ವಾಷಿಂಗ್ಟನ್: ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ಕೋಮು ಹಿಂಸಾಚಾರ ಹಾಗೂ ದಾಳಿಗಳನ್ನು ನಡೆಸಲು ಹೊಂಚು ಹಾಕುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಯುಎಸ್ ಮೂಲದ ರಾಷ್ಟ್ರೀಯ ಗುಪ್ತದಳದ ನಿರ್ದೇಶಕ ಡ್ಯಾನ್ ಕೋಟ್ಸ್ ಹೊರ ಹಾಕಿದ್ದಾರೆ.
ಭಾರತ ಮತ್ತು ಅಫ್ಘಾನಿಸ್ಥಾನಗಳನ್ನು ಪಾಕಿಸ್ಥಾನ ಮೂಲದ ಭಯೋತ್ಪಾದಕರು ಹೆಚ್ಚಾಗಿ ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೇ ತಿಂಗಳಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಇದೆ, ಜುಲೈನ ಮಧ್ಯಭಾಗದಲ್ಲಿ ಅಫ್ಘಾನಿಸ್ಥಾನ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ, ಈ ವರ್ಷ ದಕ್ಷಿಣ ಏಷ್ಯಾ ರಾಷ್ಟ್ರಗಳು ಭಯೋತ್ಪಾದಕರಿಂದ ಹೆಚ್ಚಿನ ಸವಾಲನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಚುನಾವಣೆಗಳ ಹಿನ್ನಲೆಯಲ್ಲಿ ಭಯೋತ್ಪಾದಕರು ಕೋಮು ಗಲಭೆ ಎಬ್ಬಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಾಕಿಸ್ಥಾನ ತನ್ನ ನೆಲದಲ್ಲಿ ಭಯೋತ್ಪಾದಕರನ್ನು ಹತ್ತಿಕ್ಕುವತ್ತ ಹೆಚ್ಚಿನ ಗಮನವನ್ನು ನೀಡುತ್ತಿಲ್ಲ, ಬದಲಾಗಿ ಕೆಲವೊಂದು ಉಗ್ರ ಸಂಘಟನೆಗಳನ್ನು ಅದು ತನ್ನ ಅಸ್ತ್ರವಾಗಿ ಬಳಕೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಭಾರತದ ವಿರುದ್ಧ ದಾಳಿ ನಡೆಸುವ ಬಗೆಗಿನ ಯೋಜನೆಗಳನ್ನು ತಮ್ಮ ಸುರಕ್ಷಿತ ಸ್ವರ್ಗ ಪಾಕಿಸ್ಥಾನದಲ್ಲೇ ಉಗ್ರರು ಹಾಕಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.