ದೀನ ದಲಿತರ ಪಾಲಿನ ಸಾರ್ವಕಾಲಿಕ ಅಧಿನಾಯಕ, ಮಹಾನ್ ಮೇಧಾವಿ, ದಾರ್ಶನಿಕ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 63ನೇ ಮಹಾಪರಿನಿರ್ವಾಣ್ ದಿವಸ್ನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. 956ರ ಡಿ.6ರಂದು ಅವರು ಇಹಲೋಕವನ್ನು ತ್ಯಜಿಸಿದ ದಿನವನ್ನು ಪ್ರತಿವರ್ಷ ಮಹಾಪರಿನಿರ್ವಾಣ್ ದಿವಸ್ ಆಗಿ ಆಚರಿಸಲಾಗುತ್ತದೆ. ಈ ದಿನ ದೇಶದಾದ್ಯಂತ ಅಂಬೇಡ್ಕರ್ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗುತ್ತದೆ.
ವಕೀಲನಾಗಿ, ಅರ್ಥಶಾಸ್ತ್ರಜ್ಞನಾಗಿ, ರಾಜಕಾರಣಿಯಾಗಿ, ಸಮಾಜ ಸುಧಾರಕನಾಗಿ ಅಂಬೇಡ್ಕರ್ ನಮ್ಮ ದೇಶಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಕಾರ್ಮಿಕರನ್ನು, ದೀನ ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕೊನೆಯ ಉಸಿರಿನವರೆಗೂ ಹೋರಾಡಿದ ಮಹನೀಯ ಅವರು. ಹೀಗಾಗಿ ಇಂದಿಗೂ ಅಂಬೇಡ್ಕರ್ ಎಂದರೆ ಹಿಂದುಳಿದವರ ಪಾಲಿನ ಕರುಣಾಳು, ಅಧಿನಾಯಕ.
ಬಾಲ್ಯದಿಂದಲೇ ಸಮಾಜದಲ್ಲಿನ ಅಸ್ಪೃಶ್ಯತೆ, ಅಸಮಾನತೆಯ ಕ್ರೂರತೆಯನ್ನು ಅನುಭವಿಸಿದ್ದ ಅವರು, ಸ್ವಪ್ರಯತ್ನದಿಂದಲೇ ಶಿಕ್ಷಣವನ್ನು ಪಡೆದು, ಸಮಾಜದ ಅತ್ಯುನ್ನತ ಗೌರವಗಳನ್ನು ತಮ್ಮದಾಗಿಸಿಕೊಂಡವರು. ದಲಿತ ಪ್ರಜ್ಞೆಯನ್ನು ಬಡಿದೆಬ್ಬಿಸಿ ಸ್ವಾಭಿಮಾನದ ಬೀಜವನ್ನು ಬಿತ್ತಿ ಹಿಂದುಳಿದ ಜನಾಂಗವನ್ನು ಸಬಲೀಕರಣದತ್ತ ಕೊಂಡೊಯ್ದವರು. ಸಮಾನತೆಯಿಂದ ಮಾತ್ರ ದೇಶ ಉದ್ಧಾರವಾಗುವುದು ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಹೋರಾಟದ ಮೂಲಕ ಮಾತ್ರ ಸಮಾನತೆ ಪಡೆಯಬಹುದು ಮತ್ತು ಸಾಮಾಜಿಕ ಪಿಡುಗುಗಳನ್ನು ಹೊಡೆದೋಡಿಸಬಹುದು ಎಂಬುದನ್ನು ಅವರು ಪ್ರತಿಪಾದಿಸಿದರು.
ದೇಶದ ಸಂವಿಧಾನವನ್ನು ರೂಪಿಸುವ ಮೂಲಕ ಅವರು, ಜನತಂತ್ರದ ಬೇರುಗಳು ನಮ್ಮ ನೆಲದಲ್ಲಿ ಗಟ್ಟಿಯಾಗಿ ಬೇರೂರುವಂತೆ ಮಾಡಿದರು. ಗುಲಾಮಗಿರಿ ವ್ಯವಸ್ಥೆಗೆ ದೀನ ದಲಿತರು ಬಲಿಯಾಗದಂತೆ, ಅವರಿಗೆ ಗೌರವಯುತವಾಗಿ ಸಮಾಜದಲ್ಲಿ ಬದುಕು ಕಟ್ಟಿಕೊಡಬೇಕು ಎಂಬ ದಿಟ್ಟ ಸಂದೇಶಗಳನ್ನು ಅವರು ರವಾನಿಸಿದರು.
ಎಲ್ಲರಂತೆ ದಲಿತರಿಗೂ ದೇಗುಲ ಪ್ರವೇಶಿಸುವ ಅವಕಾಶ, ಸಾರ್ವಜನಿಕ ವ್ಯವಸ್ಥೆಗಳನ್ನು ಬಳಸುವ ಅವಕಾಶ, ಶಿಕ್ಷಣ, ಉದ್ಯೋಗಗಳನ್ನು ಪಡೆಯುವ ಅವಕಾಶ ಸಿಗುವಂತೆ ಮಾಡಿದ್ದು ಅಂಬೇಡ್ಕರ್. ಅವರು ರೂಪಿಸಿದ ಕಾನೂನುಗಳು ದಲಿತರಿಗೆ ಸಮಾಜಿಕ ಸಮಾನತೆಯನ್ನು ತಂದುಕೊಡುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ.
ಇಂದಿಗೆ ಈ ಮಹಾನ್ ನಾಯಕ ಅಸ್ತಂಗತರಾಗಿ 63 ವರ್ಷಗಳು ಸಂದಿವೆ. ದೇಶದಾಧ್ಯಂತ ಈ ದಿನವನ್ನು ಮಹಾಪರಿನಿರ್ವಾಣ್ ದಿವಸ್ ಆಗಿ ಆಚರಿಸಲಾಗುತ್ತಿದೆ. ಗಣ್ಯಾತೀಗಣ್ಯರು ಮೇಧಾವಿ ನಾಯಕನಿಗೆ ಗೌರವಸಮರ್ಪಣೆ ಮಾಡಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಸಂಸತ್ತು ಆವರಣದಲ್ಲಿ ಇರುವ ಬಾಬಾ ಸಾಹೇಬ್ ಪ್ರತಿಮೆಗೆ ಪುಷ್ಪಾರ್ಚನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವಾರು ಗಣ್ಯರು ಅಂಬೇಡ್ಕರ್ ಗೌರವ ನಮನಗಳನ್ನು ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.