಕ್ಕೆ ಪೂರ್ವದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿದ್ದ ನಮ್ಮ ಸಮಾಜವು ಬ್ರಿಟಿಷ್ ಆಳ್ವಿಕೆಯ ಹಿಡಿತಕ್ಕೆ ಸಿಲುಕಿದ ಕೆಲವೇ ದಶಕಗಳಲ್ಲಿ ಅವನತಿಯ ಹಂತಕ್ಕೆ ಬಂದು ತಲುಪಿತು ಎನ್ನುವ ಸತ್ಯವನ್ನೂ ಅನಾವರಣ ಮಾಡುತ್ತದೆ. ಅತಿಯಾದ ಹಸ್ತಕ್ಷೇಪ, ವಿನಾಶಕ್ಕಾಗಿ ಸರ್ವ ಪ್ರಯತ್ನಗಳ ಹೊರತಾಗಿಯೂ ಭಾರತೀಯ ವಿದ್ಯೆ, ಸಂಸ್ಕೃತಿ, ಪರಿಣತಿಗಳು ಸ್ವಾತಂತ್ರ್ಯ ಹೊಂದುವ ಕಾಲದವರೆಗೆ ಉಳಿದುಕೊಂಡಿದ್ದರೆ ಅದಕ್ಕೆ ಭಾರತೀಯ ಸಮಾಜದ ಅನೌಪಚಾರಿಕ ಕಲಿಕೆ, ಸಾಂಸ್ಕೃತಿಕ ಸಮೃದ್ಧಿಯೇ ಕಾರಣ ಎನ್ನುವ ಅರಿವಾಗುತ್ತದೆ. ಬ್ರಿಟಿಷ್ ಮಾದರಿಯ ಶಿಕ್ಷಣ ಪಡೆದು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾದ ಅಂದಿನ ’ಎಲೈಟ್ಕ್ಲಾಸ್’ನ ಜನರಿಗೆ ಬ್ರಿಟಿಷರ ಕಾರಣದಿಂದ ಭಾರತೀಯ ಕಲೆ, ಕೈಗಾರಿಕೆ, ಶಿಕ್ಷಣ ವ್ಯವಸ್ಥೆಗಳೆಲ್ಲವೂ ನಾಶವಾಯಿತು ಎಂಬ ಸತ್ಯದ ಅರಿವಾಗಲೇ ಇಲ್ಲ. ಬದಲಾಗಿ ಈ ವಾದಗಳೆಲ್ಲಾ ಕಪೋಲಕಲ್ಪಿತ ಎಂದೇ ಭಾವಿಸುತ್ತಿತ್ತು.
ಹಳ್ಳಿ ಹಳ್ಳಿಗಳಲ್ಲಿ ಇದ್ದ ಶಾಲೆಗಳು ಆಡಳಿತದ ಪ್ರೋತ್ಸಾಹದ ಕೊರತೆಯಿಂದ ನಾಶವಾಯಿತು. ಹೀಗೆ ನಾಶವಾದದ್ದು ಭೌತಿಕರೂಪದಲ್ಲಿದ್ದ ಶಾಲೆಗಳಷ್ಟೇ ಅಲ್ಲ. ನಿಧಾನವಾಗಿ ಭಾರತೀಯ ಮೆದುಳುಗಳೂ ನಾಶವಾಗತೊಡಗಿತು.ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ತೆರೆದುಕೊಂಡ ಆಧುನಿಕ ಭಾರತೀಯ ವರ್ಗ ಭಾರತವನ್ನು ಅಜ್ಞಾನ, ಅನಾಗರಿಕತೆಯ ನೆಲವೆಂದೇ ಭಾವಿಸಿತು. ಆಧುನಿಕಗೊಳ್ಳುವುದು, ನಾಗರಿಕರಾಗುವುದು ಎಂದರೆ ಬ್ರಿಟಿಷರನ್ನು ಭೌತಿಕವಾಗಿ, ಬೌದ್ಧಿಕವಾಗಿ ಅನುಸರಿಸುವುದು ಎಂಬ ಸ್ಥಿತಿಗೆ ತಲುಪಿದರು. ಮೂಲಭೂತ ಅವಶ್ಯಕತೆಗಾಗಿ ಸ್ವಾವಲಂಬಿಗಳಾಗಿದ್ದ ಭಾರತದ ಹಳ್ಳಿಗಳು, ವ್ಯವಸ್ಥಿತ ಆಡಳಿತ ಪದ್ಧತಿ, ತೆರಿಗೆ ಪದ್ಧತಿ, ಶಿಕ್ಷಣ ವ್ಯವಸ್ಥೆಗಳೆಲ್ಲವೂ ಬ್ರಿಟಿಷ್ ಆಳ್ವಿಕೆಯಲ್ಲಿ ವಿನಾಶದ ಅಂಚಿಗೆ ತಲುಪಿದವು, ಪರಾವಲಂಬಿಗಳಾದವು. ಮೆಕಾಲೆಯ ’ಭಾರತದ ಜ್ಞಾನ ಮತ್ತು ವಿದ್ವತ್ತು ಎನ್ನುವುದು ಇಂಗ್ಲೆಂಡಿನ ಉತ್ತಮ ಗ್ರಂಥಾಲಯದಲ್ಲಿರುವ ಒಂದು ಕಪಾಟಿಗೂ ಸರಿಸಮವಲ್ಲ’ಎಂಬ ಮಾತನ್ನು ನಂಬಿಸಲಾಯಿತು. ಭಾರತೀಯ ಜ್ಞಾನ ಪರಂಪರೆ ಅಸಂಗತವೆಂದು ಸಾರಿದ ಮೆಕಾಲೆಯ ಮೋಡಿಗೊಳಗಾದ ಭಾರತೀಯ ಹೊಸ ವಿದ್ಯಾವಂತ ವರ್ಗ ಭಾರತವನ್ನೇ ಅಸಂಗತವೆಂದು ನಂಬಿಬಿಟ್ಟಿತು. ಈ ವರ್ಗದ ಸಹಾಯದಿಂದ ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮವಾದ ಪಾತ್ರವನ್ನು ವಹಿಸುತ್ತಿದ್ದ ಇಲ್ಲಿಯ ಶಿಕ್ಷಣ ವ್ಯವಸ್ಥೆಯನ್ನೇ ನಾಶಪಡಿಸಲಾಯಿತು. ಆತ್ಮಾಭಿಮಾನವನ್ನು ಮರೆತ ಭಾರತೀಯ ಸಮಾಜ ಬ್ರಿಟಿಷ್ ಮಾನಸಿಕತೆಯಿಂದ ಬಿಡುಗಡೆಗೊಳ್ಳಲಿಲ್ಲ. ಹೀಗಾಗಿ ತನ್ನ ಬಗ್ಗೆ ಅಭಿಮಾನದ, ಹೆಮ್ಮೆಯ ಮಾತು- ಸಂಗತಿಗಳ ಬಗ್ಗೆ ತನಗೇ ಅನುಮಾನ, ತನ್ನ ಪರಂಪರೆಯ ಬಗ್ಗೆ ತನಗೇ ಕೀಳರಿಮೆ ಭಾವನೆ ಉಳಿಯಿತು. ಹೀಗಾಗಿ ಇಂದಿನವರೆಗೂ ನಮ್ಮ ಶಿಕ್ಷಣ ವ್ಯವಸ್ಥೆಯ ಅಧ್ಯಯನಕಾರರಿಗೆ, ಸಂಶೋಧಕರಿಗೆ ಧರ್ಮಪಾಲ್ ಸಂಗ್ರಹಿಸಿ ಕೊಟ್ಟ ದಾಖಲೆಗಳು ಅಧ್ಯಯನದ ಆಕರಗಳಾಗಲೇ ಇಲ್ಲ. ಜ್ಞಾನನಿಧಿಯ ಕುರಿತ ಮೌನವೇ ನಮ್ಮ ಬಗೆಗಿನ ವಿಸ್ಮೃತಿಯ ಪ್ರತೀಕವಾಗಿದೆ.
✍ ಡಾ. ರೋಹಿಣಾಕ್ಷ ಶಿರ್ಲಾಲು
ಕನ್ನಡ ಉಪನ್ಯಾಸಕ, ವಿವೇಕಾನಂದ ಕಾಲೇಜು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.