ಗಾಂಧಿ ವಿಚಾರಧಾರೆ ಒಳಹೊಕ್ಕು – 5
ಗಾಂಧೀಜಿ ಹುಟ್ಟು ಬಡವರಲ್ಲ, ಶ್ರೀಮಂತರು. ತೀರಾ ಹಳ್ಳಿಗರಲ್ಲ, ಅದಾಗ್ಯೂ ಹುಟ್ಟು ನಗರಿಗರೂ ಅಲ್ಲ.
ತೀರಾ ಹಳ್ಳಿಗರೂ ಅಲ್ಲ, ತೀರಾ ನಗರಿಗರೂ ಅಲ್ಲ ಎನ್ನುವುದು; ಮಧ್ಯದ ಸ್ಥಿತಿಯನ್ನು ಸೂಚಿಸುತ್ತದೆ. ಮಧ್ಯಮಮಾರ್ಗವನ್ನು ಪ್ರತಿಪಾದಿಸಿದ ಬುದ್ಧನ ದಾರಿಯನ್ನು ಅಪ್ಪಿಕೊಂಡ ಗಾಂಧಿಗೆ ಈ ಸ್ಥಿತಿ ತೀರಾ ಒಪ್ಪುವ ಸ್ಥಿತಿ. ತೀರಾ ಕೆಳಗಿರುವವರನ್ನು ಮತ್ತು ತೀರಾ ಮೇಲಿರುವವರನ್ನು ತಲುಪಲು ಸಾಧ್ಯವಾಗಬಲ್ಲ ಸ್ಥಿತಿ.
ಅವರ ಈ ಲೌಕಿಕವ್ಯವಸ್ಥೆಯ ಸ್ಥಿತಿಯೇ ಅವರಿಗೆ ಒಂದಷ್ಟು ಮಾತೃಭಾಷೆ ಗುಜರಾತಿಯ ಶಿಕ್ಷಣವನ್ನೂ ಒಂದಷ್ಟು ಆಂಗ್ಲಶಿಕ್ಷಣವನ್ನೂ ಒಂದು ಹಂತದಲ್ಲಿ ಇಂಗ್ಲೆಂಡಿನ ಬ್ಯಾರಿಸ್ಟರ್ ಪದವಿಯನ್ನೂ ಹೊಂದಲು ಸಹಕಾರಿಯಾಯಿತು.
ನಮ್ಮ ಮೂಲದ ಮಸುಕುಮಸುಕಾದ ಪರಿಚಯ, ಜತೆಗೆ ಆಂಗ್ಲಸಭ್ಯತೆಯ ಗಾಢಸಂಪರ್ಕ – ಎರಡೂ ಈ ಶಿಕ್ಷಣವ್ಯವಸ್ಥೆಯಲ್ಲಿ ಲಭ್ಯಸಾಧ್ಯ.
ಆಂಗ್ಲವ್ಯವಸ್ಥೆಯಲ್ಲಿ ಶಿಕ್ಷಣಕ್ಕೂ ಉನ್ನತ ಆರ್ಥಿಕಸ್ಥಿತಿಗೂ ಅವಿನಾಭಾವ ಸಂಬಂಧವಿದೆ. ಉನ್ನತವಾಗಿ ಶಿಕ್ಷಣ ಪಡೆದವನೊಬ್ಬನನ್ನು ಆರ್ಥಿಕವಾಗಿ ಸಾಮಾನ್ಯಸ್ಥಿತಿಯಲ್ಲಿ ಕಲ್ಪಿಸಿಕೊಳ್ಳಲು ಅಲ್ಲಿ ಸಾಧ್ಯವಿಲ್ಲ.
ಭಾರತದ ಸಂದರ್ಭ ವ್ಯತಿರಿಕ್ತವಾದುದು. ಇಲ್ಲಿ ಶಿಕ್ಷಿತನೆಂದರೆ ಆತನೊಬ್ಬ ಆರ್ಥಿಕವಾಗಿ ತೀರಾ ಕೆಳಗಿರುವವನೆಂದೇ ಅರ್ಥ. ಶಿಕ್ಷಣವನ್ನು ಕೊಡುವವನಿಗಿಂತ ದೊಡ್ಡ ಶಿಕ್ಷಿತ ಇನ್ನಾರಿದ್ದಾರು ಹೇಳಿ. ಆತ ಉಪಾಧ್ಯಾಯ; ಬಳಕೆಯಲ್ಲಿರುವ ಕನ್ನಡೀಕೃತ ಆಂಗ್ಲಶಬ್ದ ’ಮೇಷ್ಟ್ರು’. ನೋಡಿ, ಈ ಶಿಕ್ಷಕರ ಕಥೆ ಪ್ರಾರಂಭವಾಗುವುದೇ ಒಂದಾನೊಂದು ಊರಿನಲ್ಲಿ ಒಬ್ಬ ಬಡ ಮೇಷ್ಟ್ರು ಇದ್ದರೆಂದು.
ಮೇಷ್ಟ್ರಿಗೂ ಬಡತನಕ್ಕೂ ಅದೆಂಥ ಬಿಡಿಸಲಾಗದ ಸಂಬಂಧ!
ಈಗ ಈ ಸಂಬಂಧ ಬಿಟ್ಟುಹೋಗಿದೆ. ಹಾಗಾಗಿ ಮೇಷ್ಟ್ರ ಬಗೆಗಿನ ಶ್ರದ್ಧೆಯೂ ಬಿದ್ದುಹೋಗಿದೆ.
ಇರಲಿ. ಗಾಂಧಿ ಶ್ರೀಮಂತರಾಗಿ ಹುಟ್ಟಿದರು. ಬಡವರಾಗಿ ಬದುಕಿದರು. ಇದು ಕಾಣ್ಕೆ.
ಅವರು ಪ್ಯಾಂಟನ್ನೂ ತೊಟ್ಟಿದ್ದರು. ಕೋಟನ್ನೂ ಹಾಕಿಕೊಂಡಿದ್ದರು. ಅದರೆ ಈಗ ಗಾಂಧಿಯನ್ನು ಪ್ಯಾಂಟು-ಕೋಟುಗಳಲ್ಲಿ ಕಲ್ಪಿಸಿಕೊಳ್ಳಲಾಗದು.
ಜತೆಗೆ ಮೈತುಂಬಾ ಬಟ್ಟೆ ತೊಟ್ಟುಕೊಂಡ, ಅದು ಬೇಕಿದ್ದರೆ ಭಾರತೀಯ ಶೈಲಿಯ ಉಡುಪೇ ಇರಲಿ, ಗಾಂಧಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಗಾಂಧಿ ಪ್ಯಾಂಟುಕೋಟು ಬಿಟ್ಟರು. ಜತೆಗೆ ಮೈತುಂಬಾ ಬಟ್ಟೆತೊಡುವುದನ್ನೂ ಬಿಟ್ಟರು.
ಅಂದರೆ ಅವರು ಆಂಗ್ಲಸಭ್ಯತೆಯನ್ನೂ ಬಿಟ್ಟುಕೊಟ್ಟರು, ಶ್ರೀಮಂತಿಕೆಯನ್ನೂ ಬಿಟ್ಟುಕೊಟ್ಟರು. ಅವರು ಕಂಡುಕೊಂಡ ಭಾರತದಲ್ಲಿ ಇವೆರಡಕ್ಕೂ ಪ್ರವೇಶವಿರಲಿಲ್ಲ. ಮತ್ತು ಇವೆರಡೂ ಪರಸ್ಪರ ಸಂಬಂಧವನ್ನು ಬೆಸೆದುಕೊಂಡಿರುವಂಥವು. ಒಬ್ಬ ಬಡ ಬ್ರಿಟಿಷನನ್ನು ನಮಗಿಲ್ಲಿ ಕಲ್ಪಿಸಿಕೊಳ್ಳಲು ಅಸಾಧ್ಯ.
ಭಾರತವೆಂದರೇ ವೈವಿಧ್ಯ. ಇಲ್ಲಿ ಯಾವುದೋ ಒಂದು ಮಾತ್ರ ಮುಖ್ಯವೆಂದಾಗಲೀ ಸರಿಯೆಂದಾಗಲೀ ಇರಲಶಕ್ಯ. ಬಡ ಭಾರತೀಯನೆಷ್ಟು ಭಾರತೀಯನೋ ಅಷ್ಟೇ ಶ್ರೀಮಂತ ಭಾರತೀಯನೂ ಕೂಡಾ.
ಅಷ್ಟೇ ಅಲ್ಲ, ಇವರಿಬ್ಬರ ನಡುವೆ ಬರುವ ಎಲ್ಲ ಸ್ತರದ ಭಾರತೀಯರೂ ಭಾರತೀಯರೇ.
ಹಾಗಾಗಿ ಇಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಭಾರತವಿದೆ.
ಗಾಂಧಿ ಇವರೆಲ್ಲರ ಮಧ್ಯೆ ಇದ್ದಾರೆ.
ಅಂದರೆ ಇವರೆಲ್ಲರ ಜತೆ ಸಮಾನ ಸಂಬಂಧವನ್ನು ಹೊಂದಿದ್ದಾರೆ. ಆದರೆ ಈ ಸಂಬಂಧ ಒಂದೇ ರೀತಿಯದಲ್ಲ. ಶ್ರೀಮಂತರ ಜತೆಗಿದ್ದಾರೆ ಗಾಂಧಿ, ಆದರೆ ಶ್ರೀಮಂತಿಕೆಯ ಜತೆಗಿಲ್ಲ. ಬಡವರ ಜತೆಗಿದ್ದಾರೆ ಗಾಂಧಿ, ಅವರು ಹೊದ್ದುಕೊಂಡ ಬಡತನವನ್ನು ತಾವೂ ಹೊದ್ದುಕೊಂಡು.
ಗಾಂಧೀಜಿ ಈ ಸ್ಥಿತಿಯನ್ನು ಯಾಕಾದರು ಅಪ್ಪಿಕೊಂಡರೋ ಎಂದು ಕೇಳಿದರೆ;
ಅವರೊಮ್ಮೆ ಮಧುರೈಗೆ ಪ್ರಯಾಣಿಸುತ್ತಿದ್ದರು. ರೈಲಲ್ಲಿ ಬೆಲೆಬಾಳುವ ಬಟ್ಟೆತೊಟ್ಟವರೇ ತುಂಬಿಕೊಂಡಿದ್ದರು. ಪ್ಯಾಂಟಲ್ಲಿದ್ದ ಗಾಂಧಿಗೆ ಅವರ ಜತೆ ಸಂವಾದ ನಡೆಸುವುದು ಕಷ್ಟವಾಗಲಿಲ್ಲ. ಮಧುರೈಯಲ್ಲಿ ಅವರು ಒಂದಷ್ಟು ತಿರುಗಾಡಿದರು. ಜನರ ಜತೆ ಬೆರೆಯುವುದು, ಅರಿಯುವುದು ಅವರುದ್ದೇಶ. ಅವರಿಗಲ್ಲಿ ಕಂಡದ್ದು ಕಿತ್ತುತಿನ್ನುವ ಬಡತನ, ಕನಿಷ್ಠ ಬಟ್ಟೆಗೂ ವ್ಯವಸ್ಥೆಯಿಲ್ಲದ ಸ್ಥಿತಿ. ಅಂಥವರ ಬಳಿ ಸಂವಾದ ನಡೆಸಲು, ಅವರು ತಮ್ಮನ್ನು ಚೆನ್ನಾಗಿ ತೆರೆದುಕೊಳ್ಳಲು ತಾನೂ ಅವರಂತಾಗುವುದೇ ಸರಿ ಎನಿಸಿತು ಗಾಂಧಿಯವರಿಗೆ.
ಆ ಕ್ಷಣದಲ್ಲಿ ಜಗತ್ತಿಗೆ ಸಿಕ್ಕಿದ್ದು ತುಂಡುಬಟ್ಟೆ ತೊಟ್ಟ ಗಾಂಧಿ.
ಕಡುಬಡವರನ್ನು ಪ್ರತಿನಿಧಿಸಿದ ಗಾಂಧಿ.
ಬಡವರಿಗೆ ತಮ್ಮಂಥವರಲ್ಲದವರ ಜತೆ ಮಾತಾಡಲು ಕೀಳರಿಮೆ. ಶ್ರೀಮಂತರಿಗೆ ತಮಗಿಂತ ಕೆಳವರ್ಗದ ಜತೆ ಸಂವಾದಿಸಲು ಬಿಗುಮಾನ.
ಈಗ ಗಾಂಧೀಜಿ ಶ್ರೀಮಂತರಿದ್ದೂ ಅದನ್ನು ಬಿಟ್ಟುಕೊಟ್ಟು ಬಡತನದ ಅಂಗವಾದ ತುಂಡುಬಟ್ಟೆ ಉಟ್ಟುಕೊಂಡು ಬಡವರಾದವರು. ಅಂದರೆ ಪೂರ್ವ ಶ್ರೀಮಂತ. ಹಾಲಿ ಬಡವ. ಇವರ ಜತೆ ಇಲ್ಲಿಯ ಬರಿಯ ಶ್ರೀಮಂತರೇನು, ಇಂಗ್ಲೆಂಡಿನ ಪ್ರಧಾನಿಯೇ ಸಂವಾದ ನಡೆಸಬೇಕಾಗಿಬಂತು. ಮತ್ತು ಬಡವರ ಜತೆ ಗಾಂಧಿಸಂವಾದ ಸದಾ ಜಾರಿಯಲ್ಲಿತ್ತು.
ಒಟ್ಟಾರೆ ಏನೆಂದರೆ;
ಗಾಂಧಿ ಶ್ರೀಮಂತರನ್ನು ಪ್ರಭಾವಿಸಿದರು, ಬಡವರನ್ನು ಪ್ರತಿನಿಧಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.