ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಗಾದೆ ಇಲ್ಲಿ ಬಹು ಸೂಕ್ತವಾದದ್ದು. ಮಕ್ಕಳಿಗೆ ಕ್ರೀಡೆ ಹೆಚ್ಚು ಮೌಲ್ಯವನ್ನು ಒದಗಿಸುತ್ತದೆ. ಶಿಸ್ತು, ತಾಳ್ಮೆ ಮತ್ತು ಸಂಯಮವನ್ನು ಕ್ರೀಡೆ ಜೀವನಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತದೆ. 2004 ರ ಒಲಂಪಿಕ್ಸ್ನಲ್ಲಿ ಶ್ರೀ ರಾಜವರ್ಧನ್ ಸಿಂಗ್ ರಾಥೋಡ್ರವರು ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದರು. ಇವರು ಒಲಿಂಪಿಕ್ಸ್ ಪಂದ್ಯಗಳಲ್ಲಿ ಶೂಟಿಂಗ್ ದೇಶಕ್ಕೆ ಕೀರ್ತಿ ಬರಬಹುದೆಂದು ತೋರ್ಪಡಿಸಿದರು. ಅಭಿನವ್ ಬಿಂದ್ರಾ, ಗಗನ್ ನಾರಂಗ್, ವಿಜಯ್ ಕುಮಾರ್ ಇದನ್ನು 2008 ಮತ್ತು 2012 ರ ಒಲಿಂಪಿಕ್ಸ್ನಲ್ಲಿ ಸಾಬೀತು ಪಡಿಸಿದರು.
1991 ರಲ್ಲಿ ರಾಷ್ಟ್ರೀಯ ಕ್ರೀಡಾ ದಿನದಂದು ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ರಕ್ಷಿತ್ ಶಾಸ್ತ್ರೀರವರ ಜನನ. ಪ್ರಸ್ತುತ ಇವರು ಮೈಸೂರಿನಲ್ಲಿರುವ ಎನ್.ರಂಗರಾವ್ ಅಂಡ್ ಸನ್ಸ್ ಇದರ ಅಂಗ ಸಂಸ್ಥೆಯಾದ ವ್ಯೋದಾ ಪ್ರೈ.ಲಿ,ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಇ. (ಮೆಕ್ಯಾನಿಕಲ್), ಎಂಟೆಕ್ (ಪಿಡಿಎಂ), ಎಂಬಿಎ (ಹೆಚ್ಆರ್ಎಂ) ವಿದ್ಯಾ ಅರ್ಹತೆಯನ್ನು ಪಡೆದಿರುತ್ತಾರೆ. ಇವರು ಒಬ್ಬ ಉತ್ತಮ ಕ್ರೀಡಾ ಪಟು. ಶಾಲಾ ದಿನಗಳಲ್ಲೇ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುತ್ತಾರೆ. ಕಿರಿಯರ ಗುಂಪಿನ ಕಟಾ ಪಂದ್ಯದಲ್ಲಿ ರಾಷ್ಟ್ರೀಯ ಚಿನ್ನದ ಪದಕ ಮತ್ತು ಕುಮಿತೆಯಲ್ಲಿ ಬೆಳ್ಳಿಯ ಪದಕಗಳನ್ನು ಗಳಿಸಿದ್ದಾರೆ. ಈಜು ಸ್ಪರ್ಧೆ 4×100 ರಾಜ್ಯ ಕ್ರೀಡಾಕೂಟದಲ್ಲಿ ಫ್ರೀಸ್ಟೈಲ್ ಮೆಡ್ಲಿ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ರಕ್ಷಿತ್ ಶಾಸ್ತ್ರೀ ಶಾಲಾದಿನಗಳಲ್ಲಿ ಕರ್ನಾಟಕ ರಾಜ್ಯ ಈಜು ತಂಡದಲ್ಲಿ ಭಾಗವಹಿಸಿದ್ದ ಸ್ನೇಹಿತ ವಿಪುಲ್ ಅವರು ಪ್ರೋತ್ಸಾಹದ ಮೇರೆಗೆ 2015 ರಲ್ಲಿ ರೈಫಲ್ ಶೂಟಿಂಗ್ ತರಬೇತಿ ಪಡೆಯಲು ಸೇರ್ಪಡೆಯಾದರು. ಕೇವಲ 14 ದಿನಗಳ ತರಬೇತಿ ಪಡೆದ ರಕ್ಷಿತ್ ಮುಕ್ತ ಶೂಟಿಂಗ್ ಏರ್ ರೈಫಲ್ ಛಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಬೆಳ್ಳಿಯ ಪದಕವನ್ನು ಎಂಡಿಆರ್ಎಗೆ ತಂದುಕೊಟ್ಟರು. ತರಬೇತುದಾರ ಶ್ರೀ ಸುರೇಶ್ರವರು 1991 ರಲ್ಲಿ ರಾಷ್ಟ್ರೀಯ ದಾಖಲೆ ಬರೆದ ಅನುಭವವನ್ನು ಕೇಳಿ ಸ್ಫೂರ್ತಿಗೊಂಡು ಪಿಸ್ತೂಲ್ ತರಬೇತಿಯನ್ನು ಪಡೆಯಲಿಚ್ಛಿಸಿದರು.
ಇದರ ಪ್ರತಿಫಲ 7ನೇ ದಕ್ಷಿಣ ವಲಯ ಶೂಟಿಂಗ್ ಛಾಂಪಿಯನ್ ಶಿಪ್ನಲ್ಲಿ ಕರ್ನಾಟಕ ‘ಎ’ ತಂಡ ಹಿಂದೆಂದೂ ಕಂಡರಿಯದ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಗಳಿಸುವಂತಾಯಿತು. ನಂತರ ಹೆಚ್ಚಿನ ತರಬೇತು ಪಡೆದು ಸುಮಾರು 50 ಕ್ಕೂ ಮಿಗಿಲಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಇವರು ಗಳಿಸಿದ್ದಾರೆ. 2016 ರಲ್ಲಿ ಮುಂಬೈನಲ್ಲಿ ನಡೆದ 26 ನೇ ಆಲ್ ಇಂಡಿಯಾ ಜಿ.ವಿ. ಮಾವಲಂಕರ್ ಶೂಟಿಂಗ್ ಛಾಂಪಿಯನ್ ಶಿಪ್ನಲ್ಲಿ 3ನೇ ಸ್ಥಾನವನ್ನು ಗಳಿಸಿದ್ದಾರೆ. ಇದು ಇವರ ಅತ್ಯುತ್ತಮ ಪಂದ್ಯಗಳಲ್ಲಿ ಒಂದಾಗಿದೆ. 62 ನೆಯ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ರಕ್ಷಿತ್ ಶಾಸ್ತ್ರೀ 28 ನೇ ಶ್ರೀಯಾಂಕವನ್ನು ಗಳಿಸಿ, ಭಾರತ ತಂಡದ ಟ್ರಯಲ್ಸ್ಗಳನ್ನು ನೀಡುತ್ತಿದ್ದಾರೆ.
ಭಾರತ ಸೇನೆಯ ಆರ್ಮಿ ಮಾರ್ಕ್ಸ್ಮ್ಯಾನ್ಶಿಪ್ ಯೂನಿಟ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿರುವ ಶ್ರೀ ಸುರೇಶ್ ಎಂ.ಎಸ್. ರವರು ಶೂಟಿಂಗ್ ತರಬೇತಿಯನ್ನು ರಕ್ಷಿತ್ ಶಾಸ್ತ್ರೀಯವರಿಗೆ ನೀಡುತ್ತಿದ್ದಾರೆ. ಮೈಸೂರು ಜಿಲ್ಲಾ ರೈಫಲ್ ಅಸೋಸಿಯೇಷನ್ (MDRA) ಸಂಸ್ಥಾಪಕರಾದ ಸುರೇಶ್ರವರು 15 ಆಗಸ್ಟ್ 2013 ರಲ್ಲಿ ಈ ಸಂಸ್ಥೆಯನ್ನು ಮೈಸೂರಿನಲ್ಲಿ ಹುಟ್ಟುಹಾಕಿದರು. ಇವರು ರಾಷ್ಟ್ರೀಯ ಮತ್ತು ಫೆಡರೇಷನ್ ಕಪ್ ದಾಖಲೆಗಳನ್ನು ಬರೆದು 35 ರಾಷ್ಟ್ರೀಯ ಪದಕಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. ವಿಜಯಕುಮಾರ್, ಪೆಂಬಾ ತಮಾಂಗ್, ಗುರ್ಪಾಲ್ ಸಿಂಗ್ ಮತ್ತಿತರು ಇವರಿಂದ ತರಬೇತಿ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಪಡೆದಿರುತ್ತಾರೆ.
9 ನೇ ಮೇ 2019 ರಂದು ಜರ್ಮನಿಯ ಹ್ಯಾನೋವರ್ನಲ್ಲಿ (ISCH) ನಡೆದ ಅಂತರರಾಷ್ಟ್ರೀಯ ಶೂಟಿಂಗ್ ಸ್ಪರ್ಥೆಯಲ್ಲಿ ಇವರು ಭಾರತದ ಸಿಡಿಆರ್ಎ ತಂಡವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಬೆಳ್ಳಿಯ ಪದಕವನ್ನು ತಂದುಕೊಟ್ಟಿರುವ ಕೀರ್ತಿ ಇವರದಾಗಿದೆ.
ರಕ್ಷಿತ್ ಶಾಸ್ತ್ರಿಯ ಈ ಪಯಣದ ಸಮಯದಲ್ಲಿ ನೈತಿಕವಾಗಿ ಮತ್ತು ಮಾನಸಿಕವಾಗಿ ಮೊದಲ ದಿನದಿಂದಲೇ ತನ್ನ ಬೆಂಬಲವನ್ನು ಕೊಟ್ಟು ಪ್ರೋತ್ಸಾಹಿಸಿದ ರಂಗರಾವ್ ಅಂಡ್ ಸನ್ಸ್ ಸಂಸ್ಥೆಯ ಶ್ರೀ ಅರ್ಜುನ್ ರಂಗಾರವರನ್ನು ಇವರು ಬಹುವಾಗಿ ಸ್ಮರಿಸುತ್ತಾರೆ. ಅವರು ಯಾವಾಗಲೂ ಉತ್ತಮ ಕೆಲಸ ಮತ್ತು ಕ್ರೀಡೆಗಳಿಗೆ ಸದಾ ಹಸಿರು ನಿಶಾನೆ ತೋರಿಸಿ ಪ್ರೋತ್ಸಾಹಿಸುತ್ತಾರೆ.
ಶ್ರೀ ಪ್ರಾಣೇಶ್, ಶ್ರೀ ಹರೀಶ್ ಚಂದನ್ ಮತ್ತು ಶ್ರೀ ಅವಿನಾಶ್ ಇವರುಗಳು ಕೊಟ್ಟ ಪ್ರೋತ್ಸಾಹ ಅವಿಸ್ಮರಣೀಯವಾದದ್ದು. ಮಹಾಂತೇಶ್, ಕೃಷ್ಣಮೂರ್ತಿ, ಡಾ. ಅನನ್ಯ ಮತ್ತು ಸ್ನೇಹಿತರು ನಿರಂತರವಾಗಿ ತನ್ನ ಕ್ರೀಡಾ ವಾತ್ಯಲ್ಯಕ್ಕೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಶಾಲಾ ದಿನಗಳ ಸಹಪಾಠಿಗಳು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನನ್ನನ್ನು ಪ್ರೇರೇಪಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ರಕ್ಷಿತ್ ಶಾಸ್ತ್ರೀ ತಮ್ಮ ಮುಗ್ಧ ಮನಸ್ಸಿನಿಂದ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.