ನವದೆಹಲಿ: 2019ರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಇದೇ ಭಾನುವಾರ (ಮೇ 19) ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ವಾರಣಾಸಿ ಕ್ಷೇತ್ರವು ಕೊನೆಯ ಹಂತದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ವಾರಣಾಸಿ ಜನತೆಗೆ ಭಾವನಾತ್ಮಕ ವೀಡಿಯೋ ಸಂದೇಶವನ್ನು ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ತನ್ನನ್ನು ತಾನು ಕಾಶಿ ವಾಸಿ ಎಂದು ಬಣ್ಣಿಸಿಕೊಂಡಿದ್ದಾರೆ.
ಮಂಗಳವಾರ ವೀಡಿಯೋ ಬಿಡುಗಡೆ ಮಾಡಿರುವ ಪ್ರಧಾನಿ ಮೋದಿಯವರು, ‘ವಾರಣಾಸಿಗೆ ಬರುವ ಪ್ರತಿಯೊಬ್ಬರು ಈ ನಗರದ ಭಾಗವಾಗಿ ಹೋಗುತ್ತಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಹಲವಾರು ಬಾರಿ ಇಲ್ಲಿಗೆ ಬಂದಿದ್ದೇನೆ. ದೇಗುಲಗಳ ನಗರ ಎಂದೇ ಖ್ಯಾತವಾಗಿರುವ ಕಾಶಿಯು ನನಗೆ ಸ್ಫೂರ್ತಿಯ ಸೆಲೆಯಾಗಿದೆ. ಈ ನಗರಕ್ಕೆ ಒಂದು ಬಾರಿ ಭೇಟಿ ಕೊಟ್ಟ ಯಾವುದೇ ವ್ಯಕ್ತಿ ಕೂಡ ಈ ನಗರದಿಂದ ಮತ್ತೆ ಬೇರ್ಪಡಲು ಸಾಧ್ಯವೇ ಇಲ್ಲ,’ ಎಂದಿದ್ದಾರೆ.
“ಕಾಶಿ ಎನ್ನುವುದು ನನಗೆ ಕೇವಲ ಒಂದು ಶಬ್ದವಲ್ಲ, ಅದು ರಾಜಕೀಯ, ಸಂಸ್ಕೃತಿ ಮತ್ತು ಧಾರ್ಮಿಕವಾಗಿ ನನಗೆ ಪ್ರೇರಣೆ. ಇಲ್ಲಿನ ಜನರು ನನಗೆ ಸೇವೆ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ ಎಂಬುದು ನನ್ನ ಸೌಭಾಗ್ಯ” ಎಂದಿದ್ದಾರೆ.
“ವಿಶ್ವನಾಥನ ನೆಚ್ಚಿನ ತಾಣವಾಗಿರುವ ವಾರಣಾಸಿಗೆ ಬೇರೆ ಯಾರ ಅವಶ್ಯಕತೆಯೂ ಇಲ್ಲ. ನನ್ನ ಜೀವನದಲ್ಲಿ ಇಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಈ ಅವಕಾಶವನ್ನು ನೀಡುವ ಮೂಲಕ ವಿಶ್ವನಾಥ ನನಗೆ ಆಶೀರ್ವದಿಸಿದ್ದಾನೆ” ಎಂದಿದ್ದಾರೆ.
ಕಳೆದ 5 ವರ್ಷಗಳಲ್ಲಿ ವಾರಾಣಸಿ ಹಾಗೂ ಅದರ ಸುತ್ತಮುತ್ತಲ ನಗರಗಳಲ್ಲಿ ಹೆದ್ದಾರಿ, ರೈಲ್ವೆ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆ. ಆದರೂ, ಮಾಡಬೇಕಿರುವ ಹಲವು ಕೆಲಸಗಳು ಬಾಕಿ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸಲು ಮತ್ತೊಂದು ಅವಕಾಶ ನೀಡಬೇಕು. ಕಾಶಿಯ ಪ್ರತಿಯೊಬ್ಬರೂ ಸಹ ತಮ್ಮನ್ನು ತಾವು ಸಹ ನರೇಂದ್ರ ಮೋದಿ ಎಂದುಕೊಂಡು ಚುನಾವಣೆ ಎದುರಿಸುತ್ತೀರಿ ಎಂಬುದು ನನಗೆ ಗೊತ್ತು. ಹಾಗಾಗಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬದಲ್ಲಿ ಹೆಚ್ಚು ಮತದಾರರು ಭಾಗಿಯಾಗಬೇಕು ಎಂದು ಅವರು ಕರೆಕೊಟ್ಟಿದ್ದಾರೆ.
Here is my message for the people of beloved Kashi. Do watch! https://t.co/GIoqGdzJuy
— Chowkidar Narendra Modi (@narendramodi) May 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.