ವಿಜೇತರು ವಿಭಿನ್ನ ಕಾರ್ಯವನ್ನು ಮಾಡುವುದಿಲ್ಲ, ತಾವು ಮಾಡುವ ಕಾರ್ಯವನ್ನೇ ವಿಭಿನ್ನವಾಗಿಸುತ್ತಾರೆ ಎಂಬ ಜನಪ್ರಿಯ ನಾಣ್ಣುಡಿ ಇದೆ. ಕರ್ನಾಟಕದ ಸಾವಯವ ಕೃಷಿ ಪರಿವಾರದಲ್ಲಿ ಈ ನಾಣ್ಣುಡಿ ಜೀವನ ವಿಧಾನವಾಗಿದೆ. ಈ ವಿಧಾನವೇ ಬಡ ರೈತರ ಬದುಕಿನಲ್ಲಿ ಪರಿವರ್ತನೆಯನ್ನು ತಂದಿದೆ. ಸಾವಯವ ಕೃಷಿಯ ಅಳವಡಿಕೆ ಮತ್ತು ಮಧ್ಯವರ್ತಿ ಮುಕ್ತ ನೇರ ಮಾರಾಟ ಇವರ ಜೀವನಕ್ಕೆ ಮಹತ್ವದ ತಿರುವನ್ನು ನೀಡಿದೆ.
ತುಮಕೂರು ಜಿಲ್ಲೆಯ ಬಿಳ್ಗೆರಪಳ್ಯ ಗ್ರಾಮದ ಕೃಷಿಕ ಚಂದರ್ ಪ್ರಕಾಶ್ ಅವರು ತಾವು ಬೆಳೆದ 100 ಕೆಜಿ ರಾಗಿಯಿಂದ ಕೇವಲ 2,500 ರೂಪಾಯಿ ಗಳಿಸುತ್ತಿದ್ದ ಕಾಲವಿತ್ತು. ಆದರೀಗ ಅವರು ಅದೇ 100 ಕೆಜಿ ರಾಗಿಗೆ 22,500 ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಹೌದು, ಇದು ಅಚ್ಚರಿ ಎನಿಸಿದರೂ ನಿಜ. ಮೊದಲ ಸಲ ಆದಾಯದಲ್ಲಿ ಇಷ್ಟೊಂದು ಏರಿಕೆಯಾದಾಗ ಸ್ವತಃ ಚಂದರ್ ಅವರೂ ಆಶ್ಚರ್ಯಪಟ್ಟುಕೊಂಡಿದ್ದರು.
1990ರಲ್ಲಿ ಆರ್ಎಸ್ಎಸ್ ಪ್ರಚಾರಕ ಉಪೇಂದ್ರ ಶೆಣೈ ಮತ್ತು ಪ್ರಗತಿಪರ ರೈತ ಪುರುಷೋತ್ತಮ ರಾವ್ ಅವರ ಪ್ರಯತ್ನ ಮತ್ತು ಪ್ರೇರಣೆಯಿಂದ ಇಂದು ಸಾವಯವ ಕೃಷಿ ಪರಿವಾರ ವಿಶ್ವದ ಅತೀದೊಡ್ಡ ಸಾವಯವ ಕೃಷಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದುವರೆಗೆ, ಸಂಸ್ಥೆ 1,5000 ರೈತರನ್ನು ಯಶಸ್ವಿಗಳನ್ನಾಗಿಸಿದೆ. ಮೂಲತಃ ಈ ಸಂಸ್ಥೆ ಹಲವಾರು ಸಣ್ಣ ಮತ್ತು ದೊಡ್ಡ ಕೃಷಿಕರ ಗುಂಪುಗಳನ್ನು ಒಳಗೊಂಡಿದೆ. ಇವುಗಳು ಸಾವಯವ ಕೃಷಿಯನ್ನು ಪ್ರಚಾರಪಡಿಸುತ್ತಿರುವುದು ಮಾತ್ರವಲ್ಲ ಮಧ್ಯವರ್ತಿ ರಹಿತ ಮಾರುಕಟ್ಟೆಯನ್ನು ಬೆಳೆಗಾರರಿಗೆ ಒದಗಿಸುತ್ತಿದೆ.
ಸಾವಯವ ಗೊಬ್ಬರದಿಂದ ಹಿಡಿದು ಬಯೋಗ್ಯಾಸ್, ಜೇನುತುಪ್ಪ ಉತ್ಪಾದನೆ, ಗೋಮೂತ್ರದ ವಾಣಿಜ್ಯ ಬಳಕೆ, ಗೊಬ್ಬರ ಇತ್ಯಾದಿ ಎಲ್ಲ ಪ್ರಯತ್ನಗಳನ್ನು ನಾವು ಮಾಡಿದ್ದೇವೆ ಎಂದು ಸಕ್ರಿಯ ಸ್ವಯಂಸೇವಕರಾದ ಆನಂದ ಜಿ. ಅವರು ಹೇಳುತ್ತಾರೆ.
ಸಾವಯವ ಕೃಷಿ ಪರಿವಾರವೂ ಕೃಷಿಕ ಗ್ರಾಹಕ ಮಿಲನ ಮೇಳ ಎಂಬ ವಿಶೇಷ ವೇದಿಕೆಯನ್ನು ರೈತರಿಗೆ ಕಲ್ಪಿಸಿ ಕೊಡುತ್ತದೆ. ಈ ಮೇಳವು ತಿಂಗಳಿಗೆ ಎರಡು ಬಾರಿ ನಡೆಯುತ್ತಿದ್ದು ಇಲ್ಲಿ ರೈತರು ತಮ್ಮ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ.
ಮಲ್ಯರ ಶರಣಪ್ಪ ಎಂಬ ಬಡ ರೈತ ಒಮ್ಮೆ ಕೃಷಿಯನ್ನು ತೊರೆದು ಕಾರ್ಮಿಕನಾಗುವತ್ತ ಚಿಂತನೆ ನಡೆಸಿದ್ದರು. ಆದರೀಗ ಅವರಿಗೆ ತಮ್ಮ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ವೇದಿಕೆ ಸಿಕ್ಕಿರುವ ಹಿನ್ನೆಲೆಯಲ್ಲಿ ಅವರು ವಾರ್ಷಿಕ 4.5 ಲಕ್ಷದವರೆಗೆ ಆದಾಯವನ್ನು ಗಳಿಸುತ್ತಿದ್ದಾರೆ. ಸಾವಯವ ಕೃಷಿ ಪರಿವಾರದ ಸಂಪರ್ಕಕ್ಕೆ ಬಂದ ಬಳಿಕ ಅವರ ಸಂಪೂರ್ಣ ಜೀವನವೇ ಪರಿವರ್ತನೆಯ ಹಾದಿಯಲ್ಲಿ ಸಾಗಿದೆ. ರೈತ ಮತ್ತು ಗ್ರಾಹಕರ ಈ ಮೇಳದಲ್ಲಿ ಪ್ರಸ್ತುತ ತಿಂಗಳಿಗೆ 20 ಲಕ್ಷದವರೆಗೆ ವಹಿವಾಟು ನಡೆಯುತ್ತಿದೆ.
ಹಂತ ಹಂತವಾಗಿ ಸಾವಯವ ಕೃಷಿ ಪರಿವಾರವೂ ರೈತರ ಜೀವನವನ್ನು ನಿರ್ಮಾಣ ಮಾಡುತ್ತಿದೆ. ಅದು ಕೂಡ ವಿಭಿನ್ನವಾದ ಹೊಸ ಶೈಲಿಯಲ್ಲಿ. ಹೊಸ ಜ್ಞಾನವನ್ನು ರೈತರಿಗೆ ಈ ಸಂಘಟನೆ ನೀಡುತ್ತಿದ್ದು, ಇದರೊಂದಿಗೆ ಸಂಪರ್ಕ ಹೊಂದಿರುವ ರೈತರ ಒಂದು ಕೆಜಿ ಗೋವಿನ ಹಾಲನ್ನು 80 ರೂಪಾಯಿಗಳಿಗೆ ಮಾರಾಟ ಮಾಡುತ್ತಿಲ್ಲ, ಬದಲಿಗೆ ಹಾಲಿನಿಂದ ತುಪ್ಪವನ್ನು ತಯಾರಿಸಿ ಒಂದು ಕೆಜಿ ತುಪ್ಪಕ್ಕೆ ಎರಡು ಸಾವಿರ ರೂಪಾಯಿಯಂತೆ ಆದಾಯವನ್ನು ಗಳಿಸುತ್ತಿದ್ದಾರೆ.
ಈ ಕೃಷಿ ಪರಿವಾರದ ಮಹಿಳೆಯರು ಸಾವಯವ ಕುಂಕುಮವನ್ನು ತಯಾರು ಮಾಡುತ್ತಿದ್ದಾರೆ. ಇದಕ್ಕೆ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಗಳಿವೆ. ಸಾಯವಯ ಕೃಷಿ ಪರಿವಾರದೊಂದಿಗೆ ಕೈ ಜೋಡಿಸಿದ ಬಳಿಕ ರೈತರು ಜೇನುತುಪ್ಪ ಉತ್ಪಾದನೆ, ಗೋವಿನ ಗೊಬ್ಬರ ತಯಾರಿಕೆ ಇತ್ಯಾದಿಗಳನ್ನು ಸಾವಯವದೊಂದಿಗೆ ಮಿಳಿತಗೊಳಿಸಿ ತಮ್ಮ ಅದೃಷ್ಟವನ್ನೇ ಬದಲಾಯಿಸಿಕೊಂಡಿದ್ದಾರೆ.
ಸಾವಯವ ಕೃಷಿ ಪರಿವಾರವೂ ರೈತರಿಗೆ ಸಾವಯವ ಮಾದರಿಯ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ. ಮಾತ್ರವಲ್ಲದೆ, ಉತ್ತಮ ಗುಣಮಟ್ಟದ ಬೀಜಗಳು ದೊರಕುವಂತೆ ನೋಡಿಕೊಳ್ಳುತ್ತಿದೆ. ನೀರಿನ ಸಂರಕ್ಷಣೆ, ಭೂಮಿಯ ಫಲವತ್ತತೆಯನ್ನು ಕಾಪಾಡುವ ನಿಟ್ಟಿನಲ್ಲೂ ಅತ್ಯಂತ ಮಹತ್ವಪೂರ್ಣವಾದ ಕಾರ್ಯವನ್ನು ನಡೆಸುತ್ತಿದೆ. ಭಾರತದಂತಹ ದೇಶದಲ್ಲಿ ಸಾವಯವ ಕೃಷಿ ಪರಿವಾರದಂತಹ ಸಂಘಟನೆಗಳು ನಿಜಕ್ಕೂ ಒಂದು ಆಶಾಕಿರಣವಾಗಿದೆ. ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಮತ್ತು ಯೂತ್ ಫಾರ್ ಸೇವಾ ಸಂಸ್ಥೆಯು ಸಾವಯವ ಕೃಷಿ ಪರಿವಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿ ಅದರೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಆನಂದ್ (+91 94482 04831) ಅವರನ್ನು ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.