ಪ್ರಯಾಗ್ರಾಜ್: ಇಲ್ಲಿ ನಡೆದ ವಿಶ್ವ ಹಿಂದೂ ಪರಿಷದ್ನ ಧರ್ಮ ಸಂಸದ್ನಲ್ಲಿ ಭಾಗವಹಿಸಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಅಯೋಧ್ಯಾದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
”ಮುಂದಿನ ನಾಲ್ಕೈದು ತಿಂಗಳುಗಳಲ್ಲಿ ರಾಮಮಂದಿರ ನಿರ್ಮಾಣದ ಬಗೆಗೆ ಯಾವ ಬೆಳವಣಿಗೆಗಳು ನಡೆಯದಿದ್ದರೂ ತಾಳ್ಮೆ ಕಳೆದುಕೊಳ್ಳಬೇಡಿ. ರಾಜಕೀಯ ಚಿತ್ರಣ ಏನೇ ಇದ್ದರೂ, ಮುಂದಿನ ಒಂದು ವರ್ಷದೊಳಗೆ ಖಂಡಿತವಾಗಿಯೂ ಅಯೋಧ್ಯಾದಲ್ಲಿ ರಾಮ ಮಂದಿರ ತಲೆ ಎತ್ತಲಿದೆ” ಎಂದಿದ್ದಾರೆ.
ರಾಮಮಂದಿರದ ಬಗೆಗಿನ ವಿಎಚ್ಪಿ ಪ್ರಸ್ತಾಪಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಭಾಗವತ್ ಅವರು, ‘ಸಂಘ ಪರಿವಾರ ವಿಎಚ್ಪಿ ರಾಮ ಮಂದಿರ ನಿರ್ಮಾಣದ ಪ್ರಸ್ತಾಪಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ’ ಎಂದಿದ್ದಾರೆ.
”ಕೇಂದ್ರ ಸರ್ಕಾರ ದೇಗುಲ ನಿರ್ಮಾಣಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ. ನೆರೆಹೊರೆಯ ದೇಶದಲ್ಲಿ ಸಂಕಷ್ಟದಲ್ಲಿದ್ದ ಹಿಂದೂಗಳಿಗೆ ಭಾರತೀಯ ನಾಗರಿಕತ್ವವನ್ನು ನೀಡಿದೆ. ಸರ್ಕಾರ ಸರಿಯಾದ ದಿಸೆಯಲ್ಲೇ ಸಾಗುತ್ತಿದೆ” ಎಂದಿದ್ದಾರೆ.
”ನಾವಲ್ಲದೆ ಬೇರೆ ಯಾರು ದೇಗುಲವನ್ನು ನಿರ್ಮಾಣ ಮಾಡುತ್ತಾರೆ? ನಾವೇ ದೇಗುಲ ನಿರ್ಮಿಸುತ್ತೇವೆ, ಆದರೆ ಇದು ಮತದಾರರ ಓಲೈಕೆಗಾಗಿ ಆಗಿರಬಾರದು” ಎಂದಿದ್ದಾರೆ.