ಎಕ್.ಎನ್.ಕಂಬೈನ್ಸ್ ಸಂಸ್ಥೆಯಿಂದ ಕೃಷ್ಣ ಬಸರೂರು ಹಾಗೂ ಗಿರೀಶ್ ಕಾರ್ನಾಡ್ ರವರು 1978 ರಲ್ಲಿ ಕಥೆಯೊಂದನ್ನು ಬರೆದು ಚಿತ್ರಕಥೆಯನ್ನು ಬರೆಯುತ್ತಾರೆ. ಗಿರೀಶ್ ಕಾರ್ನಾಡ್ ರವರು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅಪೂರ್ಬ ಕಿಶೋರ್ ಬಿರ್ ರವರ ಛಾಯಾಗ್ರಹಣ, ಭಾಸ್ಕರ್ ಚಂದಾವರ್ಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಶಂಕರ್ ನಾಗ್, ಸುಂದರಕೃಷ್ಣ ಅರಸ್, ಅಕ್ಷತಾರಾವ್ ಹಾಗೂ ಸುಂದರರಾಜ್ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
26 ನೇ ರಾಷ್ಟ್ರಪ್ರಶಸ್ತಿಯನ್ನು ಅತ್ತ್ಯುತ್ತಮ ಚಿತ್ರಕ್ಕಾಗಿ, 1978-79ನೇ ಸಾಲಿನ ಅತ್ಯುತ್ತಮ ಚಿತ್ರ, ಅತ್ಯುತ್ತಮ ಪೋಷಕ ನಟ (ಸುಂದರ್ ರಾಜ್), ಅತ್ಯುತ್ತಮ ಸಂಕಲನ (ಪಿ. ಭಕ್ತವತ್ಸಲಂ) ಹಾಗೂ ಉತ್ತಮ ಧ್ವನಿಗ್ರಹಣ (Sound recording) ಎಂಬ ರಾಜ್ಯಪ್ರಶಸ್ತಿಗಳನ್ನು ಹಾಗೂ ಉತ್ತಮ ಚಿತ್ರ ಹಾಗೂ ಉತ್ತಮ ನಿರ್ದೇಶಕ ಎಂಬ ಸೌತ್ ಫಿಲಂಫೇರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಟ್ಟದ ಐ.ಎಫ್.ಎಫ್.ಐ ಸ್ಪರ್ಧೆಯ ಏಳನೇ ಹಾಗೂ ಹದಿನಾಲ್ಕನೇ ಸ್ಪರ್ಧೆಯಲ್ಲಿ ಈ ಸಿನಿಮಾ ಪ್ರದರ್ಶನಗೊಂಡಿರುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ತನ್ನ ಛಾಪು ಮೂಡಿಸಿದೆ. ಇನ್ನೊಂದು ವಿಶೇಷವೆಂದರೆ ಈ ಸಿನಿಮಾ, ಕನ್ನಡ ನಾಡಿನ ಹೆಮ್ಮೆಯ ನಟ ನಿರ್ದೇಶಕ ಶಂಕರ್ ನಾಗ್ ರವರ ಮೊದಲ ಸಿನಿಮಾ. ಜಪಾನಿನ ನಿರ್ದೇಶಕರಾದ ಕುರಸೋವಾ ರವರ “ಸಮುರಾಯ್” ಚಿತ್ರದಿಂದ ಪ್ರಭಾವಿತರಾದ ಗಿರೀಶ್ ಕಾರ್ನಾಡರು ಈ ಚಿತ್ರ ಮಾಡಿದರು.
ಕಥೆ:
“ಬಿಚ್ಚುಗತ್ತಿಯ ಬಂಟನ ಕಥೆಯ, ಬಲ್ಲೇರೆನು ಯಾರ” ಎಂಬ ಗೀತೆಯು ಜನಪದ ಶೈಲಿಯಲ್ಲಿ ಕೇಳಿಸುತ್ತಾ ಸಿನಿಮಾ ಆರಂಭವಾಗುತ್ತದೆ. ಶತ್ರುಗಳನ್ನು ಓಡಿಸಿಕೊಂಡು ಬರುವ ಗುಂಪೊಂದು ಆಕಸ್ಮಿಕವಾಗಿ ಗಂಡುಗಲಿಯನ್ನು (ಶಂಕರ್ ನಾಗ್) ಭೇಟಿ ಮಾಡುತ್ತದೆ. ಅಷ್ಟೇ ಅಲ್ಲದೇ ಅವನ ಯುದ್ದಕಲೆಯನ್ನು ಕೂಡ ಪರಿಚಯ ಮಾಡಿಕೊಳ್ಳುತ್ತದೆ. ಆ ಗುಂಪಿನ ಪೆರ್ಮಾಡಿ (ಸುಂದರಕೃಷ್ಣ ಅರಸ್) ಈತನನ್ನು ಬಂಧಿಸಿ, ತನ್ನ ಗುಂಪಿನ ನಾಯಕರ ಬಳಿಗೆ ಕರೆದೊಯ್ಯುತ್ತಾನೆ. ಆತ ಶಿಕ್ಷಿಸುವ ಬದಲಾಗಿ ಗುಂಪಿನವರಿಗೆ ಯುದ್ದಕಲೆಯನ್ನು ಕಲಿಸಿಕೊಡಲು ನೇಮಿಸುತ್ತಾನೆ. ಆ ಸಮಯದಲ್ಲಿ ಸಾವಂತ್ರಿಗೂ (ಪದ್ಮಾವತಿ ರಾವ್) ಗಂಡುಗಲಿ ಮೇಲೆ ಮನಸಾಗುತ್ತದೆ. ಪೆರ್ಮಾಡಿ ಹಾಗೂ ಗಂಡುಗಲಿ ನಡುವೆ ವೈಮನಸ್ಯ ಬೆಳೆದು ಒಬ್ಬರಿಗೊಬ್ಬರು ಭಾರಿ ಕಾಳಗ ನಡೆಸುವ ಹಂತಕ್ಕೆ ತಲುಪುತ್ತಾರೆ. ಈ ಮಧ್ಯೆ ಪೆರ್ಮಾಡಿ ತನ್ನ ಮಗನನ್ನೂ ಕಳೆದುಕೊಳ್ಳುತ್ತಾನೆ. ಇಬ್ಬರೂ ಸಮಾನ ವೀರರೇ. ಅದೆಷ್ಟು ಹೊತ್ತು ಹೊಡೆದಾಡಿದರೂ ಇಬ್ಬರೂ ಸೋಲುವುದಿಲ್ಲ. ಕೊನೆಗೆ ಇಬ್ಬರೂ ರಾಜಿಯಾಗುತ್ತಾರೆ. ಕಥೆ ಅಲ್ಲಿಗೆ ಸುಖಾಂತ್ಯವಾಗುತ್ತದೆ.
ಚೀನಾ, ಜಪಾನ್ ಸಿನಿಮಾಗಳಲ್ಲಷ್ಟೇ ಯುದ್ದಕಲೆಯ ಕುರಿತ ಸಿನಿಮಾಗಳು ಬರುತ್ತಿತ್ತು. ಆಗಿನ ಕಾಲಕ್ಕೆ ಭಾರತ ಚಿತ್ರರಂಗದಲ್ಲೇ ಒಂದು ಅಪರೂಪದ ಚಿತ್ರ ಎನ್ನಬಹುದು. ಈ ಚಿತ್ರಕ್ಕಾಗಿಯೇ ಕೇರಳದ ಸಮರಕಲೆ ಕಳರಿಪಟ್ಟು, ಕತ್ತಿವರಸೆಗಳ ವಿಶೇಷ ತರಬೇತಿಯನ್ನು ಕಲಾವಿದರಿಗೆ ನೀಡಲಾಗಿತ್ತು. ಯಾವುದೇ ಡ್ಯೂಪ್ ಇಲ್ಲದೆ, ನೈಜತೆಯಿಂದ ನಟಿಸುತ್ತಿದ್ದ ಈ ಸಿನಿಮಾಗಾಗಿ ವೈದ್ಯರ ಪ್ರತ್ಯೇಕ ತಂಡವೂ ಕೂಡ ಶ್ರಮಿಸಿತ್ತು. ಇದೇ ಮೊದಲ ಬಾರಿಗೆ ವೈದ್ಯರ ತಂಡವು ಸಿನಿಮಾ ಚಿತ್ರೀಕರಣ ಸಮಯದಲ್ಲಿ ಜೊತೆಯಾಗಿತ್ತು. ಯುದ್ಧದ ದೃಶ್ಯಗಳಲ್ಲಿ ಕುದುರೆಗಳ ಕೇಕೆಯ ಸದ್ದಿಲ್ಲ, ಆನೆಗಳ ಊಳಿಲ್ಲ, ಮದ್ದುಗುಂಡುಗಳ ಸದ್ದಿಲ್ಲ. ರಾಜ ಮಂತ್ರಿಗಳ ದರ್ಪ ಶೌರ್ಯ ಪ್ರದರ್ಶನವೂ ಇಲ್ಲ. ಯುದ್ದಕಹಳೆಯ ದನಿಯೂ ಕೇಳುವುದಿಲ್ಲ. ಎಲ್ಲವೂ ನೈಜ ಅಭಿನಯ.
ಚಿತ್ರದ ಪ್ರತಿ ದೃಶ್ಯವೂ ತುಂಬಾ ನೈಜತೆಯಿಂದ ಕೂಡಿದೆ. ಹಸಿಪ್ರೀತಿ, ಚುರುಕತನ, ಸೇಡು, ವೀರ-ಶೌರ್ಯ ಸೇರಿದಂತೆ ಮುಂತಾದ ಅಂಶಗಳು ಇರುವ ಚಿತ್ರ. ಶಂಕರ್ ನಾಗ್ ರವರೊಂದಿಗೆ ಸುಂದರರಾಜ್ ಹಾಗೂ ಸುಂದರಕೃಷ್ಣ ಅರಸ್ ರವರನ್ನು ನಾವು ಇಲ್ಲಿ ನೆನೆಯಲೇಬೇಕು. ಅತ್ಯುತ್ತಮ ನಟನೆ ಇವರದ್ದು. ಚಂದ್ರಶೇಖರ ಕಂಬಾರರ “ಬಿಚ್ಚುಗತ್ತಿಯ ಬಂಟನ ಕಥೆಯ ಬಲ್ಲೆರೆನು ಯಾರ” ಹಾಗೂ “ಒಂದಾನೊಂದು ಕಾಲದಲ್ಲಿ” ಎಂಬ ಎರಡೂ ಗೀತೆಗಳು ಚಿತ್ರ ಮುಗಿದ ಮೇಲೂ ನಮ್ಮನ್ನು ಕಾಡುತ್ತವೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಭಾರತೀಯ ಯುದ್ದಕಲೆಯ ಕುರಿತು ತಿಳಿಯಲು.
2. ಬಿಚ್ಚುಗತ್ತಿ ಬಂಟರ ನಿಷ್ಠೆ, ನಾಯಕರ ರಾಜಕೀಯ ಕುರಿತು ತಿಳಿಯಲು.
3. ಯಾವ ಹಾಲಿವುಡ್ ಸಿನಿಮಾಗೂ ಕಡಿಮೆಯಿಲ್ಲದೆ, ಡ್ಯೂಪ್ ಹಾಗೂ ಗ್ರಾಫಿಕ್ಸ್ ಇಲ್ಲದೇ ಕನ್ನಡ ಸಿನಿಮಾವೊಂದು ಅದ್ಹೇಗೆ ಬೆಳ್ಳಿತೆರೆಯಲ್ಲಿ ವಿಜೃಂಭಿಸುತ್ತದೆ ಎಂದು ನೋಡಿ, ಕಣ್ಮನ ಸೋಲಲು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.