ಸುಮಾರು ಏಳು ತಿಂಗಳ ಹಿಂದಿನವರೆಗೂ ಏಷ್ಯಾದ ಅತೀ ದೊಡ್ಡ ಜೈಲು ಎಂದೇ ಕರೆಯಲ್ಪಡುವ ತಿಹಾರ್ ಜೈಲಿನಲ್ಲಿ ಕಲೆ ಎಂಬುದು ಕೇವಲ ಕೈದಿಗಳ ಹವ್ಯಾಸವಾಗಿತ್ತು. ಆದರೀಗ ಕಲೆ ಜೈಲಿನ ಕೈದಿಗಳ ಬದುಕನ್ನು ಸಮೃದ್ಧಗೊಳಿಸುತ್ತಿದೆ.
ಜೈಲ್ ನಂಬರ್ 4 ಕೈದಿ. 25 ವರ್ಷದ ರಮೇಶ್ ಸಿಂಗ್ ಕಳೆದ ನಾಲ್ಕು ತಿಂಗಳುಗಳಿಂದ ಕಲೆಯಿಂದಾಗಿ ರೂ.1.5 ಲಕ್ಷ ಗಳಿಸಿದ್ದಾರೆ. ಅವರ ಸ್ನೇಹಿತ ಅನ್ವರ್ ಒಮಿಸಿ ಇದೇ ಅವಧಿಯಲ್ಲಿ 60 ಸಾವಿರ ರೂಪಾಯಿ ಗಳಿಸಿದ್ದಾರೆ. ಜಾಮೀನು ಪಡೆದು ಹೊರಗಿರುವ ಮೊಹಮ್ಮದ್ ಆಯ್ಯುಬ್ ಎಂಬ ಕೈದಿಯವರು ರೂ.1.6 ಲಕ್ಷವನ್ನು ಗಳಿಸಿದ್ದಾರೆ. ಈ ಕೈದಿಗಳು ನಿತ್ಯ ಜೈಲಿನಲ್ಲಿ ಕೆಲಸ ಮಾಡಿ ಪಡೆಯುವ ವೇತನ ರೂ.171.
ಈ ಎಲ್ಲಾ ಕೈದಿಗಳು ತಿಹಾರ್ ಸ್ಕೂಲ್ ಆಫ್ ಆರ್ಟ್ನೊಂದಿಗೆ ಸಹಭಾಗಿಗಳಾದವರು. 2016ರ ನವೆಂಬರ್ 4ರಂದು ಈ ಆರ್ಟ್ ಸಂಸ್ಥೆಯನ್ನು ಸ್ಥಾಪನೆ ಮಾಡಲಾಯಿತು. ಕೈದಿಗಳಲ್ಲಿ ಪರಿವರ್ತನೆ ತರುವುದು ಮತ್ತು ಅವರಿಗೆ ಪುನರ್ವತಿ ಕಲ್ಪಿಸುವುದು ಇದರ ಉದ್ದೇಶ. ಇದರ ಮೂಲಕ ಕೈದಿಗಳಿಗೆ ಚಿತ್ರ ಬಿಡಿಸುವ ಕಲೆಯನ್ನು ಹೇಳಿಕೊಡಲಾಗುತ್ತಿದೆ. ಈಗಾಗಲೇ ಇಲ್ಲಿ ತರಬೇತಿಯನ್ನು ಪಡೆದ ಹಲವು ಕೈದಿಗಳು ಉತ್ತಮ ಕಲೆಗಾರರಾಗಿ ಪರಿವರ್ತನೆಗೊಂಡಿದ್ದಾರೆ. ಇವರು ಬಿಡಿಸಿದ ಸುಂದರವಾದ ಚಿತ್ರಗಳನ್ನು ಸರ್ಕಾರಿ ಕಛೇರಿಗಳಿಗೆ ನೀಡಲಾಗಿದೆ, ಜೈಲಿಗೆ ಅತಿಥಿಯಾಗಿ ಆಗಮಿಸಿದ ಗಣ್ಯರಿಗೆ ನೀಡಲಾಗಿದೆ. ಕೆಲವೊಂದು ಚಿತ್ರಗಳನ್ನು ಜೈಲಿನ ಗೋಡೆಗಳ ಮೇಲೆ ಹಾಕಲಾಗಿದೆ.
ಕೈದಿಗಳು ರಚನೆ ಮಾಡಿದ ಚಿತ್ರಗಳನ್ನು ಮಾರಾಟ ಮಾಡಿ, ಅದರಿಂದ ಬರುವ ಶೇ. 50 ರಷ್ಟು ಹಣವನ್ನು ಅವರಿಗೇ ನೀಡುವ ಪ್ರಯತ್ನವನ್ನೂ ತಿಹಾರ್ ಜೈಲು ಆಡಳಿತ ಕಳೆದ 7 ತಿಂಗಳಿನಿಂದ ನಡೆಸಿದೆ. ತಿಹಾರ್ ಜೈಲಿನ ವತಿಯಿಂದ ನಡೆಸಲಾಗುವ ಸ್ಟೋರ್ನಲ್ಲಿಯೇ ಚಿತ್ರಗಳನ್ನು ಮಾರಾಟ ಮಾಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಕ್ಕೆ ಭಾರೀ ಬೇಡಿಕೆಗಳೂ ಬರುತ್ತಿವೆ. ತಿಹಾರ್ ಜೈಲಿನ ಒಳಗಡೆಯೇ ಇರುವ ಸ್ಟೋರಿನಲ್ಲಿ ಕೈದಿಗಳೇ ತಯಾರಿಸಿದ ಪಿಠೋಪಕರಣ, ಸುಗಂಧದ್ರವ್ಯ, ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತದೆ.
ಕೈದಿಗಳು ಮಾಡಿದ ಚಿತ್ತಾಕರ್ಷಕ ಚಿತ್ರಗಳು ಸರ್ಕಾರಿ ಏಜೆನ್ಸಿಗಳಿಂದ, ಪ್ರದರ್ಶನಗಳಿಂದ, ಕೇಂದ್ರ ಸಚಿವರುಗಳ ಕಛೇರಿಗಳಿಂದ ಗ್ರಾಹಕರನ್ನು ಪಡೆದುಕೊಂಡಿದೆ. ದೆಹಲಿಯಲ್ಲಿನ ESI ಆಸ್ಪತ್ರೆಯು ಇಲ್ಲಿಂದ 2 ಲಕ್ಷ ರೂಪಾಯಿ ಮೊತ್ತದ ಪೇಟಿಂಗ್ ಅನ್ನು ಖರೀದಿ ಮಾಡಿದೆ, ಆಸ್ಪತ್ರೆಯ ಕಟ್ಟಡದಾದ್ಯಂತ ಇದನ್ನು ಹಾಕಲಾಗಿದೆ. ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ನಲ್ಲಿ ಇಡಲಾಗಿದ್ದ ಕೈದಿಗಳ ಪೇಟಿಂಗ್ 1 ಲಕ್ಷ ರೂಪಾಯಿ ಮೊತ್ತಕ್ಕೆ ಮಾರಾಟವಾಗಿದೆ. ಜೈಲು ಅಧಿಕಾರಿಗಳು ಹೆಸರನ್ನು ಬಹಿರಂಗಪಡಿಸದ ಕೇಂದ್ರ ಸಚಿವರೊಬ್ಬರು ತಮ್ಮ ಕಟ್ಟಡಕ್ಕಾಗಿ ಇಲ್ಲಿಂದಲೇ ಪೇಟಿಂಗ್ ಅನ್ನು ಖರೀದಿ ಮಾಡಿದ್ದಾರೆ.
“ಕಲೆಯು ಕೈದಿಗಳನ್ನು ಪರಿವರ್ತನೆ ಮಾಡುವ ಮಾರ್ಗವಾಗಿದೆ” ಎಂದು ಜೈಲಿನ ಪ್ರಧಾನ ನಿರ್ದೇಶಕ ಅಜಯ್ ಕಶ್ಯಪ್ ಹೇಳುತ್ತಾರೆ.
“ಎಲ್ಲಾ ಕೈದಿಗಳು ಹುಟ್ಟು ಅಪರಾಧಿಗಳಲ್ಲ. ಕೆಲವೊಂದು ಸನ್ನಿವೇಶ ಅವರನ್ನು ಅಪರಾಧಿಗಳನ್ನಾಗಿಸಿದೆ. ಅವರು ಎರಡನೇ ಅವಕಾಶ ಪಡೆಯಲು ಅರ್ಹರು. ತಾವು ರಚಿಸಿದ ಪೇಟಿಂಗ್ ಅನ್ನು ಮಾರಾಟ ಮಾಡುವ ಮೂಲಕ ಹಣ ಪಡೆಯುವ ಅವರು ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರ ಕಲೆಯ ಶೇ.50ರಷ್ಟು ಮೊತ್ತವನ್ನು ಅವರಿಗೇ ನೀಡುತ್ತೇವೆ. ಕಠಿಣ ಪರಿಶ್ರಮ ಫಲ ನೀಡುತ್ತದೆ, ಅವರ ಶ್ರಮ ಸಕಾರಾತ್ಮಕವಾಗಿ ಬಳಕೆಯಾಗುತ್ತಿದೆ ಎಂಬುದನ್ನು ಈ ಮೂಲಕ ಅವರಿಗೆ ಅರ್ಥ ಮಾಡಿಸುತ್ತಿದ್ದೇವೆ.
ತಿಹಾರ್ ಸ್ಕೂಲ್ ಆಫ್ ಆರ್ಟ್ಸ್ IGNOU ಅಂಗಸಂಸ್ಥೆಯಾಗಿದ್ದು, ಆಸಕ್ತರಿಗೆ ಡಿಪ್ಲೋಮ ಕೋರ್ಸ್ಗಳನ್ನು ಒದಗಿಸುತ್ತದೆ. 12ನೇ ತರಗತಿ ಪಾಸಾದವರೂ ಇಲ್ಲಿಗೆ ಅರ್ಜಿ ಹಾಕಬಹುದಾಗಿದೆ. ವಾರ್ಷಿಕ 400 ಮಂದಿ ಪೇಟಿಂಗ್ ಕಲಿಯಲು ಇಲ್ಲಿ ಅರ್ಜಿ ಹಾಕುತ್ತಾರೆ. ಅವರಲ್ಲಿ ಬಹುತೇಕರು ಕೈದಿಗಳೇ ಆಗಿರುತ್ತಾರೆ.
ಪೇಟಿಂಗ್ ಮೂಲಕ ಹಣ ಸಂಪಾದನೆ ಮಾಡಿದ ಕೈದಿಗಳು ಅದನ್ನು ತಮ್ಮ ಮನೆಯವರಿಗೂ ಕಳುಹಿಸುತ್ತಾರೆ. ಜೀವನದಲ್ಲಿ ಉತ್ಸಾಹ ಕಳೆದುಕೊಂಡ, ಖಿನ್ನತೆಗೆ ಜಾರಿರುವ ಕೈದಿಗಳಿಗೆ ಮರು ಜೀವನವನ್ನು ಒದಗಿಸಿಕೊಡುವಲ್ಲಿ ಇದು ಯಶಸ್ವಿಯಾಗಿದೆ.
ಕೈದಿಗಳ ಪೇಟಿಂಗ್ ಅನ್ನು ಮಾರಾಟ ಮಾಡುವ ಯೋಜನೆಯನ್ನು ತಿಹಾರ್ ಜೈಲು ಆಡಳಿತ ರೂಪಿಸಿದ್ದು ಕೇವಲ 7 ತಿಂಗಳ ಹಿಂದೆಯಷ್ಟೇ. ಕಳೆದ ನಾಲ್ಕು ತಿಂಗಳಲ್ಲಿ ಇವರ ಪೇಟಿಂಗ್ ದೆಹಲಿ, ಗುರುಗ್ರಾಮ್, ಜೈಪುರಗಳಲ್ಲಿ ಪ್ರದರ್ಶನಗೊಂಡಿದೆ. ಭಾರೀ ಬೇಡಿಕೆಯನ್ನೂ ಪಡೆದುಕೊಂಡಿದೆ.
ಜೈಲುಗಳಿರುವುದು ಅಪರಾಧಿಗಳನ್ನು ಶಿಕ್ಷಿಸಲು ಮಾತ್ರವಲ್ಲ, ಅವರನ್ನು ಬದಲಾಯಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಕೂಡ ಜೈಲಿನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ತಿಹಾರ್ ಜೈಲು ನಡೆಸುತ್ತಿರುವ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.