ಬೆಂಗಳೂರು : ರಾಜಸ್ಥಾನದ ನಂತರ ಭಾರತದಲ್ಲಿ ಅತಿ ಹೆಚ್ಚು ಹಾಗೂ ಅತಿವೇಗವಾಗಿ ಒಣ ಮರುಭೂಮಿಯಾಗುತ್ತಿರುವ (desertification) ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಎಂಬ ಅಧ್ಯಯನ ವರದಿಯೊಂದು ನಿಜಕ್ಕೂ ಆತಂಕಕಾರಿ. ಕಳೆದ 3-4 ದಶಕಗಳಿಂದ ನಾನಾ ಕಾರಣಕ್ಕಾಗಿ ನಮ್ಮ ರಾಜ್ಯದ ಹಸಿರ ಹೊದಿಕೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಒಂದೊಮ್ಮೆ ‘ಸುಂದರ ನದಿ ವನಗಳ ನಾಡೇ’, ‘ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳ ನಾಡು’ ಎಂದು ಹಿರಿಯ ಕವಿಗಳಿಂದ ಕರೆಯಿಸಿಕೊಂಡಿದ್ದ ನಮ್ಮ ಕನ್ನಡ ನೆಲ ಇದೀಗ ಪ್ರಾಕೃತಿಕವಾಗಿ ಸೊರಗಿದೆ. ಕನ್ನಡ ನೆಲವನ್ನು ಮತ್ತೆ ಹಸಿರಾಗಿಸುವ ಬೃಹತ್ ರಾಜ್ಯವ್ಯಾಪಿ ಅಭಿಯಾನವೊಂದರ ಮೂರನೆಯ ಹಂತವು ಮುಂದಿನ ಜೂನ್ ತಿಂಗಳಿನಿಂದ ನಡೆಯಲಿದೆ.
ಪರಿಸರ ಸಂರಕ್ಷಣೆ ಹಾಗೂ ಹಸಿರ ಹೊದಿಕೆ ಹೆಚ್ಚಿಸುವ ಉದ್ದೇಶದಿಂದ ಸಮರ್ಥ ಭಾರತ ಸಂಸ್ಥೆಯು ಆಯೋಜಿಸಿರುವ 1 ಕೋಟಿ ಗಿಡ ನೆಡುವ ಬೃಹತ್ ಅಭಿಯಾನದ ಮೂರನೇ ಹಂತವು ರಾಜ್ಯಾದ್ಯಂತ ಜೂನ್ 5 ರಿಂದ ಆಗಸ್ಟ್ 15, 2019 ರ ವರೆಗೆ ನಡೆಯಲಿದೆ.
600ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಸಹಕಾರ; ಮರಗಳ ನಿರ್ವಹಣೆಯತ್ತ ಗಮನ
ಈ ಅಭಿಯಾನಕ್ಕೆ ರಾಜ್ಯದ ಸುಮಾರು 600ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕೈಜೋಡಿಸಲಿವೆ. ರಾಜ್ಯಾದ್ಯಂತ ಸುಮಾರು 1 ಕೋಟಿಗೂ ಅಧಿಕ ಗಿಡ ನೆಡುವ ಪ್ರಕ್ರಿಯೆಗೆ ಈಗಾಗಲೇ ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ ಗಿಡಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಈಗಾಗಲೇ ಅನೇಕ ಸಂಘ ಸಂಸ್ಥೆಗಳು 30 ಲಕ್ಷಕ್ಕೂ ಮಿಕ್ಕ ಸೀಡ್ ಬಾಲ್ಗಳನ್ನು ತಯಾರು ಮಾಡಿವೆ. ಈ ಅಭಿಯಾನಕ್ಕೆ ರಾಜ್ಯದ ಶಾಲಾ-ಕಾಲೇಜುಗಳು, ನಾನಾ ಕಾರ್ಪೊರೇಟ್ ಸಂಸ್ಥೆಗಳೂ ಕೂಡ ಕೈಜೋಡಿಸಿವೆ. ಗಿಡಗಳನ್ನು ನೆಡುವುದು ಮಾತ್ರ ನಮ್ಮ ಜವಾಬ್ದಾರಿ ಆಗಬಾರದು. ನೆಟ್ಟ ಬಳಿಕ ಅದರ ಪಾಲನೆ, ನಿರ್ವಹಣೆಯತ್ತಲೂ ಗಮನಹರಿಸಲು ಮನವಿ ಮಾಡಲಾಗಿದೆ. ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ನೆಡುವುದು ಮತ್ತು ಕನಿಷ್ಠ ಮೂರು ವರ್ಷಗಳ ಕಾಲ ಸಂರಕ್ಷಣೆ ಮಾಡಲು ಸಾಧ್ಯವಾಗುವ ಕಡೆಗಳಲ್ಲಿ ಮಾತ್ರ ಗಿಡಗಳನ್ನು ನೆಡಬೇಕು ಎಂದು ಮನವಿ ಮಾಡಲಾಗಿದೆ.
ಹಂತ |
ಅವಧಿ |
ನೆಡಲಾದ ಒಟ್ಟು ಗಿಡಗಳು |
ಎಸೆಯಲಾದ ಬೀಜದುಂಡೆಗಳು (ಸೀಡ್ ಬಾಲ್ ಗಳು) |
ಸಾರ್ವಜನಿಕರ ಸಹಭಾಗಿತ್ವ |
ಅಭಿಯಾನಕ್ಕೆ ಸಹಕರಿಸಿದ ಸಂಸ್ಥೆಗಳು |
ಹಂತ-1 | ಜೂನ್ 5 ರಿಂದ ಆಗಸ್ಟ್ 15, 2017 | 17,30,599 | 52,97,550 | 28,011 | 468 |
ಹಂತ-2 | ಜೂನ್ 5 ರಿಂದ ಆಗಸ್ಟ್ 15, 2018 | 9,54,948 | 54,96,025 | 7245 | 315 |
ಹಂತ – 3 | ಜೂನ್ 5 ರಿಂದ ಆಗಸ್ಟ್ 15, 2019 | – | – | – | – |
ಹೀಗಿರಲಿದೆ ಅಭಿಯಾನ :
⭕ ಯಾವಾಗ? ಜೂನ್ 5ರಿಂದ ಆಗಸ್ಟ್ 15, 2019 ರವರೆಗೆ
⭕ ಎಲ್ಲಿ? ತಾಲೂಕು- ಹೋಬಳಿ-ಗ್ರಾಮ ಪಂಚಾಯತಿ ಮಟ್ಟದಲ್ಲಿ. ಸರಕಾರಿ ಅಥವಾ ಖಾಸಗಿ ಖಾಲಿ ಸ್ಥಳಗಳಲ್ಲಿ. ಇದಕ್ಕಾಗಿ ಸಂಬಂಧಪಟ್ಟವರಲ್ಲಿ ಪೂರ್ವ ಅನುಮತಿ ತೆಗೆದುಕೊಳ್ಳಬೇಕು.
⭕ ಯಾವ ಗಿಡ? ಪ್ರದೇಶಾನುಸಾರವಾಗಿ ಹೆಚ್ಚಾಗಿ ಹಣ್ಣು-ಹಂಪಲು, ನೆರಳು ಹಾಗೂ ಜೀವ ವೈವಿಧ್ಯಕ್ಕೆ ಪೂರಕವಾಗಬಲ್ಲ ಮರಗಳನ್ನೇ ಆಯ್ಕೆ ಮಾಡಬೇಕು. ಅಕೇಶಿಯಾ, ನೀಲಗಿರಿ (ಯುಕಲಿಪ್ಟಸ್) ಮರಗಳನ್ನು ನೆಡಬಾರದು ಎಂಬುದು ಪರಿಸರ ತಜ್ಞರ ಸಲಹೆ.
⭕ ಯಾರೆಲ್ಲ ಭಾಗಿ ?- ಕೃಷಿಕ, ಸಾಫ್ಟ್ವೇರ್ ತಂತ್ರಜ್ಞ, ವಿದ್ಯಾರ್ಥಿ, ಅಧ್ಯಾಪಕ, ವ್ಯಾಪಾರಿ ಇತ್ಯಾದಿ ಎಲ್ಲರೂ.
⭕ 3 ಪ್ರಕಾರಗಳಲ್ಲಿ ಅಭಿಯಾನ ನಡೆಯಲಿದೆ. 1. ಪ್ರತ್ಯಕ್ಷ ಗಿಡ ನೆಡುವುದು. 2. ಸೀಡ್ ಬಾಲನ್ನು ಎಸೆಯುವುದು ಅಥವಾ ನೆಲದಲ್ಲಿ ಹೂತು ನೆಡುವುದು, 3. ಆಯಾ ಗಿಡಗಳ ಬೀಜಗಳನ್ನು ನೇರವಾಗಿ ಬಿತ್ತುವುದು.
⭕ ಸೀಡ್ ಬಾಲ್ ತಯಾರಿ ಪ್ರಶಿಕ್ಷಣ – ಬೀಜದ ಉಂಡೆ ಅಥವಾ ಸೀಡ್ ಬಾಲ್ ತಯಾರಿ ಒಂದು ಉತ್ತಮವಾದ ವಿಧಾನ.
⭕ ಗಿಡದ ಜೊತೆ ಸೆಲ್ಫಿ:
ಗಿಡಗಳನ್ನು ನೆಡುವ – ಬೆಳೆಸುವ ಸ್ವಯಂಸೇವಕರು ಅವುಗಳ ಜೊತೆ ಸೆಲ್ಫಿ ತೆಗೆದು #SamarthaBharata ಹ್ಯಾಷ್ ಟ್ಯಾಗ್ನೊಂದಿಗೆ ಟ್ವಿಟ್ಟರ್ ಅಥವಾ ಫೇಸ್ಬುಕ್ನಲ್ಲಿ ಹಂಚಿಕೊಳ್ಳಬಹುದು.
⭕ ಸಾರ್ವಜನಿಕರ ಸಹಭಾಗಿತ್ವ ಹೇಗೆ?
ಅಭಿಯಾನಕ್ಕೆ ಗಿಡಗಳನ್ನು ಒದಗಿಸುವುದು, ನೆಟ್ಟ ಗಿಡಕ್ಕೆ 3 ವರ್ಷ ಸೂಕ್ತ ಸಂರಕ್ಷಣೆ – ನೀರು ಪೂರೈಕೆ, ಗೊಬ್ಬರ ಬೇಕಿದ್ದಲ್ಲಿ, ಟ್ರೀ ಗಾರ್ಡ್ (ಮರ ಸಂರಕ್ಷಕ ಕವಚಗಳು) ಒದಗಿಸುವುದು, ಗಿಡ ನೆಡಲು ಸೂಕ್ತ ಜಾಗ ಒದಗಿಸುವುದು. ಅಭಿಯಾನದ ಕುರಿತು ವ್ಯಾಟ್ಸಾಪ್, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಕೊಡುವುದು. ಅಭಿಯಾನಕ್ಕೆ ಇನ್ನೂ ಹತ್ತಾರು ಕೈಗಳನ್ನು ಜೋಡಿಸುವುದು.
ಹೆಚ್ಚಿನ ಮಾಹಿತಿಗೆ: 9738132356, 9980000993 / www.samarthabharata.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.