13 ವರ್ಷದ ಅಮರ್ ಸಾತ್ವಿಕ್ ತೊಗಿತಿ ಅವರು ಯೂಟ್ಯೂಬ್ನಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಅತ್ಯಂತ ಕಿರಿಯ ಹುಡುಗ. ತೆಲಂಗಾಣದ ಮಂಚೆರಿಯಲ್ ಎಂಬ ಸಣ್ಣ ನಗರದಲ್ಲಿ ಜನಿಸಿರುವ ಈತ, 10 ವರ್ಷವಿದ್ದಾಗಲೇ ತನ್ನದೇ ಆದ ಎಜುಕೇಶನಲ್ ಯೂಟ್ಯೂಬ್ ಚಾನೆಲ್ನ್ನು ಆರಂಭಿಸಿದ್ದಾನೆ. ಈತನ ‘ಲರ್ನ್ ವಿದ್ ಅಮರ್’ ಯೂಟ್ಯೂಬ್ ಚಾನೆಲ್ಗೆ 1.87 ಲಕ್ಷ ಗ್ರಾಹಕರಿದ್ದಾರೆ.
ಈತನ ತನ್ನ ಚಾನೆಲ್ ಮೂಲಕ ಯುಪಿಎಸ್ಸಿ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ಜಿಯೋಗ್ರಫಿ ಮತ್ತು ರಾಜ್ಯಶಾಸ್ತ್ರವನ್ನು ಕಲಿಸಿಕೊಡುತ್ತಾ ಬಂದಿದ್ದಾನೆ. ಈತನ ತಂದೆ ಸರ್ಕಾರಿ ಶಿಕ್ಷಕ ಮತ್ತು ಶಿಕ್ಷಕ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿದ್ದು, ಅವರು ಈತನ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಐದನೇ ತರಗತಿಯಿಂದಲೂ ಈತನಿಗೆ ಅಟ್ಲಾಸ್ ಎಂದರೆ ಅಚ್ಚುಮೆಚ್ಚು. ಆತನ ಈ ಆಸಕ್ತಿಯನ್ನು ಕಂಡು ಆತನ ತಂದೆ ಅವನಿಗೆ ಜಿಯೋಗ್ರಫಿಯನ್ನು ಬೋಧಿಸಲು ಆರಂಭಿಸಿದ್ದಾರೆ. ಒಂದು ಬಾರಿ ತಂದೆ ಮಗನಿಗೆ ಕಲಿಸುವುದನ್ನು ವೀಡಿಯೋ ಮಾಡಿ ಆತನ ತಾಯಿ ಆನ್ಲೈನ್ನಲ್ಲಿ ಬಿಟ್ಟಿದ್ದಾರೆ. ಅದಕ್ಕೆ ಅತ್ಯುತ್ತಮ ಪ್ರತಿಕ್ರಿಯೆಗಳು ಬಂದಿದ್ದು, ಮುಂದೆ ಯೂಟ್ಯೂಬ್ ಆರಂಭಿಸಲು ಬಾಲಕನಿಗೆ ಇದುವೇ ಪ್ರೇರಣೆಯಾಯಿತು.
ಅಮರ್ ಮೊದಲು ಜಿಯೋಗ್ರಫಿ ಪಾಠದೊಂದಿಗೆ ಚಾನೆಲ್ನ್ನು ಆರಂಭಿಸಿದ್ದು, ಇಲ್ಲಿ ಆತ ಹೆಸರು, ನದಿಗಳ ಹೆಸರು ಮತ್ತು ಸ್ಥಳಗಳ ಹೆಸರುಗಳನ್ನು ನೆನಪಿಟ್ಟುಕೊಳ್ಳುವ ಸರಳ ವಿಧಾನಗಳನ್ನು ಬೋಧಿಸುತ್ತಾನೆ. ರಾಜಕೀಯ ವಿಷಯಗಳ ಬಗ್ಗೆ ಹೇಳಿಕೊಡುತ್ತಾನೆ. ಇದೀಗ ಆತ ಆರ್ಥಿಕತೆ ಸೇರಿದಂತೆ ಇತರ ವಿಷಯದತ್ತವೂ ತನ್ನ ಚಾನೆಲ್ನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿದ್ದಾನೆ, ತನ್ನ ಗ್ರಾಹಕರ ಆಶೋತ್ತರಗಳಿಗೆ ಪೂರಕವಾದ ವೀಡಿಯೋಗಳನ್ನು ಈತ ಪ್ರಸಾರ ಮಾಡುತ್ತಾನೆ. ಈತನ ತಮ್ಮ ಅನಘ್ ವಿಗ್ನೇಶ್ ಕೂಡ ಈತನ ಕಾರ್ಯಕ್ಕೆ ಕೈಜೋಡಿಸುತ್ತಿದ್ದು, 10-13 ವೀಡಿಯೋಗಳನ್ನು ಮಾಡಿದ್ದಾನೆ.
ಐಎಎಸ್ ಆಗುವ ಆಸೆ ಹೊಂದಿರುವ ಅಮರ್ಗೆ, ಅಧಿಕಾರಿಯಾಗಿ ಕಾನೂನುಗಳ ಅನುಷ್ಠಾನವನ್ನು ಸಮರ್ಪಕವಾದ ರೀತಿಯಲ್ಲಿ ಮಾಡಬೇಕು ಎಂಬ ಆಶಯವಿದೆ. ಅವನೇ ಹೇಳುವಂತೆ, ’ನನಗೆ ಐಎಎಸ್ ಅಧಿಕಾರಿಯಾಗುವ ಬಯಕೆಯಿದೆ, ಅಧಿಕಾರಿಯಾಗಿ ಈ ದೇಶವನ್ನು ಅತ್ಯುತ್ತಮ ದೇಶವನ್ನಾಗಿ ರೂಪಿಸಬೇಕು. ನಮ್ಮ ದೇಶದಲ್ಲಿ ಹಲವಾರು ಕಾನೂನುಗಳಿವೆ ಆದರೆ ಅವುಗಳನ್ನು ಸರಿಯಾಗಿ ಪಾಲನೆ ಮಾಡಲಾಗುತ್ತಿಲ್ಲ, ಅವುಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿಲ್ಲ. ನಾನು ಐಎಎಸ್ ಅಧಿಕಾರಿಯಾದ ಬಳಿಕ, ಅವುಗಳ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸುತ್ತೇನೆ’ ಎನ್ನುತ್ತಾನೆ.
ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಎಂಬುದು ಈಗ ಸರ್ವೇ ಸಾಮಾನ್ಯ. ಅದರಂತೆ ಅಮರ್ನ ಯೂಟ್ಯೂಬ್ ಚಾನೆಲ್ಗೂ ನಕಾರಾತ್ಮಕ ಕಮೆಂಟ್ಗಳು ಬರುತ್ತವೆ. ಆದರೆ ಈ ಬಗ್ಗೆ ಆತ ಎಂದಿಗೂ ತಲೆ ಕೆಡಿಸಿಕೊಂಡಿಲ್ಲ. ‘ನಮಗೆ ಕೆಲವೊಮ್ಮೆ ನಕಾರಾತ್ಮಕ ಕಾಮೆಂಟ್ಗಳು ಬರುತ್ತವೆ. ಅದರಲ್ಲೂ ವಿವಾದಿತ ಪ್ರದೇಶಗಳು ಒಳಗೊಂಡಾಗ ಅತೀ ಹೆಚ್ಚು ಕೆಟ್ಟ ಕಾಮೆಂಟ್ಗಳನ್ನು ಕೇಳಬೇಕಾಗುತ್ತದೆ. ನಾನು ವೀಕೆಂಡ್ಗಳಲ್ಲಿ ಮಾತ್ರ ವೀಡಿಯೋಗಳನ್ನು ಮಾಡುತ್ತೇನೆ ಮತ್ತು ಉಳಿದ ದಿನಗಳಲ್ಲಿ ಶಾಲಾ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುತ್ತೇನೆ. ಹೀಗಾಗಿ ನಕರಾತ್ಮಕತೆ ನನ್ನನ್ನು ಹೆಚ್ಚಾಗಿ ಬಾಧಿಸುವುದಿಲ್ಲ’ ಎಂದಿದ್ದಾನೆ.
ಅಮರ್ನ ತಂದೆ ಗೋವರ್ಧನ್ ಆಚಾರಿ ತೊಗತಿಯವರು, ತಮ್ಮ ಮಕ್ಕಳನ್ನು 10ನೇ ತರಗತಿಯ ಬಳಿಕ ನಗರಕ್ಕೆ ಕಳುಹಿಸಿ ಶಿಕ್ಷಣ ನೀಡಲು ನಿರ್ಧರಿಸಿದ್ದಾರೆ. ಅವರು ಇಲ್ಲಿ ಇರುವವರೆಗೂ ಅವರ ಜ್ಞಾನ ಮತ್ತು ಆಸಕ್ತಿಯನ್ನು ಹೆಚ್ಚಿಸುವ ಕಾರ್ಯವನ್ನು ನಾನು ಮಾಡುತ್ತಿರುತ್ತೇನೆ ಎಂದು ಅವರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.