ಭಾರತದಲ್ಲಿ ಸಾವಿರಾರು ಅತ್ಯಮೂಲ್ಯ ಪ್ರಾಚೀನ ಗ್ರಂಥಗಳಿವೆ. ಕೆಲವು ಗ್ರಂಥಗಳು ಅವಸಾನದ ಅಂಚಿನಲ್ಲಿವೆ, ಅವುಗಳನ್ನು ಸಂಗ್ರಹಿಸಿ ಸಂರಕ್ಷಿಸುವುದು, ಮುಂದಿನ ಪೀಳಿಗೆಗೂ ಅವುಗಳ ಮಹತ್ವವನ್ನು ತಿಳಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಆದರೆ ಬಹುತೇಕರಿಗೆ ಈ ಬಗ್ಗೆ ಅರಿವೇ ಇಲ್ಲ. ಆದರೆ ನೋಯ್ಡಾದ ಯುವಕನೊಬ್ಬ ಈ ಕರ್ತವ್ಯವನ್ನು ಅತ್ಯಂತ ಮುತುವರ್ಜಿಯಿಂದ ಮಾಡುತ್ತಿದ್ದಾನೆ.
ಮೋಹಿತ್ ಭಾರಧ್ವಜ್ ಎಂಬ ಮಾಜಿ ಐಟಿ ವೃತ್ತಿಪರ, ಭಾರತದ ಪ್ರಾಚೀನ ಸಂಸ್ಕೃತ ಗ್ರಂಥಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡುವ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲೇ ಶುಕ್ರ ಯಜುರ್ವೇದವನ್ನು ಅಧ್ಯಯನ ಮಾಡಿದ್ದ ಇವರು, ಅವಸಾನದ ಅಂಚಿನಲ್ಲಿದ್ದ ಪ್ರಾಚೀನ ಗ್ರಂಥಗಳನ್ನು ಮುಂದಿನ ಪೀಳಿಗೆಗೂ ಶೇಖರಿಸಿಡಬೇಕು ಎಂಬ ಪಣತೊಟ್ಟಿದ್ದರು. ಅದರಂತೆ ಇಂದು ಭಾರತೀಯ ಗ್ರಂಥಗಳನ್ನು ಡಿಜಿಟಲ್ ರೂಪದಲ್ಲಿ ಶೇಖರಿಸುತ್ತಿದ್ದಾರೆ.
ಪತ್ನಿ ಮತ್ತು ಸ್ನೇಹಿತರ ಸಹಾಯದಿಂದ ಹಳೆಯ ಗ್ರಂಥಗಳನ್ನು ಲ್ಯಾಪ್ಟಾಪ್, ಸ್ಕ್ಯಾನರ್ ಬಳಸಿ ಡಿಜಿಟಲೀಕರಣಗೊಳಿಸುತ್ತಿದ್ದಾರೆ. 200,000 ಪೇಜ್ಗಳಷ್ಟು ಗ್ರಂಥಗಳ 1 ಟಿಬಿ ಡಾಟಾವನ್ನು ಈಗಾಗಲೇ ಈ ತಂಡ ಮುಂದಿನ ಪೀಳಿಗೆಗಾಗಿ ಶೇಖರಿಸಿಟ್ಟಿದೆ.
ಹಳೆಯ ಗ್ರಂಥಗಳ ಡಿಜಿಟಲೀಕರಣ ಅಷ್ಟು ಸುಲಭದ ಕೆಲಸವಲ್ಲ, ಗೆದ್ದಲು ಹಿಡಿದ ಪುಸ್ತಕಗಳನ್ನು, ಅಳಿವಿನಂಚಿನಲ್ಲಿರುವ ತಾಳೆಗರಿಗಳನ್ನು ಅತ್ಯಂತ ಮುತುವರ್ಜಿವಹಿಸಿ ಡಿಜಿಟಲ್ ರೂಪಕ್ಕೆ ತರಬೇಕಾಗುತ್ತದೆ. ಹಸ್ತಾಂತರ ಮಾಡುವ ವೇಳೆ ಇವುಗಳು ಹರಿದು ಹೋಗುವ ಭೀತಿಯೂ ಇರುತ್ತದೆ. ವಿವಿಧ ವಿಶ್ವವಿದ್ಯಾಲಯ, ಸಂಸ್ಕೃತ ಪೀಠಗಳ ಸಹಾಯ ಪಡೆದು ಇವರು ಈ ಕಾರ್ಯ ಮಾಡುತ್ತಿದ್ದಾರೆ.
ಈ ಕಾರ್ಯಕ್ಕಾಗಿ ಇವರು 2.2 ಮಿಲಿಯನ್ ರೂಪಾಯಿಗಳನ್ನು ವ್ಯಯಿಸಿದ್ದು, ಇದರಲ್ಲಿ ಅರ್ಧ ಭಾಗ ಅವರ ಸ್ವಂತ ಉಳಿತಾಯವಾದರೆ, ಉಳಿದರ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ ಅಭಿಯಾನದಿಂದಾಗಿ ಬಂದಿದೆ.
ಮೋಹಿತ್ ಭಾರಧ್ವಜ್ ಒರ್ವ ಐಟಿ ಎಂಜಿನಿಯರ್, ಆದರೆ ಬಾಲ್ಯದಿಂದಲೇ ಸಂಸ್ಕೃತ, ವೇದಧ್ಯಾಯನ ಮಾಡಿದ ಅವರು ಪ್ರಾಚೀನ ಗ್ರಂಥಗಳ ಉಳಿವಿಗಾಗಿ ತಮ್ಮ ಉದ್ಯೋಗವನ್ನು ತೊರೆದಿದ್ದಾರೆ. ಗಂಗಾ ಯಮುನಾ ನದಿಗಳ ನೆಲದಲ್ಲಿ ವೇದಿಕ ಧರ್ಮದ ಉಳಿವಿಗಾಗಿ ಇವರು ಹೋರಾಡುತ್ತಿದ್ದಾರೆ. ಇದಕ್ಕಾಗಿ ’ವೇದಿಕ ಭಾರತ್’ ಟ್ರಸ್ಟ್ನ್ನು ಸ್ಥಾಪಿಸಿದ್ದಾರೆ. ಅಲ್ಲದೇ ನವದೆಹಲಿಯಲ್ಲಿ ಆಧುನಿಕ ಶಿಕ್ಷಣವನ್ನು ಒಳಗೊಂಡ ವೇದಿಕ ಪಾಠಶಾಲೆ ಆರಂಭಿಸುವ ಯೋಚನೆಯಲ್ಲಿದ್ದಾರೆ. ಅಲ್ಲಿ ಶುಕ್ಲ ಯುಜುರ್ವೇದ ಕಲಿಸಿಕೊಡುವ ಇರಾದೆ ಅವರದ್ದು. ಅವರ ಈ ಕಾರ್ಯದಿಂದ ಭಾರತದ ಮುಂದಿನ ಪೀಳಿಗೆಗೂ ತನ್ನ ಪ್ರಾಚೀನ ಪರಂಪರೆಯ ಜ್ಞಾನ ಸಿಗಲಿದೆ.
source: www.organiser.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.