ನರೇಂದ್ರ ಮೋದಿಯವರು ಮತ್ತೊಮ್ಮೆ ಗೆದ್ದಾಯಿತು, ಪ್ರಮಾಣ ವಚನ ಸ್ವೀಕರಿಸಿಯೂ ಆಯಿತು. ಮತ ನೀಡಿ, ಗೆಲ್ಲಿಸಿದೊಡನೆ ಜವಾಬ್ದಾರಿ ಮುಗಿಯಿತೇ? ಯೋಚಿಸುವ ಸಮಯ. ಒಬ್ಬ ಆಟಗಾರ ಮಾತ್ರ ಆಡಿ, ತಂಡ ವಿಶ್ವಕಪ್ ಗೆದ್ದ ಉದಾಹರಣೆ ಇರಲು ಸಾಧ್ಯವೇ ಇಲ್ಲ. ಅದು ಸಾಮೂಹಿಕ ಪ್ರಯತ್ನದ ಮತ್ತು ಪರಿಶ್ರಮದ ಫಲ. ಮೋದಿಯವರು ಗೆದ್ದ ನಂತರ ಅವರ ಮೇಲಿರುವ ಜವಾಬ್ದಾರಿ ಹೆಚ್ಚಿದಂತೆ, ಪ್ರತಿ ಭಾರತೀಯನ ಹೊಣೆಯೂ ಹೆಚ್ಚಿದೆ.
ಭಾರತ, ಸುಮಾರು 125 ಕೋಟಿ ಜನಸಂಖ್ಯೆ, ಅವರ ವಿಭಿನ್ನ ಆಚರಣೆಗಳು ಮತ್ತು ನಂಬಿಕೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ದೇಶಭಕ್ತಿಯ ಕುರಿತ ತಾತ್ಸಾರ ಇಂತಿಪ್ಪ ಭಾರತ ದೇಶದೊಳ್ 2014 ರಲ್ಲಿ ಮೋದಿಯವರು ಪ್ರಧಾನ ಸೇವಕರಾಗಿ ಬಂದು ನಿಂತಾಗ ಅವರ ಮುಂದೆ ಸವಾಲುಗಳ ಸಾಲೇ ಇತ್ತು. ಅವರು ದೊಡ್ಡ ದೊಡ್ಡ ಕನಸುಗಳ ತೋರಿಸಲಿಲ್ಲ. ತಮ್ಮ ಸರಳಾತಿ ಸರಳ ಯೋಜನೆಗಳ ಭಂಡಾರವನ್ನು ನೀಡಿದರು. ಅವುಗಳ ಪರಿಣಾಮ ಅಂದಾಜು ಮೀರಿ ಸಫಲತೆ ನೀಡಿತು. ಕಡಿಮೆ ದರದಲ್ಲಿ ಜೀವ ವಿಮೆ, ಔಷಧಿ, ಸಾಲ ಸೌಲಭ್ಯ, ಸ್ವಚ್ಛ ಭಾರತ ಅಭಿಯಾನ, ಉಜ್ವಲ ಯೋಜನೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಭಾರತದಲ್ಲಿರುವ ಕೊಳಚೆಗೇರಿಗಳ ತೋರಿಸಿ, ಸಿನಿಮಾ ಮಾಡಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದವರ ನಡುವೆ ವಿದೇಶೀಯರಿಗೆ ಭವ್ಯ ಭಾರತದ ಇತಿಹಾಸವನ್ನು ತಿಳಿಸಿದ್ದು ನರೇಂದ್ರ ಮೋದಿಯವರು.
ಹೀಗೆಲ್ಲಾ ಇರುವಾಗ ಬದಲಾವಣೆಯ ಗಾಳಿ ಮನ-ಮನೆಗಳಲ್ಲಿ ಆರಂಭವಾಗಬೇಕು. ಸುಮ್ಮನೆ ನಿಮ್ಮ ದಿನನಿತ್ಯದ ಸುತ್ತಲಿನ ಪ್ರಪಂಚವನ್ನು ಗಮನಿಸಿ. ವೇಗದ ಬದುಕಿನ ಹೆಸರಿನಲ್ಲಿ ಓಡುವ ಆತುರದ ಜನಗಳು, ಕಂಡ ಕಂಡಲ್ಲಿ ಉಗಿಯುವುದು, ಸಾಕು ಪ್ರಾಣಿಗಳ ಮಲ ಮೂತ್ರ ವಿಸರ್ಜನೆ ಮಾಡಿಸುವುದು, ಎಲ್ಲರೂ ಏಳುವ ಮೊದಲೇ ಹೋಗಿ ಎಲ್ಲೋ ಕಸ ಸುರಿದು ಬರುವುದು, ಬಯಲು ಶೌಚ ಇತ್ಯಾದಿ. ಆದರೂ ಕೇಳುವುದು ಎಲ್ಲಿಗೆ ಬಂತು ಸ್ವಚ್ಛ ಭಾರತ, ಇದು ನಮ್ಮ ದೇಶ ಕಣ್ರೀ, ಸ್ವಚ್ಛ ಆಗೋಕೆ ಸಾಧ್ಯಾನಾ? ಎಲ್ಲರೂ ಕಸ ಮಾಡಿದ್ದಾರೆ. ನಮ್ಮದೊಂದು ಹಾಕಿದ್ರೆ ಪ್ರಪಂಚ ಮುಳುಗಿ ಹೋಗಲ್ಲ ಎಂಬ ಬೇಜವಾಬ್ದಾರಿಯ ಮಾತುಗಳು. ಎಲ್ಲಿಯ ತನಕ ಒಂದು ಚಿಕ್ಕ ಚಾಕ್ಲೇಟ್ ಸಿಪ್ಪೆಯನ್ನು ಎಸೆಯುವಾಗ ಮನಸ್ಸು ಚುರುಕ್ ಅನ್ನುವುದಿಲ್ಲವೋ ಅಲ್ಲಿಯ ತನಕ ಭಾರತ ಸ್ವಚ್ಛವಾಗಲು ಹೇಗೆ ಸಾಧ್ಯ? ಸ್ವಚ್ಛ ಭಾರತ ಅಭಿಯಾನವು ನಗರ ಪ್ರದೇಶಗಳಲ್ಲಿ ವೈಯುಕ್ತಿಕ ಶೌಚಾಲಯ ನಿರ್ಮಾಣ, ಸಮುದಾಯ ಶೌಚಾಲಯ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಜನರ ಮನಸ್ಥಿತಿ ಬದಲಾವಣೆ, ವ್ಯಕ್ತಿಗತ ಸಂವಹನ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಯೋಜನೆಗಳ ಅನುಷ್ಠಾನ, ಸ್ಥಳೀಯ ಸಂಸ್ಕೃತಿ, ಪದ್ಧತಿ, ಬೇಡಿಕೆಗಳನ್ನು ಈಡೇರಿಸಲು ಗಮನ ಹರಿಸಲಾಗುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ಉತ್ತೇಜಕ ಧನಸಹಾಯವನ್ನು 2000 ರೂಪಾಯಿಗಳ ಬದಲಾಗಿ 10000 ರಿಂದ 12000 ರೂಪಾಯಿಗಳವರೆಗೆ ಏರಿಸಲಾಗಿದೆ. ದ್ರವ ಮತ್ತು ಘನತ್ಯಾಜ್ಯ ನಿರ್ವಹಣೆಗಾಗಿ ಗ್ರಾಮ ಪಂಚಾಯತ್ಗೆ ಧನಸಹಾಯವನ್ನೂ ಮಾಡಲಾಗುತ್ತಿದೆ.
ಇನ್ನು ದೇಶಭಕ್ತಿಯ ವಿಚಾರಕ್ಕೆ ಬರುವುದಾದರೆ ಹೇಳ ತೀರದಷ್ಟು ವಿಚಾರವಿದೆ. ಒಂದು ಘಟನೆ ನಡೆಯಿತು. ದೆಹಲಿಯ ಒಂದು ವಿಶ್ವವಿದ್ಯಾಲಯದಲ್ಲಿ ಭಾರತ ವಿರೋಧಿ ಘೋಷಣೆಗಳ ಕೂಗಲಾಯಿತು. ಅದೂ ಭಾರತೀಯರ ತೆರಿಗೆಯಲ್ಲಿ ಓದುತ್ತಿದ್ದ ಒಂದಿಷ್ಟು ದೇಶದ್ರೋಹಿ ವಿದ್ಯಾರ್ಥಿಗಳು ಕೂಗಿದರು. ನಿಜವಾಗಿ ಆಗಬೇಕಾದದ್ದು ಏನು? ಇಡೀ ದೇಶ ಅವರನ್ನು ಧಿಕ್ಕರಿಸಿ, ಜೈಲಿಗೆ ಅಟ್ಟುವುದೋ, ಗಡಿಪಾರೋ ಮಾಡಬೇಕಿತ್ತು. ಆದರೆ ಹಾಗೆ ಆಗಲಿಲ್ಲ. ಒಂದಿಷ್ಟು ರಾಜಕೀಯ ಪಕ್ಷಗಳು, ಬುದ್ದಿಜೀವಿಗಳು ಮತ್ತು ಪ್ರಗತಿಪರರು ಅವರ ಬೆನ್ನಿಗೆ ನಿಂತರು. ಎಂತಹ ವಿಪರ್ಯಾಸ. ಆ ವ್ಯಕ್ತಿ ಇತ್ತೀಚಿನ ಲೋಕ ಚುನಾವಣೆಗೂ ನಿಂತಿದ್ದ. ಸೋತ ಎಂಬುದು ಖುಷಿ ವಿಚಾರ. ಇತಿಹಾಸವನ್ನು ತಿರುಚಿ ಮಾಡುವ ಸಿನಿಮಾಗಳಿಗೆ ಈಗಲೂ ಅಭಿಮಾನಿಗಳು ಇದ್ದಾರೆ. ಅದು ಬಿಡಿ, ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಬೇಕೆಂದು ಬಂದಾಗ ಆಗಲೂ ವಿರೋಧ ವ್ಯಕ್ತವಾಯಿತು. ಐವತ್ತು ಸೆಕೆಂಡ್ಗಳು ನಿಲ್ಲದ ಈ ಜನ ಸಿನಿಮಾ ಟಿಕೇಟ್ಗಾಗಿ, ಪಡಿತರಕ್ಕಾಗಿ, ಮೊಬೈಲ್ ಕೊಳ್ಳಲು ಸಾಲುಗಟ್ಟಿ ತಾಸುಗಟ್ಟಲೆ ನಿಲ್ಲುತ್ತಾರೆ. ಸಾರಾಂಶ ಹೀಗಿದೆ, ಎಲ್ಲಿಯವರೆಗೆ ನಿಮ್ಮ ಆಹಾರದಲ್ಲಿ ಜೀವಸತ್ವಗಳು ತುಂಬಿದ್ದರೂ, ನೀವು ವಿಟಮಿನ್ ಮಾತ್ರೆಗಳನ್ನು ಸೇವಿಸುತ್ತಿರೋ ಹಾಗೆ ದೇಶಭಕ್ತಿಯನ್ನು ದೈನಂದಿನ ಬದುಕಿನಲ್ಲಿ ಆಚರಿಸಬೇಕು. ಅದು ಜೀವನದ ಒಂದು ಅವಿಭಾಜ್ಯ ಅಂಗವಾಗಲಿ.
ಕೇಂದ್ರ ಸರ್ಕಾರದ ಯೋಜನೆಗಳ ವಿಚಾರಕ್ಕೆ ಬರೋಣ. ಕೆಂಪು ಕೋಟೆಯ ಮೇಲೆ ನಿಂತು ಶೌಚಾಲಯಗಳ ಬಗ್ಗೆ ಮಾತನಾಡಿದ ಪ್ರಧಾನಿ ಮತ್ತೆ ಪ್ರಧಾನಿಯಾಗಿ ಬಂದಿದ್ದಾರೆ. ಅವರ ಯೋಜನೆಗಳ ಹೆಚ್ಚು ಜನರಿಗೆ ತಲುಪಿಸುವ ದಿಸೆಯಲ್ಲಿ ನಿರತರಾಗುವ ಅವಶ್ಯಕತೆ ಕಾಣುತ್ತಿದೆ. ಉಚಿತವಾಗಿ ಬ್ಯಾಂಕ್ ಖಾತೆಯ ಮಾಡುವ, ಕೇವಲ 342 ರೂ.ಗಳಿಗೆ 400000ರೂ.ಗಳ ವಿಮೆ ಸಿಗುವಂತಹ ಯೋಜನೆ ಹಿಂದೆಂದೂ ಇರಲಿಲ್ಲ. ಉಜ್ವಲ ಯೋಜನೆ ಅಕ್ಷರಶಃ ಮಹಿಳೆಯರ ಕಷ್ಟಗಳ ಎಷ್ಟೋ ಕಡಿಮೆ ಮಾಡಿದೆ. ಆಧಾರ ಸಂಖ್ಯೆ ಜೋಡಣೆ ಮಗುವಿನ ವಿದ್ಯಾರ್ಥಿ ವೇತನದಿಂದ ಹಿಡಿದು ವೃದ್ಧರ ಪಿಂಚಣಿಯ ತನಕ ಸರಳವಾಗಿ, ನೇರವಾಗಿ ಫಲಾನುಭವಿಗಳ ತಲುಪುವಂತೆ ಮಾಡಲಿದೆ. ಹಣ ಪಡೆಯಲು, ತೆಗೆಯಲು ಆಧಾರ ಸಂಖ್ಯೆ ಸಾಕು. ನಗದುರಹಿತ ಭಾರತ ಭ್ರಷ್ಟಾಚಾರದಿಂದ ದೂರ ಸರಿಯುವತ್ತ ದಾಪುಗಾಲು ಹಾಕುತ್ತಿದೆ.
ಸಾಮಾನ್ಯ ಪ್ರಜೆಯಾಗಿ ಏನು ಮಾಡಬಹುದು? ಇನ್ನು ಕೆಲವು ದಿನಗಳಲ್ಲಿ ರಕ್ಷಾ ಬಂಧನ ಬರಲಿದೆ. ಸರಳವಾಗಿ ಪ್ಲಾಸ್ಟಿಕ್ ರಹಿತ ರಾಖಿಗಳನ್ನು ಬಳಸಿ. ರಾಖಿ ಕಟ್ಟಿದವರಿಗೆ ಪ್ರತಿಯಾಗಿ ಅವರಿಗೆ ಪ್ರಧಾನಮಂತ್ರಿ ವಿಮೆಗಳನ್ನು, ಪಿಂಚಣಿಯನ್ನು ಅಥವಾ ಸುಕನ್ಯಾ ಸುರಕ್ಷಾ ಯೋಜನೆಯ ಮಾಡಿಸಬಹುದು. ಇದು ನೀವು ಅವರಿಗೆ ನೀಡುವ ಹಣಕ್ಕಿಂತ ಹೆಚ್ಚು ಬೆಲೆ ಬಾಳುತ್ತದೆ. ನಿಮ್ಮದೇ ಮಾತುಗಳಲ್ಲಿ ಯೋಜನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆಯಬಹುದು. ನಿಮ್ಮ ಮನೆ ಅಂಗಳದಲ್ಲಿ ನೀರಿನ ತೊಟ್ಟಿ ಇಟ್ಟು, ನಾಲ್ಕಾರು ದನಕರುಗಳಿಗೆ ನೀರು ಕೊಡುವುದು, ಒಂದು ಗಿಡ ನೆಟ್ಟು ಮಗುವಿನಂತೆ ಪಾಲಿಸಬಹುದು. ಇದೊಂದು ಸುಂದರ ಅನುಭವ ಆಗಬಹುದು.
ನರೇಂದ್ರ ಮೋದಿಯವರ ಅಭಿಮಾನಿಗಳಿಗೆ ‘ಭಕ್ತರು’ ಎಂಬ ವಿಶೇಷಣವನ್ನು ಬಳಸಲಾಗುತ್ತದೆ. ಅದೇ ಪದವನ್ನು ಹೆಮ್ಮೆಯಿಂದ ಬಳಸಿ ಹೇಳುವುದಾದರೆ ಇದು ಭಕ್ತರು ಮೋದಿಯವರಾಗುವ ಸಮಯ. ಕನಸುಗಳ ಬಿತ್ತಿದ ವ್ಯಕ್ತಿಯ ಬೆನ್ನಿಗೆ ನಿಂತು ನಿಮ್ಮ ಶಕ್ತಿಯ ಮೆರೆಯುವ ಕಾಲ. ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಮತ್ತು ಪರಿಚಯಸ್ತರಿಗೆ ಮೋದಿಯವರಿಗಿಂತ ನಿಮ್ಮ ಮಾತುಗಳು ಅರ್ಥವಾಗುತ್ತವೆ. ಅವರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಅರಿವು ಮೂಡಿಸುವುದು, ಬ್ಯಾಂಕ್, ಸಂಘ ಸಂಸ್ಥೆಗಳು, ಪಂಚಾಯಿತಿಗಳ ಸಹಯೋಗದಲ್ಲಿ ಕಾರ್ಯಕ್ರಮಗಳ ಏರ್ಪಡಿಸುವುದು, ಸ್ವಚ್ಛತೆಯ ಅರಿವು ಮೂಡಿಸುವುದು ಹೀಗೆ ಅನೇಕ ರೀತಿಯಲ್ಲಿ ನಿಮ್ಮ ಸೇವೆ ಸಲ್ಲಿಸಲು ಅವಕಾಶ ಅಪಾರವಾಗಿದೆ. ಹಾಗಾಗಿ ಎಲ್ಲರೂ ನರೇಂದ್ರ ಮೋದಿಯವರಾಗಿ ಭಾರತ ಕಟ್ಟುವ ಕೆಲಸ ಮಾಡಬೇಕಾಗಿದೆ.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.