ನಾಗರಿಕತ್ವ(ತಿದ್ದುಪಡಿ)ಮಸೂದೆ 2016ಗೆ ಈಶಾನ್ಯ ಭಾರತದಲ್ಲಿ ಭಾರೀ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಗುಪ್ತಚರ ಇಲಾಖೆಯ ಪ್ರಕಾರ ಕೆಲವು ಇಸ್ಲಾಮಿಕ್ ಸಂಘಟನೆಗಳು ಈ ಪ್ರತಿಭಟನೆಯ ಕಾವು ಹೆಚ್ಚುವಂತೆ ಮಾಡುತ್ತಿವೆ ಮತ್ತು ಇದಕ್ಕೆ ಬೇಕಾದ ಹಣವನ್ನೂ ಸುರಿಸುತ್ತಿದೆ. ಇಡೀ ಜನರನ್ನು ಮಸೂದೆಯ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಉದ್ದೇಶವನ್ನು ಈ ಸಂಘಟನೆಗಳು ಹೊಂದಿವೆ ಎನ್ನಲಾಗಿದೆ.
ಅತ್ಯಂತ ಶ್ರೀಮಂತ ಸಂಘಟನೆ ಎನಿಸಿರುವ, ಮೌಲಾನಾ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್(ಎಐಯುಡಿಎಫ್), ಆಲ್ ಅಸ್ಸಾಂ ಮೈನಾರಿಟಿ ಸ್ಟುಡೆಂಟ್ಸ್ ಯೂನಿಯನ್ ಸೇರಿದಂತೆ ಹಲವು ಇಸ್ಲಾಮಿಕ್ ಸಂಘಟನೆಗಳು ಈ ಮಸೂದೆಯನ್ನು ಬಹಿರಂಗವಾಗಿಯೇ ವಿರೋಧಿಸಿವೆ. ಬಾಂಗ್ಲಾ, ಅಫ್ಘಾನ್, ಪಾಕಿಸ್ಥಾನ ದೇಶಗಳಲ್ಲಿ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಆಗಮಿಸಿರುವ ಹಿಂದೂ, ಸಿಖ್, ಕ್ರಿಶ್ಚಿಯನ್, ಜೈನ್, ಪಾರ್ಸಿಗಳಿಗೆ ಭಾರತದ ನಾಗರಿಕತ್ವವನ್ನು ಪಡೆಯಲು ಈ ಮಸೂದೆ ಅನುವು ಮಾಡಿಕೊಡುತ್ತದೆ. ಕೇಂದ್ರೀಯ ಗುಪ್ತಚರ ಇಲಾಖೆಗಳ ಪ್ರಕಾರ, ಈ ಇಸ್ಲಾಮಿಕ್ ಸಂಘಟನೆಗಳು ಮಸೂದೆಯ ವಿರುದ್ಧ ಜನರನ್ನು ಎತ್ತಿ ಕಟ್ಟಲು ಹಣವನ್ನು ವಿನಿಯೋಗಿಸುತ್ತಿದೆ.
ಮಸೂದೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿರುವುದು ಗುಪ್ತಚರ ಇಲಾಖೆಯ ಸಂಶಯಕ್ಕೆ ಮತ್ತಷ್ಟು ಇಂಬು ನೀಡಿದೆ. ಈಶಾನ್ಯ ಭಾಗದ ಮೂಲ ನಿವಾಸಿಗಳಲ್ಲಿ ಮಸೂದೆಯ ಬಗ್ಗೆ ತಪ್ಪು ಭಾವನೆಯನ್ನು ತುಂಬಿ, ಅವರನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಹಲವಾರು ಪೋಸ್ಟ್ಗಳು ಮೂಲ ನಿವಾಸಿಗಳ ಭಾವನೆಯನ್ನು ಕೆರಳಿಸುವ ರೀತಿಯಲ್ಲೇ ಇವೆ.
ಈ ಬಗ್ಗೆ ಮಾಹಿತಿ ನೀಡಿರುವ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ‘ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿರುವ ಹಲವಾರು ಪೋಸ್ಟ್ಗಳ ಮೂಲ ಪಾಕಿಸ್ಥಾನ ಮತ್ತು ಬಾಂಗ್ಲಾದೇಶವಾಗಿದೆ, ಮಸೂದೆಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿರುವ ಟ್ವಿಟರ್ ಹ್ಯಾಂಡಲ್ನ್ನು ಪಾಕಿಸ್ಥಾನದಿಂದ ಆಪರೇಟ್ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಹಲವಾರು ಫೇಕ್ ಫೇಸ್ಬುಕ್ ಖಾತೆಗಳನ್ನು ತೆರೆಯಲಾಗಿದೆ ಮತ್ತು ಪಾಕಿಸ್ಥಾನ, ಯುಎಇಗಳಲ್ಲಿನ ಯುಆರ್ಎಲ್ಗಳ ಕಂಪ್ಯೂಟರ್ಸ್ನಲ್ಲಿ ಇದನ್ನು ಆಪರೇಟ್ ಮಾಡಲಾಗುತ್ತಿದೆ, ಮಸೂದೆ ಬಗ್ಗೆ ತಪ್ಪು ಭಾವನೆ ಸೃಷ್ಟಿಸುವ ಉದ್ದೇಶದಿಂದಲೇ ಇವುಗಳನ್ನು ಸೃಷ್ಟಿ ಮಾಡಲಾಗಿದೆ’ ಎಂದಿದ್ದಾರೆ.
‘ಈ ಟ್ವಿಟರ್ ಹ್ಯಾಂಡಲ್ ಮತ್ತು ಫೇಸ್ಬುಕ್ಗಳಲ್ಲಿ ವಿಷಯಗಳನ್ನು ಈಶಾನ್ಯ ಭಾಗದೊಳಗೆ ಅತೀ ಹೆಚ್ಚು ಪ್ರಮಾಣದಲ್ಲಿ ಹರಡಿಸಲಾಗುತ್ತಿದೆ ಮತ್ತು ಇದನ್ನು ಅಲ್ಲಿನ ಮೂಲ ನಿವಾಸಿ ರಾಜಕೀಯ ನೇತಾರರು ಮರು ಟ್ವೀಟ್ ಮಾಡುತ್ತಿದ್ದಾರೆ. ಇದರಿಂದ ಅವುಗಳು ಮತ್ತಷ್ಟು ಜನಪ್ರಿಯಗೊಳ್ಳುತ್ತಿವೆ’ ಎಂದಿದ್ದಾರೆ.
ಒಂದು ವೇಳೆ ಮಸೂದೆ ಅನುಮೋದನೆಗೊಂಡರೆ, ಬಾಂಗ್ಲಾದೇಶದ ಸುಮಾರು 1.5 ಕೋಟಿ ಹಿಂದೂಗಳು ಈಶಾನ್ಯ ಪ್ರದೇಶಕ್ಕೆ ಬಂದು ನೆಲೆಸಲಿದ್ದಾರೆ ಮತ್ತು ಭಾರತದ ನಾಗರಿಕತ್ವ ಪಡೆದುಕೊಳ್ಳಲಿದ್ದಾರೆ ಎಂದು ಪಾಕಿಸ್ಥಾನ ಮೂಲದ ಟ್ವಿಟರ್ ಹ್ಯಾಂಡಲ್ಗಳು ಅಪಪ್ರಚಾರ ಮಾಡುತ್ತಿವೆ. ಈ ಪೋಸ್ಟ್ನ್ನು ಭಾರೀ ಪ್ರಮಾಣದಲ್ಲಿ ಹಂಚಿ ವೈರಲ್ ಮಾಡಲಾಗಿದೆ. ಅಸ್ಸಾಂ ಮತ್ತು ಈಶಾನ್ಯದ ಹಲವಾರು ಸಂಘಟನೆಗಳ ನಾಯಕರೂ ಇದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಸುಳ್ಳನ್ನು ಸತ್ಯ ಎಂದು ಸಾಬೀತುಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ’ಕೆಲವೇ ದಿನಗಳೊಳಗೆ ಇಂತಹ ಸುಳ್ಳು ಸುದ್ದಿಯನ್ನು ಹರಿಬಿಟ್ಟು ಅದನ್ನು ಭಾರೀ ಸಂಖ್ಯೆಯಲ್ಲಿ ಹಂಚಿಕೆ ಮಾಡಲಾಗಿದೆ. ಇಂತಹ ಸುಳ್ಳುಗಳ ಮೂಲ ನಿಜಕ್ಕೂ ಆಘಾತಕಾರಿ’ ಎಂದು ಗುಪ್ತಚರ ಇಲಾಖೆ ಅಧಿಕಾರಿ ಅಭಿಪ್ರಾಯಿಸಿದ್ದಾರೆ.
ಆರಂಭದಿಂದಲೇ, ಮಸೂದೆ ವಿರೋಧಿ ಚಳುವಳಿ ಬಿಜೆಪಿ ವಿರೋಧಿ ಚಳುವಳಿಯಂತೆಯೇ ಬೆಳೆದು ಬಂದಿದೆ. 2018ರ ಡಿಸೆಂಬರ್ ಮಧ್ಯಭಾಗದಲ್ಲಿ, ಕೆಲ ಮಸೂದೆ ವಿರೋಧಿಗಳು ಭಾರತ ವಿರೋಧಿ ಧ್ವನಿಯನ್ನೂ ಎತ್ತಿದ್ದಾರೆ. ವಾಯುನೆಲೆಯಿರುವ ಅಸ್ಸಾಂ ಮೇಲ್ಭಾಗದ ಚಬುವಾ ಪ್ರದೇಶದಲ್ಲಿ ಕೆಲವರು ‘ಇಂಡಿಯನ್ ಆರ್ಮಿ ಗೋ ಬ್ಯಾಕ್’ ಘೋಷಣೆಯನ್ನೂ ಕೂಗಿದ್ದಾರೆ. ಇದರಿಂದ ಭಾರತ ವಿರೋಧಿ ಶಕ್ತಿಗಳು ಮಸೂದೆ ವಿರೋಧಿ ಚಳುವಳಿಯೊಳಗೆ ನುಸುಳಿವೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇವುಗಳನ್ನು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಮಸೂದೆಯನ್ನು ಅಸ್ತ್ರವಾಗಿ ಬಳಸುತ್ತಿವೆ ಎಂದು ಅಸ್ಸಾಂ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ.
ಮಾರ್ಕ್ಸ್ವಾದಿ, ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾದ ವಿವಾದಿತ ವ್ಯಕ್ತಿ ಅಖಿಲ್ ಗೋಗಯ್ ನೇತೃತ್ವದ ಕೃಶಕ್ ಮುಕ್ತಿ ಸಂಗ್ರಾಮ್ ಸಮಿತಿಯು ಮಸೂದೆ ಬಗ್ಗೆ ತಪ್ಪು ಮಾಹಿತಿ ಮತ್ತು ಸುಳ್ಳು ಹರಡುವುದರಲ್ಲಿ ಬಹಳ ಮುಂದಿದೆ. ಮಸೂದೆ ಜಾರಿಗೊಂಡರೆ, ಅಸ್ಸಾಂನ್ನು ಭಾರತದಿಂದ ವಿಭಜಿಸಲು ಕರೆ ನೀಡುವುದಾಗಿ ಆತ ಹೇಳಿಕೊಂಡಿದ್ದಾನೆ. ಅಸ್ಸಾಂ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಸೇರಿದಂತೆ ಅನೇಕರು, ಗೋಗಯ್ ಭಾರತ ವಿರೋಧಿ ಶಕ್ತಿಗಳ ಪರವಾಗಿ ಮಸೂದೆಯ ಬಗ್ಗೆ ಸುಳ್ಳು ಹರಡಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ನಾಗರಿಕ ಸಮಾಜದ ಮುಖಂಡರೂ ಗೋಗಯ್ ಸುಳ್ಳು ಹರಡಿಸುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಒಂದು ವೇಳೆ ಮತದಾರರ ಪಟ್ಟಿಯಿಂದ ಬಾಂಗ್ಲಾದ ವಲಸಿ ಹಿಂದೂಗಳ ಹೆಸರನ್ನು ತೆಗೆದು ಹಾಕಿದರೆ, ಅಸ್ಸಾಂನ ಕನಿಷ್ಠ 17 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಮರೇ ಆರಿಸಿ ಬರುತ್ತಾರೆ, ಯಾಕೆಂದರೆ ಈ ಕ್ಷೇತ್ರಗಳಲ್ಲಿ ಶೇ.40ರಷ್ಟು ಮುಸ್ಲಿಮರೇ ವಾಸಿಸುತ್ತಿದ್ದಾರೆ. ಇದಕ್ಕಾಗಿಯೇ ಮುಸ್ಲಿಂ ಸಂಘಟನೆಗಳು ಮಸೂದೆಯನ್ನು ವಿರೋಧಿಸುತ್ತಿವೆ ಮತ್ತು ಜನರನ್ನು ಇದರ ವಿರುದ್ಧ ಎತ್ತಿಕಟ್ಟುತ್ತಿದೆ. ಒಂದು ವೇಳೆ ಅಸ್ಸಾಮಿ ಹಿಂದೂಗಳು ತಮ್ಮ ನೆಲೆಯನ್ನು ಬಿಟ್ಟು ಹೊರಬಂದರೆ ಅಸ್ಸಾಂ ಮತ್ತೊಂದು ಕಾಶ್ಮೀರವಾಗಲಿದೆ ’ ಮಸೂದೆ ಬಗ್ಗೆ ಅರಿವು ಮೂಡಿಸುತ್ತಿರುವ ಸಚಿವ ಹಿಮಾಂತ್ ಬಿಸ್ವಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
’ನಾವು ಮಸೂದೆಯ ಬಗ್ಗೆ ಅರಿವನ್ನು ಮೂಡಿಸುತ್ತಿದ್ದೇವೆ. ಮಸೂದೆ ಜಾರಿಯಾದರೆ ಯಾವುದೇ ಹೊಸ ಹಿಂದೂಗಳು ಬಾಂಗ್ಲಾದಿಂದ ಅಸ್ಸಾಂನೊಳಗೆ ಬರುವುದಿಲ್ಲ, ಅಸ್ಸಾಂ ಮತ್ತೊಂದು ಕಾಶ್ಮೀರವಾಗುವುದನ್ನು ತಡೆಯಲು ಈ ಮಸೂದೆಯನ್ನು ಪ್ರತಿ ಅಸ್ಸಾಮಿಗರೂ ಬೆಂಬಲಿಸಬೇಕು. ಬಾಂಗ್ಲಾದ ಹಿಂದೂಗಳಲ್ಲ, ಬಾಂಗ್ಲಾದ ಮುಸ್ಲಿಮರು ನಮ್ಮ ರಾಷ್ಟ್ರೀಯ ಭದ್ರತೆಗೆ, ಅಸ್ಸಾಮಿ ಸಂಸ್ಕೃತಿ, ಗುರುತಿಸುವಿಕೆಗೆ (Identity) ಮಾರಕವಾಗಿದ್ದಾರೆ. ಆದರೆ ಬಾಂಗ್ಲಾದೇಶಿ ಮುಸ್ಲಿಮರು ಖಂಡಿತವಾಗಿಯೂ ಈ ಮಸೂದೆಯ ಬಗ್ಗೆ ಕೋಪಗೊಂಡಿದ್ದಾರೆ’ ಎಂದು ಶರ್ಮಾ ಹೇಳಿದ್ದಾರೆ.
ಬಾಂಗ್ಲಾದಿಂದ ವಲಸೆ ಬಂದು ಅಸ್ಸಾಂನಲ್ಲಿ ನೆಲೆಸಿರುವ ಮುಸ್ಲಿಮರು ಮಸೂದೆಗೆ ತೀವ್ರವಾದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಸೂದೆಗೆ ವಿರೋಧ ಬಾಂಗ್ಲಾ ಮುಸ್ಲಿಮರಿಂದಲೇ ಹೆಚ್ಚಾಗಿ ಕೇಳಿ ಬರುತ್ತಿದೆ. ಮಸೂದೆಯ ಬಗ್ಗೆ ಅವರಿಗೇನು ಸಮಸ್ಯೆ ಇದೆ? ಬಂಗಾಳಿ ಮುಸ್ಲಿಮರಿಗೆ ಈ ಮಸೂದೆಯಿಂದ ಏನಾಗಬೇಕಿದೆ, ಅವರು ಯಾಕೆ ಇದನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿಮತ್ತೆ ನಮಗಿರಬೇಕು.
ಒಂದು ವೇಳೆ ಬಾಂಗ್ಲಾ ಹಿಂದೂಗಳು ಭಾರತದ ಪ್ರಜೆಗಳಾಗುವುದು ತಪ್ಪಿದರೆ, ಮುಂದಿನ ಚುನಾವಣೆಗಳಲ್ಲಿ ಅಸ್ಸಾಂನ 17 ಕ್ಷೇತ್ರಗಳಲ್ಲಿ ಮುಸ್ಲಿಂ ಪ್ರಾಬಲ್ಯವನ್ನು ಸ್ಥಾಪನೆ ಮಾಡಬಹುದು, ಅಸ್ಸಾಂ ಸಂಪೂರ್ಣ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗುತ್ತದೆ. ಇದೇ ಕಾರಣಕ್ಕೆ ಬಾಂಗ್ಲಾ ಮುಸ್ಲಿಮರು ಮಸೂದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಶರ್ಮಾ ಹೇಳುತ್ತಾರೆ.
ಮಸೂದೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳ ಬಗ್ಗೆ ಈಗಾಗಲೇ ಕೇಂದ್ರೀಯ ಮಂಡಳಿಗಳು ನಿಗಾ ಇಟ್ಟಿವೆ. ಇವುಗಳಿಗೆ ಹರಿದು ಬರುತ್ತಿರುವ ಹಣದ ಮೂಲದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ, ಪ್ರಾಥಮಿಕವಾಗಿ, ಹಣ ಕೈಯಿಂದ ಕೈಯಿಗೆ ವರ್ಗಾವಣೆಯಾಗುವುದು ಗೋಚರವಾಗಿದೆ, ಕೆಲ ಸಂಸ್ಥೆಗಳು ಮತ್ತು ವ್ಯಕ್ತಿಗಳು ಹೋರಾಟವನ್ನು ಮುನ್ನಡೆಸುತ್ತಿದ್ದಾರೆ. ಇವರು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಇಸ್ಲಾಮಿಕ್ ಮೂಲದಿಂದ ಹಣ ಪಡೆದುಕೊಂಡಿರುವ ಸಾಧ್ಯತೆ ಇದೆ ಎಂದು ಐಬಿ ಅಧಿಕಾರಿ ತಿಳಿಸಿದ್ದಾರೆ.
ಅಸ್ಸಾಂನಲ್ಲಿನ ಮೂಲಭೂತವಾದಿ ಮುಸ್ಲಿಮರು ಮತ್ತು ವಿದೇಶದಲ್ಲಿ ಕುಳಿತಿರುವ ಅವರ ಸಹವರ್ತಿಗಳು ಈಗಾಗಲೇ ಬರಿದಾಗುವ ಆತಂಕದಲ್ಲಿರುವ ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ರಾಜ್ಯ ಈ ಬೆದರಿಕೆಯ ಬಗ್ಗೆ ಜಾಗೃತವಾಗಿದ್ದು, ನಾಗರಿಕತ್ವ (ತಿದ್ದುಪಡಿ) ಮಸೂದೆ ವಿರೋಧಿ ಅಜೆಂಡಾಗೆ ಪ್ರತ್ಯುತ್ತರ ನೀಡಲು ಆರಂಭಿಸಿದೆ.
source: swarajya
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.