ಎಪ್ರಿಲ್ ಒಂದರಿಂದ ಪ್ರತಿಯೊಬ್ಬ ವ್ಯಕ್ತಿಗೂ ಒಂದು ರೂಪಾಯಿಗೆ ಅಕ್ಕಿ ಕೊಡುವ ಯೋಜನೆಯನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಹೀಗೊಂದು ಹೆಡ್ಡಿಂಗ್ ಯಾವುದಾದರೂ ಪತ್ರಿಕೆಯ ಮುಖಪುಟದಲ್ಲಿ ಬಂದರೆ ನೀವು ಕಣ್ಣರಳಿಸಿ ಓದುತ್ತೀರಿ ತಾನೇ, ಇವತ್ತು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪರಮೇಶ್ವರ್ ಅವರಿಗೆ ಅಧಿಕಾರ ಹಸ್ತಾಂತರಿಸಲು ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್ ಮಾರ್ಚ್ 31ರ ತಡರಾತ್ರಿ ಸೂಚಿಸಿದೆ. ಹೀಗೆ ಎಪ್ರಿಲ್ 1 ರ ಬೆಳಿಗ್ಗೆ ಮಾಧ್ಯಮಗಳು ಸ್ಪರ್ಧೆಗೆ ಬಿದ್ದವರಂತೆ ನಿಮ್ಮ ಗಮನ ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸಲು ಇಂತಹ ಗಿಮಿಕ್ ಮಾಡುತ್ತಲೇ ಇರುತ್ತವೆ. ಮುಖಪುಟದಲ್ಲಿ ಯಾವುದೇ ಹೆಡ್ಡಿಂಗ್ ಇರಲಿ, ಆದರೆ ಎಪ್ರಿಲ್ 1 ದಿನ ಅದನ್ನು ಪರಾಮರ್ಶಿಸಿ ನೋಡುವುದು ಒಳ್ಳೆಯದು. ಯಾಕೆಂದರೆ ನಾಳೆ ಯಾವುದೇ ಪತ್ರಿಕೆ ಅಥವಾ ಟಿವಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮನ್ನು ಮೂರ್ಖರನ್ನಾಗಿಸುವ ಕೆಲಸ ನಡೆಯುತ್ತಿರುತ್ತದೆ. ಅದರ ಬಳಿಕ ಒಳಪುಟಗಳಲ್ಲಿ ಅದಕ್ಕೆ ಸ್ಪಷ್ಟನೆ ಕೊಡುವ ಕೆಲಸ ಕೂಡ ನಡೆಯುತ್ತಿರುತ್ತದೆ. ಕೆನಡಾ, ಇರೋಪ್, ಆಸ್ಟ್ರೇಲಿಯಾ, ಬ್ರೆಜಿಲ್ ರಾಷ್ಟ್ರಗಳಲ್ಲಿ ಈ ವಿಶ್ವ ಮೂರ್ಖರ ದಿನವನ್ನು ಆಚರಿಸುವ ಸಂಪ್ರದಾಯ ಹೆಚ್ಚಾಗಿ ಕಂಡು ಬರುತ್ತದೆ. 19 ರ ದಶಕದಲ್ಲಿ ಈ ಮೂರ್ಖರ ದಿನವನ್ನು ಆಚರಿಸುವುದಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳು ಹೆಚ್ಚೆಚ್ಚು ಮುಂದಾಗಿರುವುದರಿಂದ ಅದರ ಪ್ರಭಾವ ನಮ್ಮ ರಾಷ್ಟ್ರದಲ್ಲಿ ಕೂಡ ಕಂಡು ಬಂತು. 1392 ನಾಟಕಕಾರ ಚೌಸರ್ಸ್ ಅವರ ದಿ ಸೆಂಟರ್ಬರಿ ಟೆಲ್ಸ್ ನಾಟಕದಲ್ಲಿ ಎಪ್ರಿಲ್ 1 ರ ಪ್ರಸ್ತಾಪ ಕಂಡು ಬರುತ್ತದೆ ಎಂದು ಇತಿಹಾಸ ತಿಳಿಸುತ್ತದೆ. ಆ ನಾಟಕದಲ್ಲಿ ಹೀಗೆ ಸುಮ್ಮನೆ ಮೂಡಿ ಬಂದ ಕಥೆ ನಂತರ ಅದೇ ವಿಶ್ವಕ್ಕೆ ಮೂರ್ಖರ ದಿನವನ್ನಾಗಿ ಆಚರಿಸಲು ಪ್ರೇರಣೆ ಆಯಿತು ಎಂದು ಇತಿಹಾಸಕಾರರು ತಿಳಿಸುತ್ತಾರೆ.
ಯಾರಿಗೂ ಹಾನಿ ಮಾಡದೇ ಕೇವಲ ಸಂತೋಷಕ್ಕಾಗಿ ಈ ದಿನದಂದು ಒಂದು ಹಾನಿಯಿಲ್ಲದ ಗಿಮಿಕ್ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಏನೋ ಮಾಡಲು ಹೋಗಿ ಅದರಿಂದ ಯಾವುದೋ ಒಂದು ಗಂಭೀರ ಹಾನಿಯಾದರೆ ಅದರಿಂದ ನಾವು ಕಳೆದುಕೊಳ್ಳುವುದೇ ಯಾವುದೇ ಸಂತೋಷ ಉಳಿಯುವುದಿಲ್ಲ. ಉದಾಹರಣೆ ಈಗ ಪರೀಕ್ಷೆಗಳ ಕಾಲ. ಹತ್ತನೇ ತರಗತಿಯ ಪರೀಕ್ಷೆ ನಡೆಯುತ್ತಿದೆ. ಒಬ್ಬ ಹುಡುಗ ಸಹಪಾಠಿಗೆ ಫೋನ್ ಮಾಡಿ ಊರಿನಲ್ಲಿ ದೊಡ್ಡ ಗಲಾಟೆ ಆಗಿದೆ. ಆದ್ದರಿಂದ ಸಂಘಟನೆಗಳು ಊರಿನ ಬಂದ್ಗೆ ಕರೆ ನೀಡಿದ್ದಾರೆ ಎಂದು ಫೋನ್ ಮಾಡಿ ತಿಳಿಸಿದರೆ, ಅದನ್ನು ನಂಬಿದ ಈ ಹುಡುಗ ಪರೀಕ್ಷೆಗೆ ಹೋಗದೆ ಮನೆಯಲ್ಲಿಯೇ ಕುಳಿತುಕೊಂಡರೆ ಅದರಿಂದ ಆತ ಅಮೂಲ್ಯ ಒಂದು ವರ್ಷವನ್ನು ಕಳೆದುಕೊಳ್ಳುತ್ತಾನೆ.
ನಗರ ಪ್ರದೇಶದಲ್ಲಿ ಇಂತಹ ಹುಸಿ ಕರೆಗಳನ್ನು ಯಾವುದೇ ವಿದ್ಯಾರ್ಥಿ ನಂಬುವುದಿಲ್ಲ ಎಂದೇ ಇಟ್ಟುಕೊಳ್ಳೋಣ. ಆದರೆ ಗ್ರಾಮೀಣ ಭಾಗದಲ್ಲಿ ಈ ವಿಷಯಗಳು ಯಾವುದೇ ಒಬ್ಬ ವಿದ್ಯಾರ್ಥಿಯ ಅಮೂಲ್ಯ ಒಂದು ವರ್ಷವನ್ನು ನಾಶ ಮಾಡಲು ಸಾಕು. ಹಾಗೇ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಗೆ ಅವನ ಸಹಪಾಠಿ ಕರೆ ಮಾಡಿ ನೀನು ಒಂದು ಪಠ್ಯದಲ್ಲಿ ಫೇಲ್ ಆಗಿದ್ದಿ ಎಂದು ಹೇಳಿದರೆ ಅದನ್ನು ನಂಬಿದ ವಿದ್ಯಾರ್ಥಿ ನೇಣಿಗೆ ಕೊರಳೊಡ್ಡಿದರೆ ಅದಕ್ಕಿಂತ ನೋವಿನ ಸಂಗತಿ ಬೇರೆ ಇಲ್ಲ. ಇದು ಯಾವುದೂ ಕಲ್ಪನೆ ಅಲ್ಲ. ಇದು ಹಿಂದೆ ನಡೆದಿರುವ ಸಂಗತಿಗಳೇ ಆಗಿವೆ. ಅದರಿಂದ ಕೆಲವು ಜೀವಗಳು ಹೋದದ್ದು ನಿಜ.
ಇನ್ನೂ ನಿಮ್ಮ ಹತ್ತಿರದ ಸಂಬಂಧಿಗಳು ಅಪಘಾತದಲ್ಲಿ ಗಂಭೀರ ಗಾಯಗೊಂಡರು ಎನ್ನುವಂತಹ ವಿಷಯಗಳು, ಬಾಸ್ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎನ್ನುವಂತಹ ಸಂಗತಿಗಳು ಕೂಡ ಕೆಲವೊಮ್ಮೆ ಗಂಭೀರ ಪರಿಣಾಮ ಬೇರೆ ವ್ಯಕ್ತಿಗಳ ಮೇಲೆ ಬೀಳುತ್ತದೆ. ಆದ್ದರಿಂದ ನೀವು ಯಾರನ್ನಾದರೂ ಮೂರ್ಖರನ್ನಾಗಿಸುವ ಮುನ್ನ ನಿಮ್ಮ ಹಾಸ್ಯ ಅವರ ಜೀವನದಲ್ಲಿ ಮರುಕಳಿಸಲಾಗದ ಪರಿಣಾಮ ಬೀರುತ್ತಾ ಎಂದು ಪರಿಶೀಲಿಸಿ ನಂತರ ಜೋಕ್ ಮಾಡಿ. ಅದೇ ರೀತಿಯಲ್ಲಿ ಯಾರಾದರೂ ಬೆಳ್ಳಂಬೆಳಗ್ಗೆ ನಿಮಗೆ ಏನಾದರೂ ಗಂಭೀರ ವಿಷಯ ಹೇಳಿದರೆ ಅದಕ್ಕೆ ತಕ್ಷಣ ಪ್ರತಿಕ್ರಿಯೆ ಕೊಡುವ ಮೊದಲು ಒಮ್ಮೆ ಚಿಂತಿಸಿ.
ನೀವು ನಿಜ ಜೀವನದಲ್ಲಿ ಎಷ್ಟೋ ಸಲ ಬೇರೆ ಬೇರೆ ಕಾರಣಗಳಿಂದ ನಂಬಿದವರ ಕೈಯಿಂದ ಮೂರ್ಖರಾಗಿರಬಹುದು. ಅದರಿಂದ ಜೀವನದಲ್ಲಿ ಪಾಠ ಕಲಿತಿರಬಹುದು. ಹಾಗಂತ ಎಪ್ರಿಲ್ 1 ರಂದು ಒಂದು ಸಣ್ಣ ನಗೆ ಬೇರೆಯವರ ಮುಖದಲ್ಲಿ ಮೂಡಿಸಲು ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ. ನಿಮ್ಮ ಹಾಸ್ಯ ಬೇರೆಯವರ ಬಾಳಲ್ಲಿ ನಗೆ ಚೆಲ್ಲಲಿ, ನಷ್ಟವನ್ನಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.