ಎಲ್.ಕಂಬೈನ್ಸ್ ಸಂಸ್ಥೆಯಿಂದ ಗಿರೀಶ್ ಕಾರ್ನಾಡ್ ರವರು 1972 ರಲ್ಲಿ ಶ್ರೀಕೃಷ್ಣ ಆಲನಹಳ್ಳಿ ರವರ ‘ಕಾಡು’ ಕಾದಂಬರಿ ಆಧಾರಿತ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಾರೆ. ಗೋವಿಂದ್ ನಿಹಲಾನಿ ರವರ ಛಾಯಾಗ್ರಹಣ, ಬಿ.ವಿ.ಕಾರಂತ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಅಮರೀಶ್ ಪುರಿ, ನಂದಿನಿ ಭಕ್ತವತ್ಸಲ, ಲೋಕೇಶ್, ಉಮಾ ಶಿವಕುಮಾರ್, ಟಿ.ಎಸ್.ನಾಗಾಭರಣ, ಜಿ.ಹೆಚ್.ಗೋವಿಂದರಾವ್, ಬೇಬಿ ಸುಧಾ ಬೆಳವಾಡಿ, ಹಾಗೂ ಮಾಸ್ಟರ್ ಜಿ.ಎಸ್.ನಟರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಎರಡನೇ ಅತ್ತ್ಯುತ್ತಮ ಚಿತ್ರ, ಅತ್ಯುತ್ತಮ ನಟಿ (ನಂದಿನಿ ಭಕ್ತವತ್ಸಲ) ಹಾಗೂ ಅತ್ಯುತ್ತಮ ಬಾಲನಟ (ಮಾಸ್ಟರ್ ಜಿ.ಎಸ್.ನಟರಾಜ್) ಎಂಬ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶಕ (ಗಿರೀಶ್ ಕಾರ್ನಾಡ್) ಎಂಬ 21 ನೇ ಫಿಲಂಫೇರ್ ಸೌತ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ಅಷ್ಟೇ ಅಲ್ಲದೇ 4 ನೇ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾದಿಂದ ವಿಶೇಷ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿತು.
ಇದೊಂದು ಎ ಸರ್ಟಿಫಿಕೇಟ್ ಚಿತ್ರ. ಆದರೆ ಎಲ್ಲೂ ಅಶ್ಲೀಲತೆ ಹಾಗೂ ಹಿಂಸೆಯ ಪರಮಾವಧಿ ಇಲ್ಲ. ಹಿಂದಿಯ ಖ್ಯಾತ ನಟರಾದ ಅಮರೀಶ್ ಪುರಿಯವರ ಮೊದಲ ಕನ್ನಡ ಚಿತ್ರ. ಇನ್ನೊಂದು ಕನ್ನಡ ಸಿನಿಮಾದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡರಾದರೂ, ಪೂರ್ಣ ಪ್ರಮಾಣದಲ್ಲಿ ನಟಿಸಿದ್ದು ಈ ಚಿತ್ರ ಮಾತ್ರ. ಈ ಸಿನಿಮಾದ ವಿಶೇಷವೆಂದರೆ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವುದು. ಇದೊಂದೇ ಸಿನಿಮಾದಲ್ಲಿ ನಟಿಸಿರುವ ನಂದಿನಿ ಭಕ್ತವತ್ಸಲರವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ ಇವರು ಖ್ಯಾತ ನಿರ್ಮಾಪಕ ನಿರ್ದೇಶಕ ಭಕ್ತವತ್ಸಲರವರ ಪತ್ನಿ. ಇವರ ಅಭಿನಯವಂತೂ ಮನೋಜ್ಞ. ಕಿಟ್ಟಿ ಪಾತ್ರದಲ್ಲಿ ನಟಿಸಿರುವ ಬಾಲಕ ಮಾಸ್ಟರ್ ಜಿ.ಎಸ್.ನಟರಾಜ್ ಎಂಬುವವರು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಾಲನಟನೆಗಾಗಿ ಪ್ರಶಸ್ತಿ ಪಡೆದ ಮೊದಲ ಬಾಲನಟ. ಆ ಹುಡುಗನ ಚುರುಕುತನ, ತುಂಟಾಟ ಎಲ್ಲವೂ ಕತೆಗೆ ಪೂರಕ. ಒಂದು ರೀತಿಯಲ್ಲಿ ಇವನದು ಪೋಷಕ ಪಾತ್ರ ಅಂತಲೇ ಹೇಳಬಹುದು. ಆ ಹುಡುಗ ಯಾರೆಂದರೆ ಗುಬ್ಬಿ ವೀರಣ್ಣರವರ ಮೊಮ್ಮಗ. ಬಾಲನಟಿಯಾಗಿ ಸುಧಾ ಬೆಳವಾಡಿರವರು ನಟಿಸಿದ್ದು, ಅದೆಷ್ಟು ಕ್ಯೂಟ್ ಆಗಿ ಕಾಣಿಸುತ್ತಾರೆಂಬುದನ್ನು ನೀವು ಸಿನಿಮಾದಲ್ಲಿ ನೋಡಬೇಕು.
ಇನ್ನೊಂದು ಪ್ರಮುಖ ವಿಷಯವೆಂದರೆ 1972 ರ ಕಾಲದಲ್ಲಿ ಕಲರ್ ಸಿನಿಮಾಗಳು ಬರುತ್ತಿದ್ದವು. ಆದರೂ ಈ ಸಿನಿಮಾ ಸಂಪೂರ್ಣವಾಗಿ ಕಪ್ಪು-ಬಿಳುಪಿನಲ್ಲಿ ತಯಾರಾಗಿದೆ. ಗ್ರೇ ಸ್ಕೇಲ್ ನಲ್ಲಿ ಕಾಣುವ ಸಿನಿಮಾದ ಪ್ರತಿಯೊಂದು ಫ್ರೇಮು ಅಮೋಘ ಎನಿಸುತ್ತದೆ. ಛಾಯಾಗ್ರಹಣಕ್ಕೆ ಬೆಳಕಿನ ಅವಶ್ಯಕತೆ ಹಾಗೂ ಬೆಳಕನ್ನು (ಲೈಟಿಂಗ್) ಹೇಗೆ ಬಳಸಬೇಕು ಎಂಬುದಂತೂ ಛಾಯಾಗ್ರಹಣ ಆಸಕ್ತರಿಗೆ ಒಂದು ಪಾಠವಾಗಬಹುದು. ಇದೆಲ್ಲವನ್ನೂ ಗಮನಿಸಿದಾಗ ಈ ಸಿನಿಮಾ ಛಾಯಾಗ್ರಾಹಕ ಕುರಿತು ಮತ್ತಷ್ಟು ಹೇಳಲೇಬೇಕು. ಗೋವಿಂದ ನಿಹಲಾನಿರವರು ಆರು ರಾಷ್ಟ್ರ ಪ್ರಶಸ್ತಿಗಳನ್ನು ಹಾಗೂ ಐದು ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೇ 2002 ರಲ್ಲಿ ‘ಪದ್ಮಶ್ರೀ’ ಗೌರವಕ್ಕೂ ಪಾತ್ರವಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಿರ್ದೇಶಕರು, ಖ್ಯಾತ ಬಿ.ವಿ.ಕಾರಂತರು ಹಾಗೂ ಪಿ.ಭಕ್ತವತ್ಸಲಂರವರು ಈ ಸಿನಿಮಾಗಾಗಿ ದುಡಿದಿದ್ದಾರೆ.
ಕಥೆ:
ಪ್ರತಿದಿನ ರಾತ್ರಿ ಕತ್ತಲಾದೊಡನೆ ಚಂದ್ರಪ್ಪ (ಅಮರೀಶ್ ಪುರಿ) ರೆಡಿಯಾಗಿ ಮನೆಯಿಂದ ಹೊರಗೆ ಹೋಗುತ್ತಾನೆ. ಇದನ್ನು ಅಸಹಾಯಕ ಸ್ಥಿತಿಯಲ್ಲಿ ಆತನ ಹೆಂಡತಿ ಕಮಲಿ (ನಂದಿನಿ ಭಕ್ತವತ್ಸಲ) ನಿತ್ಯ ನೋಡಿ, ರೋಧಿಸುತ್ತಿರುತ್ತಾಳೆ. ಗಂಡನ ಸದಾ ಮನೆಯಲ್ಲಿಯೇ ಇರಬೇಕೆಂದು ಕಾಡಿನಲ್ಲಿನ ದೇವರಿಗೆ ಪೂಜೆ ಮಾಡಿಸಿ ಕೋಳಿಯನ್ನು ಬಲಿ ಕೊಡುತ್ತಾಳೆ. ಕೋಳಿಯ ಕತ್ತು ಕತ್ತರಿಸುವಾಗ ತನ್ನ ಅಳಿಯನಾದ ಕಿಟ್ಟಿಯ (ಮಾಸ್ಟರ್ ಜಿ.ಎಸ್.ನಟರಾಜ್) ಕಣ್ಣು ಮುಚ್ಚಿ ತನ್ನತ್ತ ಸೆಳೆದುಕೊಳ್ಳುತ್ತಾಳೆ. ಮಕ್ಕಳು ಇಂಥವನ್ನೆಲ್ಲಾ ನೋಡಬಾರದೆಂಬ ತಾಯ್ತನ ಗೌರವ ಮೂಡಿಸುತ್ತದೆ. ನನ್ನ ತಾಯಿಯು ಕೂಡ ಹೀಗೆ ಹಿಂಸಾತ್ಮಕ ದೃಶ್ಯಗಳನ್ನು (ಫೈಟುಗಳನ್ನೂ ಸಹ) ನೋಡಲು ಬಿಡುತ್ತಿರಲಿಲ್ಲ. ಚಂದ್ರಪ್ಪನ ಹೆಂಡತಿಗೆ ಮಕ್ಕಳು ಇರುವುದಿಲ್ಲ. ಆ ಕಾರಣಕ್ಕೆ ಏನೋ, ನಿತ್ಯ ಬಸಕ್ಕನ (ಉಮಾ ಶಿವಕುಮಾರ್) ಮನೆಗೆ ಹೋಗುತ್ತಾನೆ. ಅವನ ಮನೆಯಲ್ಲಿ ಸಾಕಿದ ನಾಟಿ ಹಸುಗಳು, ಹೋರಿಗಳು ನೋಡಲು ಖುಷಿ ಕೊಡುತ್ತವೆ. ಈಗಿನ ಕಾಲದಲ್ಲಂತೂ ನಾಟಿ ಹಸುಗಳ ಸಂತತಿ ಕಡಿಮೆಯಾಗಿ, ಹೈಬ್ರೀಡ್ ಹಸುಗಳು ಬಂದಿವೆ. ವಿಸ್ಮಯಕಾರಿ ವಿಷಯವೆಂದರೆ ಜರ್ಸಿ, ಸಿಂಧಿ ಹಸುಗಳ ಹಾಲು ಅಷ್ಟೇನೂ ಉಪಕಾರಿಯಲ್ಲ. ನಾಟಿ ಹಸುವಿನ ಹಾಲು ಅಷ್ಟೇ ಸರ್ವರೀತಿಯಲ್ಲೂ ಉಪಯುಕ್ತ. ಊರಿನಲ್ಲಿ ಸಂಕ್ರಾಂತಿ ಸಂಭ್ರಮ. ಹಬ್ಬದ ವಾತಾವರಣ. ಹೋರಿಗಳ ಅಲಂಕರಿಸಿ ಇರುಳು ಪುಟ್ಟದಾಗಿ ಬೆಂಕಿ ಹಾಕಿ, ಅದನ್ನು ದಾಟಿಸುವ ಸಂಪ್ರದಾಯ. ಹೀಗೆ ಹಬ್ಬಗಳ ಸಂಪ್ರದಾಯವನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ. ಚಂದ್ರಪ್ಪ ಸಿಂಹಗಾಂಬೀರ್ಯ ಉಳ್ಳವನು. ಊರಿನ ಹಿರಿಯರಲ್ಲಿ ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುವ ಗೌರವ ಮರ್ಯಾದೆ ಸಂಪಾದಿಸಿಕೊಂಡವನು. ಊರಿನಲ್ಲಿ ಯಾವುದೇ ಪಂಚಾಯತಿ ತೀರ್ಮಾನ ನಡೆಯುವ ಸಮಯದಲ್ಲಿ ಚಂದ್ರಪ್ಪನ ಸಲಹೆ ಸಮ್ಮತಿಗೂ ಒಂದು ಪಾಲು ಇರುತ್ತದೆ.
ಪಕ್ಕದ ಹೊಸೂರಿನ ಶಿವಗಂಗ (ಲೋಕೇಶ್) ಹಾಗೂ ಚಂದ್ರಪ್ಪನಿಗೂ ಒಳಗೊಳಗೆ ಕಿರಿಕಿರಿ. ಆ ಕಿರಿಕಿರಿಯ ಕಿಡಿ ಆಗಾಗ ಹೊತ್ತಿಕೊಳ್ಳುತ್ತಿರುತ್ತದೆ. ಈ ಊರಿನ ಹೆಂಗಸು, ಆ ಊರಿನ ಗಂಡಸಿನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರವಾಗಿ ಪಂಚಾಯಿತಿ ನಡೆಯುವಾಗಲೂ ಶಿವಗಂಗನ ಕೊಂಕು ಮಾತುಗಳಿಂದ ಚಂದ್ರಪ್ಪನಿಗೆ ಸಿಟ್ಟು ಬರುತ್ತದೆ. ಹೊಡೆದಾಟವೂ ನಡೆಯುತ್ತದೆ. ಹೊಡೆದಾಟಕ್ಕೆ ನಿಂತರೆ ಚಂದ್ರಪ್ಪ ಹಸಿದ ಹುಲಿಯೇ. ಮುಂದೆ ಅಮರೀಶ್ ಪುರಿಯವರು ಈ ತರಹದ ಡೈನಾಮಿಕ್ ಪಾತ್ರಗಳಲ್ಲಿ ನಟಿಸಿದ್ದೇ ಹೆಚ್ಚು. ಒಮ್ಮೆ ರಾವಣನ ನಾಟಕ ನಡೆಯುವಾಗ ಹೊಸೂರಿನವರು ಇವರ ರಾಗಿ ಬಣವೆಗಳಿಗೆ ಬೆಂಕಿ ಹಚ್ಚುತ್ತಾರೆ. ತಿನ್ನುವ ಅನ್ನದ ಮೇಲೆ ಕಿಚ್ಚು ಹಚ್ಚಿದವರ ಮೇಲೆ ಇವರ ಹೊಟ್ಟೆಕಿಚ್ಚು ಹೆಚ್ಚಾಗಿ ಅವರ ಮೇಲೆ ಮತ್ಸರ ಹೆಚ್ಚಾಗುವಂತೆ ಮಾಡುತ್ತದೆ.
ಒಮ್ಮೆ ಚಂದ್ರಪ್ಪನ ಅಣ್ಣನ (ಜಿ.ಹೆಚ್.ಗೋವಿಂದರಾವ್) ಹೆಂಡತಿ ಕೂಡ ಹೊಸೂರಿನವನ ಜೊತೆ ಓಡಿ ಹೋಗುತ್ತಾಳೆ. ಅದರಿಂದ ಇನ್ನಷ್ಟೂ ಕೋಪಗೊಳ್ಳುತ್ತಾರೆ. ಹೀಗೆ ಇರುವಾಗ ಎರಡೂ ಊರಿನ ಹಿರಿಯರ ಸಂಧಾನದಂತೆ ಹೋಳಿ ಹಬ್ಬದ ಸಲುವಾಗಿ ಒಂದಾಗುತ್ತಾರೆ. ಓಕುಳಿಯಾಟದ ಸಂಭ್ರಮವನ್ನು ಎಳೆಎಳೆಯಾಗಿ ಸೆರೆಹಿಡಿದಿದ್ದಾರೆ. ಹೀಗೆ ಓಕುಳಿಯಾಡುವಾಗಲೂ ಮತ್ತೆ ಹೊಡೆದಾಡಿಕೊಳ್ಳುತ್ತಾರೆ. ಈ ಗಲಾಟೆ ನಂತರ ಚಂದ್ರಪ್ಪ ಬಿಡದೇ ಅದೇ ಊರಿನ ಬಸಕ್ಕನ ಮನೆಗೆ ಹೋಗುತ್ತಾನೆ. ಗಂಡನ ಈ ನಡೆ ಸರಿಯಾಗಲಿಲ್ಲವೆಂದು ಮನನೊಂದು ಆಕೆ ಕಿಟ್ಟಿ ಹಾಗೂ ನಾಗಿಯೊಂದಿಗೆ ಕಾಡಿನ ದೇವರನ್ನು ಪ್ರಾರ್ಥಿಸಿಕೊಳ್ಳಲು ಹೋಗುವಾಗ ಹೊಸೂರಿನ ಶಿವಗಂಗ ಹಾಗೂ ಅವನ ಸಹಚರರು ಆಕೆಯನ್ನು ಅಡ್ಡಗಟ್ಟಿ, ಶಿವಗಂಗ ಆಕೆಯ ಮಾನಭಂಗ ಮಾಡುತ್ತಾನೆ. ಈ ಘಟನೆಯಿಂದಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಝರಿತಳಾದ ಆಕೆ ಮನೆಯಲ್ಲಿ ಕೊನೆಯುಸಿರೆಳೆಯುತ್ತಾಳೆ. ಇದರಿಂದ ಕೋಪಗೊಂಡ ಚಂದ್ರಪ್ಪ ಕುಡುಗೋಲು ಹಿಡಿದು ಹೊಸೂರಿನ ಕಡೆ ಹೊರಡುತ್ತಾನೆ. ಆತನಿಗೆ ಜೊತೆಯಾಗಿ ಇಡಿ ಊರಿನ ಜನ ಕುಡುಗೋಲು, ಮಚ್ಚು, ಬೆತ್ತ ಹಿಡಿದು ಹೊರಡುತ್ತಾರೆ. ಸ್ವಲ್ಪ ಹೊತ್ತಿನ ಸಮಯದಲ್ಲಿ ಬಸವಳಿದು ಬರುತ್ತಾರೆ. ಕೊನೆಗೂ ಹೊಸೂರಿನಲ್ಲಿ ಭಾರಿ ಹೆಣಗಳನ್ಬು ಉರುಳಿಸಿಯೇ ಬಂದಿರುತ್ತಾರೆ. ಅದೇ ಸರಿರಾತ್ರಿಯಲ್ಲಿ ಪೋಲಿಸರು (ಚಡ್ಡಿ ಧರಿಸಿದ ಆ ಕಾಲದ ಪೋಲಿಸ್ ಅಂದ್ರೆ ಆ ಕಾಲದಲ್ಲಿ ಭಾರಿ ಭಯವಿತ್ತು. ಈ ಕಾಲದಲ್ಲಿ ಪೋಲಿಸ್ ಕಂಡರೇ ಅಂತಾ ಭಯವಿಲ್ಲ). ಈ ಗಲಾಟೆಗೆ ಕಾರಣರಾದ ಪ್ರಮುಖ ಆರೋಪಿಗಳನ್ನು ಬಂಧಿಸುತ್ತಾರೆ. ಇತ್ತ ತಾಯಿಯಂತೆ ಪ್ರೀತಿಸುತ್ತಿದ್ದ ಅತ್ತೆಯನ್ನು ಹಾಗೂ ತಂದೆಯಂತೆ ಸಲಹುತ್ತಿದ್ದ ಮಾವನನ್ನು ಕಳೆದುಕೊಂಡು, ಜೀವದ ಗೆಳತಿ ನಾಗಿಯಿಂದ ದೂರಾಗಿ, ಯಾರೂ ಇಲ್ಲದ ಮನೆಯಲ್ಲಿ ಅನಾಥನಾಗಿ ಅಧೀರನಾದ ಕಿಟ್ಟಿ ಕಾಡು ಸೇರಿಕೊಳ್ಳುತ್ತಾನೆ. ಅಲ್ಲಿಗೆ ಸಿನಿಮಾ ಅಂತ್ಯಗೊಳ್ಳುತ್ತದೆ. ಹಳ್ಳಿಗಳಲ್ಲಿ ನಡೆಯುವ ಗುಂಪು ಘರ್ಷಣೆ, ಸಮಸ್ಯೆಗಳ, ಹಬ್ಬಹರಿದಿನಗಳ ಆಚರಣೆಗಳನ್ನು ಬಹಳ ಸೂಕ್ಷ್ಮವಾಗಿ ತೆರೆ ಮೇಲೆ ತಂದಿದ್ದಾರೆ.
ಒಂದು ಸ್ಲೇಟು ಬಳಪ ಇರುವ ಪುಟ್ಟದೊಂದಿಗೆ ಒಂದು ಹೆಗಲಿನಿಂದ ಮತ್ತೊಂದು ಮಗ್ಗುಲಿಗೆ ಜೋತಾಡಿಸಿಕೊಂಡು ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ ಹೋಗುವ ಕಿಟ್ಟಿಯನ್ನು ಕಂಡಾಗ ನಮ್ಮ ಬಾಲ್ಯ ನೆನಪಾಗುತ್ತದೆ. ಪುಟ್ಟ ಬ್ಲೌಜು, ಮೋಟುದ್ದ ಲಂಗ, ಎರಡೂ ಜಡೆ, ಕೆಂಪು ಟೇಪು, ಮುಖದಲ್ಲಿ ನಿಷ್ಕಲ್ಮಶ ನಗೆ ಇವಿಷ್ಟೇ ಅಲಂಕಾರದೊಂದಿಗೆ ನಾಗಿ (ಸುಧಾ ಬೆಳವಾಡಿ) ತುಂಬಾ ತುಂಬಾ ಮುದ್ದಾಗಿ ಕಾಣಿಸುತ್ತಾಳೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1.ಹೊಡೆದಾಟ, ಬಡಿದಾಟ ತಂದು ಕೊಡುವುದು ಅಶಾಂತಿಯೇ ಹೊರತು ಮತ್ತೇನಲ್ಲ ಎಂಬ ಕುರಿತು ತಿಳಿಯಲು.
2. ಕುಟುಂಬದ ಮೌಲ್ಯ ಏನು ಎಂಬುದನ್ನು ತಿಳಿಯಲು.
3. ಛಾಯಾಗ್ರಹಣದಲ್ಲಿ ಆಸಕ್ತಿ ಉಳ್ಳವರು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.