ಪ್ರತಿ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಸುರಕ್ಷಿತ ರಕ್ತದ ಬಗ್ಗೆ ಜಾಗೃತಿ ಮತ್ತು ರಕ್ತ ದಾನಿಗಳ ಜೀವ ಉಳಿಸುವ ಕಾಯಕಕ್ಕೆ ಧನ್ಯವಾದಗಳನ್ನು ಸಮರ್ಪಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ಆಚರಿಸುವ 8 ಜಾಗತಿಕ ಸಾರ್ವಜನಿಕ ಆರೋಗ್ಯ ಅಭಿಯಾನಗಳಲ್ಲಿ ವಿಶ್ವ ರಕ್ತದಾನ ದಿನ ಕೂಡ ಒಂದು. 2004ರಿಂದ ಪ್ರತಿವರ್ಷವೂ ಜಗತ್ತಿನಾದ್ಯಂತ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಪ್ರತಿಯೊಬ್ಬ ವ್ಯಕ್ತಿಗೂ ಜೀವನದ ಯಾವುದಾದರು ಘಟ್ಟದಲ್ಲಿ ರಕ್ತದ ಅವಶ್ಯಕತೆ ಉಂಟಾಗುತ್ತದೆ. ತನ್ನ ಅಥವಾ ತನ್ನವರ ಜೀವವನ್ನು ಉಳಿಸಲು ರಕ್ತ ಅತ್ಯವಶ್ಯಕವಾಗಿರುತ್ತದೆ. ದಾನಿಗಳು ನೀಡಿದ ರಕ್ತ ಆತನ ಜೀವ ಮತ್ತು ಜೀವನವನ್ನು ಉಳಿಸಬಲ್ಲುದು. ಅಂತೆಯೇ ಪ್ರತಿಯೊಬ್ಬ ವ್ಯಕ್ತಿ ಕೂಡ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ರಕ್ತದಾನ ಮಾಡಬೇಕು. ಇದರಿಂದ ಕನಿಷ್ಠ ಪಕ್ಷ ಒಂದು ಜೀವವನ್ನಾದರೂ ಉಳಿಸುವ ಯೋಗ ಸಿಗುತ್ತದೆ.
ನಮ್ಮ ದೇಶಗಳ ಬ್ಲಡ್ ಬ್ಯಾಂಕುಗಳಲ್ಲಿ, ಆಸ್ಪತ್ರೆಗಳಲ್ಲಿ ಈಗಲೂ ರಕ್ತದ ಅಭಾವವಿದೆ. ರಕ್ತದಾನಿಗಳ ಸಂಖ್ಯೆ ಕಡಿಮೆ ಇರುವುದೇ ಇದಕ್ಕೆ ಕಾರಣ. ರಕ್ತ ದಾನದ ಬಗ್ಗೆ ಜಾಗೃತಿ ಮೂಡಿಸಿ, ಹೆಚ್ಚೆಚ್ಚು ಮಂದಿಯನ್ನು ರಕ್ತದಾನಕ್ಕೆ ಪ್ರೋತ್ಸಾಹಿಸುವ ಮೂಲಕ ರಕ್ತದ ಅಭಾವವನ್ನು ನಾವು ಕಡಿಮೆಗೊಳಿಸಬಹುದು.
ರಕ್ತ ದಾನದಿಂದ ಇನ್ನೊಬ್ಬರ ಜೀವ ಉಳಿಸುವುದು ಮಾತ್ರವಲ್ಲ ತಮ್ಮ ಆರೋಗ್ಯವನ್ನೂ ಕಾಪಾಡಬಹುದಾಗಿದೆ. ರಕ್ತದಾನ ಮಾಡುವುದರಿಂದ ರಕ್ತದಲ್ಲಿ ಕೊಬ್ಬಿನ ಅಂಶ ಶೇಖರಣೆಯಾಗುವುದನ್ನು ತಡೆಗಟ್ಟಬಹುದು, ಕಬ್ಬಿಣದ ಅಂಶವನ್ನು ಸಮತೋಲನದಲ್ಲಿ ಇಡಬಹುದು, ಧೀರ್ಘಾಯುಷಿಗಳಾಗಿ ಬದುಕಬಹುದು ಮತ್ತು ಪುರುಷರಲ್ಲಿ ಹೃದಯ ಸಂಬಂಧಿ ಕಾಯಿಲೆಯನ್ನು ತಡೆಯಲು ಸಹಕಾರಿಯಾಗಬಲ್ಲುದು.
ಕೇವಲ ರಕ್ತದಾನ ಮಾಡುವುದಲ್ಲದೇ ಇತರರನ್ನು ರಕ್ತದಾನ ಮಾಡುವಂತೆ ಪ್ರೋತ್ಸಾಹಿಸಬೇಕು, ರಕ್ತದಾನದ ಮಹತ್ವದ ಬಗ್ಗೆ ಅವರಲ್ಲಿ ಅರಿವನ್ನು ಮೂಡಿಸಬೇಕು. ಹೀಗೆ ಮಾಡುವುದರಿಂದ ಅಮೂಲ್ಯ ಜೀವವನ್ನು ನಾವು ಉಳಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.