ಪಶ್ಚಿಮಬಂಗಾಳದಲ್ಲಿ ಬಿಜೆಪಿಯು 18 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿದೆ. ಆದರೆ ಅತ್ಯಂತ ಕಠಿಣ ಸವಾಲನ್ನು ಎದುರಿಸಿ ಗೆದ್ದಿರುವ ಪಶ್ಚಿಮಬಂಗಾಳಕ್ಕೆ ಸಚಿವ ಸಂಪುಟದಲ್ಲಿ ಕೇವಲ ಎರಡು ಸ್ಥಾನಗಳನ್ನು ನೀಡಿದ್ದು ಅಲ್ಲಿನ ಬಿಜೆಪಿ ಘಟಕದ ಅಸಮಾಧಾನಕ್ಕೆ ಕಾರಣವಾಗಿದೆ. ಕಾರ್ಯಕರ್ತರಲ್ಲೂ ಈ ಬಗ್ಗೆ ಬೇಸರವಿದೆ. ಬಂಗಾಳದ ಇನ್ನೂ ಎರಡು ಮೂರು ಮಂದಿಗೆ ಸಂಪುಟದಲ್ಲಿ ಸ್ಥಾನ ನೀಡಬಹುದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಆದರೆ ಎರಡಕ್ಕಿಂತ ಹೆಚ್ಚಿನ ಬಂಗಾಳಿ ಸಚಿವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸದೇ ಇದ್ದುದು ರಾಜಕೀಯ ಲೆಕ್ಕಾಚಾರದಲ್ಲಿ ಸರಿಯಾದ ನಿರ್ಧಾರವೇ ಆಗಿದೆ. ಸೋಲಿನ ಹತಾಶೆಯಲ್ಲಿರುವ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮುಂಬರುವ ತಿಂಗಳುಗಳಲ್ಲಿ ತಮ್ಮ ಗೂಂಡಾಗಳನ್ನು, ತಮಗೆ ನಿಷ್ಠರಾದ ಪೊಲೀಸರನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುವ ಸಂಭಾವ್ಯತೆ ಇದೆ. ಈ ಹಿಂದೆಯೂ ಅವರು ಇದನ್ನೇ ಮಾಡಿದ್ದಾರೆ. ಹಲವಾರು ಮಂದಿ ಬಿಜೆಪಿ ಕಾರ್ಯಕರ್ತರು ಹತರಾಗಿದ್ದಾರೆ. ಬಿಜೆಪಿಗರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರನ್ನು ಜೈಲಿಗಟ್ಟಲಾಗಿದೆ. ಬಿಜೆಪಿ ಕಾರ್ಯಕರ್ತರ ಮನೆ ಮೇಲೆ ಕಲ್ಲು ತೂರಾಟ, ಆಸ್ತಿ ಧ್ವಂಸಗಳು ಅಲ್ಲಿ ನಿರಂತರವಾಗಿ ಜರುಗುತ್ತಿರುತ್ತದೆ.
ಇಂತಹ ಸನ್ನಿವೇಶದಲ್ಲಿ, ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕಾಪಾಡುವುದು ಮತ್ತು ಅವರನ್ನು ರಕ್ಷಣೆ ಮಾಡುವುದು ಬಿಜೆಪಿ ಘಟಕದ ಕರ್ತವ್ಯವಾಗಿರುತ್ತದೆ. ಕಾರ್ಯಕರ್ತರ ಜೊತೆಗೆ ನಾವು ನಿಂತಿದ್ದೇವೆ ಎಂಬುದನ್ನು ತೋರಿಸಿಕೊಡುವುದು ಪಕ್ಷದ ನಾಯಕತ್ವಕ್ಕೆ ಮುಖ್ಯವಾಗಿರುತ್ತದೆ. ಸುಳ್ಳು ಸುಳ್ಳಾಗಿ ದಾಖಲು ಮಾಡಿದ ಪ್ರಕರಣ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಡಲು ಕಾರ್ಯಕರ್ತರಿಗೆ ಸಹಾಯ ಮಾಡಬೇಕಾಗುತ್ತದೆ. ಇದಕ್ಕೆಲ್ಲಾ, ಬಂಗಾಳದಿಂದ ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಸಂಸದರು ತಮ್ಮ ಕ್ಷೇತ್ರಗಳಲ್ಲೇ ಇರುವುದು ಬಹುಮುಖ್ಯವಾಗುತ್ತದೆ.
ಸಂಸದರ ಪ್ರಸ್ತುತತೆಯಿಂದ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚುತ್ತದೆ ಮತ್ತು ಅವರಿಗೆ ತೃಣಮೂಲದ ದಾಳಿಯ ವಿರುದ್ಧ ಹೋರಾಡಲು ಧೈರ್ಯ ಮತ್ತು ಬಲ ಸಿಕ್ಕಂತಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಸಂಸದರು ಬಹು ಮುಖ್ಯ ಸ್ತಂಭವಾಗಿರುತ್ತಾರೆ ಮತ್ತು ವಿಶೇಷ ಸ್ಥಾನಮಾನ ಅವರಿಗಿರುತ್ತದೆ. ಹೀಗಾಗಿ ಆಯ್ಕೆಯಾಗಿರುವ 18 ಸಂಸದರೂ ತಮ್ಮ ಕಾರ್ಯಕರ್ತರ ಕಷ್ಟದ ದಿನಗಳಲ್ಲಿ ಅವರೊಂದಿಗಿರುವುದು ಮತ್ತು ತಮ್ಮ ಕ್ಷೇತ್ರದಲ್ಲಿ ಇದ್ದು ಕಾರ್ಯಕರ್ತರಿಗೆ ಸುದೀರ್ಘ ಅವಧಿಯವರೆಗೆ ಲಭ್ಯವಾಗಿರುವುದು ಕೂಡ ಮುಖ್ಯವಾಗಿರುತ್ತದೆ.
ಒಂದು ವೇಳೆ ಬಂಗಾಳದ ಸಂಸದರಿಗೆ ಸಂಪುಟದಲ್ಲಿ ಹೆಚ್ಚಿನ ಸ್ಥಾನವನ್ನು ನೀಡಿದರೆ, ಅವರು ತಮ್ಮ ಸಚಿವ ಜವಾಬ್ದಾರಿಯಲ್ಲಿ ಹೆಚ್ಚು ನಿರತರಾಗಿರಲಿದ್ದಾರೆ, ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಸಮಯವನ್ನು ನೀಡುವುದು ಅವರಿಗೆ ಸಾಧ್ಯವಾಗಲಿಕ್ಕಿಲ್ಲ. 2021ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲವನ್ನು ಸೋಲಿಸುವ ಪ್ರಯತ್ನದಲ್ಲಿರುವ ಬಿಜೆಪಿಗೆ ತನ್ನ ಕಾರ್ಯಕರ್ತರ ಉತ್ಸಾಹ ಬತ್ತದಂತೆ ನೋಡಿಕೊಳ್ಳುವುದು ಅನಿವಾರ್ಯ. ಸಂಸದರ ನಿರಂತರ ಲಭ್ಯತೆ, ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಇತ್ಯಾದಿಗಳಿಂದ ತೃಣಮೂಲ ವಿರುದ್ಧದ ಕಠಿಣ ಯುದ್ಧವನ್ನು ಬಿಜೆಪಿಗೆ ಸುಲಭವಾಗಿ ಗೆಲ್ಲಬಹುದಾಗಿದೆ. ಕೇಂದ್ರ ಸಚಿವರಾದರೆ, ಕೆಲವೊಂದು ಶಿಷ್ಟಾಚಾರಗಳನ್ನು ಇವರು ಪಾಲಿಸಲೇ ಬೇಕು. ಇದು ಪಕ್ಷದ ಗುರಿಗೆ ತೊಡಕಾಗಬಹುದು.
ಮತ್ತೊಂದು ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಇತರ ಪಕ್ಷಗಳಂತೆ ಬಿಜೆಪಿಯು ಸಚಿವ ಸ್ಥಾನವನ್ನು ಗೆದ್ದ ಸಂಸದರಿಗೆ ನೀಡುವ ಬಹುಮಾನ ಎಂದು ಪರಿಗಣಿಸುವುದಿಲ್ಲ. ಅದೊಂದು ಜವಾಬ್ದಾರಿ ಎಂದು ಪರಿಗಣಿಸುತ್ತದೆ. ಬಾಬೂಲ್ ಸುಪ್ರಿಯೊ ಮತ್ತು ಎಸ್ ಎಸ್ ಅಹುಲ್ ವಾಲಿಯಾ ಅವರನ್ನು ಹೊರತು ಪಡಿಸಿ ಬಂಗಾಳದ ಉಳಿದ 16 ಸಂಸದರೂ ಮೊದಲ ಬಾರಿ ಸಂಸದರಾದವರು. ಸಚಿವರಾಗುವ ಮುನ್ನ ಅವರಿಗೆ ಅನುಭವದಿಂದ ಕಲಿಯಬೇಕಾದುದು ತುಂಬಾ ಇರುತ್ತದೆ. ಇವರಿಗೆ ಸಚಿವ ಸ್ಥಾನವನ್ನು ನೀಡಿದರೆ ಪಕ್ಷದ ಪದಾಧಿಕಾರಿಗಳ ಜೊತೆ ಹೆಗಲಿಗೆ ಹೆಗಲು ಕೊಟ್ಟು ತೃಣಮೂಲ ದಾಳಿಯನ್ನು ಎದುರಿಸಲು ಹೋರಾಡುವ ಅವಕಾಶದಿಂದ ಇವರು ವಂಚಿತರಾಗಬಹುದು.
1977 ರಿಂದ ಕಮ್ಯೂನಿಸ್ಟರು ಅಧಿಕಾರಕ್ಕೆ ಬಂದಾಗಿನಿಂದ ಬಂಗಾಳ ಅಧಃಪತನದತ್ತ ಸಾಗುತ್ತಿದೆ. ಇದನ್ನು ತಡೆಯಬೇಕಾದರೆ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸುವುದು, ಅಧಿಕಾರದಿಂದ ಕಿತ್ತೆಸೆಯುವುದು ಅತ್ಯಗತ್ಯವಾಗುತ್ತದೆ. ಈ ಕೆಲಸಕ್ಕೆ ಬಿಜೆಪಿ ತನ್ನನ್ನು ತಾನೇ ಸಮರ್ಪಿಸಿಕೊಂಡಿದೆ ಮತ್ತು ಇದನ್ನು ಸಾಧಿಸಲು ಅದು ಎಲ್ಲವನ್ನೂ ತ್ಯಾಗ ಮಾಡಬೇಕಿದೆ. ಹೊಸ ಎಂಪಿಗಳನ್ನು ಮಂತ್ರಿಗಳನ್ನಾಗಿ ಮಾಡಿದರೆ ರಾಜ್ಯ ಬಿಜೆಪಿ ಘಟಕ ಮತ್ತು ಸಂಸದರು ತಮ್ಮ ಗುರಿಯನ್ನು ಸಾಧಿಸಲಾಗದೆ ತಬ್ಬಿಬ್ಬುಗೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.