ನವದೆಹಲಿ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಆಳೆತ್ತರದ ಭಾವಚಿತ್ರವನ್ನು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಫೆಬ್ರವರಿ 12ರಂದು ಅಳವಡಿಸಲಾಗುತ್ತಿದೆ.
ಸರ್ಕಾರಿ ಮೂಲದ ಪ್ರಕಾರ, ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾವಚಿತ್ರವನ್ನು ಅನಾವರಣಗೊಳಿಸಲಿದ್ದಾರೆ. ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಸ್ಪೀಕರ್ ಸುಮಿತ್ರಾ ಮಹಾಜನ್, ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಉಪಸ್ಥಿತರಿರಲಿದ್ದಾರೆ.
ಉತ್ತರಪ್ರದೇಶದ ವೃಂದಾವನದ ಖ್ಯಾತ ಕಲಾವಿದ ಕೃಷ್ಣ ಕನ್ಹಯ್ಯ ಅವರು ರಚನೆ ಮಾಡಿದ ವಾಜಪೇಯಿಯವರ ಆಳೆತ್ತರದ ಭಾವಚಿತ್ರವನ್ನು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಹಾಕಲಾಗುತ್ತಿದೆ.
ಕಳೆದ ಡಿಸೆಂಬರ್ 18ರಲ್ಲಿ, ಲೋಕಸಭಾ ಸ್ಪೀಕರ್ ಸಮಿತ್ರಾ ಮಹಾಜನ್ ಅವರ ನೇತೃತ್ವದ ಸಂಸತ್ತು ಭಾವಚಿತ್ರ ಸಮಿತಿ ಸಭೆಯಲ್ಲಿ, ಸೆಂಟ್ರಲ್ ಹಾಲ್ನಲ್ಲಿ ವಾಜಪೇಯಿ ಭಾವಚಿತ್ರವನ್ನು ಹಾಕುವ ನಿರ್ಧಾರವನ್ನು ಅವಿರೋಧವಾಗಿ ತೆಗೆದುಕೊಂಡಿತ್ತು.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಸ್ಪೀಕರ್ ಮತ್ತು ಎಐಎಡಿಎಂಕೆ ನಾಯಕ ಎಂ.ತಂಬಿ ದುರೈ, ಬಿಜೆಡಿಯ ಬ್ರಾತ್ರುಹರಿ ಮಹ್ತಬ್, ಟಿಎಂಸಿಯ ಸುದೀಪ್ ಬಂದೋಪಧ್ಯಾಯ, ಟಿಆರ್ಎಸ್ನ ಜಿತೇಂದ್ರ ರೆಡ್ಡಿ, ಶಿವಸೇನೆಯ ಅನಂತ್ ಗೀತೆ ಮತ್ತು ಬಿಜೆಪಿಯ ಸತ್ಯನಾರಾಯಣ ಜಾತಿಯ ಸಭೆಯಲ್ಲಿ ಭಾಗಿಯಾಗಿದ್ದರು.
ವಾಜಪೇಯಿಯವರು ಎಲ್ಲರೂ ಮೆಚ್ಚುವ ರಾಜಕಾರಣಿಯಾಗಿದ್ದು, 5 ವರ್ಷಗಳ ಅವಧಿ ಪೂರ್ಣಗೊಳಿಸಿದ ಮೊದಲ ಕಾಂಗ್ರೇಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆ ಅವರಿಗಿದೆ.