ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಗಳಂ ಕೇಳುತಂ
ಕೆಲವಂ ಮಾಳ್ಪವರಿಂದ ಕಲ್ತು ಕೆಲವಂ ಸಜ್ಜನ ಸಂಗದಿಂದಲರಿಯಲ್
ಕೆಲವಂ ಸುಜ್ಞಾನದಿಂದ ನೋಡುತಂ ಸರ್ವಜ್ಞನಪ್ಪಂ ನರಂ
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ||
ಹೀಗೆ ಕಲಿಕೆ ಎನ್ನುವುದು ಒಂದು ರೀತಿಯಿಂದಲ್ಲ, ಒಬ್ಬರಿಂದಲೇ ಅಲ್ಲ, ನಾನಾ ದಾರಿಗಳಿಂದ, ನಾನಾ ರೂಪಗಳಿಂದ ನಡೆಯಬೇಕೆನ್ನುತ್ತಾನೆ ಕನ್ನಡದ ಕವಿ ಪಾಲ್ಕುರಿಕೆ ಸೋಮನಾಥ. ಅಂದರೆ, ಜ್ಞಾನಾರ್ಜನೆ ಎಂಬುದು ಯಾರಿಂದ ಯಾವಾಗ ಯಾವ ರೀತಿಯಲ್ಲಿ ನಡೆಯಬಹುದೆಂಬುದನ್ನು ನಿರ್ದಿಷ್ಟಪಡಿಸುವುದು ಸಾಧ್ಯವಿಲ್ಲ. ಅದಕ್ಕೇ ನಮ್ಮಲ್ಲಿ ಸ್ಪಂದಿಸುವ ಗುಣ ಯಾವಾಗಲೂ ಕ್ರಿಯಾಶೀಲವಾಗಿರಬೇಕಾದುದು ಅಗತ್ಯವೆಂಬ ಭಾವ. ಶಿಕ್ಷಣವೆಂಬುದು ಜೀವನದ ಅರ್ಥ, ಗುರಿ ಮತ್ತು ಅದರ ಸಾಧನೆಯ ಉಪಾಯಗಳನ್ನು ಕಲಿಸುವುದೇ ಆಗಿರುವುದರಿಂದ ಅಂತಹ ಅವಕಾಶಗಳು ಯಾವುದನ್ನೂ ಕೂಡ ಅಲಕ್ಷಿಸಬಾರೆಂದು ಜ್ಞಾನಿಗಳು ಹೇಳುತ್ತಾರೆ. ಇದಕ್ಕೆ ಪೂರಕವಾದ ಮತ್ತೊಂದು ನುಡಿಮುತ್ತು ಇಲ್ಲಿ ಸ್ಮರಿಸಬಹುದು. ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ, ನಮ್ಮ ಜ್ಞಾನೇಂದ್ರಿಯಗಳನ್ನು ಸದಾಕಾಲಕ್ಕೂ ಜಾಗೃತವಾಗಿಟ್ಟುಕೊಂಡಾಗ ಮಾತ್ರ ಹೀಗೆ ಫಲಾನುಭವಿಗಳಾಗುವುದು ಸಾಧ್ಯವೆನ್ನುತ್ತಾರೆ. ಪ್ರತಿಯೊಬ್ಬರೂ ಅಗತ್ಯವಾಗಿ ರೂಢಿಸಿಕೊಳ್ಳಬೇಕಾದ ಗುಣಗಳಾದ ಆತ್ಮವಿಶ್ವಾಸ, ಜವಾಬ್ದಾರಿಯ ಅರಿವು, ಸಮಾಜದೊಡನೆ ಸೌಜನ್ಯಯುತ ನಡವಳಿಕೆ, ಪ್ರಕೃತಿಯೊಡನೆ ಸ್ಪಂದನೆ ಎಲ್ಲವನ್ನೂ ನಮ್ಮ ಸುತ್ತಲಿನ ಜನರ ಸಂಪರ್ಕದ ಮೂಲಕ ಅವಕಾಶಗಳಿರುವುದರಿಂದ ಹಾಗೆ ಬೆರೆಯುವ ಬಳಗದ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.
ಅನುಭವಕ್ಕಿಂತ ದೊಡ್ಡ ಪಾಠವಿಲ್ಲ ಎಂಬ ಮಾತಿದೆ. ಅದರಿಂದ, ನಾವು ಜೀವನದಲ್ಲಿ ಪಡೆದುಕೊಳ್ಳುವ ನಾನಾ ಬಗೆಯ ಅನುಭವಗಳೇ ನಮ್ಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ, ಮಾಡಿರುವ, ಮಾಡಬಹುದಾದ ತಪ್ಪುಗಳ ಬಗ್ಗೆ ಜಾಗೃತಿ ಹೊಂದಿ ಸರಿಪಡಿಸಿಕೊಳ್ಳುವಲ್ಲಿ ನೆರವಾಗುತ್ತವೆ ಎಂಬುದು ಸತ್ಯವಾದ ಮಾತು. ಇವುಗಳಲ್ಲಿ ಕೆಲವು ತೀರ ಸಣ್ಣದಾಗಿರಬಹುದು. ನಗಣ್ಯವೆಂದು ನಾವು ಅವುಗಳನ್ನು ಗಂಭೀರವಾಗಿ ಪರಿಗಣಿಸದಿರಬಹುದು. ಆದರೆ ಸೂಕ್ಷ್ಮವಾಗಿ ಅಂತಹ ಸನ್ನಿವೇಶಗಳನ್ನು ಮತ್ತೆ ಮತ್ತೆ ಮಂಥಿಸಿ ಚಿಂತಿಸಿದಾಗ ಅಲ್ಲಿ ಅಡಗಿರುವ ತಿರುಳಿನ ಮಹತ್ತ್ವವೇನೆಂಬುದು ಅರಿವಾಗುತ್ತದೆ. ಇದಕ್ಕೆ ನಿದರ್ಶನವಾಗಿ ಕೆಲವು ಸ್ವಾನುಭವಗಳನ್ನು ಉದಾಹರಿಸಬಹುದೆನಿಸುತ್ತದೆ.
ಜ್ಞಾನಪೀಠ ಪುರಸ್ಕೃತ ಮಾಸ್ತಿವೆಂಕಟೇಶ ಅಯ್ಯಂಗಾರ್ ಅವರನ್ನು ಭೇಟಿ ಮಾಡಿ ಸಮಾರಂಭವೊಂದಕ್ಕೆ ಆಹ್ವಾನಿಸಿ ಆಶೀರ್ವಾದ ಪಡೆದು ಬರಲು ನಾನು, ನನ್ನ ಗೆಳತಿ ಅವರ ಮನೆಗೆ ಹೋಗಿದ್ದೆವು. ಕನ್ನಡದಲ್ಲಿ ಪ್ರಾರಂಭಿಸುತ್ತಿದ್ದ ಪತ್ರಿಕೆಯೊಂದಕ್ಕೆ ನಾವಿಬ್ಬರೂ ಸಹಸಂಪಾದಕಿಯ ರಾಗಿದ್ದೆವು. ಅಷ್ಟು ದೊಡ್ಡ ಸಾಹಿತಿಗಳು, ಹಿರಿಯರು ನಮ್ಮನ್ನು ಯಾವ ರೀತಿಯಲ್ಲಿ ಮಾತನಾಡಿಸುತ್ತಾರೋ ಎಂಬ ಅಳುಕು ನಮ್ಮಲ್ಲಿತ್ತು. ಅವರ ಮನೆಯಲ್ಲಿ ಕನ್ನಡ ಸಾಹಿತ್ಯದ ಮತ್ತೊಬ್ಬ ದಿಗ್ಗಜ ಡಾ|| ಹಾ.ಮಾ ನಾಯಕರೂ ಆಗ ಅಲ್ಲಿದ್ದರು. ಮಾಸ್ತಿಯವರಿಗೆ ನಮಸ್ಕರಿಸಿ ನಮ್ಮ ಆಹ್ವಾನ ಸಲ್ಲಿಸಿದಾಗ ಸಂಪಾದಕರು ಯಾರು? ಎಂದು ಕೇಳಿದ್ದರು. ಭಾಸ್ಕರ್ ಎಂಬವರ ಹೆಸರು ಹೇಳಿ ನಾವು ಉಪಸಂಪಾದಕಿಯರು ಎಂದಾಗ ಕನ್ನಡದ ಸೇವೆ ಮಾಡಲು ಹೊರಟ್ಟಿದ್ದೀರಿ ತುಂಬ ಸಂತೋಷ. ಒಳ್ಳೆಯದಾಗಲಿ, ಆದರೆ ನೀವು ಮಹಿಳೆಯರೂ ಸಂಪಾದಕಿಯರಾಗಿ ಪತ್ರಿಕೆ ನಡೆಸುವಂತಾಗಬೇಕು, ಆಗುತ್ತದೆ ಆ ಸಾಮರ್ಥ್ಯ ನಿಮ್ಮಲ್ಲಿಯೂ ಇದೆ, ಹೋಗಿಬನ್ನಿ ಎಂದು ಬೆನ್ನುತಟ್ಟಿ ಕಳುಹಿಸಿದ್ದರು. ಹಿರಿತನದ ಹಮ್ಮು-ಬಿಮ್ಮುಗಳಿಲ್ಲದೆ ಕಿರಿಯರನ್ನು ಪ್ರೋತ್ಸಾಹಿಸಿ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿದ ಆ ಹಿರಿಯರ ಹೃದಯವಂತಿಕೆಯ ನಡೆ-ನುಡಿ ನಮ್ಮಲ್ಲಿ ಅವರ ಬಗ್ಗೆ ಇದ್ದ ಗೌರವವನ್ನು ನೂರ್ಮಡಿಸಿದ್ದಲ್ಲದೆ ನಾವೂ ಕೂಡ ನಮ್ಮ ಕಿರಿಯರೊಂದಿಗೆ ನಡೆದುಕೊಳ್ಳಬೇಕಾದ ರೀತಿಯನ್ನು ಕಲಿಸಿತ್ತು. ಅದರ ಪರಿಣಾಮ ಎಷ್ಟು ಗಾಢವಾಗಿತ್ತೆಂದರೆ ನನ್ನ ಹಲವು ಶಿಷ್ಯರಿಗೆ ಮಾರ್ಗದರ್ಶನ ಮಾಡುವಾಗ ಈ ಅನುಭವವನ್ನು ಮತ್ತೆ ಮತ್ತೆ ಸ್ಮರಿಸುವಂತಾಗಿತ್ತು, ಎಂದೂ ಮರೆಯದ ಪಾಠ ಅವರಿಂದ ನಾನು ಕಲಿತಿದ್ದೆ.
ಕನ್ನಡದ ನಿಘಂಟುಬ್ರಹ್ಮ, ಶಬ್ದಸಾಗರ ಎಂಬ ಹಲವು ನಾಮಗಳಿಂದ ಖ್ಯಾತರಾಗಿರುವ ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಅವರ ಮನೆಗೆ ಹೋಗುವ ಯಾರೇ ಅತಿಥಿಗಳನ್ನು ಹಿರಿಯ-ಕಿರಿಯರೆಂಬ ಭೇದವಿಲ್ಲದೆ ನಡೆಸಿಕೊಳ್ಳುವ ರೀತಿ ಅತ್ಯಂತ ಅನುಕರಣೀಯವಾದುದು. ಆತ್ಮೀಯತೆಯ ಸೌಜನ್ಯದೊಂದಿಗೆ ಮಾತನಾಡಿ ನಂತರ ತಲೆಬಾಗಿಲಲ್ಲಿ ಬಂದು ನಿಂತು ಬೀಳ್ಕೊಡುವ ರೀತಿಯನ್ನು ಯಾರೂ ಎಂದೂ ಮರೆಯಲಾಗದು. ಆ ಸುಸಂಸ್ಕೃತ ನಡವಳಿಕೆಯ ಪಾಠ ನಮಗೆ ಯಾವುದೇ ಪಠ್ಯಪುಸ್ತಕದಲ್ಲಿ ದೊರೆಯುವುದಕ್ಕಿಂತ ಮೇಲಾದುದು. ಇದು ನಾನು ಪ್ರತಿಬಾರಿ ಅವರ ಮನೆಗೆ ಹೋದಾಗ ಪಡೆದ ಅನುಭವ.
ಹಿರಿಯ ಶಿಕ್ಷಣತಜ್ಞ ಡಾ|| ಎಚ್.ನರಸಿಂಹಯ್ಯನವರನ್ನು ಸಂದರ್ಶಿಸುವ ಸಂದರ್ಭ ಒದಗಿತ್ತು. ನ್ಯಾಷನಲ್ ಕಾಲೇಜಿನಲ್ಲಿ ಅವರ ಪ್ರಾಂಶುಪಾಲರ ಕೋಣೆಯಲ್ಲಿ ಭೇಟಿಯಾಗಿ ಕಡೆಗೆ ಎದ್ದು ಹೊರಟಾಗ ನಾನು ಕುಳಿತಿದ್ದ ಕುರ್ಚಿಯನ್ನು ಹಿಂದಕ್ಕೆಳೆದು ಮತ್ತೆ ಸ್ವಸ್ಥಾನಕ್ಕೆ ತಳ್ಳಿದಾಗ ತಲೆ ತಗ್ಗಿಸಿ ಯಾವುದೋ ಫೈಲ್ ನೋಡುತ್ತಿದ್ದವರು ಗಮನಿಸಿ ತಕ್ಷಣ ತಲೆಯೆತ್ತಿ ಇದೇನಮ್ಮ ನಾವು ನಮ್ಮ ಗುರುಗಳಾದ ಶ್ರೀನಿವಾಸರಾವ್ರಿಂದ ಕಲಿತದ್ದು, ಕ್ರಿಯೆ ಸಣ್ಣದಿರಬಹುದು. ಆದರೆ ಇದನ್ನು ಮಾಡದೆ ಕುರ್ಚಿಯನ್ನು ಹಾಗೇ ಬಿಟ್ಟು ಹೊರಟರೆ ಅದು ನಮ್ಮಲ್ಲಿನ ಉಡಾಫೆಯ ಸ್ವಭಾವನ್ನು ಪರಿಚಯಿಸುತ್ತದೆ. ನೀನು ಹಾಗೆ ಮಾಡಿಲ್ಲ, ಸಂತೋಷ ಎಂದಿದ್ದರು. ತಮ್ಮ ಕೆಲಸದ ನಡುವೆಯೂ ಅಷ್ಟು ಸಣ್ಣ ಸಂಗತಿಯನ್ನು ಗಮನಿಸಿದ್ದರು ಮತ್ತು ಅದನ್ನು ಮೆಚ್ಚಿ ಮುಕ್ತವಾಗಿ ಪ್ರಶಂಸಿಸಿದ ಆ ದೊಡ್ಡ ಗುಣವನ್ನು ಕಂಡು ಹೃದಯ ತುಂಬಿಬಂದಿತ್ತು. ನಮ್ಮ ಪ್ರತಿಯೊಂದು ನಡವಳಿಕೆಯನ್ನು ಎಚ್ಚರಿಕೆಯಿಂದ ಪರಿಷ್ಕರಿಸಿ ಕೊಳ್ಳುತ್ತಿರಬೇಕೆಂಬ ಪ್ರಜ್ಞೆ ಜಾಗೃತಗೊಂಡಿತ್ತು. ಇದೂ ಕಲಿಕೆಯ ಅಂಗವೇ.
ಅಂದೊಮ್ಮೆ ಆಕಸ್ಮಿಕವಾಗಿ ರಾಮಕೃಷ್ಣಾಶ್ರಮದ ಆವರಣದ ಒಳಹೊಕ್ಕು ನಾನು, ನನ್ನ ಗೆಳತಿ ಅಲ್ಲಿನ ಧ್ಯಾನಮಂದಿರವನ್ನು ನೋಡಲು ಹೋದೆವು. ಒಳಗೆ ಸ್ವಾಮೀಜಿ ಧ್ಯಾನದಲ್ಲಿದ್ದರು. ಅವರನ್ನು ಮಾತನಾಡಿಸುವ ಆಸೆಯಿಂದ ಅವರು ಎಚ್ಚರಗೊಳ್ಳುವವರೆಗೆ ಅಲ್ಲಿಯೇ ಕಾಯುತ್ತ ಕುಳಿತಿದ್ದೆವು. ನಂತರ ನಮಸ್ಕರಿಸಿದಾಗ ತುಂಬ ವಿಶ್ವಾಸದಿಂದ ಮಾತನಾಡಿಸಿ ಅಲ್ಲಿನ ಗ್ರಂಥಾಲಯವನ್ನು ನೋಡಿ ಬರಲು ಹೇಳಿದ್ದಲ್ಲದೆ ಭೋಜನಾಲಯಕ್ಕೆ ಸಂಬಂಧಿಸಿದವರನ್ನು ಕರೆದು ನಮ್ಮಿಬ್ಬರಿಗೂ ಪ್ರಸಾದ ನೀಡುವಂತೆ ಸೂಚಿಸಿದರು. ಕಡೆಗೆ ನಾವು ಅಲ್ಲಿಂದ ಹೊರಡುವ ಮುನ್ನ ಮತ್ತೆ ಅವರನ್ನು ಕಂಡಾಗ ಇಬ್ಬರಿಗೂ ಸ್ವಾಮಿವಿವೇಕಾನಂದರ ‘ಜೀವನ ಚರಿತ್ರೆ ಪುಸ್ತಕಗಳನ್ನು ಕೊಟ್ಟು ಆಶೀರ್ವದಿಸಿ ಕಳುಹಿಸಿದ್ದರು. ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂಬ ಮಾತಿನ ಸಾಕ್ಷಾತ್ಕಾರವೇ ಅಂದು ನಮಗಾಗಿತ್ತು. ಸಜ್ಜನರನ್ನು ಕಾಣುವ ಅವಕಾಶಗಳು ದೊರೆತಾಗ ತಪ್ಪಿಸಬಾರದೆಂಬ ಮಾತನ್ನು ಎಂದೂ ಮರೆಯದಂತಾಗಿತ್ತು. ಧನ್ಯತೆಯ ಭಾವದೊಂದಿಗೆ ಅಲ್ಲಿಂದ ಹೊರಟಿದ್ದೆವು.
ಕಲಿಕೆಯ ದಾರಿಗಳು ಇಂದೂ ನಮ್ಮ ವಿಜ್ಞಾನದ ಕೊಡುಗೆಗಳಿಂದ ಅನೇಕ ಪ್ರಕಾರಗಳಲ್ಲಿ ತೆರೆದುಕೊಂಡಿವೆ ನಿಜ. (ಇಂಟರ್ನೆಟ್) ಅಂತರ್ಜಾಲದ ಮುಖಾಂತರ ಇಡೀ ಜಗತ್ತಿನ ಆಗುಹೋಗುಗಳಿಗೆ ಸಂಬಂಧಿಸಿದ ನೂರಾರು, ಸಾವಿರಾರು ಸಂಗತಿಗಳನ್ನು ನಾವು ಕುಳಿತಲ್ಲೇ ತಿಳಿದುಕೊಳ್ಳಬಹುದು ಸರಿ. ಆದರೆ ಇವೆಲ್ಲ ನಮ್ಮಲ್ಲಿನ ಮಾಹಿತಿ ಕಣಜವನ್ನು ತುಂಬುತ್ತವಲ್ಲದೆ ನೇರವಾಗಿ ನಮ್ಮ ಮೇಲೆ ಪ್ರಭಾವ ಬೀರುವಂತಹವರ ಸಂಪರ್ಕ, ಸಾನ್ನಿಧ್ಯದಿಂದ ದೊರಕುವ ಪ್ರಯೋಜನವನ್ನು ನೀಡುವುದಿಲ್ಲ. ಅದಕ್ಕೇ ಹಿರಿಯರು ಹೇಳಿರುವ ದೇಶ ಸುತ್ತು, ಕೋಶ ಓದು ಎಂಬ ಮಾತಿನಲ್ಲಿ ಅಡಗಿರುವ ಮೌಲ್ಯ ಎಲ್ಲಕ್ಕಿಂತ ದೊಡ್ಡದೆನಿಸಿರುವುದು. ಯಾವುದೇ ಒಂದು ಊರಿಗೆ ಹೋದರೆ ಅಲ್ಲಿನ ನಿವಾಸಿಗಳಲ್ಲಿ ಅತ್ಯಂತ ಹಿರಿಯರಾದವರನ್ನು ಒಮ್ಮೆ ಕಂಡು ಬನ್ನಿ. ಊರಿಗೆ ಸಂಬಂಧಿಸಿದ ಎಷ್ಟೋ ಸಂಗತಿಗಳು ಸಾಂಸ್ಕೃತಿಕವೋ, ಐತಿಹಾಸಿಕವೋ ಯಾವುದೇ ಆಗಲಿ ಅವರಿಗೆ ತಿಳಿದಿರುವ ಸಂಭವವಿರುತ್ತದೆ ಮತ್ತು ಅಲ್ಲಿನ ಪ್ರಸಿದ್ಧ ಸಮಾಜಮುಖೀ ವ್ಯಕ್ತಿಗಳನ್ನು ಕಂಡು ಬನ್ನಿ. ಎಷ್ಟೋ ವಿಷಯಗಳನ್ನು ತಿಳಿಯುವ ಅವಕಾಶಗಳು ಒದಗುತ್ತವೆ ಎಂದು ನನ್ನ ಗುರುಗಳು ಸದಾ ಹೇಳುತ್ತಿದ್ದ ಮಾತುಗಳನ್ನು ಇಂದಿಗೂ ಪಾಲಿಸುವ ಪ್ರಯತ್ನವನ್ನು ಮಾಡುತ್ತೇವೆ. ಅದು ಫಲಪ್ರದವೂ ಆಗುತ್ತದೆ.
ಈ ಎಲ್ಲ ಹಿನ್ನೆಲೆಯೊಂದಿಗೆ ಕಲಿಕೆಯ ಹಲವು ಮಾರ್ಗಗಳು ಯಾವ ಯಾವ ರೀತಿಯಲ್ಲಿ ನಮಗೆ ನೆರವಾಗುತ್ತದೆಂಬುದು ಸ್ಪಷ್ಟವಾಗುತ್ತದಲ್ಲವೆ? ನಾವು ಕೇವಲ ಮಾಹಿತಿ ಕಣಜವಾಗುವುದಕ್ಕಿಂತ ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಳ್ಳುವುದು ಮುಖ್ಯ ತಾನೆ?
✍ ನಂ. ನಾಗಲಕ್ಷ್ಮಿ, ನಿವೃತ್ತ ಕನ್ನಡ ಉಪನ್ಯಾಸಕರು, ಬೆಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.