ಮಂಗಳೂರು : ಬೆಳೆಗಾರರ ಹೆಮ್ಮೆಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ 2018-19 ನೇ ಸಾಲಿನಲ್ಲಿ 1878 ಕೋಟಿ ರೂಪಾಯಿಗಳ ವ್ಯವಹಾರ ನಡೆಸುವ ಮೂಲಕ ತನ್ನ 46 ವರ್ಷಗಳ ಸದಸ್ಯ ಕೃಷಿಕರ ಸೇವೆಯಲ್ಲಿ ಹೊಸದಾಖಲೆ ನಿರ್ಮಿಸಿದೆ ಮತ್ತು ಅಡಿಕೆಯ ಖರೀದಿಯ ಪ್ರಮಾಣದಲ್ಲಿ ಹೆಚ್ಚಳವನ್ನು ಸಾಧಿಸಿದೆ.
ಈ ಕುರಿತು ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಎಸ್. ಆರ್. ಸತೀಶ್ಚಂದ್ರ, ಅಧ್ಯಕ್ಷರು, ಕ್ಯಾಂಪ್ಕೊ ಇವರು ತಿಳಿಸಿದರು. ಶ್ರೀ ಶಂಕರನಾರಾಯಣ ಭಟ್ಖಂಡಿಗೆ, ಉಪಾಧ್ಯಕ್ಷರು, ಶ್ರೀ ಸುರೇಶ್ ಭಂಡಾರಿ, ಆಡಳಿತ ನಿರ್ದೇಶಕರು, ಶ್ರೀಮತಿ ರೇಷ್ಮಾ ಮಲ್ಯ, ಮಹಾಪ್ರಬಂಧಕರು ಉಪಸ್ಥಿತರಿದ್ದರು.
ಕಾಂಪ್ಕೋ ಸಹಕಾರಿ ಸಂಸ್ಥೆಯು 1589.15 ಕೋಟಿ ರೂಪಾಯಿಗಳ ಮೌಲ್ಯದ 57209.64 ಮೆಟ್ರಿಕ್ ಟನ್ ಅಡಿಕೆಯನ್ನು ಖರೀದಿಸಿದೆ. ಇವುಗಳಲ್ಲಿ 882.61 ಕೋಟಿ ರೂಪಾಯಿ ಮೌಲ್ಯದ 27362.90 ಮೆ. ಟನ್ ಕೆಂಪಡಿಕೆ ಮತ್ತು 706.54 ಕೋಟಿ ರೂಪಾಯಿ ಮೌಲ್ಯದ 29846.74 ಮೆ.ಟನ್ ಬಿಳಿ ಅಡಿಕೆ ಒಳಗೊಂಡಿರುತ್ತದೆ. 1593.40 ಕೋಟಿ ರೂಪಾಯಿಗಳ ಮೌಲ್ಯದ 54762.30 ಮೆ.ಟನ್ಅಡಿಕೆಯನ್ನು ಮಾರಾಟ ಮಾಡಿದೆ. ಇವುಗಳಲ್ಲಿ 826.03 ಕೋಟಿರೂಪಾಯಿ ಮೌಲ್ಯದ 25066.57 ಮೆ.ಟನ್ಕೆಂಪಡಿಕೆ ಮತ್ತು 762.37 ಕೋಟಿರೂಪಾಯಿ ಮೌಲ್ಯದ 29700.73 ಮೆ.ಟನ್ ಬಿಳಿ ಅಡಿಕೆ ಒಳಗೊಂಡಿರುತ್ತದೆ ಎಂದರು.
ಚಾಕಲೇಟು ಕಾರ್ಖಾನೆಯ ಒಟ್ಟು ಉತ್ಪಾದನೆಯ ಪ್ರಮಾಣ 14606 ಮೆ.ಟನ್, ಮತ್ತು ಅದರಲ್ಲಿ 100421.41 ಮೆ.ಟನ್ ನಮ್ಮದೇ ಬ್ರಾಂಡಿನ ಚಾಕಲೇಟ್ ಉತ್ಪಾದನೆಯಾಗಿರುತ್ತದೆ. 193 ಕೋಟಿ ರೂಪಾಯಿಗಳ ಮೌಲ್ಯದ ಚಾಕಲೇಟು ಮತ್ತು ಕೊಕ್ಕೊ ಕೈಗಾರಿಕೋತ್ಪನ್ನಗಳು ಮಾರಾಟವಾಗಿದ್ದು, ಇದರಲ್ಲಿ 16.75 ಕೋಟಿ ರೂಪಾಯಿಗಳ ಮೌಲ್ಯದ 1106 ಮೆ.ಟನ್ ರಫ್ತು ಒಳಗೊಂಡಿರುತ್ತದೆ ಎಂದರು.
ಹೆಚ್ಚಿರುವ ಚೊಕೊಚಿಪ್ ಬೇಡಿಕೆಯನ್ನು ಪೂರೈಸುವ ಸಲುವಾಗಿ ಸುಮಾರು 3.5 ಕೋಟಿರೂ. ವೆಚ್ಚದಲ್ಲಿ ಹೊಸ ಡ್ರಾಪ್ ಚೊಕಲೇಟ್ ಯಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಟರ್ಕಿಯಿಂದ ಆಮದು ಮಾಡಿಕೊಂಡಿರುವ ಈ ಯಂತ್ರವು ದಿನವೊಂದರ 10 ಮೆ.ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.
ಈ ಸಹಕಾರಿ ಸಂಸ್ಥೆಯು 12.49 ಕೋಟಿ ರೂಪಾಯಿ ಮೌಲ್ಯದ 2207.41 ಮೆ.ಟನ್ ಕೊಕ್ಕೊ ಹಸಿಬೀಜವನ್ನು ಮತ್ತು 63.08 ಕೋಟಿ ರೂಪಾಯಿ ಮೌಲ್ಯದ 3170.84 ಮೆ.ಟನ್ ಕೊಕ್ಕೊ ಒಣ ಬೀಜವನ್ನು ಖರೀದಿಸಿದೆ. ಒಟ್ಟು 3657.16 ಮೆ.ಟನ್ ಒಣಬೀಜವನ್ನು ಕಾರ್ಖಾನೆಯಲ್ಲಿ ಬಳಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ನಮ್ಮ ಸಹಕಾರಿ ಸಂಸ್ಥೆಯು 27.11 ಕೋಟಿರೂಪಾಯಿ ಮೌಲ್ಯದ 2249.65 ಮೆ.ಟನ್ ರಬ್ಬರನ್ನು ಖರೀದಿಸಿರುತ್ತದೆ ಮತ್ತು 27.64 ಕೋಟಿರೂಪಾಯಿ ಮೌಲ್ಯದ 2247.72 ಮೆ.ಟನ್ ರಬ್ಬರನ್ನು ಮಾರಾಟ ಮಾಡಿರುತ್ತದೆ.
ಅಡಿಕೆ, ಕೊಕ್ಕೋ, ರಬ್ಬರ್ ಮತ್ತು ಕಾಳು ಮೆಣಸು ಬೆಳೆಗಳ ರಕ್ಷಣೆಗಾಗಿ ಅತ್ಯುತ್ತಮ ದರ್ಜೆಯ ಐ.ಎಸ್.ಐ.(I.S.I.) ಗುಣಮಟ್ಟದ 142.17 ಮೆ.ಟನ್ ಕ್ಯಾಂಪ್ಕೊ ಬ್ರಾಂಡ್ ಮೆ.ಟನ್ ಮೈಲುತುತ್ತನ್ನು ತನ್ನ ವಿವಿಧ ಶಾಖೆಗಳ ಮತ್ತು ಸದಸ್ಯ ಸಹಕಾರಿ ಸಂಘಗಳ ಮುಖಾಂತರ ಸ್ಪರ್ಧಾತ್ಮಕ ದರದಲ್ಲಿ ಸದಸ್ಯರಿಗೆ ವಿತರಿಸಲಾಗಿದೆ.
ಸಹಕಾರಿ ಸಂಸ್ಥೆಯು 142.17 ಮೆ.ಟನ್ ಮೈಲುತುತ್ತನ್ನು ತನ್ನ ವಿವಿಧ ಶಾಖೆಗಳ ಮುಖಾಂತರ ರಿಯಾಯಿತಿ ದರದಲ್ಲಿ ಸದಸ್ಯರಿಗೆ ವಿತರಿಸಿದೆ.
ಪ್ರಸಕ್ತ ಸಾಲಿನಲ್ಲಿ 23.71 ಕೋಟಿ ರೂಪಾಯಿ ಮೌಲ್ಯದ 662.58 ಮೆ.ಟನ್ ಕಾಳು ಮೆಣಸನ್ನು ಸಂಸ್ಥೆಯು ಖರೀದಿಸಿದೆ ಮತ್ತು 18.37 ಕೋಟಿರೂಪಾಯಿ ಮೌಲ್ಯದ 518.32 ಮೆ.ಟನ್ ಕಾಳು ಮೆಣಸನ್ನು ಮಾರಾಟ ಮಾಡಿರುತ್ತದೆ.
ಅಡಿಕೆ ತೋಟಗಳಲ್ಲಿ ಮಿಶ್ರಬೆಳೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ರಿಯಾಯಿತಿ ದರದಲ್ಲಿ 30,000 ಕಾಳುಮೆಣಸು ಸಸಿಗಳನ್ನು ವಿತರಿಸಲಾಗಿದೆ.
ಕ್ಯಾಂಪ್ಕೊದ ವೈವಿಧ್ಯಮಯವಾದ ಚಾಕಲೇಟು ಉತ್ಪನ್ನಗಳು ಮತ್ತು ಕೊಕ್ಕೊ ಕೈಗಾರಿಕೋತ್ಪನ್ನಗಳು ಸುಲಭ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು ಪುತ್ತೂರು ಮತ್ತು ಬೆಂಗಳೂರಿನಲ್ಲಿ ಕ್ಯಾಂಪ್ಕೊ ಚಾಕಲೇಟು ಕಿಯೋಸ್ಕ್ ಮಳಿಗೆ ಕಾರ್ಯ ನಿರ್ವಹಿಸುತ್ತಿದೆ.
ಸಂಸ್ಥೆಯ ಸಾಮಾಜಿಕ ಸೇವಾಯೋಜನೆಗಳನ್ವಯ ಕಳೆದ ಸಾಲಿನಲ್ಲಿ ಒಟ್ಟು 31 ಫಲಾನುಭವಿ ಸದಸ್ಯ ಬೆಳೆಗಾರಿಗೆ ಆರ್ಥಿಕ ಸಹಾಯವನ್ನು ಒದಗಿಸಲಾಗಿದೆ. ಇವುಗಳಲ್ಲಿ 19 ಸದಸ್ಯರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗಾಗಿ ಮತ್ತು 12 ಜನ ಸದಸ್ಯರಿಗೆ ಡಯಾಲಿಸಿಸ್ಗಾಗಿ ನೆರವು ನೀಡಲಾಗಿದೆ. ಡಯಾಲಿಸಿಸ್ಗಾಗಿ ನೀಡುತ್ತಿದ್ದ ರೂ. 5000/- ( ಪ್ರತಿ ಡಯಾಲಿಸಿಸ್ಗೆ ರೂ. 500/-ರಂತೆ) ಸಹಾಯಧನವನ್ನು ರೂ. 10000/-ಕ್ಕೆ ( ಪ್ರತಿ ಡಯಾಲಿಸಿಸ್ಗೆ ರೂ.1000/-ದಂತೆ) ಹೆಚ್ಚಿಸಲಾಗಿದೆ.
ಸಿ.ಪಿ.ಸಿ.ಆರ್.ಐ. ಸಹಭಾಗಿತ್ವದಲ್ಲಿ ಕ್ಯಾಂಪ್ಕೊ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಸಂಶೋಧನೆಗಳನ್ನು ನಡೆಸಲಾಗುತ್ತಿದೆ.
ಅಂತರಾಷ್ಟ್ರೀಯ ಆಹಾರ ಸುರಕ್ಷತಾ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕ್ಯಾಂಪ್ಕೊ ಚಾಕಲೇಟು ಕಾರ್ಖಾನೆಯು ಹೊಸ ಸುಸಜ್ಜಿತ ಕಟ್ಟಡ ಹಾಗೂ ಈ ಕೆಳಗಿನ ಅರ್ಹತಾಪತ್ರಗಳನ್ನು ಹೊಂದಿದೆ:
1) ಎಫ್.ಎಸ್.ಎಸ್.ಸಿ.22000 ( ವರ್ಶನ್ 4.1)( ಫುಡ್ ಸೇಫ್ಟಿ ಸಿಸ್ಟೆಮ್ ಸರ್ಟಿಫಿಕೇಶನ್)
2) ಐ.ಎಸ್.ಒ. 14000:2015( ಎನ್ವಿರೋನ್ಮೆಂಟಲ್ ಮ್ಯಾನೇಜ್ಮೆಂಟ್ ಸಿಸ್ಟೆಮ್)
3) ಒ.ಎಚ್.ಎಸ್.ಎ.ಎಸ್. 18001:2007 (ಆಕ್ಯಪೇಶನಲ್ ಹೆಲ್ತ್ & ಸೇಫ್ಟಿಅಸೆಸ್ ಮೆಂಟ್ ಸೀರೀಸ್)
4) ಐ.ಎಸ್.ಒ. 9001:2015 (ಕ್ವಾಲಿಟಿ ಮ್ಯಾನೇಜ್ಮೆಂಟ್ ಸಿಸ್ಟೆಮ್)
2018-19 ನೇ ಸಾಲಿನಲ್ಲಿ ಪವನಯಂತ್ರಗಳ ಮೂಲಕ ಒಟ್ಟು 45 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ನಮ್ಮಚಾಕಲೇಟು ಕಾರ್ಖಾನೆಯ ಅವಶ್ಯಕತೆಯ ಶೇಕಡ 75 ರಷ್ಟು ವಿದ್ಯುತ್ತನ್ನು ಇದು ಪೂರೈಸಿದೆ. ಕಾರ್ಖಾನೆಯ ಒಟ್ಟು ಅಗತ್ಯ 60 ಲಕ್ಷ ಯೂನಿಟ್ ಗಳಾಗಿದ್ದು, ಉಳಿದ 15 ಲಕ್ಷ ಯೂನಿಟ್ ಗಳನ್ನು ಮೆಸ್ಕಾಂನಿಂದ ಪಡಕೊಳ್ಳಲಾಗಿದೆ. ಸ್ವಯಂ ಪರ್ಯಾಪ್ತತೆ ಹೊಂದುವ ದೃಷ್ಟಿಯಿಂದ ಹೊಸ ಸೌರವಿದ್ಯುತ್ ಘಟಕವನ್ನು ಸ್ಥಾಪಿಸಿ 5 ಲಕ್ಷ ಯೂನಿಟ್ ಸೌರವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿದೆ.
ಪುತ್ತೂರು – ಸುಳ್ಯ ಹೆದ್ದಾರಿಯ ಕಾವು ಎಂಬಲ್ಲಿ ರೂ. 25 ಕೋಟಿ ವೆಚ್ಚದಲ್ಲಿ 1 ಲಕ್ಷಚದರ ಅಡಿ ವಿಸ್ತೀರ್ಣವಿರುವ ಬೃಹತ್ಗೋದಾಮು ನಿರ್ಮಾಣ ಹಂತದಲ್ಲಿದ್ದು, ಮುಂದಿನ ವರ್ಷದಿಂದ ಅಡಿಕೆ, ರಬ್ಬರ್ ಮತ್ತು ಕರಿಮೆಣಸಿನ ದಾಸ್ತಾನಿಗೆ ಭ್ಯವಾಗಲಿದೆ. ಮುಂದೆ ಬೈಕಂಪಾಡಿ, ಬೆಳ್ತಂಗಡಿ, ಸಾಗರ ಮತ್ತು ಕೇರಳದ ತ್ರಿಶೂರಿನಲ್ಲೂ ಇಂತಹ ಬೃಹತ್ ಗೋದಾಮುಗಳನ್ನು ನಿರ್ಮಿಸುವ ಯೋಜನೆಯಿದೆ.
ಕ್ಯಾಂಪ್ಕೊ ಪ್ರಾಯೋಜಕತ್ವದಲ್ಲಿ ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಯದ ಸಹಯೋಗದೊಂದಿಗೆ 4ನೇ ಬೃಹತ್ ಕೃಷಿ ಯಂತ್ರ ಮೇಳ, ಹೈನುಗಾರಿಕೆ ಮತ್ತು ಕನಸಿನ ಮನೆ ಯೋಜನೆಗಳ ಪ್ರದರ್ಶನವು ಫೆಬ್ರವರಿ 23 ರಿಂದ 25 ರ ವರೆಗೆಪುತ್ತೂರಿನ ವಿವೇಕಾನಂದಕಾಲೇಜು ಆವರಣದಲ್ಲಿ ನಡೆಯಿತು. ಸುಮಾರು 2 ಲಕ್ಷಕ್ಕೂಅಧಿಕ ಸಂಖ್ಯೆಯಲ್ಲಿ ಕೃಷಿಕರು ಮತ್ತು ಕೃಷಿ ಪ್ರೇಮಿಗಳು ಇದರ ಸದುಪಯೋಗವನ್ನು ಪಡೆದುಕೊಂಡರು.
ಅಡಿಕೆಯ ಕೊಯ್ಲಿನ ಗಂಭೀರ ಸಮಸ್ಯೆಯ ನಿವಾರಣೋಪಾಯವಾಗಿ ಕೊಯ್ಲುಗಾರರನ್ನು ಸಿದ್ಧಪಡಿಸುವ ’ಅಡಿಕೆಕೌಶಲ್ಯ ಪಡೆ’ ಗಾಗಿ ಸನಿವಾಸ ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗಿದೆ. ಶಿವಮೊಗ್ಗದ ಕೃಷಿ ವಿ.ವಿ.ಯ ಕೃಷಿ ತಾಂತ್ರಿಕ ವಿಭಾಗದ ಸಹಕಾರದೊಂದಿಗೆ ವಿಟ್ಲ ಸಿ.ಪಿ.ಸಿ.ಆರ್.ಐ.ಯಲ್ಲಿ ಡಿಸೆಂಬರ್ ಮತ್ತು ಫೆಬ್ರವರಿ ತಿಂಗಳಲ್ಲಿ ಐದು ದಿನಗಳ ಕಾಲಾವಧಿಯ ಅಡಿಕೆ ಮರ ಏರುವ ಮತ್ತುಕೊಯ್ಲು ನಡೆಸುವಎರಡು ಶಿಬಿರಗಳನ್ನು ನಡೆಸಲಾಗಿದೆ. 53 ಮಂದಿ ಗ್ರಾಮೀಣ ಯುವಕರು ವೃತ್ತಿಪರ ತರಬೇತಿಯನ್ನು ಪಡೆದಿದ್ದು, ಅವರಲ್ಲಿ ಹೆಚ್ಚಿನವರು ವೃತ್ತಿಪರ ಕೊಯ್ಲುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕ್ಯಾಂಪ್ಕೊ ತನ್ನ ಪರಣಾಮಕಾರೀ ಕ್ರಮಗಳಿಂದ ಈ ವೃತ್ತಿಘನತೆ ಹೆಚ್ಚುವಂತೆ ಮಾಡಿದೆ ಮತ್ತುಕೊಯ್ಲಿನ ಸಮಸ್ಯೆಗೆ ಮಾರ್ಗೋಪಾಯವನ್ನು ಸೂಚಿಸಿದೆ.
ಅಡಿಕೆಯ ಉತ್ಪಾದಕತೆ (Productivity) ಹೆಚ್ಚಳದಿಂದ ಕೃಷಿಕರಆದಾಯ ವೃದ್ಧಿಗೊಳಿಸುವ ಚಿಂತನೆಯೊಂದಿಗೆ, ಎ.ಆರ್.ಡಿ.ಎಫ್. ಹಾಗೂ ಉಜಿರೆಯ ಎಸ್.ಡಿ.ಯಂ. ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ಜೇನುಕೃಷಿಯ ಬಗ್ಗೆ 16-5-2018 ರಂದು ಉಜಿರೆಯಲ್ಲಿ ಕಾರ್ಯಗಾರ ಏರ್ಪಡಿಸಲಾಯಿತು. ಅಡಕೆ ತೋಟದಲ್ಲಿ ಜೇನು ಕೃಷಿ ಅಳವಡಿಸುವುದರಿಂದ ಕೃಷಿಕರು ತಮ್ಮ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚುಸಿಕೊಳ್ಳುವ ಬಗ್ಗೆ ವೈಜ್ಞಾನಿಕ ಮಾಹಿತಿ ಹಾಗೂ ತಜ್ಞ ಸಮಲೋಚನೆಗೆ ಅಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಸಂಸ್ಥೆಯ ಸದಸ್ಯರು, ಸದಸ್ಯರ ಮನೆಯವರು ಮತ್ತವರ ತೋಟದ ಕೆಲಸಗಾರರು ಅಪಘಾತದಿಂದ ಮರಣ ಹೊಂದಿದಲ್ಲಿ ರೂ. 50,000/- ಪರಿಹಾರಧನವನ್ನು ಕೊಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಸಹಕಾರಿ ಸಪ್ತಾಹ ಆಚರಣೆ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳು ಸದಸ್ಯ ಬೆಳೆಗಾರರ ಮನೆಗಳನ್ನು ಸಂದರ್ಶಿಸಿ ಸಂವಾದ ನಡೆಸಿದರು.
ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವ ಸಂಸ್ಥೆಗೆ ಸದಸ್ಯರೇ ಬೆನ್ನೆಲುಬು. ಪರಸ್ಪರ ಸಹಕಾರ, ಸಾಮರಸ್ಯದೊಂದಿಗೆ ಆಧುನಿಕ, ವೈಜ್ಞಾನಿಕ ದೃಷ್ಠಿಕೋನವನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಯಾಂತ್ರೀಕರಣ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುವುದು ಅತ್ಯವಶ್ಯವಾಗಿದೆ. ಗುಣಮಟ್ಟವನ್ನು ಕಾಯ್ದುಕೊಂಡು ವ್ಯವಹಾರದಲ್ಲಿ ಪಾರದರ್ಶಕತೆ ಪಾಲಿಸಬೇಕಾಗಿದೆ. ಬೆಳೆಗಾರರ ಹಿತರಕ್ಷಣೆಯ ಸಂಕಲ್ಪ ಸಿದ್ಧಿಗಾಗಿ ಸಂಸ್ಥೆ ಕಟಿಬದ್ಧವಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.