ಭಾರತೀಯ ಸನಾತನ ಸಂಸ್ಕೃತಿಗೆ ಜ್ಞಾನನಿಧಿಗಳಾದ ವೇದಗಳೇ ಬುನಾದಿ. ವೇದಗಳಲ್ಲಿ ಅಧ್ಯಾತ್ಮದ ಕುರಿತಾಗಿ ಹೇಳಿದ ಭಾಗವನ್ನು ಉಪನಿಷತ್ತುಗಳೆಂದೂ, ಇವು ವೇದಗಳ ಸಾರರೂಪವಾಗಿರುವುದರಿಂದ ವೇದಾಂತವೆಂದೂ ಪ್ರಸಿದ್ಧವಾಗಿವೆ. ಉಪನಿಷತ್ತುಗಳು, ಸ್ಮೃತಿ ರೂಪದ ಭಗವದ್ಗೀತೆ ಹಾಗೂ ಸೂತ್ರರೂಪದ ಬ್ರಹ್ಮಸೂತ್ರಗಳು. ಇವನ್ನು ಪ್ರಸ್ಥಾನತ್ರಯ ಗ್ರಂಥಗಳು ಎನ್ನುತ್ತಾರೆ. ಬ್ರಹ್ಮಜ್ಞಾನ ಹಾಗೂ ಮೋಕ್ಷವನ್ನು ಕುರಿತಾಗಿ ಈ ಗ್ರಂಥಗಳಲ್ಲಿ ಚರ್ಚಿಸಲಾಗಿದೆ.
ಶ್ರೀ ಶಂಕರ ಭಗವತ್ಪಾದರು, ಶ್ರೀ ಮಧ್ವಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರು ಪ್ರಸ್ಥಾನ ತ್ರಯಗಳಿಗೆ ಭಾಷ್ಯವನ್ನು ಬರೆದು ಮತಾಚಾರ್ಯರೆಂದು ಪ್ರಸಿದ್ಧರಾಗಿದ್ದಾರೆ.
ಪ್ರಸ್ಥಾನತ್ರಯ ಗ್ರಂಥಗಳಲ್ಲಿ ಹೇಳಿದ ಜೀವ, ಬ್ರಹ್ಮ, ಜಗತ್ತು, ಅವುಗಳ ಸಂಬಂಧ ಹಾಗೂ ಮೋಕ್ಷಗಳ ಕುರಿತಾಗಿ ಭಿನ್ನವಾದ ಅಭಿಮತವನ್ನು ಆಚಾರ್ಯ ತ್ರಯರು ತಮ್ಮ ಭಾಷ್ಯಗಳಲ್ಲಿ ಉಲ್ಲೇಖಿಸಿದ್ದು ಅದ್ವೈತ, ದ್ವೈತ ಹಾಗೂ ವಿಶಿಷ್ಟಾದ್ವೈತವೆಂಬ ಸಂಪ್ರದಾಯಗಳಾಗಿ ಹೊರಹೊಮ್ಮಿವೆ. ಮೇಲ್ನೋಟಕ್ಕೆ ಮೂರು ಮತಗಳು ಕೇವಲ ಅಧ್ಯಾತ್ಮ ಸಂಬಂಧಿಯಾಗಿದ್ದು, ಅತ್ಯಂತ ಜಟಿಲವಾಗಿದ್ದು, ವಿರೋಧಗಳಿಂದ ಕೂಡಿವೆ ಎಂದು ಭಾಸವಾಗುತ್ತವೆ. ಆದರೆ ಆಚಾರ್ಯ ತ್ರಯರ ಮೂಲೋದ್ದೇಶ್ಯವೇ ವೈಯಕ್ತಿಕವಾಗಿ, ಸಾಮಾಜಿಕವಾಗಿ ಸುಖ, ಶಾಂತಿ ಹಾಗೂ ಸಮನ್ವಯವನ್ನು ಸಾಧಿಸುವುದಾಗಿದೆ. ಕೆಲವು ಅಂಶಗಳಲ್ಲಿ ಪರಸ್ಪರ ವಿಚಾರ ವಿರೋಧವಿದ್ದರೂ ಮೋಕ್ಷಸಾಧನೆಯ ವಿಚಾರದಲ್ಲಿ, ಅಂತರಂಗದ ಶುದ್ಧಿಯ ವಿಚಾರದಲ್ಲಿ ಹೀಗೆ ಹಲವು ವಿಚಾರಗಳಲ್ಲಿ ಸಹಮತವೂ ಕೂಡ ಇದೆ.
ಶ್ರೀ ಮಧ್ವಾಚಾರ್ಯರು
(ಕ್ರಿ.ಶ 1238 ರಿಂದ 1317) ದ್ವೈತದರ್ಶನದ ಪ್ರವರ್ತಕರು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯ ಹತ್ತಿರ ಪಾಜಕಕ್ಷೇತ್ರದಲ್ಲಿ ಹುಟ್ಟಿದರು. ಬಾಲ್ಯದಿಂದಲೇ ಇಹಲೋಕದ ವ್ಯಾಪಾರದಲ್ಲಿ ವಿರಕ್ತರಾಗಿ, ಅಧ್ಯಾತ್ಮನಿಷ್ಠರಾಗಿದ್ದರು. ಉಡುಪಿಯಲ್ಲಿ ಕೃಷ್ಣನನ್ನು ಪ್ರತಿಷ್ಠಾಪಿಸಿ, ಅನೇಕರನ್ನು ತಮ್ಮ ದರ್ಶನದಿಂದ ಅನುಯಾಯಿಗಳನ್ನಾಗಿ ಮಾಡಿಕೊಂಡಿರುತ್ತಾರೆ. ಶ್ರೀ ಮಧ್ವಾಚಾರ್ಯರು ತಮ್ಮ ಗ್ರಂಥಗಳಲ್ಲಿ ಪರಮಾತ್ಮನ ಸೃಷ್ಟಿಯು ಮಾಯಕವಾಗಿರದೇ ಯಥಾರ್ಥವಾಗಿದೆ. ಆದ್ದರಿಂದ ಪರಮಾತ್ಮನಿಗೆ ನಿಷ್ಠರಾಗಿ ಸತ್ಕರ್ತವ್ಯಗಳನ್ನು ಮಾಡುತ್ತಾ, ಸತ್ಯ, ದಯೆ, ತ್ಯಾಗ, ಪರೋಪಕಾರ, ಅಹಿಂಸೆ, ಅದ್ರೋಹ ಮುಂತಾದ ಜಗತ್ತಿನ ಹಾಗೂ ಮಾನವತೆಯ ಧಾರಕಗಳಾದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಹಾಗೂ ನಿಷ್ಕಾಮನೆಯಿಂದ್ ಪರಮಾತ್ಮನ ಸೇವಾದೃಷ್ಟಿಯಿಂದ ಸ್ವಕರ್ಮ ಮತ್ತು ಸಮಾಜಸೇವೆಯನ್ನು ಮಾಡಬೇಕು. ಇದರಿಂದ ಹಂತ ಹಂತವಾಗಿ ವ್ಯಕ್ತಿಯ ಅಂತರಂಗ ಶುದ್ಧಿಯಾಗುವುದಲ್ಲದೇ ಪರಮಾತ್ಮನ ದರ್ಶನಕ್ಕೆ ಇವೇ ಕಾರಣವಾಗಿವೆ ಎಂದು ಹೇಳುತ್ತಾರೆ. ಇವರ ಮತದಲ್ಲಿ ಜಗತ್ತು ಸತ್ಯವಾಗಿರುವುದರಿಂದ ಕರ್ತವ್ಯಗಳಲ್ಲಿ ವಿಮುಖರಾಗದೇ ಅವಿದ್ಯೆಯ ಭೂಮಿಕೆಯಲ್ಲಿ ತಳ್ಳದೇ ಆಚರಿಸಲೇ ಬೇಕಾದ ಆದರ್ಶದಾಯವಾದ ಸಾಧನವಾಗಿರುವುದರಿಂದ, ಸಮಾಜಸೇವೆಯೂ ಮೋಕ್ಷಕ್ಕೆ ಸಾಧನವಾದ ಅಂಶವೇ ಆಗಿದೆ ಎಂದು ವೇದಾಂತದಲ್ಲಿಯೇ ಸಮಾಜಸೇವೆಗೆ ಇಷ್ಟೊಂದು ಮಹತ್ವವನ್ನು ನೀಡಿದ್ದಾರೆ.
ಶ್ರೀ ರಾಮಾನುಜಾಚಾರ್ಯರು
(ಕ್ರಿ.ಶ 1017-1137) ತಮಿಳುನಾಡಿನ ಶ್ರೀ ಪೆರಂಬದೂರಿನ ಆಸೂರಿ ಕೇಶವಾಚಾರ್ಯ ಹಾಗೂ ಭೂದೇವಿಯವರ ಮಗನಾಗಿ ಜನಿಸಿದರು. ಮಾನಸ ಗುರುಗಳಾದ ಯಾಮುನಾಚಾರ್ಯರ ಕೊನೆಯ ಆಸೆಯಂತೆ ವಿಶಿಷ್ಟಾದ್ವೈತ ಮತವನ್ನು ಪುನರುತ್ಥಾಪಿಸಿದರು. ಇವರ ವಿಶೇಷತೆಯೆಂದರೆ ಇವರಿಗೆ ಜಾತಿಪದ್ಧತಿಯಲ್ಲಿ ನಂಬಿಕೆ ಇರಲಿಲ್ಲ. ಇವರ ಗುರುಗಳಾದ ಕಾಂಚೀಪೂರ್ಣರು ಹಾಗೂ ಮಹಾಪೂರ್ಣರು ಬ್ರಾಹ್ಮಣರಾಗಿರಲಿಲ್ಲ. ಅನೇಕ ಬಾರಿ ಇವರನ್ನು ಹಲವು ರೀತಿಗಳಲ್ಲಿ ರಾಮಾನುಜರು ಸತ್ಕರಿಸಿದ್ದರು. ಅಷ್ಟೆ ಅಲ್ಲ ಶ್ರೀಮಂತ, ಬಡವ ಎಂಬ ಭೇದವೂ ರಾಮಾನುಜಾಚಾರ್ಯರಲ್ಲಿ ಇರಲಿಲ್ಲ. ಮೇಲುಕೋಟೆಯಲ್ಲಿ ದೇವಾಲಯವನ್ನು ಕಟ್ಟುವಾಗಲೂ ಕೆಲಸಗಳಲ್ಲಿ ಹರಿಜನರು ನೆರವಾದರು. ಇವರನ್ನು ರಾಮಾನುಜರು ತಿರುಕುಲತ್ತಾರ್ (ಶ್ರೇಷ್ಠಕುಲದವರು) ಎಂದು ಕರೆದರು. ಒಮ್ಮೆ ಗೋಷ್ಠೀಪೂರ್ಣರೆಂಬ ಗುರುಗಳು ಅಷ್ಟಾಕ್ಷರಿ ತಿರುಮಂತ್ರವನ್ನು ಬೋಧಿಸಿದರು. ಈ ಮಂತ್ರದ ಫಲವು ಪರಮಪದವೆಂದು ತಿಳಿದು ದಿವ್ಯಜ್ಞಾನವನ್ನು ಎಲ್ಲರೂ ಪಡೆಯಬೇಕೆಂಬ ಆಶಯದಿಂದ ಊರಿನ ದೇವಸ್ಥಾನದ ಗೋಪುರವನ್ನೇರಿ ಎಲ್ಲ ಜನರಿಗೆ ಬೋಧಿಸಿದರು. ರಹಸ್ಯವಾಗಿ ಪಡೆದ ಮಂತ್ರವನ್ನು ಹೀಗೆ ಎಲ್ಲರಿಗೂ ನೀಡಿದ್ದರ ಬಗ್ಗೆ ಗುರುಗಳು ಪ್ರಶ್ನಿಸಿದಾಗ, ‘ಗುರುವಿನ ಮಾತನ್ನು ಮೀರಿ ನನಗೆ ನರಕ ಪ್ರಾಪ್ತಿಯಾದರೂ ತೊಂದರೆಯಿಲ್ಲ, ಆದರೆ ಎಲ್ಲರಿಗೂ ಇದರಿಂದ ಕಲ್ಯಾಣವಾಗುವುದು ನನಗೆ ಮುಖ್ಯ’ವೆಂದರು. ಹೀಗೆ ರಾಮಾನುಜಾಚಾರ್ಯರ ಸಾಮಾಜಿಕ ಪ್ರೀತಿ ಅವರ ಜೀವನದುದ್ದಕ್ಕೂ ತಿಳಿಯುತ್ತದೆ. ಅನೇಕ ದೇವಾಲಯಗಳನ್ನೂ, ಕೆರೆಗಳನ್ನೂ ಕಟ್ಟಿಸಿದ ಇವರು ಭೇದಭಾವ ರಹಿತರಾಗಿ ಎಲ್ಲರನ್ನೂ ಪ್ರೀತಿಯಿಂದ ಕಂಡರು ಹಾಗೂ ಎಲ್ಲರಿಗೂ ಇದನ್ನೇ ಬೋಧಿಸಿದರು.
ಶ್ರೀ ಶಂಕರಾಚಾರ್ಯರು
(ಕ್ರಿ.ಶ 788-820) ಕೇರಳದ ಕಾಲಟಿಯಲ್ಲಿ ಆರ್ಯಾಂಬಾ ಹಾಗೂ ಶಿವಗುರು ಇವರಿಗೆ ಮಗನಾಗಿ ಜನಿಸಿದರು. ಕೇವಲ 32 ವರ್ಷಗಳ ಕಾಲ ಬದುಕಿದ್ದರೂ ಈ ಅವಧಿಯಲ್ಲಿಯೇ ಅನೇಕ ಮಹತ್ಕಾರ್ಯಗಳನ್ನು ಸಾಧಿಸಿದರು. ಅದ್ವೈತ ಸಿದ್ಧಾಂತವೇ ಎಲ್ಲವನ್ನೂ ಒಳಗೊಳ್ಳುವುದು ಎನ್ನುವುದನ್ನು ಸೂಚಿಸುತ್ತದೆ. ಎಲ್ಲವನ್ನೂ ತನ್ನಲ್ಲಿ ಕಾಣುವುದು ಹಾಗೂ ತನ್ನನ್ನು ಎಲ್ಲದರಲ್ಲಿ ಕಾಣುವ ಉದಾತ್ತ ಆತ್ಮತತ್ತ್ವವೇ ಅದ್ವೈತದ ತಿರುಳು. ಇಂತಹ ಅನುಪಮ ತತ್ತ್ವವನ್ನು ವೇದದಿಂದ ಬೆಣ್ಣೆಯಂತೆ ತೆಗೆದು ನೀಡಿದ ಆಚಾರ್ಯರೂ ನಿರುಪಮರೇ. ಜಗತ್ತು ಮಾಯೆಯಿಂದ ಆವೃತವಾಗಿದೆ. ಯಾವುದೂ ಶಾಶ್ವತವಲ್ಲವಾದ್ದರಿಂದ ಕೃತಕವಾಗಿರುವುದಕ್ಕೆ ದುಃಖಿಸಿ ಪ್ರಯೋಜನವೇನು. ಪ್ರಪಂಚದಲ್ಲಿ ನೀರಿನ ಹನಿ ಕಮಲದಲ್ಲಿ ನಿಂತಂತೆ ನಿರ್ಮಮ ಭಾವದಿಂದ ಇರಬೇಕು ಎಂಬುದನ್ನು ತಿಳಿಸುತ್ತಾರೆ. ಬೌದ್ಧರು ಆಸ್ತಿಕ ದರ್ಶನಗಳ ಅಡಿಪಾಯವನ್ನೇ ಅಲುಗಾಡಿಸಿದಾಗ ಅವರ ಸಿದ್ಧಾಂತವನ್ನು ತರ್ಕದ ಮೂಲಕ ಖಂಡಿಸಿ ಆಸ್ತಿಕ ದರ್ಶನಗಳ ಪುನರುತ್ಥಾನವನ್ನು ಮಾಡಿದರು. ಎಲ್ಲವೂ ಆತ್ಮವೇ, ಅಜ್ಞಾನದಿಂದ ಬೇರೆ ಬೇರೆಯಾಗಿ ಕಾಣುತ್ತಿದೆ. ಈ ಅಜ್ಞಾನವನ್ನು ಜ್ಞಾನದಿಂದ ನಾಶ ಮಾಡಿದರೆ ಎಲ್ಲವೂ ಮತ್ತೆ ಒಂದೇ ಆಗುತ್ತದೆ ಎಂದು ಸಾರಿದರು. ಸಂಪೂರ್ಣ ಭರತ ಖಂಡವನ್ನು ಕಾಲ್ನಡಿಗೆಯಿಂದಲೇ ಸಂಚರಿಸಿ ತಮ್ಮ ಏಕತ್ಮತಾ ಸಿದ್ಧಾಂತದಿಂದ ರಾಷ್ಟ್ರೀಯ ಭಾವೈಕ್ಯವನ್ನು ಸಾಧಿಸಿದರು.
ಆಚಾರ್ಯ ತ್ರಯರೂ ತಮ್ಮ ವಿಶಿಷ್ಟ ಜ್ಞಾನದಿಂದ ಸಮಾಜಕ್ಕೆ ಮಹಾಕೊಡುಗೆಯನ್ನು ನೀಡಿದವರೇ. ಎಲ್ಲ ಮಹಾತ್ಮರೂ ಸಮಾಜದ ಉದ್ಧಾರಕ್ಕಾಗಿಯೇ ಜನಿಸುತ್ತಾರೆ. ’ಪರಂ ಪರೋಪಕಾರಾರ್ಥಂ ಯೋ ಜೀವತಿ ಸ ಜೀವತಿ’ (ಯಾರು ಬೇರೆಯವರಿಗಾಗಿ ಬದುಕುತ್ತಾನೆಯೋ ಅವನ ಬದುಕೇ ನಿಜವಾದ ಬದುಕು) ಎಂಬಂತೆ ಜೀವಿಸಿದ ಮಹನೀಯರೆಲ್ಲರ ಹಿರಿಮೆಯನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳೋಣ.
ಜ್ಞಾನಯೋಗ, ಕರ್ಮಯೋಗ, ರಾಜಯೋಗ ಮತ್ತು ಭಕ್ತಿಯೋಗಗಳೆಂದು ಅಧ್ಯಾತ್ಮ ಸಾಧನೆಯ ನಾಲ್ಕು ದಾರಿಗಳೆಂದು ಹಿರಿಯರು ತೋರಿಸಿದ್ದಾರೆ. ಭಕ್ತಿಯಿಂದ ಭಗವಂತನೆಡೆಗೆ ಸಾಗಿದ ಅನೇಕ ಸಂತರು ಸಾಮಾಜಿಕವಾಗಿ ಅನೇಕ ಬದಲಾವಣೆಗಳನ್ನು ತಂದುದನ್ನು, ಸಮಾಜದ ಮೌಢ್ಯಗಳನ್ನು ತೊಡೆದು ಹಾಕಿರುವುದನ್ನು ಕಾಣಬಹುದಾಗಿದೆ.
11-12 ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಶರಣ ಪರಂಪರೆಯು ವಿಸ್ತಾರವಾಯಿತು. ಇದರ ಮುಖ್ಯ ಶಕ್ತಿ ಶ್ರೀ ಬಸವಣ್ಣನವರು. ಇವರ ವಚನೆಗಳು ಸಾಮಾಜಿಕ ಸಾಮರಸ್ಯವನ್ನು ಸಾರುತ್ತಾ, ಸಮಾಜದ ಮೌಢ್ಯಗಳನ್ನು ತೊಡೆದು ಹಾಕುವಲ್ಲಿ ಕ್ರಾಂತಿಕಾರಿಯಾಗಿ ಕೆಲಸ ಮಾಡಿದೆ.
ಇದೇ ರೀತಿ ಅಕ್ಕಮಹಾದೇವಿ, ಅಲ್ಲಮಪ್ರಭುಗಳು ಮುಂತಾದ ಶರಣರು ತಮ್ಮ ವಚನಗಳಿಂದ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಕೊಂಡಗಲಿ ಕೇಶಿರಾಜ, ತೆಲುಗಿನ ಜೋಮಣ್ಣ (1120)ನವರಂತೆ ಜಾತೀಯ, ವರ್ಗೀಯ ಅಸಮಾನತೆಗಳನ್ನು ವಿರೋಧಿಸಿ, ಸಮಾನತೆಗಾಗಿ ಪ್ರೇರೇಪಿಸಿದರು.
ಜೇಡರ ದಾಸೀಮಯ್ಯ (1120) ಮಹಿಳೆಯರ ಸ್ಥಾನಮಾನಗಳಿಗಾಗಿ ಹೋರಾಡಿದರು. ಬಂಗಾಳದ ಚೈತನ್ಯರು (15 ನೇ ಶ.ಮಾ) ಶಾಸ್ತ್ರಸಂಪ್ರದಾಯಯಗಳ ಗೊಡ್ಡು ಆಚರಣೆಗಳನ್ನು ಬದಿಗೊತ್ತಿ ಕೀರ್ತನ ಪಂಥವನ್ನು ಶುದ್ಧಭಕ್ತಿಪಂಥವಾಗಿ ಹುಟ್ಟುಹಾಕಿದರು. ಸಂಕೀರ್ತನೆಗಳಿಂದಲೇ ಏಕತೆಯನ್ನು ಸಾರಿದರು. ಮಹಾರಾಷ್ಟ್ರದ ಜ್ಞಾನದೇವ ಅಸ್ಸಾಮಿನ ಶಂಕರದೇವ ಮೊದಲಾದವರು ಯಜ್ಞಗಳಲ್ಲಿ ನಡೆಯುವ ಪಶುಹಿಂಸೆಯನ್ನು ವಿರೋಧಿಸಿದರು. ಪಂಜಾಬಿನ ಶ್ರೀ ಗುರು ನಾನಕರು ಹಿಂದು ಹಾಗೂ ಮುಸ್ಲಿರನ್ನು ಒಂದೇ ದೇವರ ಮಕ್ಕಳೆಂದು ಕರೆದರು. ಹಿಂದು ಮುಸ್ಲಿಂ ಸಮಾನತೆಯನ್ನು ಸಾರಿದ ಮತ್ತೋರ್ವ ಸಂತ ಕಬೀರರು.
ಜ್ಞಾನದ ಮೂಲಕ ಸಮಾಜವನ್ನು ಪ್ರೇರೇಪಿಸಿದವರು ಸಂತ ಜ್ಞಾನೇಶ್ವರರು, ಇವರ ಶಿಷ್ಯರಾದ ನಾಮದೇವ, ಸೇನ, ಗೋರ ಮುಂತಾದವರು ಭಕ್ತಿ ಮಾರ್ಗದಲ್ಲಿ ನಡೆಯುತ್ತ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಶ್ರೀ ಅನ್ನಮಾಚಾರ್ಯರು ಸ್ವತಃ ಅಸ್ಪೃಶ್ಯರೆಂದು ನಿಂದಿತರಾಗಿದ್ದರು. ಆದರೂ ವಿಷ್ಣುವಿನ ಪರಮ ಭಕ್ತರಾಗಿ, ಭಕ್ತಿರಸದ ಕೀರ್ತನೆಗಳಿಂದ ಬ್ರಾಹ್ಮಣರಿಗೂ ಉತ್ಕೃಷ್ಟರಾದರು. ಕನಕದಾಸರೂ ಕೂಡಾ ಇದೇ ದಾರಿಯಲ್ಲಿ ನಡೆದವರು. ಭಕ್ತಿಪಂಥವು ಸಮಾಜದಲ್ಲಿ ಸಮಾನ ಸ್ಥಾನಮಾನ ಕಲ್ಪಿಸಿದೆ. ಅಕ್ಕ ಮಹಾದೇವಿ, ಸಂತ ಜ್ಞಾನದೇವರ ತಂಗಿ ಮುಕ್ತಾಬಾಯಿ, ಜನಾಬಾಯಿ, ಶ್ರೀಕೃಷ್ಣ ಭಕ್ತೆ ಮೀರಾಬಾಯಿ ಇತರರನ್ನು ಸ್ಮರಿಸಬಹುದು.
ಹೀಗೆ ಭಕ್ತಿಪಂಥದಿಂದ ಸಮಾಜವನ್ನು ತಿದ್ದಿ ತೀಡಿದ ಮಹನೀಯರನ್ನು ಸಂತಶ್ರೇಷ್ಠರನ್ನು ಇಂದು ಸಹಬಾಳ್ವೆ ನಡೆಸಲು ಕಾರಣರಾದವನ್ನು ಸ್ಮರಿಸಬಹುದಾಗಿದೆ.
ಆಚಾರ್ಯ ಶಂಕರಭಗವತ್ಪಾದರ ಜನ್ಮದಿನ ವೈಶಾಖ ಶುಕ್ಲ ಪಂಚಮಿಯು ಈ ಬಾರಿ 9.5.2019 ಹಾಗೂ ಆಚಾರ್ಯ ರಾಮಾನುಜರ ಜನ್ಮದಿನ ವೈಶಾಖ ಶುಕ್ಲ ಚತುರ್ಥೀ (ಉಪರಿ ಪಂಚಮಿ) ಈ ಬಾರಿ 9.5.2019 ರಂದು ಬಂದಿದೆ. ಶ್ರೀ ಬಸವಣ್ಣನವರ ಜನ್ಮದಿನವು ವೈಶಾಖ ಶುದ್ಧ ತೃತೀಯಾ (7.5.2019) ಆಗಿದೆ. ಈ ಸಂದರ್ಭದಲ್ಲಿ ಅವರ ಸಾಮಾಜಿಕ ಕೊಡುಗೆಯನ್ನು ಸ್ಮರಿಸಿದ ಲೇಖನವಾಗಿದೆ.
✍ ಶ್ರುತಿ, ಸಂಶೋಧಕರು, ಸಂಸ್ಕೃತ ವಿಶ್ವವಿದ್ಯಾನಿಲಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.