ಒಂದು ಕಾಲದಲ್ಲಿ ಅಪಾರ ಸಂಖ್ಯೆಯ ಕೆರೆಗಳನ್ನು ಹೊಂದಿದ್ದ ಬೆಂಗಳೂರು ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಇಲ್ಲಿನ ನಿಸರ್ಗ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಬೆಂಗಳೂರಿನೊಳಗೆ ದುರ್ಬಿನ್ ಹಾಕಿ ನೋಡಿದರೂ ಪರಿಶುದ್ಧ ನೀರಿನಿಂದ ಸಮೃದ್ಧವಾಗಿರುವ ಕೆರೆಯನ್ನು ಕಾಣುವುದೇ ಕಷ್ಟಸಾಧ್ಯ. 1960ರಲ್ಲಿ ಇಲ್ಲಿ 262 ಕೆರೆಗಳಿದ್ದವು, ಇದೀಗ ಇವುಗಳ ಸಂಖ್ಯೆ 81ಕ್ಕೆ ಇಳಿದಿದೆ. ಆದರೆ ಈ 81ನ್ನೂ ಜೀವಂತವಾಗಿರುವುದು ಕೇವಲ 34 ಕೆರೆಗಳು ಮಾತ್ರ. ಬೇಕಾಬಿಟ್ಟಿ ಕಟ್ಟಡಗಳ ನಿರ್ಮಾಣಕ್ಕಾಗಿ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಮಾಲಿನ್ಯದಿಂದ ಉಳಿದ ಕೆರೆಗಳು ಅವಸಾನದ ಅಂಚಿಗೆ ತಲುಪಿವೆ.
ಆದರೆ ಇತ್ತೀಚಿನ ದಿನಗಳಲ್ಲಿ ಜನರಿಗೆ ಪರಿಸರ ಪ್ರಜ್ಞೆ ಬೆಳೆದಿದೆ. ಪರಿಸರ ಪ್ರೇಮಿಗಳು ಒಂದಿಷ್ಟಾದರೂ ಕೆರೆಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸೋಣ ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ, ಅಂತಹವರಲ್ಲಿ ಒಬ್ಬರು 38 ವರ್ಷದ ಟೆಕ್ಕಿ ಆನಂದ್ ಮಲ್ಲಿಗವಾಡ. 2025ರೊಳಗೆ 45 ಕೆರೆಗಳನ್ನು ಪುನರುಜ್ಜೀವನಗೊಳಿಸುವ ಗುರಿಯಿಟ್ಟುಕೊಂಡು ಆ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದ್ದಾರೆ. ಈಗಾಗಲೇ ಅವರು, 36 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಅನೇಕಲ್ ಸಮೀಪದ ಕ್ಯಾಲಸನಹಳ್ಳಿ ಕರೆಯನ್ನು ಕೇವಲ 45 ದಿನಗಳೊಳಗೆ ಪುನರುಜ್ಜೀವನಗೊಳಿಸಿದ್ದಾರೆ. ಸ್ಥಳಿಯ ನಾಗರಿಕರು ಮತ್ತು ಎಲೆಕ್ಟ್ರಾನಿಕ್ ಸಿಟಿಯ ಕೆಲ ಟೆಕ್ಕಿಗಳ ಸಹಾಯದೊಂದಿಗೆ ಅವರು ಈ ಕೆರೆಗೆ ಮರುಜೀವವನ್ನು ನೀಡಿದ್ದಾರೆ.
2017ರ ಎಪ್ರಿಲ್ 20ರಂದು 1 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಕೆರೆಯ ಅಭಿವೃದ್ಧಿ ಕಾರ್ಯವನ್ನು ಇವರ ತಂಡ ಕೈಗೆತ್ತಿಕೊಂಡಿತ್ತು. 17 ಲಕ್ಷ ರೂಪಾಯಿಗಳ ಧನ ಸಹಾಯವನ್ನು ಸಂಸೇರಾ ಫೌಂಡೇಶನ್ ಇವರಿಗೆ ನೀಡಿತ್ತು. ಬಿ.ಮುತುರಮನ್ ಎಂಬ ಹಿರಿಯ ನಾಗರಿಕರೊಬ್ಬರ ಸಹಾಯದೊಂದಿಗೆ ಇವರ ತಂಡ ಆ ಪ್ರದೇಶದ ಎಲ್ಲಾ ಜನರನ್ನು ಭೇಟಿಯಾಗಿ ಸಹಾಯಕ್ಕಾಗಿ ಮನವಿ ಮಾಡಿತು. ಮುರುಮನ್ ಅವರು 2009ರಲ್ಲಿ ಈ ಕೆರೆಯ ಸಮೀಪ ಮನೆ ಕಟ್ಟಿದ್ದರು, 2014ರಲ್ಲಿ ಇಲ್ಲಿಗೆ ಬಂದು ವಾಸ ಮಾಡಿದ ಅವರಿಗೆ ಕೆರೆ ಬರಿದಾಗಿರುವುದು ಕಂಡು ಬಂದಿತ್ತು. ಅವರು ಆನಂದ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು, ಆ ವೇಳೆ ಆನಂದ್ ಸಂಸೇರ ಫೌಂಡೇಶನ್ ಸಿಎಸ್ಆರ್ ಆಗಿದ್ದರು. ಅಲ್ಲಿಂದ ಕೆರೆಯ ಅಭಿವೃದ್ಧಿ ಕಾರ್ಯ ಆರಂಭಗೊಂಡಿತು. ಯಾವುದೇ ಎಂಜಿನಿಯರ್, ಕೈಗಾರಿಕ ತಜ್ಞರ ಸಹಾಯವಿಲ್ಲದೆ, ಆನಂದ್ ಮತ್ತು ಅವರ ಸ್ನೇಹಿತರು, ಸ್ಥಳಿಯರು 4 ಲಕ್ಷ ಕ್ಯೂಬಿಕ್ ಮೀಟರ್ ಮಣ್ಣನ್ನು ಕೆರೆಯಿಂದ ಮೇಲೆತ್ತಿದರು. ಇದಕ್ಕಾಗಿ ಮೂರು ಅರ್ತ್ ಮೂವರ್ಸ್ ಮತ್ತು 6 ಟ್ರಕ್ಗಳನ್ನು ಅವರು ಬಳಸಿಕೊಂಡಿದ್ದಾರೆ.
ಬಳಿಕ ಈ ಮಣ್ಣನ್ನು ಕೆರೆಯಾದ್ಯಂತ 11೦ ಡಯಾಮೀಟರ್ಗಳ ಐದು ಐಸ್ಲ್ಯಾಂಡ್ಗಳನ್ನು ನಿರ್ಮಾಣ ಮಾಡಲು ಬಳಸಿಕೊಳ್ಳಲಾಯಿತು. ಈ ಐಸ್ಲ್ಯಾಂಡ್ ಈಗ ಹಕ್ಕಿಗಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಕೆರೆಯ ಸುತ್ತ ಹೂ ಮತ್ತು ಹಣ್ಣುಗಳ ಮರಗಳನ್ನೂ ಬೆಳೆಸಲಾಗಿದೆ. ಆನಂದ್ ಹೇಳುವಂತೆ, ಈ ಕೆರೆಯ ಸುತ್ತ 22 ಬಗೆಯ ಹಣ್ಣುಗಳನ್ನು ನೀಡುವ 3 ಸಾವಿರ ಹಣ್ಣಿನ ಮರ, 3,000 ಸ್ಥಳಿಯ ಜಾತಿಯ ಮರ, 2,೦೦೦ ಆಯುರ್ವೇದಿಕ್ ಗಿಡ ಸೇರಿದಂತೆ ಒಟ್ಟು 18 ಸಾವಿರ ಗಿಡಗಳನ್ನು ಈ ಕೆರೆಯ ಸುತ್ತ ಬೆಳೆಸಲಾಗಿದೆ.
ಕಳೆದ 35 ವರ್ಷಗಳಿಂದ ನೀರೇ ಇಲ್ಲದೆ ಬರಡು ಭೂಮಿಯಂತಾಗಿದ್ದ ಈ ಕೆರೆಯಲ್ಲಿ ಮತ್ತೆ ನೀರು ತುಂಬುವಂತೆ ಮಾಡಲು ಆನಂದ್ ಅವರ ತಂಡ ಮತ್ತೆ 1 ಲಕ್ಷ ಕ್ಯೂಬಿಕ್ ಮೀಟರ್ ಮಣ್ಣನ್ನು ಕೆರೆಯಿಂದ ಮೇಲೆತ್ತಿತ್ತು ಮತ್ತು ಅದಕ್ಕೆ ನೀರನ್ನು ತುಂಬಿಸಿತು. ಬಳಿಕ ಸೆಪ್ಟಂಬರ್ನಲ್ಲಿ ಆಗಮಿಸಿದ ಮಳೆ ಈ ಕೆರೆಯಲ್ಲಿ ಜೀವ ಜಲ ಚಿಮ್ಮುವಂತೆ ಮಾಡಿತು.
ಹೆವ್ಲೆಟ್ ಪ್ಯಾಕರ್ಡ್ ಸಂಸ್ಥೆ ಈ ಕೆರೆಯ ಪುನರುಜ್ಜೀವನ ಕಾರ್ಯಕ್ಕಾಗಿ ರೂ.74 ಲಕ್ಷಗಳನ್ನು ಕೊಡುಗೆಯಾಗಿ ನೀಡಿದೆ. ಈ ಹಣವನ್ನು ಬಳಸಿಕೊಂಡು, ಸ್ಥಳಿಯ ರೈತರಿಗೆ ಅನುಕೂಲವಾಗುವ ಮಾದರಿಯಲ್ಲಿ ವಿನ್ಯಾಸ ರೂಪಿಸಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ರೈತರು ಈ ನೀರನ್ನು ನೀರಾವರಿಗಾಗಿ ನೇರವಾಗಿ ಉಪಯೋಗಿಸಿದರೆ ಕೆರೆಗೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ, ಕೆರೆಯ ಸುತ್ತಲೂ 486 ಬೋರ್ವೆಲ್ಗಳನ್ನು ಹಾಕಿಸಲಾಗಿದೆ. ಇವುಗಳ ಮೂಲಕ ರೈತರಿಗೆ ನೀರು ರವಾನೆಯಾಗುತ್ತದೆ.
ಕ್ಯಾಲಸನಹಳ್ಳಿ ಕರೆಯನ್ನು ಪುನರುಜ್ಜೀವನಗೊಳಿಸಿರುವ ಆನಂದ್ ಅಲ್ಲಿಗೆ ತಮ್ಮ ಕಾರ್ಯವನ್ನು ಮುಕ್ತಾಯ ಮಾಡಿಲ್ಲ, ಅವರ ಮುಂದಿನ ಟಾರ್ಗೆಟ್ 2025 ರೊಳಗೆ 45 ಕೆರೆಗಳನ್ನು ಪುನರುಜ್ಜೀವನಗೊಳಿಸುವುದು. ಸದ್ಯಕ್ಕೆ ಅವರು, ಬೆಲ್ಲಂದೂರ್ ಕೆರೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳಿಯ ಕೈಗಾರಿಕೆ ಮತ್ತು ಔಷಧಿ ಕಂಪನಿಗಳಿಂದಾಗಿ ಈ ಕೆರೆ ಸಂಪೂರ್ಣ ವಿಷಯುಕ್ತವಾಗಿದೆ. ಇದೇ ಕಾರಣಕ್ಕೆ ಸ್ಥಳೀಯ ಕೈಗಾರಿಕೆ ಹಿಕಲ್ ಲಿಮಿಟೆಡ್ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿ ಆನಂದ್ ಅವರ ಕಾರ್ಯಕ್ಕೆ 81 ಲಕ್ಷ ರೂಪಾಯಿಗಳನ್ನು ನೀಡಿದೆ. ಈ ಕೆರೆಯ ಬಳಿಕ ಕಾನಸಂದ್ರ ಕೆರೆ, ಗವಿ ಮತ್ತು ನಂನಜಪುರ ಕೆರೆ ಶೀಘ್ರದಲ್ಲೇ ಇವರ ಸುಪರ್ದಿಯಲ್ಲಿ ಪರಿವರ್ತನೆ ಕಾಣುವ ನಿರೀಕ್ಷೆಯಲ್ಲಿವೆ.
source : thebetterindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.