ಮನುಷ್ಯನ ಹುಟ್ಟಿನಿಂದ ಮೊದಲ್ಗೊಂಡು ಅವನು ಮಾಡುವ ಎಲ್ಲ ಕೆಲಸಗಳಿಗೂ ಮೂಲವೇ ಶಕ್ತಿ. ಅಷ್ಟೇ ಏಕೆ, ಇಡೀ ಸೃಷ್ಟಿಯೇ ಶಕ್ತಿಯಿಂದ ಆಗಿದೆ. ಶಕ್ತಿಯೇ ಮೂಲವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯನ್ನು ತಾಯಿಯ ರೂಪದಲ್ಲಿ ಕಂಡು ಆರಾಧಿಸಲಾಗಿದೆ. ಶಕ್ತಿ ಸ್ವರೂಪಿಣಿಯನ್ನು ಮಾತೆ ಎಂದು ಆರಾಧಿಸಿದೆವು. ಈಗಲೂ ಆರಾಧಿಸಲಾಗುತ್ತಿದೆ.
ತಾಯಿ ನಮಗೆ ಸರ್ವಸ್ವ. ನಮ್ಮನ್ನು ಪ್ರತಿ ಕ್ಷಣವೂ ಪ್ರೀತಿಯಿಂದಲೇ ಕಾಪಾಡುವವಳು. ಶಕ್ತಿಯನ್ನು ಈ ಹಿನ್ನೆಲೆಯಲ್ಲಿ ಕಂಡಿರುವುದು ನಮ್ಮ ಸಂಸ್ಕೃತಿಯ ಹಿರಿಮೆ. ಪ್ರಕೃತಿಯನ್ನೇ ತಾಯಿಯ ರೂಪದಲ್ಲಿ ನಾವು ಕಾಣುತ್ತೇವೆ. ಇದು ನಮ್ಮ ಸಂಸ್ಕೃತಿ, ಸಂಸ್ಕಾರ.
ಮಕ್ಕಳು ತಪ್ಪು ಮಾಡಿದಾಗ ಶಿಕ್ಷಿಸುವುದೂ ತಾಯಿಯೇ. ಅದರಲ್ಲಿ ವಾತ್ಸಲ್ಯದ ಕುರುಹು ಇರುತ್ತದೆ. ಇದು ಮಕ್ಕಳ ಒಳಿತಿಗಾಗಿಯೂ ಹೌದು.
ಜೀವನದ ಒಂದೊಂದು ವಿವರವೂ ಶಕ್ತಿಯ ರೂಪವೇ? ಹೌದು. ಶಕ್ತಿ ಎಂದರೆ ಕೇವಲ ಹೊರಗಿನ ಶಕ್ತಿಯಲ್ಲ ಅದು ಅಂತರಂಗದ ಬಲವೂ ಹೌದು. ಅಂತರಂಗದ ಸೌಂದರ್ಯವೂ ಹೌದು. ನವರಾತ್ರಿಯಲ್ಲಿ ಹೆಣ್ಣನ್ನು ನವರೂಪಗಳಲ್ಲಿ ಅರ್ಚಿಸಲಾಗುತ್ತದೆ. ಇದು ನಾವು ಹೆಣ್ಣಿಗೆ ನೀಡುವ ಗೌರವ. ನವರಾತ್ರಿಯ ಸಂದರ್ಭ ನಡೆಯುವ ವಿಜಯದಶಮಿ ನಮ್ಮ ಅಂತರಂಗ ಶುದ್ಧಿ ಬಳಿಕ ಬಹಿರಂಗ ವಿಜಯದ ಪ್ರತೀಕ.
ಹೆಣ್ಣನ್ನು ಮಾತೃಸ್ವರೂಪಿಣಿಯಂತೆ ಕಾಣುವ ಸಂಸ್ಕಾರ ನಮ್ಮದು. ಭರತಭೂಮಿಯ ಹೆಣ್ಣು ಮಕ್ಕಳ ಮಾನ, ಪ್ರಾಣ ರಕ್ಷಣೆಗಾಗಿ ಉಸಿರಿನ ಕೊನೆವರೆಗೂ ಹೋರಾಡಿದ ಇತಿಹಾಸ ನಮ್ಮದು. ಆಕೆಗೆ ಅಧಿಕಾರ ನೀಡಿದ ನೆಲ ನಮ್ಮದು. ತಾಯಿ, ತಂಗಿ, ಅಕ್ಕ, ಅತ್ತಿಗೆ? ಹೀಗೆ ವಿವಿಧ ರೂಪಗಳಲ್ಲಿ ಹೆಣ್ಣು ನಮ್ಮ ಕಣ್ಣೆದುರು ನಿಲ್ಲುತ್ತಾಳೆ. ಅವಳಿಗೆ ಅಗೌರವ ತೋರುವ ಮಾತೇ ಇಲ್ಲ. ಅಂಥ ಸಂಸ್ಕೃತಿ, ಸಂಸ್ಕಾರ ನೈಜ ಹಿಂದುಗಗಳ ಕಣಕಣದಲ್ಲೂ ಬೆರೆತುಹೋಗಿದೆ. ಹಿಂದು ಧರ್ಮದ ಇತಿಹಾಸ ಹಾಗೂ ವರ್ತಮಾನ ಎರಡೂ ಹೆಣ್ಣಿಗೆ ಪೂಜನೀಯ ಸ್ಥಾನ ನೀಡಿದೆ. ಆಕೆ ಪ್ರಗತಿಯ ಸಂಕೇತವಾಗಿಯೂ ಸರಿಸಮನಾಗಿ ನಿಲ್ಲುವ ಸ್ವಾತಂತ್ರ್ಯವನ್ನೂ ಹೊಂದಿದ್ದಾಳೆ.
ನಮ್ಮ ದೇಶದ ರಾಜಕಾರಣವನ್ನೇ ನೋಡಿ. ಬಹಳ ಪ್ರಾಚೀನ ಕಾವ್ಯಗಳಾದ ರಾಮಾಯಣ, ಮಹಾಭಾರತದಲ್ಲಿ ಬರುವ ಪಾತ್ರಗಳಲ್ಲೂ ಹೆಣ್ಣಿನ ಪಾತ್ರಗಳಲ್ಲಿ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಇದ್ದುದು ಕಂಡುಬಂದಿಲ್ಲವೇ? ಬ್ರಹ್ಮ, ವಿಷ್ಣು, ಮಹೇಶ್ವರನಂತೆ ಅವರೊಂದಿಗಿರುವ ಸರಸ್ವತಿ, ಲಕ್ಷ್ಮಿ, ಪಾರ್ವತಿಯರೂ ಬಹು ಪ್ರಭಾವಶಾಲಿ ದೇವತೆಗಳು ಎಂಬುದು ಭಾಗವತದಲ್ಲೇ ಕಂಡುಬರುತ್ತದೆ. ರಾಜ್ಯಭಾರದ ಸಂದರ್ಭ ಯುದ್ಧ ಸಂಭವಿಸಿದಾಗ ಪತ್ನಿಯರು ಅಥವಾ ಮಗಳಂದಿರನ್ನು ಯುದ್ಧಭೂಮಿಗೆ ಕರೆದೊಯ್ಯುವ ರಾಜನ ಕತೆ ರಾಮಾಯಣದಲ್ಲೇ ಇದೆ. ಮಹಾಭಾರತದ ದ್ರೌಪದಿ ಪಾತ್ರ ದಿಟ್ಟ ಹೆಣ್ಣಿನ ಪ್ರತಿರೂಪವಾಗಿ ಮೂಡಿದೆ. ಇಡೀ ಭರತಭೂಮಿಯಲ್ಲಿ ಅದೆಷ್ಟೋ ರಾಣಿಯರು ಸಮರ್ಥವಾಗಿ ರಾಜ್ಯಭಾರ ಮಾಡಿದ ಉದಾಹರಣೆ ಇದೆ.
ಭಾರತಕ್ಕೆ ಘೋರಿ, ಘಜನಿಗಳ ದಾಳಿಯಾದ ತರುವಾಯ ಹೆಣ್ಣನ್ನು ಕೀಳಾಗಿ ನೋಡುವ ಹಾಗೂ ಆಕೆಯನ್ನು ಅಧಿಕಾರದಿಂದ ಹೊರಗಿಟ್ಟು ಕೇವಲ ಭೋಗದ ವಸ್ತುವಾಗಿ ಕಾಣುವ ಪ್ರವೃತ್ತಿ ಬೆಳೆಯಿತು. ಆದರೆ ಭಾರತೀಯ ನೆಲದ ಪರಂಪರೆಯೇ ಹೆಣ್ಣಿನ ಸಮಾನತೆಗೆ ಒತ್ತು ನೀಡಿದೆ.
ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ರಾಣಿ ಲಕ್ಷ್ಮೀಬಾಯಿ, ಜೀಜಾಬಾಯಿಯಂಥವರು ಇತಿಹಾಸದ ಪುಟಗಳಲ್ಲಿ ನಕ್ಷತ್ರಗಳಾಗಿ ಮಿಂಚುತ್ತಾರೆ. ಕರಾವಳಿಯಲ್ಲಿ ರಾಣಿ ಅಬ್ಬಕ್ಕ ಶೌರ್ಯದ ಪ್ರತೀಕವಾಗಿ ನಿಲ್ಲುತ್ತಾರೆ. ಇದು ಭಾರತೀಯ ಸಂಸ್ಕಾರ ಹೆಣ್ಣಿಗೆ ನೀಡಿದ ಗೌರವದ ಪ್ರತೀಕವೇ ಸರಿ.
ವರ್ತಮಾನಕ್ಕೆ ಬಂದರೆ, ಇಂದಿರಾ ಗಾಂಧಿ ದಶಕಗಳ ಕಾಲ ಭಾರತವನ್ನು ಅಕ್ಷರಶಃ ಆಳಿದರು. ಈಗಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಟೆಕ್ಸ್ಟೈಲ್ ಸಚಿವೆ ಸ್ಮೃತಿ ಇರಾನಿ ಭಾರತೀಯ ನಾರಿಯ ಶಕ್ತಿ ಎಂತಹದ್ದು ಎಂಬುದನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿಯಾಗಿ ವಸುಂಧರಾ ರಾಜೆ ಮಿಂಚಿದ್ದನ್ನು ನಾವು ನೋಡಿದ್ದೇವೆ, ಪಶ್ಚಿಮಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ರಾಜ್ಯಭಾರ ಮಾಡುತ್ತಿದ್ದಾರೆ.
ಸೈನ್ಯದಲ್ಲೂ ನಮ್ಮ ಹೆಣ್ಣು ಮಕ್ಕಳು ಪರಾಕ್ರಮ ಮೆರೆಯುತ್ತಿದ್ದಾರೆ. ಐಎನ್ಎಸ್ ತಾರಿಣಿಯ ಮೂಲಕ ಐವರು ಮಹಿಳೆಯರ ತಂಡ ಜಗತ್ತನ್ನೇ ಪರ್ಯಟನೆ ಮಾಡಿದೆ, ಮೂರು ಮಹಿಳೆಯರು ಯುದ್ಧ ಪೈಲೆಟ್ಗಳಾಗಿ ತರಬೇತಿಯನ್ನು ಮುಕ್ತಾಯಗೊಳಿಸಿದ್ದಾರೆ. ಇನ್ನು ಕ್ರೀಡಾ ಲೋಕದಲ್ಲಿ ಎಂ.ಸಿ. ಮೇರಿ ಕೋಂ ಭಾರತದ ಪ್ರಮುಖ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ. ಇವರು 5 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿ ಮಿಂಚಿದವರು. ಸೈನಾ ನೆಹ್ವಾಲ್ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ. ಪಿವಿ ಸಿಂಧು ಬ್ಯಾಡ್ಮಿಂಟನ್ ಲೋಕದ ಕಣ್ಮಣಿ ಎನಿಸಿದ್ದಾರೆ.
ಇಂದ್ರಾ ನೂಯಿ ಅಮೆರಿಕದ ಆಹಾರ ಮತ್ತು ಪಾನೀಯ ತಯಾರಿಕಾ ಕಂಪನಿ ಪೆಪ್ಸಿಕೊದ ಸಿಇಒ. ನೈನಾ ಲಾಲ್ ಕಿದ್ವಾಯಿ ಎಚ್ಎಸ್ಬಿಸಿ ಭಾರತೀಯ ಶಾಖೆಯ ಮುಖ್ಯಸ್ಥೆ. ಕಿರಣ್ ಮುಜುಂದಾರ್ ಶಾ ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ. ಕಲ್ಪನಾ ಚಾವ್ಲಾ ಭಾರತದ ಮೊದಲ ಮಹಿಳಾ ಗಗನ ಯಾತ್ರಿ. ಸುನಿತಾ ವಿಲಿಯಮ್ಸ್ ಭಾರತೀಯ ಮೂಲದ ಅಮೆರಿಕ ಗಗನ ಯಾತ್ರಿ. ಅನಿತಾ ಡೊಂಗ್ರೆ ಅತ್ಯಂತ ಪ್ರಸಿದ್ಧ ಮತ್ತು ಯಶಸ್ವಿ ಫ್ಯಾಷನ್ ಡಿಸೈನರ್ (ವಸ್ತ್ರ ವಿನ್ಯಾಸಕಿ).
ಇವೆಲ್ಲ ಅಂಕಿ, ಅಂಶಗಳಲ್ಲ, ಮಹಿಳಾ ಸಾಧನೆಗೆ ಹಿಡಿದ ಕೈಗನ್ನಡಿಗಳು. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯನ್ನೇ ನೋಡಿ. ತುಳುನಾಡಿನ ಸಂಸ್ಕೃತಿಯೇ ಮಾತೃಪ್ರಧಾನ. ಬಂಟರು, ಬಿಲ್ಲವರು, ಕುಲಾಲರು ಹೀಗೆ ತುಳುನಾಡಿನ ಮಣ್ಣಿನ ಇತಿಹಾಸದಲ್ಲಿ ಬೆರೆತವರು ಮಾತೃಪ್ರಧಾನ ವ್ಯವಸ್ಥೆಯಲ್ಲೇ ಬೆಳೆದವರು.
ನಮ್ಮ ದೇಶದಲ್ಲಿ ಹೆಣ್ಣಿಗೆ ಗೌರವ ಕೊಡದೆ ಕೇವಲ ಭೋಗವಸ್ತುವನ್ನಾಗಿಸಿದ್ದು ನಿಜವೇ ಆಗಿದ್ದರೆ ಇವರೆಲ್ಲರ ಹೆಸರು ಅಚ್ಚಳಿಯದೆ ಉಳಿಯುತ್ತಿತ್ತೇ? ಇಲ್ಲವೇ ಇಲ್ಲ. ಸಾಧ್ಯವೂ ಇಲ್ಲ.
ನಮ್ಮ ಹಿಂದು ಸಂಸ್ಕೃತಿಯೇ ಹಾಗೆ. ಮಹಿಳೆಗೆ ಪೂಜನೀಯ ಸ್ಥಾನವೂ ಇದೆ. ಗೌರವವೂ ಇದೆ. ಮಹಿಳೆ ಪುರುಷನಿಗೆ ಸರಿಸಮಾನವಾಗಿ ಗೌರವದಿಂದ ಬಾಳ್ವೆ ನಡೆಸುವ ಅವಕಾಶವನ್ನೂ ಹಿಂದು ಸಂಸ್ಕೃತಿ ಸಂಸ್ಕಾರ ನೀಡಿದೆ. ಏಕೆಂದರೆ ನಾವು ನಮ್ಮ ನೆಲವನ್ನೇ ಮಾತೃಭೂಮಿ ಎನ್ನುತ್ತೇವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.