ಭಾರತ ಅತ್ಯಂತ ಶ್ರೀಮಂತ ಸಂಸ್ಕೃತಿ ಮತ್ತು ಕಲಾ ಪರಂಪರೆಯನ್ನು ಹೊಂದಿದ ರಾಷ್ಟ್ರ. ಭಾರತದ ಭವ್ಯ ಪರಂಪರೆ, ಪ್ರಾಚೀನ ಕಲೆಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ದೇಶ ವಿದೇಶಗಳ ವಾಸ್ತುಶಾಸ್ತ್ರಜ್ಞರು, ಪುರಾತತ್ವಜ್ಞರು, ಇತಿಹಾಸಕಾರರು ಸದಾ ಭಾರತದ ಪ್ರಾಚೀನ ಪರಂಪರೆಯನ್ನು ಅಧ್ಯಯನ ನಡೆಸಲು ಉತ್ಸುಕತೆಯನ್ನು ತೋರಿಸುತ್ತಾರೆ. 9ನೇ ಶತಮಾನದಲ್ಲಿ ನಿರ್ಮಾಣವಾದ ಖಜುರಾಹೋ ದೇಗುಲವೇ ಇರಲಿ, 3ನೇ ಶತಮಾನದ ದಿಡರ್ಗಂಜ್ ಯಕ್ಷಿಯೇ ಇರಲಿ, ಭಾರತದ ವಿವಿಧ ರೀತಿಯ ಕಲಾ ಸ್ಮಾರಕಗಳು ಕುತೂಹಲ ಮತ್ತು ಮೌಲ್ಯಗಳ ಕೇಂದ್ರ ಬಿಂದು ಎನಿಸಿಕೊಂಡಿದೆ.
ಭಾರತದ ಸಾಂಸ್ಕೃತಿಕ ಏಳಿಗೆಗೆ ಮಹತ್ವದ ಕೊಡುಗೆಗಳನ್ನು ನೀಡುತ್ತಿರುವ ಪಾರಂಪರಿಕ ಕಲಾ ಸಂಸ್ಕೃತಿ ಖಜಾನೆಗಳು ವಿದೇಶಿಗರ, ಕೆಲ ವ್ಯಕ್ತಿಗಳ ದುರಾಸೆಗೆ ಬಲಿಯಾಗಿವೆ. ಮೊಘಲರಿಂದ ಹಿಡಿದು ಬ್ರಿಟೀಷರವರೆಗೂ ಭಾರತ ಕಲಾ ವೈಭವವನ್ನು ನಾಶ ಮಾಡುವ ಪ್ರಯತ್ನಗಳನ್ನು ನಡೆಸಲಾಗಿದೆ. ಕೆಲ ರಾಜಕೀಯ ಕುತಂತ್ರಗಳಿಂದಾಗಿ ಭಾರತದ ಅತ್ಯಮೂಲ್ಯ ಮೂರ್ತಿಗಳು ಕಳ್ಳಸಾಗಾಣೆಯಾಗಿವೆ. ನಿರಂತರ ಲೂಟಿಗಳ ಮೂಲಕ ಭಾರತದ ಘನತೆಯನ್ನು ಕುಗ್ಗಿಸುವ ಕಾರ್ಯವನ್ನು ಮಾಡಲಾಗಿದೆ.
ಕದ್ದ ಕಲಾ ಪ್ರತಿಮೆಗಳನ್ನು ಅಕ್ರಮವಾಗಿ ಸಾಗಾಣೆ ಮಾಡುವ ಗುಂಪುಗಳು ಈಗಲೂ ಕಾರ್ಯಾಚರಿಸುತ್ತಿವೆ. ಭಾರತದಿಂದ ಕದ್ದ ಪ್ರಾಚೀನ ಪ್ರತಿಮೆಗಳು, ಶಾಸನಗಳು ಮತ್ತು ಇತರ ಅಮೂಲ್ಯ ವಸ್ತುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜಾಗವನ್ನು ಪಡೆದುಕೊಂಡಿವೆ ಮತ್ತು ಮಿಲಿಯನ್ ಡಾಲರ್ಗಳಿಗೆ ಮಾರಾಟವಾಗುತ್ತಿವೆ. ಖಜುರಾಹೋ ಒಂದರಿಂದಲೇ 1965-1970ರ ನಡುವೆ ನೂರಾರು ಶಿಲ್ಪಗಳನ್ನು ಕದಿಯಲಾಗಿದೆ. ಭಾರತದಿಂದ ಸುಮಾರು 70,000 ಕಲಾಕೃತಿಗಳನ್ನು ಕದಿಯಲಾಗಿದೆ, ಅದರಲ್ಲಿ ಸುಮಾರು 4,900 ನಮಗೆ ಬೆಂಬಲವಾಗಿರುವ ವಿದೇಶಿ ಆಡಳಿತದ ಸ್ವಾಧೀನದಲ್ಲಿವೆ.
ಕಳ್ಳ ಸಾಗಾಣೆಯಾಗಿರುವ ಈ ಪ್ರಾಚೀನ ಕಲಾಕೃತಿಗಳನ್ನು ವಾಪಾಸ್ ತರುವ ಹಲವಾರು ಕಾರ್ಯಕ್ರಮಗಳು ಅನುಷ್ಠಾನದಲ್ಲಿವೆ, ಇದರಿಂದ ಒಂದಿಷ್ಟು ಕಲಾಕೃತಿಯನ್ನು ಭಾರತಕ್ಕೆ ತರಲು ಸಾಧ್ಯವಾಗಿದೆ. ದಿ ಇಂಡಿಯಾ ಪ್ರೈಡ್ ಪ್ರಾಜೆಕ್ಟ್, ಕದ್ದ ಕಲಾಕೃತಿಗಳನ್ನು ವಾಪಾಸ್ ತರುವ ಯೋಜನೆಯಾಗಿದ್ದು, ಇದರ ಅಂಕಿಅಂಶಗಳ ಪ್ರಕಾರ ಕಳೆದ 5 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರವು ಸುಮಾರು ನೂರು ಕಲಾಕೃತಿಗಳನ್ನು ವಾಪಾಸ್ ತಂದಿದೆ. ಇದು ಕಳೆದ ಹಲವು ದಶಕಗಳಿಗಿಂತದ ಉತ್ತಮ ಸಾಧನೆಯಾಗಿದೆ. 12ನೇ ಶತಮಾನದ ಚೋಳ ಸಾಮ್ರಾಜ್ಯಕ್ಕೆ ಸೇರಿದ ಗ್ರಾನೈಟ್ ಕಲಾಕೃತಿ ’ಲಿಂಗೋದ್ಭವಮೂರ್ತಿ’ ಕೂಡ ಇದರಲ್ಲಿ ಒಂದು. ಇದರ ಮೌಲ್ಯ ಬರೋಬ್ಬರಿ 1.5 ಕೋಟಿಯಾಗಿದೆ. ಇದರ ಅಮೆರಿಕಾದ ಮಾಲೀಕನಿಗೆ ಇದು ಭಾರತದಿಂದ ಕದ್ದ ಪ್ರತಿಮೆ ಎಂಬ ಬಗ್ಗೆ ಸಾಕ್ಷ್ಯಾಧಾರಗಳನ್ನು ನೀಡಿದ ಬಳಿಕ ಅದನ್ನು ಆತ ಹಸ್ತಾಂತರ ಮಾಡಿದ್ದಾನೆ.
ಹೆಚ್ಚಿನ ಸಂಖ್ಯೆಯ ಮೂರ್ತಿಗಳ ಮರು ಆಗಮನ ಮೋದಿ ಸರ್ಕಾರದ ಪ್ರಯತ್ನವನ್ನು ತೋರಿಸುತ್ತದೆ. ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ಮೂಲಕ ಅದು ಕದ್ದ ಕಲಾಕೃತಿಗಳನ್ನು ಮತ್ತೆ ತಾಯ್ನಾಡಿಗೆ ವಾಪಾಸ್ ಆಗುವಂತೆ ಮಾಡುವ ಪ್ರಕ್ರಿಯೆಯನ್ನು ನಡೆಸುತ್ತಿದೆ, 2016ರಲ್ಲಿ, ಮೋದಿಯವರು ಅಮೆರಿಕಾದಲ್ಲಿ ಮೂರ್ತಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಭಾರತದಿಂದ ಕದ್ದ ಸುಮಾರು 200 ವಸ್ತುಗಳನ್ನು ಮೋದಿಯವರಿಗೆ ಹಸ್ತಾಂತರ ಮಾಡಲಾಗಿತ್ತು. ಪಾರಂಪರಿಕ ವಸ್ತುಗಳ ವಾಪಾಸ್ಸಾತಿ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ಆ ವೇಳೆ ಮೋದಿ ಹೇಳಿದ್ದರು.
ರಾಷ್ಟ್ರವಾಗಿ, ನಮ್ಮಿಂದ ಕದ್ದು ಹೋದ ಪ್ರಾಚೀನ ವಸ್ತುಗಳನ್ನು ಮರಳಿ ಪಡೆದು, ನಮ್ಮ ಹೆಮ್ಮೆಯನ್ನು ಪುನಃಸ್ಥಾಪಿಸುವ ಪ್ರಯತ್ನವನ್ನು ನಾವು ಮಾಡಬೇಕು. ತಜ್ಞರ ಒಳಪಡಿಸುವಿಕೆ, ಕದ್ದ ವಸ್ತುಗಳ ಬೇಡಿಕೆ ಕುಂಠಿತ ಮಾಡುವುದು, ಪಾರಂಪರಿಕ ವಸ್ತುಗಳ ಮೇಲಿನ ಪ್ರೀತಿಯನ್ನು ಹೆಚ್ಚಿಸುವುದು ನಾವು ಮುಂದೆ ಮಾಡಬೇಕಾದ ಕ್ರಮಗಳು. ಕಲೆ, ದೇಶ ಮತ್ತು ಸಮಾಜದ ಆತ್ಮವಿದ್ದಂತೆ, ಕಳೆದು ಹೋದ ಭಾರತದ ಪರಂಪರೆಯನ್ನು ಮತ್ತೆ ಸ್ಥಾಪನೆ ಮಾಡುವತ್ತ ಮೋದಿ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.