ಕರ್ತಾರ್ಪುರ್ ಸಾಹೀಬ್ ಕಾರಿಡರ್ ಯೋಜನೆಯ ಆರಂಭ ಭಾರತ ಮತ್ತು ಪಾಕಿಸ್ಥಾನ ಎರಡೂ ದೇಶದ ರಾಜಕೀಯ ಮತ್ತು ರಾಜತಾಂತ್ರಿಕ ವಲಯದಲ್ಲಿ ಹಲವಾರು ವಾದ ವಿವಾದಗಳನ್ನು ಹುಟ್ಟು ಹಾಕಿದೆ. ಬಹುತೇಕರು, ಈ ಯೋಜನೆ ಉಭಯ ದೇಶಗಳ ನಡುವೆ ವಿಶ್ವಾಸ ನಿರ್ಮಾಣ ಕ್ರಮ ಎಂದೇ ಅಭಿಪ್ರಾಯಿಸಿದ್ದಾರೆ.
ಕರ್ತಾರ್ಪುರ ಕಾರಿಡಾರ್ನ ಆರಂಭದ ಬಳಿಕ, ಕಾಶ್ಮೀರಿ ಪಂಡಿತರು ಇದೇ ರೀತಿಯ ಕಾರಿಡಾರ್ನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಾಫರಬಾದ್ನಲ್ಲಿರುವ ಶಾರದಾ ಪೀಠಕ್ಕೂ ಆರಂಭಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಆಲ್ ಪಾರ್ಟಿ ಮೈನಾರಿಟಿ ಕೊಆರ್ಡಿನೇಶನ್ ಕಮಿಟಿಯ ಬ್ಯಾನರ್ನಡಿ 200ಕ್ಕೂ ಅಧಿಕ ಕಾಶ್ಮೀರಿ ಪಂಡಿತರು, ಶಾರದಾ ಪೀಠಕ್ಕೆ ಕಾರಿಡಾರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಅನಂತ್ನಾಗ್ನಲ್ಲಿ ಹೋರಾಟ ನಡೆಸಿದ್ದರು.
ಶಾರದಾಪೀಠ (ಪ್ರಸ್ತುತ ಅನಾಥ ಸ್ಥಿತಿಯಲ್ಲಿದೆ) ನೀಲಮ್ ನದಿಯ ತಟದಲ್ಲಿದೆ. ಎಲ್ಒಸಿಗೆ ಸ್ವಲ್ಪ ಹತ್ತಿರದಲ್ಲಿದೆ. ಕಾಶ್ಮೀರಿ ಪಂಡಿತರ ಮೂರು ಅತ್ಯಂತ ಪವಿತ್ರ ಯಾತ್ರಾ ಕ್ಷೇತ್ರಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ, ಮತ್ತೆರಡು ಅಮರನಾಥ ದೇಗುಲ ಮತ್ತು ಮರ್ತಂಡ್ ಸೂರ್ಯ ದೇಗುಲ.
ಬಹುತೇಕ ಕಾಶ್ಮೀರಿ ಪಂಡಿತರ ಮನೆಗಳಲ್ಲಿ ಶಾರದಾ ದೇವಿಯನ್ನು ಮನೆ ದೇವರಾಗಿ ಆರಾಧಿಸಲಾಗುತ್ತದೆ. ಪ್ರಸ್ತುತ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ, ರಕ್ತಪಾತಕ್ಕೆ ಶಾರದಾ ಪೀಠವನ್ನು ನಿರ್ಲಕ್ಷ್ಯ ಮಾಡಿ, ಶಾರದೆಗೆ ಅವಮಾನ ಮಾಡಿರುವುದೇ ಕಾರಣ ಎಂದು ಹಲವಾರು ಕಾಶ್ಮೀರಿ ಪಂಡಿತರ ನಂಬಿಕೆ.
ಇತಿಹಾಸಗಾರರ ಪ್ರಕಾರ, ಪ್ರಸ್ತುತ ಅವಸಾನದ ಅಂಚಿನಲ್ಲಿರುವ ಶಾರದಾ ಪೀಠವನ್ನು ಒಂದನೇ ಶತಮಾನದಲ್ಲಿ ಕುಶನ್ ರಾಜರುಗಳು ನಿರ್ಮಾಣ ಮಾಡಿದ್ದಾರೆ. ದುರ್ಗಾ ಮಾತೆಗೆ ಸಮರ್ಪಿಸಲಾದ 18 ಶಕ್ತಿ ಪೀಠಗಳಲ್ಲಿ ಇದು ಕೂಡ ಒಂದು ಎಂದು ಪರಿಗಣಿಸಲಾಗಿದೆ.
ಕಲ್ಹನ, ಆದಿ ಶಂಕರಾಚಾರ್ಯ, ಕುಮಾರಜೀವನಂತಹ ವಿದ್ವಾಂಸರು, ಪಂಡಿತರು ಶಾರದಾ ಪೀಠಕ್ಕೆ ಸಂಬಂಧಿಸಿದವರು ಎಂದು ಹೇಳಲಾಗಿದೆ. ಕಲ್ಹನ ಬರೆದ ರಾಜತರಂಗಿಣಿಯಲ್ಲಿ ಮತ್ತು ಅಲ್ ಬಿರುನಿಯ ಪ್ರಯಾಣ ಸ್ಮರಣೆಯಲ್ಲಿ ಶಾರದಾ ಪೀಠದ ಉಲ್ಲೇಖಗಳಿವೆ. ಇದೇ ಜಾಗದಲ್ಲಿ 141 ADಯಲ್ಲಿ ಕನಿಷ್ಕ 4ನೇ ಬೌದ್ಧ ಸಮಾವೇಶವನ್ನು ಏರ್ಪಡಿಸಿದ್ದ ಎಂಬ ಪ್ರತೀತಿ ಇದೆ. ಶಾರದಾ ಪೀಠ ನಿರ್ಮಾಣಕ್ಕೂ ಮುನ್ನ ಇಲ್ಲಿ ಬೌದ್ಧ ವಿಶ್ವವಿದ್ಯಾಲಯವೊಂದಿತ್ತು ಎಂದು ನಂಬಲಾಗಿದೆ.
ಅದೇನೆಯಿರಲಿ, ಶಾರದಾಪೀಠಕ್ಕೆ ಕಾರಿಡಾರ್ ನಿರ್ಮಾಣ ಮಾಡುವ ವಿಷಯ ನಾವು ಅಂದುಕೊಂಡದ್ದಕ್ಕಿಂತಲೂ ತುಸು ಸಂಕೀರ್ಣವಾಗಿದೆ. ಕರ್ತಾರ್ ಕಾರಿಡಾರ್ನ ಮಾದರಿಯನ್ನೇ ಇಲ್ಲಿ ಅನುಸರಿಸಲು ಸಾಧ್ಯವಿಲ್ಲ. ಕರ್ತಾರ್ಪುರ ಇರುವ ಜಾಗದಲ್ಲಿ ಯಾವುದೇ ಸಾರ್ವಭೌಮತೆಯ ವಿವಾದವಿಲ್ಲ. ಅದು ಪಾಕಿಸ್ಥಾನದ ಭಾಗ ಎಂದು ಭಾರತ ಪರಿಗಣಿಸಿದೆ, ಅದರ ನಡುವೆ ಅಂತಾರಾಷ್ಟ್ರೀಯ ಗಡಿಗಳಿವೆ, ತಂತಿ ಬೇಲಿಗಳಿವೆ. ಕಾರಿಡಾರ್ ಕಾರ್ಯಾಗತಗೊಳಿಸಲು ಪಾಕಿಸ್ಥಾನ 14 ಅಂಶಗಳ ಪ್ರಸ್ತಾವಣೆಯನ್ನು ಮುಂದಿಟ್ಟಿತ್ತು ಮತ್ತು ಇದನ್ನು ಒಪ್ಪಿಕೊಳ್ಳುವುದಕ್ಕೆ ಭಾರತ ಸರ್ಕಾರಕ್ಕೆ ಯಾವುದೇ ಸಮಸ್ಯೆಗಳಿರಲಿಲ್ಲ.
ಆದರೆ ಶಾರದಾ ಪೀಠದ ವಿಷಯಕ್ಕೆ ಬಂದರೆ, ಇಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಅಂತಾರಾಷ್ಟ್ರಿಯ ಗಡಿಗಳಿಲ್ಲ. ಅಲ್ಲಿ ಎಲ್ಒಸಿ ಮಾತ್ರ ಇದೆ, ಅದು ಅಂತಾರಾಷ್ಟ್ರೀಯ ಗಡಿಗಿಂತ ಭಿನ್ನ, ಎಲ್ಒಸಿಯಲ್ಲಿ ಅಧಿಕೃತ ಮತ್ತು ಪರಸ್ಪರ ಸ್ವೀಕೃತ ಸ್ಥಿತಿಯಿದೆ ಮತ್ತು ಉಭಯ ಕಡೆಗಳಿಂದ ಆ ಜಾಗ ನಮಗೆ ಸೇರಿದ್ದು ಎಂಬ ಕಲಹವಿದೆ.
ಅಂತಾರಾಷ್ಟ್ರೀಯ ಗಡಿಯಲ್ಲಿ ವಾಚ್ ಟವರ್ ಅಥವಾ ಕಣ್ಗಾವಲನ್ನು ಇಡಬಹುದು. ಆದರೆ ಎಲ್ಒಸಿಯಲ್ಲಿ ಸೇನೆ ಮತ್ತು ಪಡೆಗಳು ಬಂಕರ್ಗಳಲ್ಲಿ ವಾಸಿಸುತ್ತವೆ. ಗಡಿ ಉಲ್ಲಂಘನೆ, ಶೆಲ್ ದಾಳಿಗಳು ಇಲ್ಲಿ ಸರ್ವೇ ಸಾಮಾನ್ಯ ಎಂಬ ಪರಿಸ್ಥಿತಿ ಇದೆ.
ಪಾಕಿಸ್ಥಾನ ಸರ್ಕಾರ ಶಾರದಾ ಪೀಠಕ್ಕೆ ಕಾರಿಡಾರ್ ಸ್ಥಾಪನೆ ಮಾಡಲು ಒಪ್ಪಬಹುದು ಎಂಬ ನಿರೀಕ್ಷೆ ಇದೆ. ಪಾಕ್ ಮಾಧ್ಯಮಗಳ ವರದಿಯಂತೆ, ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಈ ಐಡಿಯಾದ ಪರವಾಗಿ ಹೇಳಿಕೆಯನ್ನೂ ನೀಡಿದ್ದಾರೆ. ಆದರೆ ಭಾರತಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಪಿಒಕೆ ಭಾರತದ ನೆಲ. ಆದ್ದರಿಂದಲೇ ಪ್ರಶ್ನೆಗಳು ಉದ್ಭವಿಸುತ್ತದೆ, ಶಾರದಾಪೀಠಕ್ಕೆ ತೆರಳಲು ವೀಸಾ ಬೇಕೆ? ಒಂದು ವೇಳೆ ಭಾರತ ವೀಸಾ ಒಪ್ಪಂದಕ್ಕೆ ಒಪ್ಪಿಕೊಂಡರೆ, ಪಿಒಕೆ ತನ್ನದಲ್ಲ ಪಾಕಿಸ್ಥಾನದ್ದು ಎಂದು ಭಾರತ ಒಪ್ಪಿಕೊಂಡಂತಾಗುತ್ತದೆ. ಶಾರದಾ ಪೀಠಕ್ಕೆ ಕಾರಿಡಾರ್ನ್ನು ಭಾರತ ಒಪ್ಪಬಹುದು ಆದರೆ ಅಲ್ಲಿಗೆ ತೆರಳಲು ವೀಸಾ ಬೇಕು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ಎರಡನೇಯದ್ದಾಗಿ, ಪಿಒಕೆ ಜನರನ್ನು ತನ್ನ ನಾಗರಿಕರು ಎಂದು ಕಾನೂನಾತ್ಮಕವಾಗಿ ಒಪ್ಪಿಕೊಳ್ಳುವ ಭಾರತ, ಈ ಕಾರಿಡಾರ್ ಮೂಲಕ ಪಿಒಕೆ ನಾಗರಿಕರು ತನ್ನ ದೇಶಕ್ಕೆ ಬರಲು ವೀಸಾ ಪಡೆಯಬೇಕು ಎಂಬ ಕಂಡೀಷನ್ ಹಾಕಲು ಸಾಧ್ಯವೆ? ಅಲ್ಲದೇ, ಪಿಓಕೆ ಸಮೀಪ ವಾಸಿಸುತ್ತಿರುವ ಪಾಕ್ ನಾಗರಿಕರಿಗೆ ಕಾರಿಡಾರ್ನಲ್ಲಿ ಪ್ರಯಾಣಿಸಲು ಅವಕಾಶ ನೀಡಬೇಕೇ ಎಂಬ ಅತೀ ಕಠಿಣ ಪ್ರಶ್ನೆಯೂ ಉದ್ಭವವಾಗುತ್ತದೆ.
ಎಲ್ಒಸಿ ಸಮೀಪದ ಉರಿ, ಶ್ರೀನಗರ, ಪೂಂಚ್, ರವಕೋಟ್ ರಸ್ತೆಗಳ ಮೂಲಕ ಎಲ್ಒಸಿಯ ಉಭಯ ಬದಿಗಳ ಜನರು ತಮ್ಮ ಸಂಬಂಧಿಕರನ್ನು ಅನುಮತಿ ಪಡೆದು ಭೇಟಿಯಾಗಬಹುದಾಗಿದೆ. ಈ ನಿಯಮವನ್ನು ಕಾಶ್ಮೀರಿಗಳಲ್ಲದವರಿಗೆ ಇದುವರೆಗೆ ವಿಸ್ತರಣೆ ಮಾಡಲಾಗಿಲ್ಲ. ಆದರೆ ಈ ಪಾರ್ಮುಲಾ ಶಾರದಾ ಪೀಠದ ವಿಷಯದಲ್ಲಿ ವರ್ಕೌಟ್ ಆಗಲಾರದು. ಯಾಕೆಂದರೆ ಕಾರಿಡಾರ್ಗೆ ಡಿಮ್ಯಾಂಡ್ ಮಾಡುತ್ತಿರುವ ಕಾಶ್ಮೀರಿ ಪಂಡಿತರು ಕೇವಲ ಕಾಶ್ಮೀರದಲ್ಲಿ ಮಾತ್ರವಲ್ಲ ಇಡೀ ದೇಶದಾದ್ಯಂತ ವಾಸಿಸುತ್ತಿದ್ದಾರೆ. ಕೆಲವರಿಗೆ ಕಾಶ್ಮೀರದಲ್ಲಿ ಪುನವರ್ಸತಿಯನ್ನೂ ಕಲ್ಪಿಸಲಾಗಿದೆ.
ಹೀಗಿರುವಾಗ, ದೆಹಲಿಯಲ್ಲಿ ವಾಸಿಸುತ್ತಿರುವ ಕಾಶ್ನೀರಿ ಪಂಡಿತರು ಶಾರದಾ ಪೀಠವನ್ನು ಕೇವಲ ಒಂದು ಅನುಮತಿಯೊಂದಿಗೆ ಪ್ರವೇಶಿಸಲು ಸಾಧ್ಯ? ಎಲ್ಲದಲ್ಲೂ ಮಿಗಿಲಾಗಿ, ಅಮರನಾಥದಂತೆ ದುರ್ಗಾ ಮಾತೆಯ ಶಕ್ತಿ ಪೀಠವಾದ ಇಲ್ಲಿಗೆ ದೇಶದಾದ್ಯಂತದ ಹಿಂದೂಗಳು ಭೇಟಿ ಕೊಡಲು ಬಯಸುತ್ತಾರೆ. 1947 ವಿಭಜನೆಯವರೆಗೂ ಇಲ್ಲಿ ವಾರ್ಷಿಕ ಯಾತ್ರೆಯನ್ನು ಆಗಸ್ಟ್ ತಿಂಗಳಲ್ಲಿ ನಡೆಸಲಾಗುತ್ತಿತ್ತು. ಈಗಲೂ ಅದನ್ನು ನಂನ್ಕನ ಸಾಹೇಬ್ ಮಾದರಿಯಂತೆ ಆಯೋಜನೆಗೊಳಿಸಬಹುದಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಕೇವಲ ಅನುಮತಿಯೊಂದಿಗೆ ಜನರ ಚಲನ ವಲನಗಳನ್ನು ಎಲ್ಒಸಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯವೇ? ಕಾರಿಡಾರ್ ಆರಂಭಕ್ಕೂ ಮುನ್ನ ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾದ ಅತ್ಯವಿದೆ.
ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿಯಂತಹ ಕೆಲವು ಸ್ಥಳಿಯ ಪಕ್ಷಗಳು ಶಾರದಾ ಪೀಠದ ತೆರೆಯುವಿಕೆಯ ಬೇಡಿಕೆಗೆ ಧ್ವನಿಗೂಡಿಸಿವೆ.
ಕಾರಿಡಾರ್ ಆರಂಭ ಮಾಡಿದರೆ ಕಾಶ್ಮೀರಿ ಹಿಂದೂಗಳಿಗೆ ಅತೀದೊಡ್ಡ ಜಯ ಸಿಕ್ಕಂತಾಗುತ್ತದೆ ಎಂಬುದು ನಿಜ, ಆದರೆ ಇದರ ನಿರ್ವಹಣೆ ಭಾರತಕ್ಕೆ ಅಷ್ಟು ಸುಲಭದ ಮಾತಲ್ಲ. ಯಾವುದೇ ಹೆಜ್ಜೆ ಮುಂದಿಡುವುದಕ್ಕೂ ಮುನ್ನ ಸರ್ಕಾರ ಆ ಜಾಗದ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕಾದುದು ಅತ್ಯವಶ್ಯಕ.
ಮೂಲ ಲೇಖನ: ರಾಕೇಶ್ ಕೆಆರ್ ಸಿನ್ಹಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.