ಸಂಕಟ ನಿವಾರಣೆಗೆ, ಖುಷಿಯ ಕ್ಷಣಗಳಲ್ಲಿ ಮತ್ತು ಋಣ ಸಂದಾಯ ಅಂತೆಲ್ಲಾ ದಿನನಿತ್ಯದ ಬದುಕಿನಲ್ಲಿ ಹಲವಾರು ದೇವಾಲಯಗಳನ್ನು ಎಡ ತಾಕುತ್ತಲೇ ಇರುತ್ತೇವೆ. ನಾಸ್ತಿಕನ ಮನಸ್ಸು ಪ್ರಶಾಂತತೆ ಎಂದು ಬಂದಾಗ ಬಂದು ನಿಲ್ಲುವುದು ಈ ಮಂದಿರಗಳಲ್ಲೆ. ಪ್ರತಿ ದೈವ ಸ್ಥಳಗಳಲ್ಲೂ ನಂಬಿಕೆ, ಮಹಾತ್ಮೆ ಮತ್ತು ಒಂದು ಗೌರವದ ಭಾವನೆಯನ್ನು ಬೆಸೆದುಕೊಂಡಿರುತ್ತದೆ.
ಜನರೇನು ದಡ್ಡರಲ್ಲ. ಅವರಿಗೆ ಮದುವೆಗೆ, ಹಬ್ಬಗಳಿಗೆ ಅಷ್ಟೇ ಏಕೆ ಸಾವಿನ ಮನೆಗೂ ಹೇಗೆ ಹೋಗಬೇಕು ಎಂದು ತಿಳಿದಿದೆ. ಆದರೆ ದೇವಸ್ಥಾನಗಳೆಂದರೆ ಏನೋ ತಾತ್ಸಾರ. ಪ್ರತಿಯೊಂದು ವಿಷಯಕ್ಕೂ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗಂಟು ಹಾಕಬೇಡಿ. ನಿಜ ದೇವರು ನಿಮ್ಮ ವಸ್ತ್ರ ನೋಡಿ ಹರಸಲಾರ. ಆದರೆ ನಿಮ್ಮ ತಿಳುವಳಿಕೆಯ ಮಟ್ಟದಲ್ಲಿ ಒಮ್ಮೆ ಯೋಚಿಸಿ.
ಬರುವವರು ತಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡಿರಬೇಕು ಎಂಬುದು ಸರ್ವೇ ಸಾಮಾನ್ಯವಾಗಿ ಕೇಳಿಬರುವ ಮಾತು. ನಿಜ, ಈಗ ಅವರು ಮಾಡುತ್ತಿರುವುದು ಅದನ್ನೇ ಅಲ್ಲವೇ? ಆದರೆ ಆ ಸ್ಥಳದ ಹಿರಿಮೆಯನ್ನು ನೀವು ಕಾಪಾಡಿದಂತೆ ಆಗಲಿಲ್ಲ ಎನ್ನುವುದು ನಿಮ್ಮ ಗಮನಕ್ಕೆ ಬರಲಿಲ್ಲ. ಭಾರತ ಅಸಹಿಷ್ಣು ಎಂದು ಹೇಳುವ ಅನೇಕರು ಮತೀಯ ರಾಷ್ಟಗಳಿಗೆ ತೆರಳುವಾಗ, ಮೈ ತುಂಬ ಮುಚ್ಚಿಕೊಂಡು ಹೋಗಿದ್ದನ್ನು ನೋಡಿರುತ್ತೀರಿ. ಕಟ್ಟು ಪಾಡುಗಳ ತೊರೆಯುವುದೇ ಸಾಧನೆಯಲ್ಲ.
ವಸ್ತ್ರ ಭಾರತೀಯ ಸಂಸ್ಕೃತಿಯಲ್ಲಿ ಒಂದು ಭಾಗವಾಗಿ ಬಂದಿದೆ. ಮನೆತನಗಳ ಹೆಸರುಗಳನ್ನು ನಿಮ್ಮ ಹೆಸರಿಗೆ ಜೋಡಿಸಿ ಹೇಗೆ ತಲತಲಾಂತರಗಳ ತನಕ ಕಾಯುತ್ತಿರೋ ಹಾಗೆ ಸಂಸ್ಕೃತಿಯು ಹಾಗೆಯೇ ಒಂದು ಜವಾಬ್ದಾರಿ. ಇದು ಯಾರೋ ಹೇಳಿ ಕೇಳಿ ನೀವು ಅರಿಯುವುದಲ್ಲ. ನೀವು ನಿಮ್ಮ ವ್ಯಕ್ತಿತ್ವವನ್ನು ಸಾರುವ ಬಗೆ. ಅಕ್ಷರಸ್ಥ ಪ್ರಪಂಚಕ್ಕೆ ನಡು ರಾತ್ರಿಯ ಆಚರಣೆಗಳಿಂದ ಹಿಡಿದು ಬೆಳಗ್ಗೆ ನಾಯಿ ಹಿಡಿದು ಓಡುವ ತನಕ ವಸ್ತ್ರ ಸಂಹಿತೆ ಇದೆ. ಯಾವುದೋ ದೇವಾಲಯದ ಮುಂದೆ ನಿಂತ ಕಾವಲುಗಾರ ನಿಮ್ಮ ಬಟ್ಟೆ ಸರಿ ಇಲ್ಲ ಎಂದೋ ಅಥವಾ ಆಲಯದ ಆವರಣದಲ್ಲಿ ಹಾಕಿದ ಫಲಕ ತೋರುವ ಮೊದಲೇ ಎಚ್ಚೆತ್ತುಕೊಂಡರೆ ಒಳ್ಳೆಯದು.
ದೇವಸ್ಥಾನಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿದೆ. ಅಲ್ಲಿಗೆ ಆಗಮಿಸುವಾಗ ನಮ್ಮ ಧಿರಿಸು ಕೂಡ ಸಂಸ್ಕೃತಿಯ ಭಾಗವಾಗಿದ್ದರೆ ಚೆನ್ನ. ಬರ್ಮುಡಾ, ಟಿಶರ್ಟ್, ಸ್ಕರ್ಟ್ ಹಾಕಿಕೊಂಡು ಬಂದರೆ ದೇವಾಲಯ ಮತ್ತು ರೆಸ್ಟೋರೆಂಟ್ಗೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಧಿರಿಸು ಮಾತ್ರವಲ್ಲ ದೇವಾಲಯಕ್ಕೆ ಆಗಮಿಸುವ ನಮ್ಮ ವರ್ತನೆಯೂ ಸಂಸ್ಕಾರಯುತವಾಗಿರಬೇಕು. ದೇವರ ದರ್ಶನದ ವೇಳೆ ಮೊಬೈಲ್ನಲ್ಲಿ ಮಾತನಾಡುವುದು, ಅಸಭ್ಯ ರಿಂಗ್ ಟೋನ್ ಗುನುಗುವಂತೆ ಮಾಡುವುದು, ಕಿರಿಚಾಡುವುದು, ಉಗುಳುವುದು, ಕೆಟ್ಟ ಮಾತನ್ನು ಆಡುವುದು ಕೂಡ ಸಮಂಜಸವಲ್ಲ. ದೇಗುಲ ಆವರಣ ಶಾಂತಿ ಮತ್ತು ಶಿಸ್ತಿನಿಂದ ಕೂಡಿರುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.
ಮನಃಶಾಂತಿಯನ್ನು ಮರಳಿ ಪಡೆಯುವ ಜಾಗ ದೇಗುಲ. ಅದು ಭಕ್ತರ ಪಾಲಿಗೆ ಪರಮ ಪವಿತ್ರ ಸ್ಥಳ. ಇಲ್ಲಿಗೆ ಆಗಮಿಸುವಾಗ ಮನಸ್ಸು ಮತ್ತು ದೇಹ ಎರಡೂ ಶುದ್ಧವಾಗಿರಬೇಕು. ದೇಗುಲದ ಪಾವಿತ್ರ್ಯತೆಯನ್ನು ಕಾಪಾಡುವುದು ಎಲ್ಲಾ ಭಕ್ತರ ಆದ್ಯ ಕರ್ತವ್ಯವಾಗಿರಬೇಕು.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.