ಬಾಯಾರು: ಕಾಸರಗೋಡು ಜಿಲ್ಲೆಯ ಐತಿಹಾಸಿಕ ಪೊಸಡಿ ಗುಂಪೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ “ಸ್ವಚ್ಛ ಪೊಸಡಿ ಗುಂಪೆ” ಕಾರ್ಯಕ್ರಮವನ್ನು ಯುವ ಕರಾಡ ಕನಿಯಾಲ ಹಾಗೂ ಸೇವಾಭಾರತಿ ಆಶ್ರಯದಲ್ಲಿ ವಿವಿಧ ಕುಟುಂಬ ಶ್ರೀ ಸದಸ್ಯರು ಹಾಗೂ ಸ್ಥಳೀಯರ ಸಹಕಾರದಿಂದ ದಿನಾಂಕ 2-6-2019 ರಂದು ಆಯೋಜಿಸಲಾಯಿತು.
ಪೊಸಡಿ ಗುಂಪೆಗೆ ಪ್ರವಾಸಿಗರು ಬಂದು ಸಾಕಷ್ಟು ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಎಸೆದು ಹೋಗುತ್ತಿರುವುದು ಸ್ಥಳೀಯರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತಾಗಿ ಮಾಧ್ಯಮಗಳಲ್ಲಿ ವರದಿಗಳನ್ನು ನೀಡಿ ಸರಕಾರ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಆ ಹಿನ್ನೆಲೆಯಲ್ಲಿ ಪೊಸಡಿ ಗುಂಪೆಯನ್ನು ಸ್ವಚ್ಛಗೊಳಿಸಿ ಸುಂದರಗೊಳಿಸಬೇಕೆಂಬ ಉದ್ದೇಶದಿಂದ ಈ ಸ್ವಚ್ಚತಾ ಅಭಿಯಾನ ನಡೆಯಿತು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಸೇವಾ ಪ್ರಮುಖ್ ಶ್ರೀ ವಿಶ್ವನಾಥ ಅವರು ಮಾತನಾಡಿ ಸೇವೆ ಮಾಡುವ ಮೊದಲು ಪ್ರೀತಿ ಮಾಡಲು ಕಲಿಯಬೇಕು ಎಂಬುದಾಗಿ ಅಂಬೇಡ್ಕರ್ ಹೇಳಿದ್ದರು. ಪೊಸಡಿ ಗುಂಪೆಯ ಮೇಲೆ ಪ್ರೀತಿಯಿಂದ ಈ ಪ್ರದೇಶವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಇಲ್ಲಿ ಸೇರಿರುವರು ಆ ಮಾತನ್ನು ನಿಜಗೊಳಿಸಿದ್ದೀರಿ ಎಂದರು. ಅವರು ಮಾತನಾಡುತ್ತಾ ಹಿಂದಿನ ಕಾಲದಲ್ಲಿ ಪ್ಲಾಸ್ಟಿಕ್ ಉಪಯೋಗ ಇರಲಿಲ್ಲ, ಆದರೆ ಇತ್ತೀಚಿಗೆ ಪ್ಲಾಸ್ಟಿಕ್ ಉಪಯೋಗ ಹೆಚ್ಚಾಗಿದೆ. ಇದರಿಂದ ಪ್ರಕೃತಿ ನಾಶವಾಗುತ್ತಿದೆ. ನಾವೆಲ್ಲರೂ ಪ್ಲಾಸ್ಟಿಕ್ ಉಪಯೋಗ ಕಡಿಮೆ ಮಾಡುವ ಸಂಕಲ್ಪ ಮಾಡೋಣ. ಜೊತೆಯಲ್ಲಿ ಗಿಡ ನೆಡುವ ಹಾಗೂ ಜಲ ಸಂರಕ್ಷಣೆಯ ಕೆಲಸವನ್ನು ಪ್ರತಿ ಗ್ರಾಮ ಗ್ರಾಮಗಳಲ್ಲಿ ಮಾಡೋಣ. ಈ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಸಮಾಜದ ನಿರ್ಮಾಣ ಮಾಡೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ನಾರಾಯಣ ನಾಯಕ್ ಅವರು ಮಾತನಾಡಿ ಜನರೇ ಜಾಗೃತರಾಗಿ ಇಷ್ಟೊಂದು ವ್ಯಾಪಕವಾಗಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದ್ದು ಹಬ್ಬದ ವಾತಾವರಣದ ಅನುಭವ ನೀಡುತ್ತಿದೆ. ಇನ್ನೂ ಹೆಚ್ಚಿನ ಜನರಲ್ಲಿ ಈ ಜಾಗೃತಿ ಮೂಡಿಸುವಂತೆ ಮಾಡೋಣ ಎಂದರು. ಮುಂದಿನ ದಿನಗಳಲ್ಲಿ ಕಸದ ನಿರ್ವಹಣೆಗೆ ಈ ಭಾಗದಲ್ಲಿ ಕಸದ ತೊಟ್ಟಿ (dust bin) ಇಡಬೇಕು. ಆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಂದ ಮಾಡಿಸಬೇಕಾಗಿದೆ ಎಂದು ತಿಳಿಸಿದರು.
ಈ ಅಭಿಯಾನದಲ್ಲಿ ಸುಮಾರು 150 ಕ್ಕೂ ಹೆಚ್ಚು ಮಂದಿ ಭಾಗವಸಿದ್ದು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಹಾಗೂ ಮಕ್ಕಳು ಕೂಡ ಭಾಗವಹಿಸಿದ್ದರು. ಸುಮಾರು 25 ಕ್ಕೂ ಹೆಚ್ಚು ಚೀಲಗಳಲ್ಲಿ ಅಂದಾಜು 200kg ಗಳಷ್ಟು ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲ್ಗಳು ದೊರೆತಿವೆ. ಬೆಳಗ್ಗೆ 9 ರಿಂದ ಆರಂಭವಾದ ಅಭಿಯಾನ ಮಧ್ಯಾಹ್ನದವರೆಗೆ ನಡೆಯಿತು. ಕೊನೆಯಲ್ಲಿ ಎಲ್ಲರಿಗೂ ಪಾನೀಯ ಹಾಗೂ ಉಪಹಾರ ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.